ಪ್ರೀತಿಯು ಅದೊಂದು ಬೀಜವಾದರೆ

ಪ್ರೀತಿಯು ಅದೊಂದು ಬೀಜವಾದರೆ   (ಪ್ಯಾರ ವೋ ಬೀಜ್ ಹೈ)

 

ಅದೊಂದು ರೀತಿಯ ಬೀಜವಿದು ಪ್ರೀತಿ
ಒಮ್ಮುಖವಾಗದು ಅದರ ನೀತಿ
ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ
ಒಬ್ಬಂಟಿ ಬದುಕದು, ಅದರ ಗತಿ
ಬದುಕಿದರೆ ಇಬ್ಬರಲ್ಲೂ,
ಸತ್ತರೆ ಕೂಡಿಯೇ ಸಾಯುವ ಮತಿ

ಹರಿವ ಝರಿಯದು ಪ್ರೀತಿ
ದಂಡೆಗಳ ಕಟ್ಟೆಗಳ ಸರೋವರವಲ್ಲವದು
ದಂಡೆ ಕಾಣದ ಸಾಗರವೂ ಅಲ್ಲವದು,
ಚಿಮ್ಮುವ ಬುಗ್ಗೆಯದು ಅಷ್ಟೆ …..ಹರಿಯುತ್ತಿಹುದು
ಯುಗಯುಗಗಳಿಂದ

ನದಿಯ ಹಾಗೆ ಉಕ್ಕೇರುತ್ತದೆ, ಇಳಿಯುತ್ತದೆ
ಉಕ್ಕುವುದು ಇಳಿಯುವುದು ಎಲ್ಲಾ ಸರಿ, ಪ್ರೀತಿಯಲ್ಲಿ
ನೀರ ಗುಣವೇ ಅದು, ಊಧ್ರ್ವಮುಖ ಪಯಣ
ಕೆಳಗಿಂದ ಮತ್ತೆ ಓಡುತ್ತದೆ ಮೇಲಕ್ಕೆ, ಕಣ್ಣಿಗೂ ಕಾಣದ ಕಣಬಿಂದುಗಳಲ್ಲಿ
ಮೋಡವಾಗಿ ಮುಗಿಲಲ್ಲಿ ಈಜುತ್ತದೆ
ತಂಗಾಳಿಯ ತುಂಟಾಟಕೆ ಓಗೊಡುತ
ಹನಿ ಹನಿ ಮಳೆಯಾಗಿ ಮರಳಿ, ಇಳಿಯುವುದು ಇಳೆಗೆ

ಪ್ರೀತಿಯಿದು ಆದೇಶಕ್ಕೆ ತಲೆಬಾಗಿ, ಹರಿವ ಬಿಂದುವಲ್ಲ
ಮಂದಿರದ ಆರತಿಯಲ್ಲ, ಪೂಜೆಯಲ್ಲ
ಗಳಿಕೆ, ಆಶೆ…. ಹಾಗೆಯೇ
ಲಾಭ ಹಾನಿಯಂತೂ ಅಲ್ಲವೇ ಅಲ್ಲ

ಘೋಷಣೆ, ಉಪಕಾರ ಊಹೂಂ, ಯಾವ ಯುದ್ಧದ ಗೆಲುವೂ ಅಲ್ಲ
ಕೌಶಲ್ಯ, ಬಕ್ಷೀಸು, ಪರಂಪರೆಯ ರೀತಿ ರಿವಾಜುಗಳಲ್ಲ
ಕರುಣೆಯಲ್ಲ, ದಾನವಲ್ಲ
ಇದೊಂದು ಬಿತ್ತುವ ಬೀಜವೂ ಅಲ್ಲ
ಪರಿಮಳವಿದು, ಪರಿಮಳದ ಪರಿಚಯವೂ ಅಲ್ಲ

