ದೇವರಿಗೊಂದು ಪತ್ರ- 27

ದೇವರಿಗೊಂದು ಪತ್ರ! (27)
ಸೌಖ್ಯ ನಾನು
ಬಲ್ಲವನು ನೀನು!
ಆಟವೇನೋ ನಡೆದಿದೆ ನೀ ಆಡಿಸಿದಂತೆಯೇ!
ಎಂದು ಮುಗಿವುದೋ ಎನ್ನಲಾರೆ, ಕರ್ತೃ ನೀನೇ!
ಪಾಪ ಕರ್ಮ ಅಳೆದು ಫಲವ ನೀವ ಬುದ್ಧಿವಂತ ಕರುಣಿಕ ನೀನು!

ಬೇಕು ಬೇಕು ಎನ್ನುವಾಗ ಸಾಕುಸಾಕು ಮಾಡುವಾತ
ಸಾಕು ಬೇಡ.. ಎನ್ನುವಾಗ ಸಾಲಾಗಿ ಕೊಡುವಾತ
ಬದುಕ ಬಂಡಿಯಲಿ ಬೆಂದು ನಿಂದವಗೆ ಅಭಯಹಸ್ತ ನೀಡುವಾತ!

ಅವರ ಇವರ ನೆರಳು ಬೇಕೆಂದು ಬಯಸಿದಾಗ
ಹತ್ತಿರ ಸುಳಿಯದೆ ನೀ ದೂರ ಸರಿದು ಬಿಡುವ ಬೇಗ
ಕಾಯುವೆ ನೀ, ಸಕಲವೂ ನೀನೆಂದು ಧೃತಿಗೆಡದೆ ಬಂದಾಗ!

ಹಗಲಿರುಳು ನಿನ್ನ ನೆನೆದು ನಿದ್ದೆಗೆಟ್ಟು ಮಲಗಲು
ಕನಸಲಿ ಬಂದು ಮುಗುಳ್ನಕ್ಕು, ಅನ್ಯ ವೇಷದಲಿ ಬರುವೆ ಸಲಹಲು
ಏನೆಂದು ಬಣ್ಣಿಸಲಿ ನಿನ್ನ ಪವಾಡಗಳ ಸವಾಲುಗಳ

ಆದಿ ಅಂತ್ಯವೆಲ್ಲ ನೀನೇ ತಾನೆ ಬಲ್ಲವನು
ಆದರೂ ನರನೇಕೆ ತಾನೇ ಎಂದು ಮೆರೆಯುತಿಹನು
ನೀನೇ ತಾನೆ ನಾನು ನಾನು ಎಂಬುದನ್ನು ಸುಡುವ ಹರನು.

ನಿತ್ಯ ಪತ್ರ ಬರೆಯುತ್ತಿರುವೆ ನಿನ್ನ ಉತ್ತರಕ್ಕೆಂದು
ನೀನು ನಗುತ ಉತ್ತರಿಸುತ್ತಿರುವೆ ಮನದಿ ನಿಂದು
ನೀ ಬರೆಸಿದಂತೆ ಬರೆವೆ ನೀ ನೆಲೆಸು ಹೃದಯದಲಿ ಬಂದು.

ನಿನ್ನ ಮುಗುಳ್ನಗೆಯ ನೋಟಕ್ಕೆ ಕಾಯುತ್ತಿರುವ
ನಿನ್ನ
ಉಮಾ ಭಾತಖಂಡೆ.

Leave a Reply