ನಮನವು ಓ ತಾಯಿ

ನಮನವು ಓ ತಾಯಿ
ನಮನವು ಓ ತಾಯಿ ನಿನಗಿಂದು
ನನ್ನ ಈ ಜನುಮ ದಿನದಂದು
ಬೇನೆಯಲಿ ಪ್ರಾಣಪಣಕಿಟ್ಟೆ ನೀನಂದು
ಧರೆಗಿಳಿಸಿ ಕಣ್ತೆರೆಸಿದೆ ಎನಗಿಂದು
ನಮನವು ಓ ತಾಯಿ ನಿನಗಿಂದು

ತಾಯ್ತನದ ಹಿರಿಮೆ ನಿನಗಾಯಿತಾಗ
ಹುಟ್ಟು ಹಬ್ಬದ ಸಂಭ್ರಮವು ನನಗಾಯಿತೀಗ
ಜಗವ ಕಾಣವು ಎನ್ನ ಕಣ್ಣರಳಿಸಿದಾಗ
ನಮನವು ಓ ತಾಯಿ ನಿನಗಿಂದು

ನಿನ್ನುಸಿರೆ ನನ್ನುಸಿರು
ನಿನ್ನ ಭೋಜನವೆನ್ನ ಉದರ
ನಿನ್ನ ರಕ್ತದಾ ಕಣಕಣದಿ ಎನ್ನ ಅಂಗಾಂಗ
ಹೃದಯ ಬಡಿತವು ಎನ್ನ ನಿನದು
ನಮನವು ಓ ತಾಯಿ ನಿನಗಿಂದು

ನಿನ್ನಪ್ಪುಗೆಯ ಮೊಲೆ ಹಾಲು
ಅಮೃತಕ್ಕೂ ಮಿಗಿಲು
ನಿನ್ನ ಸ್ಪರ್ಷವು ನವಚೇತನ ಎನ್ನ ಪಾಲು
ನೀಬಾಯಿಲಿಟ್ಟ ಒಂದೊಂದು ತುತ್ತು
ಗಲ್ಲಕಿಟ್ಟ ಒಂದೊಂದು ಮುತ್ತು
ಚಿರೃಣಿಯು ನಾ ನಿನಗೆ ನೀನೆನ್ನ ಸ್ವತ್ತು

ಲಾಲಿ ಹಾಡುತ ದಿನವು ನೀ ನಿದ್ದೆಗೆಟ್ಟು
ನಿದಿರೆ ದೇವಿಯು ಬರದಿರೆ ನೀ ಕಂಗೆಟ್ಟು
ಚಂದಿರನ ತೋರುತ ನೀ ತುತ್ತನಿಟ್ಟು
ದೃಷ್ಠಿ ಸಂದೇಹದಿ ನಿವಾಳಿಸಿ ಕರಿಬೊಟ್ಟನಿಟ್ಟು
ಕಂದನ ಪ್ರೀತಿಯಲಿ ಸ್ವಾರ್ಥಿ ದೇವತೆ ನೀನು
ನಮನವು ಓ ತಾಯಿ ನಿನಗಿಂದು.

ಬೆರಳ್ಹಿಡಿದು ನಡೆಯ ನೀ ಕಲಿಸಿ
ಕೈ ಹಿಡಿದು ಗುರುವಾಗಿ ಅಕ್ಷರವ ಬರೆಸಿ
ಪ್ರೀತಿಯಿಂದಲಿ ತಪ್ಪಲೂ ನನ್ನ ಹರಸಿ
ಬದುಕಿನ ಕಲೆಯ ಕಲಿಸಿದ
ಮೊದಲ ಗುರುವು ನೀ
ನಮನವು ಓ ತಾಯಿ ನಿನಗಿಂದು.

ಸೃಷ್ಠಿಕರ್ತನ ನಾನೆಂದೂ ಕಾಣೆ
ನೀ ಎನಗೆ ಸೃಷ್ಠಿಕರ್ತಎ ಇದು ನನ್ನಾಣೆ
ಮುಕ್ಕೋಟಿ ದೇವತೆಗಳಿಹರಂತೆ
ಬಲ್ಲವರು ನುಡಿವರಂತೆ
ನಿನ್ನ ಮೊಗದಲ್ಲೆ ನಾನಿವರ ಕಂಡೆ
ನಮನವು ಓ ತಾಯಿ ನಿನಗಿಂದು

1 Comment

  1. ತಾಯಿಯ ಬಗೆಗಿನ ಈ ಕವಿತೆ ಅದ್ಭುತವಾಗಿದೆ 🙂

Leave a Reply