ಅದೋ…ಚುಮು ಚುಮು ಬೆಳಕಲ್ಲಿ

ಅದೋ…ಚುಮು ಚುಮು ಬೆಳಕಲ್ಲಿ
ಮಬ್ಬು ಮುಸುಕಿದೆ ಈ ಧರೆಯಲ್ಲಿ
ಇಬ್ಬನಿಯ ಹಾಸು ಚೆಂಬೆಳಕಲ್ಲಿ
ಕಾಣದ ಮಾಯ ಲೋಕವೆಂಬಂತೆ
ಸಾಗುತಿರೆ ಎಲ್ಲವೂ ಹತ್ತಿರವೇ ಇರುವಂತೆ
ಹಾದಿ ಗುಂಟ ಪರದೆ ಬಿಟ್ಟಂತೆ
ಹಿತವಾದ ಗಾಳಿ ಸೋಕಿ ಮೈಮನಕೆ
ನಡುಕವಾದರು ಸೊಗಸು ಆ ಕ್ಷಣಕೆ
ಸೂಚನೆಯು ನೀಡಿದೆ ನವ ಮಾಸಕೆ
ಇರುಳು ಬೆಳಕಿನ ಆಟವು ಜಗದಲ್ಲಿ
ಅವಸರದಿ ಬಾನುಲಿ ಸೇರುವವು ಗೂಡಲ್ಲಿ
ಬಯಸುವವು ನಿದ್ರಿಸಲು ಬೆಚ್ಚನೆಯ ಹಾಸಲ್ಲಿ
ಎಳೆಯ ಕಿರಣಗಳ ಕುಸ್ತಿ ಮಂಜ ಕರಗಿಸಲು
ಮಾಯ ಪರದೆಯ ಮೆಲ್ಲನೆ ಸರಿಸಲು
ಹನಿ ನೀರು ಹಾತೊರೆದಿದೆ ನೆಲವ ಸ್ಪರ್ಷಿಸಲು
ತಂಪಿನ ಕಂಪಿಗೆ ದುಂಬಿಯ ಬಯಸಿ
ಪುಷ್ಪಗಳು ಅರಳಿ ಅರಸಿಯಂತೆ ಸಿಂಗರಿಸಿ
ಮಾರ್ಗಶಿರನ ಅಗರಿಂದೆ ಹಾರೈಸಿ
ಸೃಷ್ಟಿಗೆ ಎಲ್ಲಿದೆ ಬೆಚ್ಚನೆ ಉಡುಪು!
ಧರೆಯೇ ಹಾಸು! ಅಂಬರವೇ ಹೊದಿಕೆ
ಇರುವ ಸಕಲ ಜೀವಿಗಳೇ ಬಿಸಿ ಉಸಿರು!

Leave a Reply