ಮದಗದ ಕೆರಿ

ಮದಗದ ಕೆರಿ

ಕಣ್ಣ ತುಂಬೈತಿ ಮದಗದ ಕೆರಿ.
ಹರಿವುದೆಲ್ಲಾ ಹಾಲಿನ ಹೊಳೆಯ ಸಿರಿ.
ಸುತ್ತ ಹಸಿರು ಹೊಚಕೊಂಡು
ಗುಪ್ತ ಕೂತಾಳು ಆರ್ಭಟ ಮಾಡಿಕೊಂಡು.
ಬಾಳ ಮುನಿಸಿನಾಗ ಇರತಾಳ ಈಕಿ.
ಹೋದವ್ರು ನೋಡಿ ಬರಬೇಕು ಬಾಳ ಜೋಕಿ.
ಝುಳು ಝುಳು ಹರಿವಲ್ಲಿ ಹಾಡ್ತಾಳ ಹಾಡ
ಧುಮು ಧುಮುಕಿ ಕೊಡ್ತಾಳ ತಾಳ ಮೇಳ
ಮುತ್ತು ಹರಡ್ಯಾವ ಎತ್ತಿರೋ ಬೇಗ
ಅಲ್ಲ! ನೊರೆ ಕಾಣ್ತಾದ ಮುತ್ತಿನ ಹಾಂಗ
ಹೋಗ ಹಾದ್ಯಾಗ ಕೇಳ್ತಾದ ಗದ್ದಲ
ಆಜುಬಾಜು ತುಂಬ್ಯಾಡ್ಯಾವ ನೀರಾವರಿಹೊಲ
ಹುಣಸೆ, ಭತ್ತ, ಬೇವು ಬೆಳೆದಾವ ಸೊಂಪಾಗಿ
ಬಿದಿರು ಬಳ್ಳಿ ಏರ್ಯಾವ ಮುಗಿಲಗುಂಟ ತೂಗಿ
ಅಲ್ಲಿ ಇಲ್ಲಿ ಹೋಗಿ ಕೂಡಬ್ಯಾಡ
ಹುಡುಕಿ ನೋಡು ಮದಗದ ಜಾಡ
ಇಲ್ಲ ಕೈಲಾಸ ನಮಗ ಬಾಳ ದೂರ
ಒಮ್ಮೆ ಯಾದರು ಮದಗದ ಕೆರಿ ನೋಡುಬಾರಾ.

Leave a Reply