ಸಾವು

ಸಾವು?!
ಮನೆ ಅಂದರೆ ಮಕ್ಕಳು ಮಕ್ಕಳು ಅಂತಂದ್ರೆ ಮನೆ ಎನ್ನುವಂಥ ಆ ಕಾಲದಲ್ಲಿ ನಮ್ಮ ಮನೆತುಂಬಾ ಮಕ್ಕಳೇ ಮಕ್ಕಳು. ಮನೆ ಸುಮ್ಮನೇ ಮಕ್ಕಳೇ ಮನೆ ಎನ್ನುವ ಪರಿಸ್ಥಿತಿ. ಮನೆಗೆ ಬರಹೋಗುವ ಜನರ ದಂಡಿ. ಅವರ ಊಟ ತಿಂಡಿ ತೀರ್ಥಗಳೆಲ್ಲ ಇಲ್ಲೇ ಆಗಬೇಕು. ಹೀಗಾಗಿ ಅವ್ವನಿಗೆ ಮಕ್ಕಳು ಎದ್ದವೋ ಬಿದ್ದವೋ ಎಂದು ನೋಡಲೂ ಪುರಸೊತ್ತಿಲ್ಲ. ಜನಕ್ಕೆ ಮಾಡಿ ಮಾಡಿ ಉಣಿಸುವುದೊಂದೇ ಗೊತ್ತು. ಇನ್ನು ಅಪ್ಪನಿಗೆ ಕೋರ್ಟು ಕಚೇರಿ ಮನೆ ತುಂಬ ಬರುವ ಪಕ್ಷಗಾರರು. ಹೀಗಾಗಿ ಇಬ್ಬರೂ ತುಂಬ ಬ್ಯುಜಿ. ಮಕ್ಕಳು ಒಂದು ಮೂಲೆಯಲ್ಲಿ ಕಿತ್ತಾಡುತ್ತಿದ್ದರೆ ಅದಕ್ಕೆ ಜಗಳ ಬಿಡಿಸುವ ಗತಿಯೂ ಇಲ್ಲ. ಅಳುತ್ತಿದ್ದರೆ ಸಮಾಧಾನಿಸುವವರೂ ಇಲ್ಲ. ತಾವೇ ಜಗಳಾಡಿ ತಾವೇ ಒಂದಾಗುತ್ತಿದ್ದವು ಮಕ್ಕಳು. ಮಧ್ಯದ ನಮ್ಮ ಅಣ್ಣ ಅಕ್ಕಂದಿರಲ್ಲಿ ಎರಡು ವರ್ಷದ ಅಂತರ. ಅವರಿಬ್ಬರ ನಡುವೆಯೂ ಎಂಥದೋ ಸಂಘರ್ಷ ಯಾವಾಗಲೂ ಇರುವುದೇ. ತಮ್ಮನ ಮೇಲೆ ಅಕ್ಕನ ಚಾಡಿ, ಅಕ್ಕನ ಮೇಲೆ ತಮ್ಮನ ಚಾಡಿ ನಡೆದೇ ಇರುತ್ತಿತ್ತು. ನಮ್ಮ ಮನೆಯಲ್ಲೇ ಇದ್ದ ಎಲ್ಲರಿಗೂ ಇವರಿಬ್ಬರ ಕುಚೇಷ್ಟೆ ಅರ್ಥವಾಗುತ್ತಿತ್ತು. ಆದರೆ ಕೆಲವೊಂದು ಸಲ ಎಷ್ಟು ವಿಪರೀತಕ್ಕೆಡೆ ಮಾಡುತ್ತಿತ್ತೆಂದರೆ ಅಷ್ಟೊಂದು ಕೆಲಸದಲ್ಲಿ ತಲ್ಲೀನನಾಗಿರುತ್ತಿದ್ದ ಅವ್ವ ಕೂಡ ಗಾಬರಿ ಬೀಳುತ್ತಿದ್ದಳು, ಅಳುತ್ತಿದ್ದಳು. ನಂತರ ನಕ್ಕು ಸುಮ್ಮನಾಗುತ್ತಿದ್ದಳು.
