ರೊಕ್ಕದ ಗಿಡ

ರೊಕ್ಕದ ಗಿಡ
ಗೆಳೆತನವೆಂಬ ಬಾಂಧವ್ಯ ನಮ್ಮ ಎಳವೆಯಲ್ಲಿಯೇ ಹುಟ್ಟಿ ನಮ್ಮ ಜೊತೆ ಜೊತೆಗೇ ಬೆಳೆದು ಹೆಮ್ಮರವಾಗಿ ಸುಮಧುರ ನಾದದಂತೆ ಮೈಮನವೆಲ್ಲ ಪಸರಿಸುವುದು ಮತ್ತು ನಾವೆಲ್ಲ ಒಂದೊಂದು ದಿಕ್ಕಿನಲ್ಲಿ ನೆಲೆ ನಿಂತಾಗ ಆಗಿನ ಮಧುರ ನೆನಪಿನ ಸುರುಳಿಗಳು ಮುಡಿ ಮನದಾಳದಿಂದ ನಗೆಯ ಬುಗ್ಗೆ ಎಬ್ಬಿಸುವವು. ಗೆಳತಿಯರ ಜೊತೆ ಕಳೆದಂಥ ವೇಳೇ ಎಷ್ಟೊಂದು ಅಮೂಲ್ಯವಾದುದೆಂದು ಗೋಚರಿಸುವುದು. ಆವಾಗಿನ ಒಂದು ನೆನಪು.
ನಾನು ಆಗ ಮೂರನೆಯೋ ಅಥವಾ ನಾಲ್ಕನೇ ಕ್ಲಾಸಿನಲ್ಲೊ ಇದ್ದಿರಬಹುದು. ನಾನು ಆಗ ಬಹಳೇ ಸುಳ್ಳು ಹೇಳುತ್ತಿದ್ದೆ (ಆದರೆ ಈಗಲ್ಲ). ಅಷ್ಟೇ ಅಲ್ಲ, ನನ್ನಲ್ಲೇ ಏನೇನೋ ಕಲ್ಪಿಸಿಕೊಂಡು ಅತೀ ರಂಜಿಸುವಂತೆ ಎಲ್ಲ ಗೆಳತಿಯರ ಮುಂದೆ ಹೇಳುತ್ತಿದ್ದೆ. ಅವರಾದರೂ ಅಷ್ಟೇ. ಅದನ್ನೆ ನಿಜವೆಂದು ನಂಬಿ ಯಾವಾಗಲೂ ನನ್ನ ಹಿಂದೆಯೇ ಸುತ್ತುವರು. ನನಗೆ ಅದು ಮತ್ತೂ ಉತ್ತೇಜಿಸಿದಂತಾಗಿ ಬುರುಡೆ ಬಿಟ್ಟೇ ಬಿಡುತ್ತಿದ್ದೆ.
