ಕಾದು ಕಾದು ಸಾಕಾದೆ.

ಕಾದು ಕಾದು ಸಾಕಾದೆ.

ಕಾದು ಕಾದು ಬೇಸತ್ತೆ ನೀ ಏಕೆ ತಡ ಮಾಡಿದೆ
ಸರಿ ಸಮಯಕೆ ನಾ ಬಂದು ನಿಂತೆ ನಿನಗಾಗಿ
ಬರದೇ ನೀ, ನಾ ಕಂಗಾಲಾಗಿ ಹೋದೆ

ಹೊಸ ಅಂಗಿ, ಹೊಸ ಬಗೆಯ ಹೆರಳು
ಕೈ ತುಂಬ ನಿನ್ನ ಬಣ್ಣದ್ದೇ ಗಾಜಿನ ಬಳೆ
ನಿಂತು ನಿಂತು ಗಂಟಲೊಣಗಿ ಬಿಗಿದು ಕೊರಳು

ಗಳಿಗೆಗೊಮ್ಮೆ ಗಡಿಯಾರ ನೋಡಿ ನೋಡಿ
ಸಿಟ್ಟು ಮೂಗಿಗೇರಿ ಮಾರಿ ಕೆಂಪಗಾಗಿ
ಕೆಟ್ಟ ಬೈಗಳಗಳನೆಲ್ಲ ಪಿಸು ದನಿಯಲಿ ಹಾಡಿ

ಅತ್ತ ಇತ್ತ ಓಡಾಡಿ ಸುತ್ತ ನಿಂತವರನ್ನೊಮ್ಮೆ
ಮೆಲುಗಣ್ಣಲಿ ನೋಡುತಿಹರೋ ಎಂಬ ಭಯದಲಿ
ಕತ್ತು ಎತ್ತಲಾರದೆ, ತಿರುಗಿಸಲಾರದೆ ಮೆಲ್ಲ ಹೊರಳಿದೆನೊಮ್ಮೆ

ಮನೆ ಮಂದಿ ಕೇಳುವ ಪ್ರಶ್ನೆಗಳಿಗುತ್ತರಿಸುವ ಭಯ
ಎಲ್ಲಿದ್ದೀ ಈವರೆಗೆ? ಯಾವ ಗೆಳತಿಯ ಸಂದಿಸಿದ್ದಿ?
ಅರಿವಾಗದೇ ನಿನಗೆ? ಇದೇ ಏನು ಮನೆ ಸೇರುವ ಸಮಯ?

ನೆತ್ತಿ ಸಿಡಿಯುವ ಮೊದಲು, ಮನೆ ಸೇರುವ ಮೊದಲು
ಕಡೆಗೂ ನೀ ಬಂದೆ, ಕಡೆಗೂ ನೀ ಬಂದೆ ನನ್ನ ಮುಂದೆ
ಓ ನೀಲಿ ಬಣ್ಣದ ಸರ್ಕಾರಿ ಬಸ್ಸೇ ನಾನೇ ಇದ್ದೆ ಮೊದಲ ಸಾಲು.

Leave a Reply