ನೋವು, ಆಶ್ವಾಸನೆ, ಅಚಲವಿಶ್ವಾಸ, ಉನ್ಮಾದದ,
ಭಾವಕೋಶದ ಸ್ಪರ್ಶದ ಸ್ಪಂದನೆಯ ಸಂವೇದನೆಯ
ಗರ್ಭದಲ್ಲಿ ಹುಟ್ಟುವುದು ಈ
ಪ್ರೀತಿ,
ಸುಮ್ಮನೊಂದು ಬಂಧವಿದು, ಸಂಬಂಧವಿದು
ಎರಡು ಜೀವಗಳ, ಎರಡು ಆತ್ಮಗಳ ಕುರುಹಿದು,
ಹುಟ್ಟುವುದು, ಬೆಳೆಯುವುದು,
ಆದರೆ…..ಮುಪ್ಪಾಗದು ಈ
ಪ್ರೀತಿ

ಮಣ್ಣೊಳಾವಿರ್ಭಿತ ನೋವೊಂದರ ತಣ್ಣನೆಯ ಕಾವಿನಡಿಯಲ್ಲಿ
ಪಾಲಿತ, ಪೋಷಿತ ಫಲದ ಕಟಾವದು
ಹಂಚಲಾಗದು, …ಹಂಚುವುದು ಹೇಗೆ ಅದನ್ನು!

ಮಣ್ಣು,, ನೀರು, ಮತ್ತೆ ಗಾಳಿ ಚೂರು, ಬೆಳಕು ಹಾಗೂ ಅಂಧಕಾರ ತುಸು
ಬೀಜದ ಕಣ್ಣಲ್ಲಿ ಹಣಿಕಿಕ್ಕಲು,
ಸಸಿಯಿದು ಕತ್ತನ್ನು ಮೇಲೆತ್ತಿ
ಮುಖ ಮೂಗು ದೃಷ್ಟಿಗಳ ತೋರುವುದು
ಸಸಿಯ ಎಲೆ ಎಲೆಗಳಲ್ಲೂ
ಕೆಲ ಪ್ರಶ್ನೆಗಳಿವೆ, ಹಲ ಉತ್ತರಗಳೂ!

ಯಾವ ಮಣ್ಣಿನ ಗರ್ಭವಿತ್ತೋ ಅದು
ಯಾವ ಋತುವದು, ಪಾಲಿಸಿ ಪೋಷಿಸಿತ್ತೋ
ಯಾವ ಗಳಿಗೆಯಲ್ಲಿ ದಿನಕರನೊಂದಿಗೆ ಸರಸವಾಡಿತ್ತೋ
ಯಾವ ರೆಂಬೆಗಳು ನಾಚಿ ಮುದುರಿದ್ದವೋ, ಅದರದು

ಎಲೆಗಳ ಕೆಲ ಮುಖಗಳು ತಲೆಯೆತ್ತಿ ನೋಡುತ್ತಿವೆ
ಆಕಾಶದಲ್ಲಿ ಓಲಾಡುವ ಆಸನಗಳಂತೆ
ಕೆಲ ನೇತಾಡುತಿಹವು, ಉದಾಸವೆನಿಸಿದರೂ ಕೆಲವು
ರೆಂಬೆಗಳ ನಾಡಿಗಳಲ್ಲಿ ಹರಿವ ಜಲದೊಂದಿಗೆ ಸಂಬಂಧ ಹೊಂದಿಹವು

ಮಣ್ಣಿನಡಿಯಲ್ಲಿ ಬೀಜವೊಂದಕ್ಕೆ ವಿಳಾಸ ಕೇಳುವವು
ನಾವು ನೀವಾಗೆವು,
ನೀವು ನಾವಾಗೆವು
ಆದರೆ ಕೇಳುವವು,
ನೀವು ನಮ್ಮಿಂದ, ಇಲ್ಲವೆ ನಾವು ನಿಮ್ಮಿಂದ

ಪ್ರೀತಿಯು, ಅದೊಂದು ಬೀಜವಾದರೆ,
ಅದು ಪ್ರಶ್ನೆಯೂ ಹೌದು
ಉತ್ತರವೂ ಹೌದು!

ಮೂಲ : ಬಸು ಭಟ್ಟಾಚಾರ್ಯ      

 ಅನುವಾದ  : ಲಕ್ಷ್ಮೀಕಾಂತ ಇಟ್ನಾಳ

Leave a Reply