ಚೆನ್ನಾಗಿ ನಿದ್ರೆ ಹೋದ ಮಗುವಿನ ಕಿವಿಯಲ್ಲಿ ಗೋಧಿ ತುಂಬಿ ಮಜ ಮಾಡುತ್ತಿದ್ದ ಪ್ರಸಂಗವೂ ಇರುತ್ತಿತ್ತು. ನಂತರ ಡಾಕ್ಟರರ ಹತ್ತಿರದ ಓಡಾಟ ಪೇಚಿಗಿಟ್ಟುಕೊಳ್ಳುತ್ತಿತ್ತು.
ಅಂದು ಮುಂಜಾನೆ ಎಂದಿನಂತೆ ಮಕ್ಕಳೆಲ್ಲ ಶಾಲೆಗೆ ಹೋಗಿದ್ದರು. ನಿಶ್ಚಿಂತೆಯಿಂದ ಅಡುಗೆ ಕೆಲಸದಲ್ಲಿ ಅವ್ವ ಮಗ್ನಳಾಗಿದ್ದಳು. ಸೋದರತ್ತೆಯ ಭಜನೆ ಏಕತಾನತೆಯಿಂದ “ಬಂದಾನೋ ಗೋವಿಂದ… ತಂದಾನೋ ಆನಂದಾ……” ಶುರುವಾಗಿತ್ತು. ಅಷ್ಟರಲ್ಲಿ ಏದುಸಿರು ಬಿಡುತ್ತಾ ಬಂದ ೯ ವರ್ಷದ ಅಣ್ಣ ‘ಅವ್ವಾ, ಅವ್ವಾ ಪುಟ್ಟಿ ಸತ್ಲು’ ಎಂದ. ಸತ್ತರೆ ಎಂಥ ದುಃಖ ಎನ್ನುವ ಪರಿವೇ ಇಲ್ಲದೆ. “ಅಯ್ಯ ಮುಂಡೆಗಂಡಾ, ಎಂಥಾ ಅಪದ್ಧ ಅಪದ್ಧ ಮಾತಾಡ್ತಿಯೋ….” ಬಂದಾನೋ ಗೋವಿಂದಾ ಎನ್ನುವುದನ್ನೂ ಮರೆತು ಸೋದರತ್ತೆ ಕೆಂಗಣ್ಣಿನಿಂದ ಅಣ್ಣನ ಕಡೆಗೆ ನೋಡಿದಳು. ಮಡಿಸೀರೆಯಲ್ಲಿ ಹುಳಿಗೆ ಒಗ್ಗರಣೆ ಚುಯ್ಯ ಎನಿಸುತ್ತಿದ್ದ ಅವ್ವ ಒಲೆಯ ಮೇಲಿಂದ ಬೋಗುಣಿ ಕೆಳಗಿಳಿಸಿ ಎದ್ದು ನಿಂತಳು. ‘ಏನೋ ನಿಂದು ಅಕೀ ಜೋಡಿ ಜಗಳಾ ಆತೇನು?” ‘ಇಲ್ಲ ಅವ್ವಾ, ಜಗಳಾ ಇಲ್ಲಾ ಏನೂ ಇಲ್ಲ, ಅಕೀ ಸತ್ತೇ ಹೋದ್ಲು’ ಎಂದ ಸೀರಿಯಸ್ಸಾಗಿ, ನಮ್ಮ ಅವ್ವ ಹಾಗೂ ಸೋದರತ್ತೆ ಇಬ್ಬರಿಗೂ ಸಿಟ್ಟು ನೆತ್ತಿಗೇರಿ ಅವನ ಮೇಲೆ ಬಯ್ದಾಡತೊಡಗಿದರು. ನಮ್ಮ ಅವ್ವನ ಕಣ್ಣಲ್ಲಿ ಪಳಕ್ಕನೆ ಉದುರಿದ ನೀರು ಕೆನ್ನೆಯನ್ನೆಲ್ಲ ತೋಯಿಸುತ್ತಿದ್ದರೆ ನಮ್ಮ ಸೋದರತ್ತೆ ಮಡಿ ಎನ್ನುವುದನ್ನೂ ಮರೆತು ದೇವರ ಭಜನೆ ಮಾಡುತ್ತಿರುವ ಸನ್ನಿವೇಶವನ್ನು ಮರೆತು ‘ಅಯ್ಯೋ ರಂಡೆಗಂಡಾ, ಪುಟ್ಟೀನ್ನ ನೀನ ಎಲ್ಲೆರೆ ದುಗಿಸಿ ಬಂದೀಯೋ ಹ್ಯಾಂಗ’ ಎಂದು ರಪ್ಪನೆ ಬೆನ್ನಲ್ಲಿ ಬಡಿದೇ ಬಿಟ್ಟಳು. ಅದಕ್ಕೇನೂ ಆತ ವಿಚಲಿತನಾಗದೇ ‘ಹಂಗಾರ, ನೀವ ನೋಡ ಬರ್ರಿ, ರೋಡಮ್ಯಾಲನ ಹೆಣಾ ಬಿದ್ದದ’ ಎಂದುಬಿಡಬೇಕೆ. ಇಬ್ಬರ ಕಣ್ಣಲ್ಲೂ ಗಂಗಾ ಭಾಗೀರಥಿಯರು ಸುರುಳಿ ಸುತ್ತಿ ಸುತ್ತಿ ಇಳಿದು ಬರಬೇಕಾದ್ರೆ ನಮ್ಮ ಅವ್ವ ಅಂತೂ ಎದೆ ಎದೆ ಬಡಿದುಕೊಂಡು ಅಳಹತ್ತಿದಳು. ನಾವೆಲ್ಲ ಇನ್ನೂ ಚಿಕ್ಕವರು. ಅವ್ವ ಯಾಕೆ ಅಳ್ತಿದ್ದಾಳೆ ಎನ್ನುವುದೇನೂ ತಿಳೀದೇ ಸುಮ್ಮನೆ ದನಿ ಏರಿಸಿ ಮೂಗಿನಿಂದ ಜಾರುತ್ತಿದ್ದ ಸುಂಬಳ ಗೊನ್ನೆಯನ್ನು ಹಾಗೇ ಮೂಗಿಗೇರಿಸಿ ಒಳಗೆ ಒಕ್ಕೊಂಡೋ, ಒಮ್ಮೊಮ್ಮೆ ಚೀಟಿನ ಅಂಗಿಯ ತುದಿಯನ್ನು ಮೇಲಕ್ಕೆತ್ತಿ ಒರೆಸಿಕೊಂಡೋ ಅಳುತ್ತಿದ್ದೆವು. ಅಳುವುದು ಕೂಡ ರಾಗಬದ್ಧವಾಗಿ…….
ಪಕ್ಕದ ಮನೆಯಲ್ಲಿ ಮುದುಕಿಯೊಬ್ಬಳು. ಹೆಸರು ದಾತಾರ ಕಾಕು. ಆದರೂ ಬಾಯಲ್ಲಿ ಹಲ್ಲಿಲ್ಲ. ದಾತಾರ ಕಾಕು ಮರಾಠಿ ಮನುಷ್ಯಳು ತುಂಬಾ ಧೈರ್ಯವಂತೆ. ಸಣ್ಣ ವಯಸ್ಸಿನಲ್ಲೆ ಗಂಡನನ್ನು ಕಳೆದುಕೊಂಡರೂ ಎದೆಗುಂದದೆ ಒಬ್ಬಳೇ ಮಗಳನ್ನು ಓದಿಸಿ ದೊಡ್ಡವಳನ್ನಾಗಿ ಮಾಡಿದ್ದಳು. ಉದ್ದ ಕೂದಲಿನ ಆ ಮಗಳು ಮಾತ್ರ ಮೂವತ್ತೂ ದಾಟಿದರೂ ಮದುವೆ ಗೊತ್ತಾಗುತ್ತಿರಲಿಲ್ಲ. ದಾತಾರ ಕಾಕುಗೆ ನಶ್ಯದ ಚಟವಿದ್ದರೆ, ಆಕೆಯ ಮಗಳು ಸುಶೀಲಳಿಗೆ ತನ್ನ ಉದ್ದ ಕೂದಲಿನ ತುದಿಯನ್ನು ಮೂಗಿಗೇರಿಸಿಕೊಂಡು ಕ್ಷಣ ಹೊತ್ತಿನ ಮೇಲೆ ಹೂಂಕರಿಸುವ ಚಟ. ಅದನ್ನು ನೋಡುವುದೇ ನಮಗೆಲ್ಲ ಆನಂದ. ಆದರೆ ಇಂದೂ ಕೂಡ ಆಕೆ ಹಾಗೆ ಕಟ್ಟೆಯ ತುದಿಗೆ ಕುಳಿತು ಹಾಗೆ ಮಾಡುತ್ತಿದ್ದರೆ ನಮ್ಮ ಗಮನ ಆಕೆಯೆಡೆಗೆ ಹರಿಯಲಿಲ್ಲ. ಮನೆಯಲ್ಲಿ ವಿಪರೀತ ಎನ್ನುವಷ್ಟು ಟೆನ್ಶನ ಶುರುವಾಗಿತ್ತು. ಆಗ ದಾತಾರ ಕಾಕು ನಮ್ಮ ಅವ್ವನಿಗೆ ಸಮಾಧಾನ ಮಾಡುತ್ತಾ, ‘ನಡೀರಿ ಕಾಕೂ ನಾನೂ ಬರ್ತೀನಿ, ಎಲ್ಲೆ ಹೆಣಾ ಬಿದ್ದದಂತ ನೋಡೋಣು, ಇಂವನಲ್ಲೆ ಯಾಕೋ ಖೋಟ ಕಾಣಿಸ್ಲಿಕತ್ತೇದ’ ಅಂತಂದು ಅಣ್ಣನನ್ನೂ ಅವ್ವನನ್ನೂ ಕರೆದುಕೊಂಡು ನಡೆದೇಬಿಟ್ಟರು. ಅವ್ವ ತನ್ನ ಕರುಳಿನ ಕುಡಿ ಕಳಕೊಂಡ ದುಃಖದಾಗ ಸೀರಿ ಎಂಥಾದೂ ಕುಬುಸ ಎಂಥಾದೂ ಅನ್ನುವ ಖಬರ ಇಲ್ಲದನ ಅದೇ ಮಡಿಸೀರಿ ಒಳಗೆ ಬಿರ ಬಿರನೆ ನಡೆದೇ ಬಿಟ್ಟಳು. ಮುಂದೆ ನಮ್ಮ ಅಣ್ಣ, ಹಿಂದಿಂದೆ ದಾತಾರಕಾಕು ಹಾಗೂ ನಮ್ಮ ಅವ್ವ. ನಾವೂ ಬರ್ತೀವೇ ಎಂದು ನಾವು ಹಠ ಮಾಡತೊಡಗಿದಾಗ ಅದೇ ದಾತಾರ ಕಾಕುನ ಮಗಳು ನನ್ನನ್ನು ತೊಡೆಯ ಮೇಲೇರಿಸಿ ಕೂದಲಿನ ತುದಿಯನ್ನು ಮೂಗಿಗೇರಿಸಿ ಹೂಂಕರಿಸುತ್ತಾ ಮನರಂಜನೆ ನೀಡತೊಡಗಿದಳು. ಹೀಂಗಾಗಿ ನಾವೆಲ್ಲ ಅಳುವುದನ್ನು ನಿಲ್ಲಿಸಿ ಅವಳೆಡೆಗೆ ದಿಟ್ಟಿಸುತ್ತಾ ಕೇಕೆ ಹಾಕಿ ನಗತೊಡಗಿದೆವು. ಒಳಗಿದ್ದ ಸೋದರತ್ತೆಗೆ ಕಸಿವಿಸಿ.
