ತಲ್ಲಣಿಸದಿರು ಮನುಜ…

ಏಕಿಷ್ಟು ತಲ್ಲಣ ಓ ಮನುಜ… ನಿಧಾನಿಸು
ಒಂದಿಷ್ಟು ಸಮಾಧಾನ ನೀ ಸಾಧಿಸು…
ಸಮಯಕ್ಕೆ ಬಂಧಿಯಾಗಿ ನೀ ಅದೆಷ್ಟು ಓಡುವೆ?
ಇನಿತಾದರೂ ವಿಶ್ರಾಂತಿ ನಿನಗೆ ಬೇಡವೇ?

ಸಾಧನೆಯ ವೇಗದಲಿ ಕಳೆದು ಹೋಗಿದೆ ಬಾಲ್ಯ
ಮುಗ್ಧ ನಗು ತುಂಟಾಟಗಳ ನೆನಪುಗಳಷ್ಟೇ ಲಭ್ಯ…
ದಿನಗಳವೆಷ್ಟಾಯ್ತೋ ಸೂರ್ಯಾಸ್ತದ ರಂಗು ನೋಡಿ
ಕೊಳಕ್ಕೆ ಕವಣೆ ಬೀಸಿ ಅಲೆಗಳು ಏಳುವಂತೆ ಮಾಡಿ

ಸಾಧಿಸುವ ಭರದಲ್ಲಿ ಕಳೆದುಕೊಂಡದ್ದು ಎಷ್ಟೋ?
ಕಣ್ರೆಪ್ಪೆ ಸೇರಿಸದ ಇರುಳುಗಳವೆಷ್ಟೋ?
ಮುಗಿಯದ ಆಸೆಗಳ ಹುಚ್ಚು ಕುದುರೆಯನೇರಿ
ಮಂಜು ಮುಸುಕಿದ ಹಾದಿಯಲಿ ಸಾಗಿದೆ ನಮ್ಮ ಸವಾರಿ…

ಯವ್ವನವೂ ಇಂತೆ ಜಾರಿ ಮುಪ್ಪು ಅಡರುವ ಮುನ್ನ
ಕುಳಿತು ಸವಿಯುವೆನೆಂದರೂ ಬದುಕು ರುಚಿಸದ ಮುನ್ನ…
ತಲ್ಲಣಿಸದಿರು ಮನುಜ, ಸಮಾಧಾನಿಸು;
ಇರುವುದಿದೊಂದೇ ಬದುಕು… ತಿಳಿದು ನೀ ಜೀವಿಸು.

1 Comment

  1. ಈ ಕವನ ಇಂದಿನ ವೇಗದ ಜೀವನಕ್ಕೆ ಸೋತಿರುವ ಜನರಿಗೆ….
    …..ಇರುವುದಿದೊಂದೇ ಬದುಕು….ನೀವೂ ಆನಂದಿಸಿ ….ನಿಮ್ಮೊಡನೆ ಇರುವವರಿಗೂ ಜೀವನ ಮಾಡಲು ಅವಕಾಶ ಕೊಡಿ

Leave a Reply