ಪ್ರತಿಯೊಬ್ಬರಲ್ಲೂ ಸ್ವಾಭಿಮಾನ ಇರಬೇಕಾದದ್ದು ಅವಶ್ಯಕ

ಅದ್ಭುತವಾದ ನಿಶ್ಯಬ್ದ ಅರಳಿ ನಿಂತಿದೆ. ಕೇವಲ ಸುರಿವ ಮಳೆಯು ಸಂಗೀತನಾದದಂತೆ ಒಂದೇ ಸಮನೆ ಆಕಾಶದಿಂದ ಭೂಮಿಗೆ ರವಾನೆಯಾಗುತ್ತದೆ. ಕತ್ತಲೆಯ ಅಂಧಕಾರ ಪಸರಿಸಿ ಚುಕ್ಕಿ ಚಂದ್ರಮರನ್ನೂ ತನ್ನ ತೆಕ್ಕೆಯಲ್ಲಿ ಹಿಡಿದಿಟ್ಟುಕೊಂಡಿದೆ. ಮನದ ಮೂಲೆಯ ಮೌನಕ್ಕೆ ತಿದಿ ಒತ್ತಿದೆ. ಮೌನವು ಸಣ್ಣಗೆ ಮಾತಾಗಿ ಹೊರಹೊಮ್ಮುತ್ತಿದೆ.

ಕಾಮನ್ ವೆಲ್ತ್ ಗೇಮದಿಂದ ಎದ್ದ ರಾಡಿಯೂ ಗೆದ್ದ ಪದಕಗಳ ಮುಂದೆ ಮಗುಚಿ ಮಲಗಿದೆ. ದೇಶಕ್ಕೆ ಬೇಕೇ ಬೇಕು. ಏನೆಲ್ಲ ಬವಣೆ ದುಮ್ಮಾನೆಗಳಿದ್ದಾಗಲೂ ತನ್ನ ಸ್ವಾಭಿಮಾನದ ಮೆರವಣಿಗೆ ಬೇಕೇ ಬೇಕು. ಸ್ವಾಭಿಮಾನ ರಹಿತವಾದಾಗ ಉಳಿದೆಲ್ಲ ದೇಶಗಳೂ ನಮ್ಮನ್ನು ಹುರಿದು ಮುಕ್ಕಿ ಬಿಡುತ್ತವೆ. ಅಷ್ಟೇ ಸ್ವಾಭಿಮಾನವೆಂದರೆ ಸ್ವ-ಅಭಿಮಾನ ಅದರ ಅರ್ಥ ಸ್ವಕೇಂದ್ರೀಕೃತವಾದಂಥ ಸ್ವಾರ್ಥವಲ್ಲ. ತನ್ನತನದ ಅರಿವಿಟ್ಟುಕೊಂಡು ಅದನ್ನು ಅಭಿಮಾನಿಸಿಕೊಳ್ಳುವುದಿದೆಯಲ್ಲ ಅದು ಉನ್ನತವಾದುದು.

