ರುಜು

ರುಜು

ಸೃಷ್ಟಿಕರ್ತನಿಂದು ಪುಸ್ತಕಮಾಡಿದನೊಂದು
ಧರೆಗೆ ಕಳುಹಲೆಮಗೆ
ಯಾವ ಗರ್ಭ ಹೊಕ್ಕುವುದೆಂದು
ಮೊದಲುಗೊಂಡು
ನಿಯಮಗಳನು ಕೊಟ್ಟು ರುಜು ಮಾಡಿಸಿದನು ದೈವನು.

ಆಗರ್ಭ ಪ್ರಕೃತಿ ಸೃಷ್ಟಿಯಲ್ಲಿ
ಮನುಜ ತೃಣಮಾತ್ರನು ಒಡೆಯನಲ್ಲ ಅದಕೆ
ಸಕಲ ಜೀವಾತ್ಮರಲ್ಲು ನಿಷ್ಠೆಯಿಂದಿರುವುದಾಗಿ
ರುಜುವಾಗಿದೆ ಭಗವಂತನಲಿ.

ಕೊಟ್ಟ ಕೈಂಕರ್ಯಕೆ ಬದ್ಧನಾಗಿ
ಕಡೆಗಣಿಸಿ ಓಡದಂತೆ
ಜವಾಬ್ದಾರಿಯ ಪೂರ್ಣಗೊಳಿಸುವುದೂ
ರುಜುವಾಗಿದೆ

ಜನ್ಮಜನ್ಮದಿ ಪಾಪಗೈಯಲು
ಚಕ್ರದಂತೆ ಮತ್ತೆ ಮತ್ತೆ ಜನ್ಮವಿಹುದು
ಪುಣ್ಯ ಕಾರ್ಯಗಳಿಗೆ ಧರ್ಮಾತ್ಮನಾಗುವುದು
ಅದೂ ರುಜುವಾಗಿದೆ

ಸುಖದಿ ಒಳಗಡಗಿದ ಭಗವಂತನ
ಮರೆತ ಕ್ಷಣಕೆ ಸದಾ ಅವನ
ನೆನೆಯುವಂತೆ ತಾಪ ತಾ ಕೊಡುವ ದೈವನು
ಅದೂ ರುಜುವಾಗಿದೆ
ದೈವ ನಿಯಮ ಉಲ್ಲಂಘನೆಯಾದಂದೇ
ಮತ್ತೆ ಮತ್ತೆ ಮೃತ್ಯು ಕೂಪಕೆ ತಳ್ಳುವ
ನಿಯಮ ಪಾಲನೆಯಾದಂದೇ ಮೋಕ್ಷ-
ಮಾರ್ಗಕೆ ಸಲಹೆಗಾರನು ದೈವನೆಂದೂ
ರುಜುವಾಗಿದೆ

ಇಂದೆಸಗಿದ ದುಷ್ಕೃತ್ಯಕೆ
ಇಂದೇ ಶಿಕ್ಷೆ ಕಾಣುವಂತೆ
ಇಂದಿನ ಉಪಕಾರಕೂ ಇಂದೇ
ಪ್ರತ್ಯುಪಕಾರದ ಫಲಿತಾಂಶ
ಕರುಣಿಸುವ ‘ಕಲಿ’ ಎಂದೂ
ರುಜುವಾಗಿದೆ.

ಅಳುತ ಜಗಕೆ ಕಾಲಿರಿಸಿದಂದೇ
ಸಮಯ ಮೀರಿದೊಡನೆ
ನಗುತ ಮರಳುವುದೆಂದೂ
ರುಜುವಾಗಿದೆ

Leave a Reply