ದೇವರಿಗೊಂದು ಪತ್ರ  (21)

ಹೇಗೆ ತೋಡಿಕೊಳ್ಳಲಿ  ಹೇಳು ಎನ್ನ ತೊಳಲಾಟ

ನಿನ್ನ ದರುಶನ ಭಾಗ್ಯವಿಲ್ಲದೆ ಸಿಡಿದಿದೆ ಎನ್ನ ಲಲಾಟ

ಇದ್ಯಾಕೋ ವಾಸುದೇವ ನಿನ್ನ ಹೊಸ ಬಗೆಯ ಆಟ

ಅದ್ಯಾವ ಮೋಡಿ ಮಾಡಿಹೆ  ಕಣ್ಮುಂದೆ ನಿರಂತರ ನಿನ್ನದೇ ಚಿತ್ರಪಟ

ಕಳೆದು ಹೋಗುತ್ತಿದೆ ಒಂದು ಮಾಸ ಇನ್ನು ಕೊಡದಿರು ಸಮ್ಮನೆ ಕಾಟ

 

ಸೆಳೆತಗಳ ಗೆಲ್ಲುವ ಮತಿ ಇನ್ನೂ ಕೊಡು ಎನಗೆ

ಅವಿತಿರುವ ಮೋಹ ಮಾಯೆಯ ಅಳಿಸಿಬಿಡು  ಇಲ್ಲಿಗೆ

ನಿನ್ನಿಚ್ಚೆಯಂತಿರಲು ಕಷ್ಟವಾಗದಿರಲಿ ಸಲಹು ನೀ ಎನಗೆ

ಸಹಿಷ್ಣುತೆಯ ಕೊಟ್ಟು ಗಟ್ಟಿ ಗುಂಡಿಗೆ ದಯಪಾಲಿಸೆದೆಗೆ

ನಿನ್ನ ಚರಣಗಳ ಶಿರದ ಮೇಲಿಟ್ಟು ತೃಪ್ತಿ ನೀಡೆನಗೆ

 

ಸುರಿವುದಾದರೆ ಕಣ್ಣೀರು ಅದು ನಿನ್ನ ಪಡೆವುದಕ್ಕಾಗಿ ಹರಿದು ಬಿಡಲಿ

ದುಃಖ ಉಕ್ಕುಕ್ಕಿ ಹೃದಯ ಬಿರಿಯುವುದಾದರೆ ಅದು ಅಲ್ಲಿ ನೀ ನೆಲೆಸಲೆಂದೆ  ಆಗಿರಲಿ

ಚಿತ್ತ ನಿತ್ಯ ಚಂಚಲ ಆಗುವುದಾದರೆ ಅದು ನಿನ್ನದೇ  ಯೋಚನೆಗೆಂದೇ ಆಗಿರಲಿ

ಸಂಕಷ್ಟಗಳ ಸಂಕೋಲೆಯಲ್ಲಿ ಮುಳುಗುವುದಾದರೆ ಅದು ಕೇವಲ ಆತ್ಮಶುದ್ಧಿಗೆಂದೆ ಆಗಲಿ

ಆತ್ಮಶುದ್ಧಿ ಆದರೂ ಅದು ಅಂತಿಮವಾಗಿ ನಿನ್ನ ಪಾದಕಮಲದಲ್ಲಿ ಲೀನವಾಗಲಿ

 

ನಿನಗಾಗಿ ಸದಾ ಧ್ಯಾನಿಸುವ

ಇಂತಿ ನಿನ್ನ

ಉಮಾ ಭಾತಖಂಡೆ.

Leave a Reply