ಸ್ವಾಮಿ ವಿವೇಕಾನಂದರು ಅಮೇರಿಕೆಗೆ ವಿಶ್ವಧರ್ಮ ಸಮನ್ವತೆಯ ಸಮಾವೇಶಕ್ಕಾಗಿ ತೆರಳಿದಾಗ ಅವರು ಭಗವದ್ಗೀತೆಯನ್ನು ಅಲ್ಲಿದ್ದ ಮೇಜಿನ ಮೇಲಿಟ್ಟರಂತೆ. ಆಗ ಉಳಿದ ದೇಶದವರೂ ಕೂಡ ತಮ್ಮ ತಮ್ಮ ಧರ್ಮಗ್ರಂಥಗಳನ್ನು ಅದರ ಮೇಲಿಡುತ್ತಾ ಹೋದರಂತೆ ಕೊನೆಯವ ತನ್ನ ದೇಶದ ಧರ್ಮಗ್ರಂಥವನ್ನಿಡುತ್ತಾ ಎಲ್ಲಾ ಧರ್ಮಗಳಲ್ಲೂ ನನ್ನದು ಶ್ರೇಷ್ಠವಾದದ್ದು ಅದಕ್ಕೆಂದೇ ನನ್ನದು ಎಲ್ಲರಕ್ಕಿಂತ ಎತ್ತರದಲ್ಲಿದೆ. ಮೇಲಿದೆ ಎಂದನಂತೆ, ಆಗ ವಿವೇಕಾನಂದರಿಗೆ ಸ್ವಾಭಿಮಾನ ಕೆರಳಿತು. ಅವರು ತಮ್ಮ ಆಸನದಿಂದ ಎದ್ದು ಎಲ್ಲಾ ಧರ್ಮಗಳಿಗೂ ಹಿಂದೂ ಧರ್ಮವೇ ಮೂಲ ತಿರುಳು. ಅದು ಒಂದು ಕಟ್ಟಡಕ್ಕೆ ಅಡಿಪಾಯವಿದ್ದಂತೆ. ಪಾಯ ಇಲ್ಲದೇ ಬಿಲ್ಡಿಂಗ್ ನಿಲ್ಲುವುದಿಲ್ಲ. ಈಗ ನೋಡಿ ಎಂದು ಹೇಳಿ ತಾವು ಇಟ್ಟ ಭಗವದ್ಗೀತೆಯನ್ನು ಎಳೆದು ತೆಗೆದಾಗ ಉಳಿದೆಲ್ಲ ಧರ್ಮಗ್ರಂಥಗಳೂ ನೆಲಕ್ಕೆ ಬಿದ್ದು ಅಪ್ಪಚ್ಚಿಯಾದವಂತೆ. ಅವರು ಆ ರೀತಿ ಸ್ವಾಭಿಮಾನವನ್ನು ವ್ಯಕ್ತಪಡಿಸಿ ಇಡೀ ಜಗತ್ತಿಗೇ ಹಿಂದೂ ಧರ್ಮವೆಂದರೆ ಅಪಹಾಸ್ಯದಿಂದ ನೋಡುತ್ತಿರುವವರಿಗೇ ತನ್ನ ದೇಶದ ಸಾಮರ್ಥ್ಯವೇನು ಎಂಬುದನ್ನು ಅತ್ಯಂತ ಸರಳವಾಗಿ ತೋರಿಸಿಕೊಟ್ಟರು. ನಾವು ನಮ್ಮತನವನ್ನು ತೋರ್ಪಡಿಸದೇ ಹೊರಜಗತ್ತಿಗೆ ನಮ್ಮ ತನದ ಅರಿವಾದರೂ ಹೇಗಾಗಬೇಕು? ನಾವೇ ಖುದ್ದು ನಮ್ಮ ದೇಶದ ಉತ್ಪನ್ನಗಳನ್ನು ಬದಿಗೆ ಸರಿಸಿ ಅಥವಾ ಲೋ ಕ್ವಾಲಿಟಿ ಎಂದು ಅಸಹ್ಯಸಿ ಮಲ್ಟಿನ್ಯಾಶನಲ್ ಕಂಪನಿಗಳು ಆಕರ್ಷಕವಾದ ಪ್ಯಾಕೇಟಿನಲ್ಲಿ ನೀಡುತ್ತಿರುವ ವಿಷವನ್ನೇ ಅಮೃತವೆಂದು ಬಗೆದು ಪಡೆದುಕೊಳ್ಳುತ್ತಿರುವುದು ಎಂಥ ಅಭಿಮಾನ ಶೂನ್ಯವಲ್ಲವೇ? ಇಂಥದ್ದನ್ನೆಲ್ಲ ತಡೆಯಲು ಸ್ವಾಭಿಮಾನ ಸಹಿತ ಇಚ್ಛಾಶಕ್ತಿ ಬೇಕೇ ಬೇಕು. ಸ್ವಾಭಿಮಾನ ಮನುಷ್ಯನಲ್ಲಿ ಆತ್ಮವಿಶ್ವಾಸವನ್ನು ಕೊಡುತ್ತವೆ. ಆತ್ಮವಿಶ್ವಾಸ ಎಂಥ ಕೆಲಸವನ್ನೇ ಸಾಧಿಸಿ ತೋರಿಸಲು ಹವಣಿಸುತ್ತದೆ.

ಎಂಥ ಗಾಳಿಯೇ ಬೀಸಿದರೂ ಕೂಡ ಸಣ್ಣ ಗಿಡವು ಅದನ್ನು ಎದುರಿಸಿ ನಿಂತಾಗಲಲ್ಲವೇ ದೊಡ್ಡ ಹೆಮ್ಮರವಾಗಿ ಬೆಳೆಯಲು ಸಾಧ್ಯ. ತನ್ನಲ್ಲಿಯ ಅಗಾಧ ಇಚ್ಛಾಶಕ್ತಿಯಿಂದಲೇ ಪ್ರತಿರೋಧವನ್ನೊಡ್ಡಿ ಬೀಳದಂತೆ ಬೆಳೆಯುವುದು.

