ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ

ಕನ್ನಡ ನಾಡಿನ ಕಲಿ
ಗಡಿನಾಡಿನ ಹುಲಿ
ಕೆಚ್ಚೆದೆಯದಿ ಗಂಡುಗಲಿ
ನಮ್ಮ ಸಂಗೊಳ್ಳಿರಾಯಣ್ಣ

ಮುಳುಗದ ಸೂರ್ಯನ ನಾಡಿನರಸರಿಗೆ
ಸಿಂಹಸ್ವಪ್ನ ನೀನಾದೆ
ಜಮೀನ್ದಾರಿ ಜನರ
ಆರ್ಭಟದ ನೀ ಮುರಿದೆ

ಭಾರತಾಂಬೆಯ ತನುಜ ನೀನು
ಚೆನ್ನಮ್ಮನ ಅನುಜನಾದೆ ನೀನು
ಆಕೆಯ ಹೆಜ್ಜೆಗಳಿಗೆ ನೆರಳಾಗಿ
ಕಾಯ್ದೆ ನಾಡನು ಸಿಂಹವಾಗಿ

ಸಾವಿರ ಕಂಬನಿಗಳಲಿ
ಬಿಸಿರಗುತದ ಧಮನಿಗಳಲಿ
ನಿನ್ನದೇ ಛಾಯೆ ಪಡಿಮೂಡಿಸುತಲಿ
ಸ್ವಾತಂತ್ರ್ಯ ಸಂಗ್ರಾಮಕೆ ಕಹಳೆ ಮೊಳಗಿಸುತಲಿ

ಮೋಸದಲಿ ಲಕ್ಕಪ್ಪ ನಿನ್ನ ಸೆರೆ ಹಿಡಿಸಿದ
ಕೊನೆಯುಸಿರುವವರೆಗೂ ನಾಡರಕ್ಷಣೆ ನಿನ್ನಿಂದ
ನಿನ್ನ ಸಾವು ಜನಮನದಲಿ ಕಿಚ್ಚೆಬ್ಬಿಸಿ
ದಾಸ್ಯವ ತೊಲಗಿಸಲು ಮುನ್ನುಡಿ ಬರೆಯಿತು

ಶತಮಾನವ ಕಳೆದರೂ
ಜನಮನರ ಹೃದಯದಿ ಸಾಮ್ರಾಜ್ಞನಾಗಿರುವೆ
ಸ್ವಾರ್ಥತೆಯ ಪರಿವಿಲ್ಲದೆ ನಾಡನುಳಿಸುವ ಧ್ಯೇಯದಿ
ನೀ ಮೆರೆದೆ.. ಅಮರನಾದೆ..

ಕನ್ನಡನಾಡಿನ ಚರಿತೆಗಳಲಿ
ಸುವರ್ಣಾಕ್ಷರದಿ ಕೆತ್ತಿಟ್ಟ ಪುಟಗಳು
ಗಡಿನಾಡಲಿ ಹೆಮ್ಮೆಯ ಸುಪುತ್ರನ
ಕೈಂಕರ್ಯಕೆ ನಮಿಪೆ.. ನಿನ್ನ ಸೃಜಿಸಿದ
ಆ ಮಹಾತಾಯಿಗೆ ನಮಿಪೆ
ಈ ಮಣ್ಣಿಗೆ ನಮಿಪೆ….

 

Leave a Reply