ಹುತ್ತ

ಹುತ್ತ

ಭೇಟಿಯಾದವು ಹಲ ಹಳೆಯ ನೆನಪುಗಳು ಸಂಜೆ
ಮರೆತ ಕೆಲ ಕನಸುಗಳ ಜೊತೆ ಮಾತಾಯಿತಂದೆ
ನೆನಪುಗಳ ಕೆದಕಿದೆವು ಕಣ್ಣಾದವು ಮಂಜು
ಆರಂಭ ಅಂತ್ಯದಲಿ ನಿನ್ನ ನೆನಪೇ ಬಂದು

ನೆನಪೊಂದು ಕನಸುಗಳ ಕೌದಿಯನು ನೇಯಲು
ಕನಸುಗಳ ಹೆಣೆಯಲು ನೆನಪುಗಳೇ ದಾರ
ನನಸೊಂದು ನಿದ್ದೆಯಲಿ ಕನಸೊಂದು ಕಂಡಿರಲು
ಸುರಿದಿಹುದು ನೆನಪುಗಳ ವರ್ಷಧಾರ

ನೆನಪೊಂದು ಕೇಳಿತು, ಏನೊ ಬದಲಾದಹಾಗಿದೆ
ಮೊದಲಿನ ಪರಿಸರದಲಿ ಕಾಣುತಿದೆ ಕೊರತೆ
ನೆನಪೇ, ಇಲ್ಲೀಗ ಕನಸು ಸುಳಿಯುವುದೇ ಇಲ್ಲ
ಕನಸಿಲ್ಲದ ಎದೆ ಈಗ ಎಣ್ಣೆ ಕಾಣದ ಹಣತೆ

ಕೂಸುಗಳ ಕನಸುಗಳ ಪಾಟಿ ಮನಸನು ಸುಟ್ಟು
ಕಲಿಸಿಹೆವು ಅವಕೆ ಆತ್ಮಗಳಿಲ್ಲದ ಒಣ ಬದುಕು
ಗಡಿಬಿಡಿಯ ಓಟದಲಿ, ಅಂಕಗಳ ಸುಳಿಯಲ್ಲಿ
ಅರಳಲು ಬಿಡದೇ ಮಾಡಿಹೆವು ಮಕ್ಕಳನು ಸರಕು

ನೆನಪೊಂದು ಹುಡುಕುತಿದೆ, ಎಲ್ಲಿಹಳಮ್ಮ ನಮ್ಮಿ’
ನೋಡಲ್ಲಿ ‘ಕಿಚನ್’ನಲ್ಲಿಹಳು ಈಗವಳು ‘ಮಮ್ಮಿ’
ಕಸ್ತೂರಿಗನ್ನಡದ ಕೊಂಡಿ ಕಳಚಿ ಬಿದ್ದಿವೆಯಿಲ್ಲಿ
ಅಪರಿಚಿತರೀಗ ನಾವು, ನಮ್ಮದೇ ಮನೆಯಲ್ಲಿ!

 

                           – ಲಕ್ಷ್ಮೀಕಾಂತ ಇಟ್ನಾಳ

1 Comment

  1. ಅಪರಿಚಿತರೀಗ ನಾವು, ನಮ್ಮದೇ ಮನೆಯಲ್ಲಿ!
    ಈ ಸ್ವಗತಕ್ಕೆ ನಾವೇ ಉತ್ತರ ಕಂಡುಕೊಳ್ಳಬೇಕಿದೆ . ಮತ್ತೊಂದು ಸುಂದರ ಕವನ ಇಟ್ನಾರವರೇ.

Leave a Reply