ಪರಾಜಯ…

ಪರಾಜಯ…
(ಅಲ್ಲಗಳೆಯಲಾಗದ ಒಂದು ವಾಸ್ತವ)
ನನ್ನ ಬದುಕಿದು,
ನನ್ನದು-
ನಾನೇ ಆಳುವವ
ಅಂದೆ,
ಕಾಣದ ಕೈಯೊಂದು
ಹೊಸಕಿ ಹಾಕಿದೆ…
ನನ್ನ ಜನ, ನನ್ನ
ಆಪದ್ಬಂಧುಗಳು
ಅಂದುಕೊಂಡೆ,
ಕೈಬೀಸಿ ತಿರುಗಿ
ನೋಡದೇ- ಮರೆಯಾಗುತ್ತಿದ್ದಾರೆ…
ನನ್ನ ಗಳಿಕೆ,
ನನ್ನ ಉಳಿಕೆ,
ನನ್ನದೇ ಸಂತಸಕ್ಕೆಂದು
ಕನಸು ಕಂಡೆ,
ಬೋರಲು ಬಿದ್ದ
ತುಂಬು ಬಿಂದಿಗೆ
ಬರಿದಾಗುತ್ತಿದೆ…
ನನ್ನ ವಿದ್ಯೆ,
ನನ್ನ ಹೆಮ್ಮೆ
ಎಂದೆಣಿಸಿದ್ದೆ…
ಎಷ್ಟಿದ್ದರೂ ದಕ್ಕುವುದು
‘ಅಂಗೈ ಗೆರೆ’ಯಷ್ಟೇ…
ಸಾಬೀತಾಗಿದೆ…
ನನ್ನ ಮಕ್ಕಳೆನ್ನ
ಅಂತ್ಯ ಕಾಲಕ್ಕೆ- ಅಂದುಕೊಂಡೆ…
” ಯಾರಿಗೆ ಯಾರೋ
ಪುರುಂದರ ವಿಠಲ,”
ನಿಜವಾಗಿದೆ…
ವಿಶ್ವದುದ್ದಗಲಕ್ಕೂ
ನಾನೇ ವಿಶ್ವಂಭರ
ಎಂಬಂತೆ ಮೆರೆದೆ…
ಕಣ್ಣಿಗೆ ಕಾಣದ
ವೈರಾಣುವಿನೆದುರು
ಮೇಲೇಳದಂತೆ
ಪರಾಜಿತನಾದೆ…
Leave a Reply