ಅಮೇರಿಕ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಪೋಖರಣ ಅಣು ಪರೀಕ್ಷೆಗೊಳಪಡಿಸಿದಾಗ ನಮ್ಮ ದೇಶಕ್ಕೆ ಆರ್ಥಿಕ ದಿಗ್ಬಂಧನವನ್ನು ಹೇರಿತು. ನಮ್ಮ ದೇಶಕ್ಕೆ ಸಹಾಯ ಹಸ್ತ ನೀಡದಂತೆ ಉಳಿದೆಲ್ಲ ದೇಶಗಳೂ ಅಮೇರಿಕೆಯ ಜೊತೆಗೂಡಿ ಮೆರೆದವು. ಆದರೆ ಪ್ರಬಲ ಇಚ್ಛಾಶಕ್ತಿ, ಆತ್ಮವಿಶ್ವಾಸ ಹಾಗೂ ಸ್ವಾಭಿಮಾನದಿಂದ ಕೂಡಿದ ವಾಜಪೇಯಿಯವರು ಅದಕ್ಕೆ ಕ್ಯಾರೇ ಮಾಡಲಿಲ್ಲ. ಅದರಿಂದ ಏನಾಯಿತು? ಅದರಿಂದಾಗಿ ತಮ್ಮ ದೇಶಕ್ಕೇ ಹೊಡೆತ ಬಿತ್ತು. ದೊಡ್ಡ ಕಂಜುಮರ್ ಮಾರ್ಕೆಟ್ ನ್ನು ಹೊಂದಿದ ಭಾರತ ಅಲ್ಲಿಯ ಉತ್ಪನ್ನಗಳು ಬಾರದೇ ಇದ್ದಾಗ ನಮ್ಮ ದೇಶದ ಉತ್ಪನ್ನಗಳನ್ನೇ ಬಳಸಿದವು. ಆ ದೇಶದ ಉತ್ಪನ್ನಗಳು ಇಲ್ಲಿಬಾರದೇ, ಇಲ್ಲಿಯ ಉತ್ಪನ್ನಗಳು ಅಲ್ಲಿ ಹೋಗದೇ ಇದ್ದಾಗ ನಮ್ಮ ದೇಶಕ್ಕೇನೂ ಅದರಿಂದ ಬಾಧಿತವಾಗಲಿಲ್ಲ. ಅವರ ಉತ್ಪನ್ನಗಳೇ ಮಾರಾಟವಾಗದೇ ಅವರೇ ನಷ್ಟದಲ್ಲಿ ಬಿದ್ದರು. ಮತ್ತೆ ತಾವೇ ಆರ್ಥಿಕ ದಿಗ್ಬಂಧನವನ್ನು ತೆಗೆದು ಹಾಕಿದರು. ನಮ್ಮ ಪ್ರಬಲ ಸ್ವಾಭಿಮಾನದಿಂದ ತಾವೇ ಮಣಿಯಬೇಕಾಯಿತು. ಈಗ ನಮ್ಮ ದೇಶಕ್ಕೆ ದಿಗ್ಬಂಧನವನ್ನು ಹಾಕಬೇಕಾದರೆ ಅವರು ನೂರೆಂಟು ಸಲ ವಿಚಾರ ಮಾಡಬೇಕಾಗುತ್ತದೆ. ಹಾಗೆ ಸಾಫ್ಟ್ ವೇರ್ ಹೊರಗುತ್ತಿಗೆಯನ್ನು ನಿಷೇಧಿಸಿದ ಓಬಾಮ ಸರ್ಕಾರ ಅಲ್ಲಿಯ ಸೇನೇಟರಿಂದಲೇ ಪ್ರತಿರೋಧ ವ್ಯಕ್ತವಾದಾಗ ತೆಪ್ಪಗೆ ಕುಳಿತುಕೊಳ್ಳಬೇಕಾಯಿತು. ತನ್ನ ಮನೆ, ತನ್ನ ಜಿಲ್ಲೆ, ತನ್ನ ರಾಜ್ಯ ಹಾಗೆ ತನ್ನ ದೇಶ ಎಂಬ ಸ್ವಾಭಿಮಾನದ ಕೆಚ್ಚದೆ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕಾದದ್ದು ಅವಶ್ಯಕ.

Leave a Reply