ಭಾವ ಮೌಕ್ತಿಕ

ಕಾರ್ಯಸಾಧನೆಯಲ್ಲಿ ಜತೆಯೊಳಿಹೆವೆಂದವರು
ಹಿಂತಿರುಗಿ ನೋಡಿದರೆ ಮಂಗಮಾಯ |
ಇನಿತು ಬೇಸರಬೇಡ ನಮಿಸು ಅವರನು ಮೊದಲು
ನೀನೆಲ್ಲ ಮಾಳ್ಪೆಯೆಂಬವರ ನಂಬಿಕೆಗೆ ||

ಅರೆ ಬಿರಿದ ಮೊಗ್ಗೊಂದು ನಕ್ಕು ಬಿಟ್ಟಿತು ತಾನು
ಬಿರಿದ ಹೂವನು ಮಾಲಿ ಕಿತ್ತ ಕ್ಷಣದಿ |Bhava Mouktika
ಅದಕೇನು ಗೊತ್ತುಬಿಡಿ, ನಾಳೆ ಅದರದೆ ಸರದಿ
ಅರಳಿದವ ಮರಳಬೇಕೆಂಬುದೆ ನಿಯಮವಿಲ್ಲಿ ||

ಪರರ ಏಳ್ಗೆಯ ಕಂಡು ಖುಷಿಯ ಪಡುತಿರು ಮನವೆ
ನನಗಿಲ್ಲವೆಂಬುದನು ಅಂತೆ ಮರೆತು ಬಿಡು |
ದೇವನುಗ್ರಾಣದಲಿ ನಿನಗು ಒಂದಿದೆ ಕೊಡುಗೆ
ಸ್ವೀಕರಿಸು ಸಂತಸದಿ ಅವ ಕೊಡುವ ಕ್ಷಣಕೆ ||

ಎಷ್ಟೊಂದು ತುಳಿಯುವೆಯೊ ಸೈರಿಸುವೆನದನು
ನನಗು ಒಂದಿಹುದು ದಿನ ಕಾಯುತಿಹೆ ನಾನು |
ನನ್ನಿಂದಲೇ ಕಾಯ ನನ್ನೊಳಗೆ ನೀ ಮಾಯ
ನಿನ್ನ ತುಳಿಯದೆ ನನ್ನೊಳಗಾಗಿಸುವೆ ನಿನ್ನ ||

ಏನು ಹುಡುಕುವಳಿಲ್ಲಿ ಸೊಂಟ ಬಾಗಿಸಿ ಗಣಿಕೆ
ಇರಬಹುದೆ ಕಳೆದುಕೊಂಡಿಹ ಯೌವ್ವನವನು |
ಲೆಕ್ಕವಿರದಷ್ಟು ದುಂಬಿಗಳು ಮೇಲೆರಗೆ
ಕಳೆದು ಹೋಯಿತೆ ಬಣ್ಣ ಪಕಳೆಗಳು ಉದುರಿ ? ||

ಕಲ್ಲು ಹೊಡೆದರೆ ನಭಕೆ ಉದುರೀತೆ ಮಳೆಯ ಹನಿ
ಕೋಗಿಲೆಯ ಅಣಕುದನಿ ತಂದೀತೆ ಮಧುಮಾಸ |
ಭಾವವಿರದಿರೆ ಸ್ವರಕೆ ಅಪಸ್ವರದ ಹಾಡದುವೆ
ಉಸಿರ ಲಯವಿರದಿರೆ ಕೊಳಲಗಾನವುಂಟೆ ? ||

ಅದಕೆ ಇರಬೇಕಿವನ ಕರೆವರಗಣಿತನೆಂದು
ತಪ್ಪು ಲೆಕ್ಕವ ಮಾಳ್ಪ ಲೆಕ್ಕಿಗನು ಇವನು |
ಕೂಡುವಲಿ ಕಳೆಯುವನು ಕಳೆಯುವಲಿ ಕೂಡುವನು
ಭಾಗಿಸುತಲೆಲ್ಲವನು ಮತ್ತೆ ಗುಣಿಸುವನು ||

ಯಾರದೀ ಪುಟ್ಟ ಹೆಜ್ಜೆಗಳು ಮನೆತುಂಬ
ಅವನೆ ಬಂದಿರಬಹುದು ಶಿಶುರೂಪದಲ್ಲಿ |
ನಾಕದೊಳು ಕಾಣದಿರೆ ತಾಯಿ ಎನ್ನುವ ದೈವ
ಅರಸಿ ಬಂದನೋ ಹೇಗೆ ಮನೆ ಮನೆಗಳಲ್ಲಿ ||

ಬೆನ್ನ ಒಡ್ಡಿಬಿಡು ನೋವ ಪರ್ವತಕೆಲ್ಲ
ಅವಿಹಿತ ಕಾಲವದು ಮಾತು ಬೇಡ |
ಮುಂದೊಂದು ದಿನ ನಿನ್ನ ದೇವನೆನಬಹುದು ಜನ
ಕೂರ್ಮನನು ನೋಡಿ ಕಲಿ ಸಹನೆಯೆಂಬುದನು ||

ನಾಯಿಕೊಡೆಗಳೆಲ್ಲ ಶ್ವೇತ ಛತ್ರಗಳಾಗಿ
ಅದರಡಿಯೊಳಗೆ ಎರೆಹುಳುವು ಬುಸುಗುಟ್ಟಿ |
ಹೆಬ್ಬೆರಳು ಶಾಸನವಾಗಿ ಮದಿರೆ ದಂಡಗಳೆಲ್ಲ
ಶಾಸವನಾಳುವಲಿ ಮಳೆ ಬಂತೆ ಹೇಳಿ? ||

(ಹೆಚ್ಚಿನ ಓದಿಗಾಗಿ ‘Shubhodaya Prakashana’ ‘ ವದನ ಪುಸ್ತಕ’ ( Face Book Page) ನೋಡಿ.)

Leave a Reply