ಗುರಿ ಸಾಧನೆಗೆ ಗರಿ ಯಶೋಧರ !
ಸಿದ್ದಾರ್ಥನ ಬುದ್ಧನ ಮಾಡಿ
ಜಗದೊಳು ಮೆರೆಸಿದ ಯಶೋಧರ !
ತ್ಯಾಗ ಅಭಿಮಾನದ ಸಂಕೇತಕೆ
ಕಳಸವು ನೀ ಯಶೋಧರ !
ಅಘೋರಘನ ರಾತ್ರಿಯದಂದು
ಸಖಿಯ ಕಡೆಯ ನೋಟವ
ಕಣ್ತುಂಬುವ ನೆಪದಲಿ ಅಂದು
ಸಿದ್ಧಾರ್ಥನು ಬಳಿ ನಿಂದಿರಲು
ಗಾಢ ನಿದ್ರೆಯೊಳಿಹಳೆಂದು ಭ್ರಮಿಸಿರಲು
ಕಣ್ಣಿಟ್ಟರೆ ಗುರಿಯದು ಸಖನದು
ಕಲುಕುವ ಭಯದಿ ಬಾಹ್ಯದಿ ಕಣ್ಮುಚ್ಚಿರಲು
ಅಂತರಂಗವದು ಎಚ್ಚೆತ್ತಿರಲು
ಮುಂದಿಹ ಸಿದ್ಧಾರ್ಥನ ನೆರಳಿನ ಭಾಸಕೆ
ನಿನ್ನೊಡಲಲಿ ಕೋಲಾಹಲ ಎದ್ದಿರಲು
ತಡೆಯಲೆ ? ಹೇಳಲೆ ? ಬಿಗಿದಪ್ಪಲೆ ಸಖನನು
ನೂರು ತೊಳಲಾಟಕೆ ತಾ ಬಿದ್ದಿರಲು
ಪ್ರವಾಹದೋಪಾದಿ ಕಂಬನಿ ಉಕ್ಕಲು
ಶಯನದ ಹಾಸಿಗೆ ತೊಯ್ದಿರಲು
ಶೋಕಾತಾಪದಿ ನರಳಿರಲು
ತನ್ನಯ ಸ್ವಾರ್ಥಕೆ ಸಖನನು ತಡೆದೊಡೆ
ಲೋಕದ ದುಃಖದ ಅಳಿಸುವ ದೈವಗೆ
ಗೋಡೆಯು ನಾನಾಗುವೆನೆಂದು
ಚಿಂತೆಯ ನೀ ಕಲ್ಯಾಣದ ಮಾಡಿರಲು
ಭೋಗ ವಿಲಾಸದ ಸರ್ವಸುಖಾನು
– ಭವವು ತೃಪ್ತಿಯ ತಂದಿರೆ
ಒಡಲಿಗೆ ರಾಹುಲನುಡುಗೊರೆಯು
ಕೋಟಿ ಮನುಜಗೆ ದಾರಿಯ
ತೋರಲು ಹೊರಟಿಹ ಸಖನನು
ಹೃದಯದಿ ನಮಿಸಿದೆ ಅಂದು
ಪೋಗಲು ನಿನ್ನಯ ಸಹಕಾರವೇ
ಉತ್ತುಂಗದ ಶಿಖರವೆಂದು
ಗುರಿ ಸಾಧನೆಗೆ ಗರಿ ಕೆದರಿದ
ಓ ಯಶೋಧರ ನಿನ್ನಯ
ತ್ಯಾಗವೇ ನೀಡಿತು ಸಿದ್ಧಾರ್ಥನಿಗೆ
ಪುನರ್ಜನ್ಮವನು.
ಜನ್ಮವೆತ್ತಿದ ಜ್ಞಾನಿ ಬುದ್ಧನು
ದುಃಖದ ಮೂಲವ ಸಾರಿದನು.
ಕರುಣೆ, ಪ್ರೀತಿಯ ಬೆಳಕನು ತೋರಿದನು.
– ಉಮಾ ಭಾತಖಂಡೆ
You must log in to post a comment.