ಜಲಸಿರಿ ಮಾಗೋಡು!

ಜಲಸಿರಿ ಮಾಗೋಡು!

ದಟ್ಟ ಕಾಡ ನಡುವೆ ಸುಳಿದಾಡಿದೆ
ಇಳಿದಡಿಯಿಟ್ಟು ನಡೆದಾಡಿದೆ
ಭೋರ್ಗರೆವ ಶಬ್ದ ಆಲಿಸಿದೆ
ಹುಡುಕಲು ಮನ ಕಾಡಿದೆ
ಅಡಿಗಡಿಗೆ ಹೆಜ್ಜೆಯನಿಟ್ಟು ಹುಡುಕಿದೆ
ಶಬ್ದವೊಂದೆ ಕರಣಕೆ ಕೇಳುತಿದೆ
ಆಕಾಶದಲ್ಲಿ ತೇಲುತಿರುವಂತೆ ಭಾಸವಾಗುತಿದೆ
ನಿಂತಿರು ನೆಲವಷ್ಟೇ ನಿಜವಾಗಿದೆ
ಹಿಂತಿರುಗಿದರೂ ಅಂತ್ಯ ಮುಂದಡಿಯಿಟ್ಟರೂ ಅಂತ್ಯವೆನಿಸುತಿದೆ
ಭೋರ್ಗರೆವ ಶಬ್ದ ಅಚ್ಚಳಿಯದೇ ಕೇಳುತಿದೆ
ಎಲ್ಲಿ? ಎಲ್ಲೆಂದು ಕಾತುರದಿ ಕಣ್ಣಾಡಿಸಿದೆ
ಕ್ಷಣಕ್ಕೊಮ್ಮೆ ಕಾರಂಜಿಯಂತೆ ಮುಖಕ್ಕೆ ಸಿಂಚನವಾಗುತ್ತಿದೆ
ಮುಖ ತಂಪಾಗಿ ತೋಯುತಿದೆ
ಆಘಾದ ಸ್ವರ್ಗಲೋಕದಲ್ಲಿ ಮನ ವಿಹರಿಸುತ್ತಿದೆ
ಇಬ್ಬನಿ ಎಲ್ಲೆಡೆ ಆವರಿಸಿ ಭುವನೆಯನ್ನೇ ಅಡಗಿಸಿದೆ
ಕಣ್ಣರೆಪ್ಪೆ ಅಲುಗಿಸುವುದರಲ್ಲಿ ಪರದೆ ಜರಿಯುತಿದೆ
ಆಹಾ! ಅದ್ಭುತ ರಮ್ಯ ದೃಶ್ಯ ಕಣ್ಣಮುಂದೆ ಅಡಿಯಿಡುತ್ತಿದೆ
ಅದೋ! ಆ ದೂರ! ಹಾಲಿನ ತೊರೆ! ಕಣ್ಣಮುಂದೆ.
ಮುತ್ತುಗಳ ಹೊತ್ತಂತೆ! ಮಣಿಗಳುರುಳಿ ನೆಲಕೆ ಬಿದ್ದಂತೆ
ಭುವಿಯೇ ಗಗನಕೋ? ಗಗನವೇ ಭುವಿಗಿಳಿಯಿತೋ?
ಪ್ರಕೃತಿ ಸೊಬಗಿನ ಆಟ, ಕುಣಿದಾಟ ಮನಕಾಗಿದೆ ಹಬ್ಬದೂಟ
ಹಸಿರಿನ ಬನಸಿರಿಯಲ್ಲಿ ಮೆರೆದಿದೆ ಜಲಪಾತ
ಗುಪ್ತಗಾಮಿನಿಯಂತೆ! ಸುಳಿವು ಕೊಡದೆ ಸೃಷ್ಟಿಸಿದೆ ಪ್ರಪಾತ
ಝರನೆ, ಸರಸರನೆ, ಬಳುಕಿನಿಂದೊಮ್ಮೆ, ಥಳುಕಿನಿಂದೊಮ್ಮೆ ಚಿಮ್ಮುತಾ
ಮುಕ್ಕೋಟಿ ದೇವರ ಶಕ್ತಿ ತಾ ಹೊತ್ತಂತೆ ಧಬ ಧಬನೆ ಧುಮುಕತಾ
ಸ್ವರ್ಗವೇ ಇಹಲೋಕಕಡಿಯಿಟ್ಟಂತೆ ಸೃಷ್ಟಿ ಅದ್ಭುತವ ಮೆರೆಯುತಾ
ಜಿಗಿದಳೊಮ್ಮೆ, ಪುಟಿದಳೊಮ್ಮೆ! ತಾಳ್ಮೆಯಲಿ ತೆವಳುತಲೊಮ್ಮೆ
ನೊರೆಯನುಕ್ಕಿಸಿ, ಬಂಡೆಕಲ್ಲುಗಳ ಬಳಸಿ, ಕಾರ್ಮೋಡ ಕಟ್ಟಿದಳೊಮ್ಮೆ
ಹಸಿರಿಗೆಲ್ಲ ಬಸಿರ ತಂದು, ವನಸಿರಿಗೆಲ್ಲ ಸೀಮಂತಮಾಡುತಲೊಮ್ಮೆ
ಧನ್ಯ! ದೈವೀ ಮಹಿಮೆಗೆ! ಅದ್ಭುತ ಪ್ರಕೃತಿಯ ರಸನಿಮಿಷಕೆ
ಕೋಟಿ ನಮನವು ತಾಯಿ ಮಾಗೋಡು ಜಲಪಾತಕೆ.

Leave a Reply