ಮೊದಲ ನುಡಿ.

ಮೊದಲ ನುಡಿ.
ಮೊದಲ ತೊದಲು ನುಡಿ ಅಮ್ಮಾ ಎಂದದ್ದು
ಇಟ್ಟ ಮೊದಲ ಹೆಜ್ಜೆ ಬಿದ್ದು ಬಿದ್ದು ಎದ್ದದ್ದು
ಬೆರಳು ಹಿಡಿದು ಅಪ್ಪ ಮೆಲ್ಲ ಮೆಲ್ಲನೆ ನಡೆಸಿದ್ದು
ಬಿದ್ದಾಗೊಮ್ಮೆ ಅಮ್ಮ ಕೈ ಹಿಡಿದು ಅಪ್ಪಿ ಮೇಲಕೆತ್ತಿದ್ದು
ಈಗ ಬರೆ ಮುಗುಳ್ನಗೆಯಾಗಿ ಉಳಿದಿದೆ

ಉಣ್ಣುವನ್ನವ ಹಿಸುಕಿ ಮೃದುಮಾಡಿ ಬಾಯೊಳಗಿಟ್ಟಾಗ
ಹಠಮಾಡಿ ನುಂಗದೆ ಬಾಯಿಯಿಂದ ಹೊರ ಚೆಲ್ಲಿದಾಗ
ಗುಮ್ಮ ಬರುತಾನೆಂದು ಕತ್ತಲೆಯ ಕೋಣೆ ತೋರಿದಾಗ
ಒಲ್ಲೆ ಒಲ್ಲೇ ಎನುತಾ ಭಯದಿ ನುಂಗಲು ಹೋಗಿ ನೆತ್ತಿಗೇರಿದಾಗ
ಗುಮ್ಮ ಹೋದನೆಂದು ತಾಯಿ ಪರಿತಪಿಸಿದ್ದು! ಮುಗುಳ್ನಗೆಯಾಗಿ ಉಳಿದಿದೆ

ಶಾಲೆಯೆಂಬ ಕಾರಾಗೃಹ ಪ್ರೆವೇಶದ ಸಮಯದಿ
ಬೇಡ ಬೇಡ ನಾ ಹೋಗಲಾರೆನೆಂದು ದು:ಖದಿ
ಬಿಕ್ಕಿ ಬಿಕ್ಕಿ ಅತ್ತು ಅತ್ತೂ ಮೂಗು ಕೆಂಪಾಗಿರುತಿರೆ
ಕೈಯಲಿ ಬಿಸ್ಕೆಟ್ ಪಟ್ಟಣ ಕೊಟ್ಟು ಆಯಾ ಕರೆದೊಯ್ಯುತಿರೆ
ತಿನ್ನುವ ಸಡಗರವು ಮುಗುಳು ನಗೆಯಾಗಿ ಉಳಿದಿದೆ

ಪಾಟಿ ಹಿಡಿದು, ಬಳಪವ ಬೆರಳಲಿ ಹಿಡಿದು ಗೀಚಿ ಗೀಚಿ
ಚಿತ್ರ ತೆಗೆದೆನೆಂದು ತೋರಿಸಿ ಒಂಟಿ ಕಾಲಲಿ ಕುಣಿದು ಕಿರುಚಿ
ಎಲ್ಲರ ಮನ ಸೆಳೆದು ಹೊಗಳಿಕೆಯ ಮಾತು ಕೇಳಿ ಸಂತಸದಲಿ
ಗೋಡೆ, ಕಟ್ಟೆ ಎನ್ನದೆ ಚಿತ್ರಗಳ ಸರಮಾಲೆಯೇ ಬಿಡಿಸಿ ಮನೆಯಲಿ
ಅಂದಗೆಡಿಸಿದ ಅಂಗಳದ ನೆನಪು ಮುಗುಳ್ನಗೆಯಾಗಿ ಉಳಿದಿದೆ

ತಿಂದ ಮೊದಲ ಪೆಟ್ಟು ಅಪ್ಪ ಹಣೆಗಿಟ್ಟ ಮುತ್ತು
ಹೊತ್ತು ಹೆಗಲಮೇಲೆ ಸವಾರಿಮಾಡಿದ ಆ ಸಂಜೆಯಲಿ
ಮುನಿಸಿಕೊಂಡ ಎನ್ನ ಮುಖ ಹಿಡಿದು ಬೊಗಸೆಯಲಿ
ಬೇಡಿದೊರವ ಕೊಡುವೆನೆಂಬಂತೆ ಕಣ್ಣಾಲಿಯಲಿ ನೋಡಿ
ನೋಡಿ

Leave a Reply