ನನ್ನ ಗೆಳತಿ ವಿದ್ಯಾ ಮೆಟಗುಡ್ಡಮಠ ಎಂದು ಇದ್ದಳು. ನಮ್ಮ ಮನೆ ಸಿನಿಮಾ ಥೀಯೇಟರ್ ಪಕ್ಕದಲ್ಲೇ ಇದ್ದದ್ದರಿಂದ ಯಾವಾಗಲೂ ನಾವಿಬ್ಬರೂ ಕೂಡಿಯೇ ಸಿನಿಮಾಕ್ಕೆ ಹೋಗುತ್ತಿದ್ದೆವು. ಆವಾಗೆಲ್ಲ ನಮಗೆ ಸಾಕಷ್ಟು ಸ್ವಾತಂತ್ರ್ಯವೂ ಇರುತ್ತಿತ್ತು. ಈಗಿನ ಮಕ್ಕಳಂತೆ ನಾಲ್ಕು ಗೋಡೆಯ ಮಧ್ಯದಲ್ಲಿಯೇ ಕುಳಿತು ಟಿ.ವಿ. ಪರದೆಯ ಮೇಲೆ ಮೂಡುವ ರಂಗುರಂಗಿನ ಚಿತ್ರಗಳನ್ನು ನೋಡುತ್ತ ಕಾಲ ಕಳೆಯುತ್ತಿರಲಿಲ್ಲ. ಆಗ ಟಿ.ವಿ. ಇನ್ನೂ ಬರದೇ ಇದ್ದ ಕಾಲ. ಮನೆಗೆ ಊಟಕ್ಕೆ ಮಲಗಲು ಅಷ್ಟೇ ಬರುವುದು. ಉಳಿದಂತೆ ಶಾಲೆ ನಂತರ ಆಟ ಹೀಗೆಯೇ. ಸಮಯದ ಪರಿವೆಯೇ ಇರುತ್ತಿರಲಿಲ್ಲ. ಅತೀ ಸುರಕ್ಷತೆಯನ್ನು ಒದಗಿಸಿ ತಮ್ಮ ಕಲ್ಲಿನ ಕೋಟೆಯಲ್ಲಿ ಬಂಧಿಸಿಡುವ ತಾಯಿ ತಂದೆಯರೂ ಆಗ ಇರಲಿಲ್ಲ.
ಒಂದು ದಿನ ವಿದ್ಯಾ ಸಿನಿಮಾಕ್ಕೆ ಹೋಗೋಣ ಎಂದು ಕರೆಯಲು ಬಂದಳು. ನಮ್ಮ ತಾಯಿಯ ಹತ್ತಿರ ಹೋದೆ. ಅವರು ಆಗ ತಾನೇ ಮಧ್ಯಾಹ್ನದ ಕೆಲಸವನ್ನೆಲ್ಲ ಮಾಡಿ ಅಡ್ಡಾಗಿದ್ದರು. ‘ಅವ್ವಾ, ನಾ ಗೆಳತಿಯರ ಜೋಡಿ ಸಿನಿಮಾಕ್ಕೆ ಹೋಗ್ತೀನಿ’ ಎಂದೆ. ಅವರು ‘ಆಯಿತು ಹೋಗಿ ಬಾ’ ಎಂದು ಟೊಂಕದಲ್ಲಿಯೇ ಇದ್ದ ಐದರ ಹಸಿರು ಕೋರಾ ನೋಟನ್ನು ಕೊಟ್ಟರು, ಚಿಲ್ಲರೆ ಬೇರೆ ನಾಣ್ಯ ಇರದ್ದರಿಂದ, ಅದನ್ನೇ ತೆಗೆದುಕೊಂಡು ಜಿಲ್ಲನೆ ಚಿಮ್ಮುತ್ತಾ ಜಿಗಿಯುತ್ತಾ ಹೊರಗೆ ಬಂದೆ. ಇಬ್ಬರೂ ಕೂಡಿ ಪಕ್ಕದಲ್ಲಿಯೇ ಇದ್ದ ಥಿಯೇಟರ್ ಗೆ ಹೋದೆವು. ಅಲ್ಲಿ ಆಗಲೇ ಅವಳ ಅಕ್ಕಂದಿರೂ, ಉಳಿದ ಗೆಳತಿಯರೂ ಬಂದಿದ್ದರು.
ನಾನು ಕೈಯಲ್ಲಿ ಹಿಡಿದ ಐದರ ನೋಟನ್ನು ಅವಳಕ್ಕನ ಕೈಗೆ ಕೊಟ್ಟೆ ಒಮ್ಮೆಲೇ ಶಾಕ್ ಹೊಡೆದಂತೆ ಗಾಬರಿಯಾಗಿ ಅವಳು ‘ಇಷ್ಟ ರೊಕ್ಕಾ ತಂದೀಯಲ್ಲಾ, ಯಾರು ಕೊಟ್ಟರು’ ಎಂದು ಸ್ವಲ್ಪ ಜೋರಾಗಿಯೇ ಕೇಳಿದಳು. ಏಕೆಂದರೆ ಆಗ ಒಂದು ಟಿಕೇಟಿಗೆ ಎಂಬತ್ತು ಪೈಸೆ ಇದ್ದ ಕಾಲ. ನಾನು ಆಗ ಅಷ್ಟೇ ಸಮಾಧಾನ ಚಿತ್ತದಿಂದ, ಯಾವುದೇ ತಡವರಿಕೆ ಇಲ್ಲದೇ, ‘ನಮ್ಮ ಮನ್ಯಾಗ ರೊಕ್ಕದ ಗಿಡಾ ಅದ, ಅದರಾಗ ಚಿಲ್ಲರ ನಾಣ್ಯನ ಬೆಳೆದಿರಲಿಲ್ಲ. ಒಂದೇ ಒಂದು ಐದರ ನೋಟಾಗಿತ್ತು. ಅದನ್ನ ಹರಕೊಂಡ ಬಂದೆ, ಅದಕ್ಕ ಅದು ಅಷ್ಟ ಹೊಸಾದದ’ ಎಂದೆ. ಅಲ್ಲಿದ್ದವರೆಲ್ಲಾ ‘ಹೋ’ ಎಂದು ನಗತೊಡಗಿದರು. ನಾನೇನು ಸುಳ್ಳು ಹೇಳಬೇಕೆಂದುಕೊಂಡಿರಲಿಲ್ಲ. ಆದರೆ ಆ ವೇಳೆಗೆ ಏನು ತೋಚುತ್ತದೋ ಅದನ್ನು ಯಾವುದೇ ಅಪರಾಧಪ್ರಜ್ಞೆ ಇಲ್ಲದೇ ಹೇಳಿಬಿಡುತ್ತಿದ್ದೆ.
ನಂತರ ಒಂದಿನ ವಿದ್ಯಾ ನಮ್ಮ ಮನೆಗೆ ಬಂದಳು. ‘ನಿಮ್ಮ ಮನ್ಯಾಗಿನ ರೊಕ್ಕದ ಗಿಡಾ ಅದಲಾ ಅದನ್ನ ನೋಡಲಿಕ್ಕಂತ ಬಂದೀನಿ, ಈಗ ಸದ್ದೇ ತೋರಿಸು’ ಅಂತ ಅಂದಾಗ ಹೌಹಾರುವ ಸರದಿ ನನ್ನದಾಯಿತು. ನನಗೇನೂ ತೋಚದೆ, ‘ಆ ಗಿಡಾ ಮಾಳಿಗೆ ಮ್ಯಾಲ ಅದ’ ಎಂದೆ. ‘ಹಂಗಾರ ಅಲ್ಲೇ ಹೋಗೋಣ’ ಎಂದ ಸರಸರನೆ ಮೆಟ್ಟಿಲು ಹತ್ತಿದಳು. ನಿರ್ವಾಹವಿಲ್ಲದೆ ಅವಳ ಹಿಂದೆಯೇ ನಡೆದೆ. ಮೇಲೆ ಹೋಗಿ ನೊಡಿದರೆ ಮಲ್ಲಿಗೆಯ ಬಳ್ಳಿಯ ವಿನಃ ಅಲ್ಲಿ ಯಾವುದೇ ಗಿಡಗಂಟಿ ಇರಲಿಲ್ಲ. ಎಲ್ಲೆಡೆ ಒಡ್ಯಾಡಿ ನೋಡಿದಳು, ಏನೂ ಕಾಣಿಸದಾಗ ನನ್ನೆಡೆಗೆ ತಿರುಗಿ ಕೆಕ್ಕರಿಸಿ ನೋಡತೊಡಗಿದಳು ಇಂಗು ತಿಂದ ಮಂಗನ ಸ್ಥಿತಿ ನನ್ನದಾಗಿತ್ತು. ಆದರೆ ಕೆಳಗೆ ಬಿದ್ದರೂ ಮಣ್ಣಾಗಲಿಲ್ಲ ಮೀಸೆ ಎನ್ನುವ ಜಟ್ಟಿಥರ ‘ವಿದ್ಯಾ ಅದು ಈ ಎಲ್ಲಾ ಅಪದ್ದ ವೇಳ್ಯಾದಾಗ ಕಾಣಿಸ್ತದಂತ ತಿಳಿಕೊಂಡೀ ಏನ, ಅದು ಈಗ ಮಾಯ ಆಗಿರತದ, ನಮಗೆ ರೊಕ್ಕ ಬೇಕೆಂದಾಗ ಪ್ರತ್ಯಕ್ಷ ಆಗತದ, ನಾವು ನಮಗೆಷ್ಟು ರೊಕ್ಕಾ ಬೇಕೋ ಅಷ್ಟ ಹರಕೊಂಡ ಮ್ಯಾಲೆ ಮಾಯ ಆಗ್ತದ’ ಎಂದೆ ಹಣೆಯ ಮೇಲಿನ ಬೆವರು ಹನಿ ಒರೆಸುತ್ತಾ, ಹಾಗೆಯೇ ನನ್ನ ಹೂರಣವೂ ಹೊರಬಿದ್ದಿತ್ತು. ಅವಳೂ ಸಣ್ಣಗೆ ನಗುತ್ತಾ ಮನೆಯ ಹಾದಿ ಹಿಡಿದಳು. ಮರುದಿನ ಅವರ ಮನೆಗೆ ಹೋದಾಗ ಅವರ ಮನೀ ಒಳಗಿನ ಮಂದಿ ಎಲ್ಲಾ ನನ್ನತ್ತ ನೋಡಿ ನಗುವವರೇ, ಭಾಳ ಬೆರಕಿ ಹುಡುಗಿ ಎಂದು ಚೇಷ್ಟೆ ಮಾಡತೊಡಗಿದರು.
ಈಗಲೂ ಎರಡು ಮಕ್ಕಳ ತಾಯಾದ ಮೇಲೂ ಅವರು ಮನೆಗೆ ಎಂದು ಹೋದಾಗ ವಿದ್ಯಾಳ ಮನೆ ಕಡೆ ಹೋದೆ. ಅವರ ಮನೆಯವರೆಲ್ಲರೂ ಕುಶಲೋಪರಿ ಮಾತನಾಡಿದ ಮೇಲೆ ಅವರ ಮನೆಯಲ್ಲಿಯ ಹಿರಿಯರೊಬ್ಬರು “ಈಕೀನ ಅಲ್ಲೇನ ರೊಕ್ಕಾದ ಗಿಡಾ ಹುಟ್ಟಿಸಿದಾಕಿ” ಎನ್ನಬೇಕೆ?
ಹಳೆಯದೆಲ್ಲ ಮತ್ತೆ ಮನಃಪಟಲದಲ್ಲಿ ಮೂಡಿ ಮರೆಯಾಯಿತು. ಹೀಗೆ ಬಾಲ್ಯದಲ್ಲಿಯ ಸೊಗಸು ಮುಗಿಯದ ಬುತ್ತಿಗಂಟು. ಅದರಲ್ಲಿಯ ಎಷ್ಟೋ ಸವಿತಿನಿಸುಗಳು. ಮತ್ತೊಮ್ಮೆ ಯಾವಾಗಾದರೂ ಹೇಳೇನು. ಅವನ್ನೆಲ್ಲ ಮೆಲುಕು ಹಾಕುತ್ತಾ ಇರುವಾಗ ಇನ್ನೂ ಬಾಲ್ಯವೇ ಇದ್ದರೆ ಎಷ್ಟು ಚೆನ್ನಲ್ಲವೇ ಅನಿಸುವುದು.

 

Leave a Reply