ಸಾವು ಸ್ವಾರ್ಥ
ಮರಣ ಸಂಭವಿಸಿತ್ತೆಂದು ಒಂದು ಮನೆಯಲ್ಲಿ
ಪೊಕ್ಕಿ ಗ್ರಹಿಸಿದನೊಂದು ಸ್ವಾರ್ಥವನಲ್ಲಿ
ಭಿತ್ತರಿಸುವೆನೊಂದೊಂದ ಪಾತ್ರದ ತೊಳಲಾಟವ
ಕೇಳಿರೈ ಬಾಂಧವರೇ,
ಆತ್ಮವದೋ ಕುಳಿತಿರ್ದು ಮೂಲೆಯಲಿ
ನೋಡಲಿಚ್ಛಿಸಿತು ತನ್ನವರ ಕಳಕಳಿಯ
ನೆರೆಯವರೋಡೋಡಿ ಬಂದು
ಕುಂಟ ಕುರುಡ ಮತಿಹೀನರಿದ್ದರು
ನೀನೆಂಥ ದುರ್ದೈವಿ ದೈವದ ಕೈಗೆ ಸಿಕ್ಕೆ ಎನಲು
ಆತ್ಮ ಕೇಳಲಾರದೆ ಕಳವಳಿಸಿತು
ಬಂಧುಗಳದೋ ಬಂದು
ಮೊನ್ನೆ ಕಟ್ಟಿದ್ದ ಮನೆಯ
ಇಂದಿಲ್ಲವಾದ, ಅನುಭವಿಸದೆ ಹೋದ
ಮುಂದೇನು ಗತಿ ಎಂದೆನಲು
ಅತ್ಮಕ್ಕೆ ಘಾಸಿಯಾಯಿತು.
ಜೊತೆಗೂಡಿ ಕಾಯಕದಲಿ
ಕೈಕೈ ಹಿಡಿದು ಭರವಸೆಯಾಗಿದ್ದ
ಗೆಳೆಯರ ಬಳಗವದೋ ಬಂತು
ಪುಣ್ಯಾತ್ಮ ಪಡೆದ ಸಾಲ ಮರಳಿಸಲಾರದೆ
ಹೋದ ಭಾರ ಎಲ್ಲರಿಗಾದ ಎನಲು
ಆತ್ಮ ಲಜ್ಜೆಯಿಂದ ತಲೆ ತಗ್ಗಿಸಿತು.
ಬಿಕ್ಕಳಿಸುತ್ತ ಬಂದರಾ ಅಕ್ಕತಂಗಿಯರು
ರಕ್ಷಾಬಂಧನದ ಕೈ ಇಲ್ಲವಾಯ್ತು
ರಕ್ಷೆ ನಮಗಿನ್ನಾರು
ತವರ ಬಾಗಿನ ತರುವವರ್ಯಾರು
ವರುಷಕ್ಕೊಂದು ಉಡುತ್ತಿದ್ದೇವು
ತವರಸೀರೆ ಎನಲು
ಆತ್ಮ ಮೂಲೆಗುಂಪಾಯಿತು.
ಹತ್ತು ಮುತೈದೆಯರು
ಬಿಗಿಹಿಡಿದಿದ್ದರಾ ಮೃತನ ಅರ್ಧಾಂಗಿಯ
ಸಂತೈಸುತ್ತಿರಲಾಗಿ
ಬೊಬ್ಬಿಟ್ಟು ಕೊರಳು ಬಿಗಿದು
ಗದ್ಗದಿಸುತ್ತಲೇ ನುಡಿದಳು ಸತಿಯು
ನಡುನೀರಿನಲ್ಲೆ ಕೈಬಿಟ್ಟನವ್ವ
ನೂರು ಕನಸು ಕಟ್ಟಿ ಕೊಟ್ಟಿದ್ದ
ಚೂರಾದವೆಲ್ಲ ಕನಸು
ಹೊಟ್ಟೆಗ್ಹಾಕಿದ ತಣ್ಣೀರುಬಟ್ಟೆ
ಕರುಳಕುಡಿಗಳ ಮೇಲ್ಹಾಕಿದನವ್ವಾ ಭಾರ ಎನಲು
ಆತ್ಮ ಅಸ್ತಿತ್ವಕ್ಕೆ ಬೆಲೆಯಿಲ್ಲವೆಂದೆನುತ ಸರಿಯಿತು
ಅಣ್ಣ ತಮ್ಮಂದಿರು ನಿಂತರಿನ್ನು
ಮುಂದಿನ ಕಾಯಕಕ್ಕೆ ಬದ್ಧರಾಗಿ
ಹಂಚಿಕೊಳ್ಳುತ್ತಿರೆ ಸಮಪಾಲು
ಸುಡಲು ಸೌದೆಯಿಂದ ದಿನಕಾರ್ಯದ
ಭೋಜನವರೆಗೆ
ಆತ್ಮ ಓಡುವುದೇ ಲೇಸೆಂದು ಗೊಣಗಿತು.
ಓಡೋಡಿ ಬಂತಿದೋ
ಕರುಳ ಬಳ್ಳಿಯ ನಂಟು
ವೃದ್ಧೆಯ ದುಗುಡವಿದೋ ಕೇಳಿರೆಲ್ಲರು
ಓ ದೈವ ನೀನಗೇಕೆ ಕೋಪ
ಪೇಳಲೈ ಎನ್ನಮೇಲೆ
ಜೀವವಿರಲಿಲ್ಲವೇ ಎನ್ನದು
ಕರುಳ ಬಳ್ಳಿಯ ಕೊಂಡೊಯ್ಯು ವಿಯಲ್ಲ
ನನ್ನತ್ತ ಬಾರದೆ ಈ ಭುವಿಯಿಂದ
ಎನ್ನುತ್ತಿರಲಾಗಿ ಆತ್ಮಥಟ್ಟನೆ ನಿಂತಿತು.
ದುಃಖಿಸುತ್ತಲೇ ನಿಶ್ಚಯಿಸಿತು
ಬದುಕಿ ಸಾಯಲೊಲ್ಲೆ
ಸತ್ತು ಬದುಕುವವನಾಗಿ
ಮತ್ತೆ ನಿನ್ನ ಮಡಿಲಿಗೇ
ಬರುವೆನೆಂದು ಮೆತ್ತಗೆ
ಸಾಗಿತು ಜನನ ಮರಣದ ಚಕ್ರಕೆ.
– ಉಮಾ ಭಾತಖಂಡೆ
You must log in to post a comment.