ಅಮ್ಮ ಕಲಿಯಲೇ ಇಲ್ಲ!

ಅಮ್ಮ ಕಲಿಯಲೇ ಇಲ್ಲ!

ಜನ್ಮ ಕೊಟ್ಟ ಕ್ಷಣದಿಂದ ಮೊಲೆಯುಣಿಸಿದಳು
ವರ್ಷಗಟ್ಟಲೆ ಶಕ್ತಿವಂತನಾಗಲಿ ಕೂಸೆಂದೆನಿಸಿ ಬೆಳೆಸಿದಳು
ನೋವಾಗುವುದು ಸಾಕು ಬಿಡು ಎನ್ನುವುದ ಕಲಿಯಲಿಲ್ಲ ಅವಳು!

ಜಾತ್ರೆ ಉತ್ಸವಗಳಿಗೆ ಬಿಡದೆ ಟೊಂಕದಿ ಹೊತ್ತು ಮೆರೆದಳು
ಆ ಕೈಗೊಮ್ಮೆ ಈ ಕೈಗೊಮ್ಮೇ ರಟ್ಟೆ ಬಿಗಿದು ಸೋತರೂ ಹುಸಿನಗುವಳು
ಬಿಟ್ಟು ಹೋಗುವೆನಿಲ್ಲೇ ಬಾರದಿರು ಎನ್ನುವುದ ಕಲಿಯಲೇ ಇಲ್ಲ ಅವಳು

ಹಾಡಿ ಪಾಡಿ ಅಂಗಳವೆಲ್ಲ ಸುತ್ತಾಡಿ ಚಂದಿರನ ತೋರಿ ತುತ್ತಿಟ್ಟಳು
ಜೋಗುಳವ ಹಾಡಿ ತೊಟ್ಟಿಲ ತೂಗಿ ತೂಗಿ ಮಲಗಿಸಿದಳು
ಕೂಸು ಉಣ್ಣದೆ ಮಲಗದೆ ಹಸಿವು ನಿದ್ದೆಗೆ ಎಂದೂ ಜಾರುವುದ ಕಲಿಯಲಿಲ್ಲ ಅವಳು!

ಆಡಲು ಆಟಿಕೆ, ನಗಿಸಲು ಗಿಲಕೀ,ಕಾಲ್ಗೆಜ್ಜೆ ಕೈ ಕಡಗ ತಂದೇ ತಂದಳು
ಬೇಕು ಬೇಡಗಳ ಅರಿಯುವ ತವಕದಲ್ಲಿ ನಿತ್ಯ ಹೊಸ ಪಟ್ಟಿ ಮಾಡಿದಳು
ತನ್ನ ಬೇಡಿಕೆಯ ಪಟ್ಟಿ ಮಾಡುವುದು ಕಲಿಯಲೇ ಇಲ್ಲ ಅವಳು!

ಬಲು ಸ್ವಾರ್ಥಿ ತನ್ನೊಡಲ ವಿಷಯದಲ್ಲಿ ಅನ್ಯಯೋಚಿಸಳು
ಕಲಿಸುವ ಉತ್ಸಾಹದಲ್ಲಿ ತನ್ನೆಲ್ಲ ಆಭರಣಗಳ ಒತ್ತೆ ಇಟ್ಟಳವಳು
ಚಿನ್ನಾಭರಣ ಮೋಹವಿಲ್ಲ ಸಾಕು ಕರಿಮಣಿಯೇ ಶ್ರೇಷ್ಟ ಎನ್ನುವಳು ಸತ್ಯ

ಕೆಲವೊಮ್ಮೆ ಕಲಿಯಲೇ ಇಲ್ಲ ಅವಳು.

ರೆಕ್ಕೆ ಬಲಿಯಲು ಹೊರ ದೂಡಿ ಉತ್ಸಾಹ ತುಂಬಿದಳು
ತನ್ನೊಡಲ ಕುಡಿಯ ಸಾಧನೆಯ ಗರಿ ಕೆದರಲು ಜಗವ ಮರೆತಳವಳು
ಆದರೂ ದೂರವಿದ್ದು ಬದುಕುವುದು ಕಲಿಯಲೇ ಇಲ್ಲ ಅವಳು.

ಛಲದಿ ಮುನ್ನುಗುವುದನು ಗುರಿ ಮುಟ್ಟುವ ಪರಿಯನು ತಿಳಿಸಿದಳು
ಬಿಟ್ಟು ನಡೆಯುವುದು, ಬಿಟ್ಟು ಓಡುವುದು ಬಿಟ್ಟು ಬದುಕುವುದನ್ನು ಕಲಿಸಿದಳು
ಬಿಟ್ಟು ಇರುವುದನ್ನೇ ಕಲಿಯಲಿಲ್ಲ ಅವಳು ಅವಳೆಂದರೇನೆ ಅವ್ವ

ಉಮಾ ಭಾತಖಂಡೆ.

Leave a Reply