ತಲ್ಲಣ

ತಲ್ಲಣ

ಜಗದ ನೋಟವಿದು ಕಂಡಿರೆ ಭೀಭತ್ಸ
ಭೀಕರ ಸುನಾಮಿ, ಚಂಡಮಾರುತಕೆ ಭೂಕಂಪನ
ಒಳಗೊಳಗೆ ಹಾಹಾಕಾರ ಜನಜಂಗುಳಿಯ ಆರ್ತನಾದ
ಕಂಡಕಂಡಲ್ಲಿ ಭ್ರಷ್ಟಾಚಾರ, ಸ್ವಾರ್ಥ, ಅತ್ಯಾಚಾರದ ಸೋಪಾನ
ಎಲ್ಲೆಲ್ಲೂ ತಲ್ಲಣವು ಜಗದೊಳಗೆ

ನೆಲಕಾಗಿ ಜಲಕಾಗಿ ಎಲ್ಲವೂ ನನಗಾಗಿ ನಾನೇ ಆಗಿ
ಎಲ್ಲೆಡೆ ನಾ, ನಾನೆಂದು ಜೀವಸಂಕುಲ ಕಾಣದಾಗಿ
ಜಾತಿ ಮತ, ಮಡಿ ಉಡಿ, ಮೇಲುಕೀಲುಗಳ ಸಣ್ಣತನದಲಿ ಮುಳುಗಿ
ಉಸಿರಾದ ಹಸಿರ ಬರಿದಾಗಿಸಿ ಶಿಖರದೆತ್ತರದ ಸೌಧಗಳಾಗಿ
ಎಲ್ಲೆಲ್ಲೂ ತಲ್ಲಣವು ಜಗದೊಳಗೆ

ಬಂಧ ಅನುಬಂಧಗಳ ಬೆಸುಗೆ ಕಳಚಿ
ಬಾಹ್ಯಕೊಂದು ಅಂತರಂಗದಲ್ಲೊಂದು ಹೊರಸೂಸಿ
ಯಾಂತ್ರಿಕೃತ ಬದುಕು ಯಂತ್ರನಾದ ಮನುಜ
ಕಪ್ಪು ಹೊಂಜಿನಲಿ ಮುಚ್ಚಿ ಹೋಗುತಿಹುದು ನಿಜ
ಎಲ್ಲೆಲ್ಲೂ ತಲ್ಲಣವು ಜಗದೊಳಗೆ

ನಾಡಿಗಾಗಿ ದೇಶಕಾಗಿ ನೆಪವಾಯ್ತು ಗಡಿರಕ್ಷಣೆ
ನಿತ್ಯ ಗಡಿಯಂಚಿನಲಿ ಯೋಧರ ಪ್ರಾಣಾರ್ಪಣೆ
ಪ್ರೀತಿ, ಭೋಗ, ಲಾಲಸೆಗಳ ಮಾಯೆಯಲಿ
ಸಹಜ ಜೀವನ ಮೌಲ್ಯವಿನ್ನೆಲ್ಲಿ
ಅಂತ್ಯವಾಗಲಿ ಈ ತಲ್ಲಣ
ಆಗಲಿ ಮಾನವೀಯತೆಯ ಉಲ್ಬಣ

Leave a Reply