ವಿನಮ್ರ ವಿನಂತಿ

ವಿನಮ್ರ ವಿನಂತಿ

ಓ ಸೃಷ್ಠಿಯ ಪರಿಸರ ಸ್ನೇಹಿಗಳೆ
ಇಂದೆನಗೊಂದು ಅಭಿಲಾಷೆಯು ನಿಮ್ಮಲಿ

ನಮ್ರತೆಯಿಂದಲಿ ಬೇಡುವೆನು
ಗುರುವಾಗಿರಿ ನೀವಿಂದೆನಗೆ

ಓ ಚಿಲಿಪಿಲಿ ಗುಟ್ಟುತ
ಹಾರುವ ಹಕ್ಕಿ ಪಕ್ಷಿಗಳಿರಾ
ಒಗ್ಗೂಡಿ ಬಾಳುವ ಪಾಠ ಕಲಿಸುವಿರಾ?

ಓ ಕಂಠ ಸಿರಿಯ ಕೋಗಿಲೆಯ
ಕರ್ಣಕೆ ಇಂಪಾಗುವ ಹಾಡನೀ
ಕಲಿಸುವೆಯಾ ?

ಓ ಕೆಂಪು ಚುಂಚಿನ ಗಿಳಿಯಣ್ಣಗಳಿರಾ
ಸಿಹಿನುಡಿಯ ಕಲಿಸಲು ಬರುವಿರಾ
ನಾಲಿಗೆಗೆ?

ಓ ಪರಿಪರಿ ಬಣ್ಣದಿ ಕಂಗೊಳಿಸುವ
ಹೂವುಗಳೇ
ಸದಾ ನಗೆ ಬೀರುವುದನು ಕಲಿಸಿರಿ
ಅರ್ತಿಯಿಂದೆನಗೆ.

ಓ ಸಾಲಲಿ ಸಾಗುವ ಇರುವೆಳೆ
ಶಿಸ್ತಿನ ಪಾಠ ನೀಡಿ ನೀವೆಂದೆನಗೆ.

ಓ ಹರಿವ ತೊರೆ,ನದಿ,ಜಲಪಾತಗಳೆ
ಪಾಪ ಪ್ರಜ್ಞೆಯ ತೊಳೆಯಿರಿ ಎನ್ನೊಳಗೆ.

ಓ ಚಲಿಸುವ ಮೇಘಗಳೇ
ಸದಾ ಚೇತನದ ಮಳೆಯಗರಿಸಿರಿ
ಎಲ್ಲಿಯೂ ನಿಲ್ಲದಂತೆನಗೆ.

ಓ ಉಸಿರಾಗಿರುವ ಹಸಿರು ಬನಗಳೇ
ಸ್ವಾರ್ಥವ ಕಳೆಯಿರಿ ಮನದೊಳಗೆ.

ಓ ಅನಂತ ಅಂಬರವೇ
ವಿಶಾಲ ಹೃದಯವ ನೀಡು
ನೀ ಎನಗೆ.

ಓ ಸಕಲ ಜೀವಜಂತು ನಿವಾಸಿನಿ
ಇಳೆಯೇ
ತ್ಯಾಗ, ತಾಳ್ಮೆ, ಸಹನೆಯ ನೀಡು ಬಾ ಎನಗೆ

ಓ ಸೃಷ್ಠಿ ಕರ್ತನೇ
ಸಕಲರಲಿ ಸಮಭಾವದ ಪ್ರೀತಿಯಂಕುರಿಸು
ಎನ್ನ ಅಂರಂಗದೊಳಗೆ.

ಕಲಿಸಿರಿ ಪಾಠವು ನೀವೆನಗೆ
ನಮ್ರತೆಯಿಂದಲಿ ವಿನಂತಿಯು ನಿಮ್ಮೊಳಗೆ.

Leave a Reply