ಮೌನ ನಡಿಗೆ

ಮೌನ ನಡಿಗೆ
ಮೌನ, ದೀರ್ಘಮೌನ, ಮೌನದ ನಡಿಗೆ
ಅಂತರಾಳದೊಳು ಹುದುಗಿಹ ನೂರು
ಮಾತಿನ ಒಡೆದಿತ್ತು ಗಡಿಗೆ.
ಭಾವ ಭಾವನೆಗಳು ತೂರಿ ಬರುತಿರೆ ಅಡಿಗಡಿಗೆ
ಎಂದೆಂದೋ ಹುದುಗಿಹ ತಪ್ಪು ಒಪ್ಪುಗಳು
ಒಮ್ಮೆ ದುಃಖ ಒಮ್ಮೆ ನಗುವಾಗಿ ಹರಿದಿರೆ
ಕಡಗೋಲಂದದಿ ತಿರುತಿರುಗಿ ಮಂಥನಕ್ಕೆ
ಬಿದ್ದಿರೆ, ಹಾ! ಇದು ಅಸಮ್ಮತ ನಡಿಗೆ
ಓಹೋ ! ಇದು ನಾ ಹಿಡಿಯ ಬೇಕಾದ ಹಾದಿ
ಈ ದಿಕ್ಕಿನೆಡೆಗೆ.
ಯೋಚನಾ ಲಹರಿಯಲಿ ದಿಕ್ಕಿಗೊಂದೊಂದು
ವಿಷಯ ವಸ್ತು ಮರುಕಳಿಸಿತಿಂದು
ಬೆಣ್ಣೆಯಂದದಿ ಮೃದುವಾಯಿತು ಈ ದೇಹವಿಂದು
ಬಾಹ್ಯ ದೇಹಕಷ್ಟೇ ಮೌನ. ಮತ್ತೆ ?
ಒಳ ಆತ್ಮನಿಗೆ ಜಾಗೃತ ಗೊಳಿಸಿತಿಂದು.
ಹೊಯ್ದಾಟದಲಿ ಬಿಡುತಿರಲಾಗಿ ಮನವನಿಂದು
ನೂರು ಹುಸಿ ವಿಚಾರಗಳು ಮಾಯವಾಗಿ
ಸ್ವಚ್ಛ ವಿಷಯವಿಂದು ಹುಲುಸಾಗಿ ಬರುತಿರೆ
ಹಾಲಿನಿಂ ಮೊಸರು, ಮೊಸರಿಂ ಬೆಣ್ಣೆ ಬೆಣ್ಣೆಯಿಂ ತುಪ್ಪದಂತೆ
ದೇಹವಿಂದು ಬಾಹ್ಯಾಂತರಂಗದೊಳು ಶುದ್ಧಿಯಾಗಿರೆ !
ಮೌನದ ಗೆಳತಿಯೇ ನೀ ನಿಂತಲ್ಲೇ ಬಾರೆನ್ನೊಳಗೆ.

Leave a Reply