ದೇವರಿಗೊಂದು  ಪತ್ರ (23)

ದೇವರಿ ಗೊಂದು  ಪತ್ರ (23)

ಅರಿಯೆ ಏಕೋ ವ್ಯಾಕುಳಲು ನಾನಗಿಹೆ ಅಕಟಕಟಾ

ದರುಶನ ಭಾಗ್ಯವಿಲ್ಲದೇ ನಿನ್ನ ಕಾದು ಕಾದು ಹರಿಯೇ

ಕಳೆದ ಕಹಿ ಕಷ್ಟಗಳ ನೆನೆನೆನೆದು ದುಃಖಿಸಿದ ಪರಿಯ

ಮೋಹ ಪಾಶದ  ಬಲೆಗೆ ಮತ್ತೆ ಮತ್ತೆ ಜಿಗಿದು ಹಂಬಲಿಸಿದ

ಬೇಸರದ ಬದುಕಿಗೆ ವ್ಯಾಕುಲತೆ ತಾಳಿ ದಿನ ದಿನವೂ

ಕಳೆದೆ ವ್ಯರ್ಥದಿ ಸಲ್ಲದ ಆಸೆಗಳ ಬದುಕಿಗೆ ಘಳಿಗೆ ಘಳಿಗೆ

ಇಂದೇಕೋ ಪ್ರತಿ ಕ್ಷಣ ಕ್ಷಣಕ್ಕೂ ನಿನ್ನ ಕಾಣುವ ತುಡಿತ

ಹಗಲಿರುಳು ನಿನ್ನ ಧ್ಯಾನದಲಿ ತಲ್ಲಿನ ಈ ಮನಸು

ನಿನ್ನ ಪ್ರೇಮದ ಸುಳಿಯಲಿ ವ್ಯಾಕುಲತೆ ಇಂದೆನಗೆ

ಮನದೊಳಿಂದು ಸುಳಿಯುತಿಹುದಯ್ಯ ನೂರು ಚಿಂತೆ

ಮತ್ತೆ ಮತ್ತೆ ಬರುತಿಹುದು ಆ ಪರಮ ಭಕ್ತರ ಚಿತ್ರಪಟಗಳು

ಕಂಡರದು ಹೇಗೆ ನಿನ್ನನವರು?ಪಡೆದರು ಹೇಗೆ ಭಕ್ತಿಯಲ್ಲಿ ಮುಕ್ತಿ?

ಒಲಿಸಿ ಕೊಂಡಳು ಹೇಗೆ ಶಬರಿ ಕಾದು ಕಾದು ಶ್ರೀರಾಮನ!

ಆ ಮಹಾದೇವಿ ಅಕ್ಕ ಕರ್ಪೂರದಂತೆ ಕರಗಿ ಸೇರಿದಳು ಹೇಗೆ ಮಲ್ಲಿಕಾರ್ಜುನನ!

ಆ ಮುಗ್ಧ ಬೇಡರ ಕಣ್ಣನು ಒಲಿಸಿದ ಹೇಗೆ ಶಂಕರನ!

ಆ ಪರಮ ಪೂಜ್ಯ ರಾಘವೇಂದ್ರರು ಆಲಂಗಿಸಿದುದು ಹೇಗೆ ವಾಸುದೇವನ!

ಆ ಪರಮಹಂಸರು ಸನಿಹದಲ್ಲಿ ಕುಳಿತು ಮಾತಾಡಿದರು ಹೇಗೆ ಕಾಳಿಕಾ ದೇವಿಗೆ!

ನಾ ಏನ ಮಾಡಲು ಅರಿಯದವಳು ಸಲಹು ನೀ ಎನ್ನ

ತೋರೆದೆಲ್ಲರ ತಪವ ಮಾಡಿ ಸನ್ಯಾಸಿ ಆಗಲೂ ಅರಿಯೆ

ಧ್ಯಾನದಲ್ಲಿ ಮುಳುಗಿ ಪರಮ ಜ್ಞಾನಿ ಆಗಲೂ ಅರಿಯೆ

ಆದರೂ ನೀ ಎನ್ನ ಅಂತರಂಗದಲ್ಲಿ ಅವರಿಸಿಹೆ ಹರಿಯೇ

ಮರುಕಳಿಸಲು ನಿನ್ನಯ ನೆನಹು ತುಂಬಿ ಹರಿವುದು ಕಂಬನಿಯು

ನಾ ಅರಿಯಲು ಸೋತೆ ಇದಾವ ಭಕ್ತಿಯ ಪರಿಯು

ಕೈಬಿಡಬೇಡವೋ ತಂದೆ ನೀ ಎನ್ನ ಆತ್ಮದ ಗುರುವು

ವ್ಯಾಕುಲತೆ ಅಳಿಸಲು ನೀ ನೀಡು ಮನಕೆ ಭಿನ್ನ ಉತ್ತರದ ಪತ್ರವು

ಸದಾ ನಿನ್ನ ಉತ್ತರಕ್ಕೆ ಕಾಯುವ ನಿನ್ನ ಈ ಜೀವವು

 

ಇಂತಿ

ನಿನ್ನ ಉಮಾ ಭಾತಖಂಡೆ.

 

Leave a Reply