ದೇವರಿಗೊಂದು ಪತ್ರ(14)

ದೇವರಿಗೊಂದು ಪತ್ರ(14)

ಹೇಳುವುದಿದೆ ಬಹಳ ಬೇಸರಿಸ ಬೇಡ
ಭಕ್ತರನ್ನು ಹುಡುಕುವ ಕೃಪಾಕರ ನೀನಂತೆ
ಕಷ್ಟಗಳ ಕೊಟ್ಟು ಆತ್ಮ ಶುದ್ಧಗೊಳಿಸುವಿಯಂತೆ
ನಿನ್ನ ಕಾಣುವ ಹಾದಿ ತೋರುವಿಯಂತೆ
ನಿನ್ನಂತೆ ನಡೆದರೆ ದರುಶನ ನೀಡುವಿಯಂತೆ

ಏನ ಹೇಳಲಿ ಇಂದು ವ್ಯಾಕುಲಳಾಗಿಹೆ ನಾ
ಪ್ರಶ್ನೆಗಳೇಳುತಿವೆ ಬಗೆ ಬಗೆ ತಳಮಳ ಮನದಲಿ
ಆ ರಾಮನ ಕಾಣಲು ಶಬರಿ ಕಾಯ್ದ ಬಗೆಹೇಗೆ?
ಆ ಹನುಮ ಎದೆ ಬಗೆದು ತೋರಿದ ಭಕ್ತಿ ಹೇಗೆ?
ಆ ಬೇಡರಕಣ್ಣನ ಮುಗ್ಧ ದೈವಪ್ರೀತಿ ಬಂತು ಹೇಗೆ

ನನ್ನೊಳಗಿನ ಕೋಲಾಹಲಕೆ ಕಾರಣ ನಾನರಿಯೆ
ದೃಷ್ಟಿ ಬಯಸಲಿ ನೋಡದೆ ಬೇರೇನೂ ನಿನ್ನಲ್ಲದೆ
ಚಿತ್ತದೊಳು ಬರಿ ಚಿತ್ರ ಚಿತ್ತಾರ ಮೂಡುತಿರಲಿ ನಿನ್ನದೇ
ನಾಸಿಕವು ಹೀರಲಿ ವಾಸನೆ ಗಂಧದ ನೀ ಬರುವ ಸೂಚನೆಗೆ
ನಾಲಿಗೆ ನುಡಿಯಲಿ ಕೃಷ್ಣಾ ಎಂದು ಸಾಕೆನಗೆ

ಘಳಿಗೆ ಘಳಿಗೆಗೂ ಚಂಚಲವಾಗದಿರಲಿ ತನುವು
ಭೋಗ ಲಾಲಸೆ ತೊರೆಯುವಂತಾಗಲಿ ಈ ದೇಹ
ಪತಿ ಸುತರ ಮೋಹ ತೊರೆಯಲಿ ಈ ಹೃದಯ
ನೀನು ಸತ್ಯ ನಿನ್ನನ್ನಲ್ಲದೆ ಎಲ್ಲ ಮಿಥ್ಯ ಎನ್ನಲಿ ಮನ
ವ್ಯರ್ಥ ಕ್ಷಯಿಸಿದ ಕ್ಷಣಗಳ ನೆನೆದು ಕೊರಗಿದೆ ಆತ್ಮ ಮನ್ನಿಸು ಕರುಣಾನಿಧಿ.

ಇಂತಿ ನಿನ್ನ
ಉಮಾ ಭಾತಖಂಡೆ.

Leave a Reply