ಅಣ್ಣನಂತೂ ಯಾವುದೇ ಟೆನ್ಶನ್ ಇಲ್ಲದೇ ಜಿಗಿಯುತ್ತಾ ಮುಂದೆ ಮುಂದೆ ನಡೆದರೆ ದುಃಖದಾಗ ಹೃದಯವನ್ನೇ ಕಿತ್ತಿ ಅಂಗೈಯಲ್ಲಿ ಇಟ್ಟುಕೊಂಡಂತೆ ಹಿಂದಿಂದ ಇವರಿಬ್ರೂ ನಡೆದಿದ್ದರು. ಎಷ್ಟು ದೂರ ನಡೆದರೂ ಏನೂ ಅಂಥ ಗಂಭೀರ ಪರಿಸ್ಥಿತಿ ಹಾದಿಯಲ್ಲೆಲ್ಲೂ ಕಾಣಿಸ್ಲಿಲ್ಲ. ನಮ್ಮವ್ವಗ ಧೈರ್ಯಾ ಕಡಿಮೆ. ಹೀಂಗಾಗಿ ದಾತಾರ ಕಾಕೂನೇ ‘ಏನೋ ರಾಜಾ, ಎಲ್ಲೆ ಅದ ಹೆನಾ, ಇನ್ನ ಎಷ್ಟು ದೂರ ನಡೀಬೇಕು.’ ‘ಇಲ್ಲೇ ಕೋರ್ಟ್ ಕಡೇ ಬಿದ್ದದ ಹೆಣಾ’ ಎಂದು ಹೇಳಿ ಮುಂದೆ ನಡೆದ ಬನಶಂಕರಿ ಕನ್ನಡ ಗಂಡು ಮಕ್ಕಳ ಶಾಲೆ ಹಾಗೂ ಹೆಣ್ಣು ಮಕ್ಕಳ ಶಾಲೆಯ ಪಕ್ಕದ ಬಿಲ್ಡಿಂಗೇ ಕೋರ್ಟು, ಕೋರ್ಟವರೆಗೂ ಬಂದು ನೋಡಿದ್ರೆ ಅಲ್ಲೇನೂ ಕಾಣಿಸದೇ ಮತ್ತೆ ದಾತಾರ ಕಾಕೂನೇ ‘ಎಲ್ಲ್ಯೊ ಮತ್ತ ಸುಳ್ಳೇನರೆ ಹೇಳೀ ಏನು?’ ನಾಯಾಕ ಸುಳ್ಳ ಹೇಳ್ಳಿ, ಒಂದು ದೊಡ್ಡ ಟ್ರಕ್ಕ ಬಂದು ಅಕೀ ಮ್ಯಾಲ ಹಾಯ್ದು ಹೋತು…. ನಾನು ಹಿಂದನ ಬರ್ಲಿ ಕತ್ತಿದ್ದೆ’ ಎಂದ ಅಗ್ದಿ ಮೊಗಮ್ಮಾಗಿ. ‘ಹಂಗಾರ ಹೆಣಾ ಎಲ್ಲೆ ಹೋತು’ ಜೋರು ಮಾಡಿದರು ದಾತಾರ ಕಾಕು. ‘ನನಗೇನು ಗೊತ್ತು, ದವಾಖಾನೀಗೇನರೆ ಒಯ್ದಿರಬೇಕು.’ ಆದರೂ ಆತಾರ ಕಾಕೂಗ ಅವನ ಮ್ಯಾಲ ಸಂಶೇನ. ಇವತ್ತೇನರೆ ಮಾಡಿ ಇಂವನ ಭಂಡಾ ಫೋಡ ಮಾಡ್ಲೇಬೇಕು. ಅಂತನ ಅವರು ಬಂದಿದ್ದರು. ಅಲ್ಲೇ ಇದ್ದ ಅಂಗಡಿಯಲ್ಲಿ ಹೋಗಿ ‘ಇಲ್ಲೇ ಏನರೇ ಟ್ರಕ್ಕ ಹಾಯ್ದು ಒಂದು ಹುಡುಗೇನರೇ ಸತ್ತು ಹೋಗೇದೇನು’ ಅಂತ ಕೇಳಿದ್ರ ಅಂಗಡಿಯವ ಒಂದೇ ಸಮನೆ ಮಿಕಿ ಮಿಕಿ ನೋಡಿ ಕಿಸಕ್ಕನೆ ನಕ್ಕು ‘ಇಲ್ರೀ, ಮುಂಜಾನಿಂದ ಅಂಗಡೀ ತಕ್ಕೊಂಡು ಇಲ್ಲೇ ಗಲ್ಲೇದ ಮ್ಯಾಲ ಕುತ್ತೇನು ಹುಡುಗೀ ಏನ ಒಂದು ಬೆಕ್ಕಿನ ಮರೀನೂ ಸತ್ತಿಲ್ರೀ….’ ಎಂದಾಗ ಅವ್ವನ ಸಿಟ್ಟು ಎತ್ತಿ ಮ್ಯಾಲ ಏರಿತು. ಇವಗ ಒಂದು ಲಗಾಯಿಸಬೇಕು ಅಂತ ಬಗ್ಗೂದ್ರಾಗ ಅಣ್ಣ, ‘ಅಲ್ಲ ಅವ್ವಾ, ಅಕೀಗೆ ಟ್ರಕ್ಕ ಹಾಯ್ದು ಕೂಡ್ಲೇ ಗಾಬರಿಯಾಗಿ ಟ್ರಕ್ಕಿನ್ಯಾಂವನ ದವಾಖಾನೀಗೆ ಕರ್ಕೊಂಡು ಹೋದಾ…. ತಲೀಗೆ ಬಡ್ದಿತ್ತು…. ಅಲ್ಲಿ ಇದ್ದಾವ್ರೆಲ್ಲಾ ಹುಡುಗೀ ಸತ್ತೇ ಹೋಗಿರ್ಬೇಕು. ಅಕೀ ಅವ್ವ ಅಪ್ಪನ್ನರೇ ಕರ್ಕೊಂಡ ಬರ್ರಿ ಅಂತಂದ ಕೂಡ್ಲೇ ನಾನು ನಿನಗ ಕರೀಲಿಕ್ಕೆ ಬಂದೆ.’
‘ಹಂಗಾರ ಸರ್ಕಾರೀ ದವಾಖಾನಿಗೆ ಒಯ್ದಿರಬೇಕು. ಪೋಲಿಸ್ ಕೇಸು ಆಗ್ತದ. ಅಲ್ಲೇ ಹೋಗೋಣು. ಆಮ್ಯಾಲೇ ಭಾವಿಜಿಗೆ ತಿಳಿಸೋಣ ನಡೀರಿ ಕಾಕು’ ಚೂರು ಹುಷಾರಿದ್ದ ದಾತಾರ ಕಾಕು ಇವನ್ನು ಕೊನೆಗಾಣಿಸಿಯೇ ಬಿಡಲು ನಿಶ್ಚಯಿಸಿದವರಂತೆ ನಮ್ಮ ಅವ್ವನ ಕೈಹಿಡಿದು ಬಿರಬಿರನೆ ಮುಂದೆ ನಡೆದರು. ಯಥಾ ಪ್ರಕಾರ ಸುಳ್ಳಿನ ರಾಜಾ ಮುಂದೆ ಮುಂದೆ……
ನಮ್ಮ ಅವ್ವನಿಗಂತೂ ನಾಚಿಕೆಯಿಂದ ಗೋಣೆತ್ತಲೂ ಆಗುತ್ತಿರಲಿಲ್ಲ. ಮನೆಯಲ್ಲಿಯ ಮಡಿಸೀರೆ ಮೇಲೆಯೇ ಹೊರಬಿದ್ದಿದ್ದಳು. ಅದೂ ಕೊರ್ಟ ಹತ್ತಿರವೇ ವಕೀಲರಾಗಿದ್ದ ನಮ್ಮ ಅಪ್ಪ ಕೋರ್ಟಿನಿಂದ ಹೊರಬಂದಾಗ ನೋಡಿದ್ದರೆ, ಅಥವಾ ಅವರ ಮಿತ್ರರ ಕಣ್ಣಿಗೆ ಬಿದ್ದರೆ ಎಂಥ ಅಭಾಸ ಎನ್ನುವ ಕಲ್ಪನೆ ಈಗ ಅವಳನ್ನು ಕಾಡುತ್ತಿತ್ತು. ಮಡಿಸೀರೆ ಎಂದರೆ ಎಂಥಾದ್ದೂ ಅಂತೀರಿ. ಮಡಿಯಿಂದ ಒಣ ಹಾಕಿದ ಒಂಭತ್ತು ಮೊಳದ ಕಾಟನ್ ಸೀರೆ. ಗಿಡ್ಡಗೆ ಕಚ್ಚೆ ಹಾಕಿ ಉಟ್ಟಿರುತ್ತಿದ್ದ ಅದರ ಬಣ್ಣವೇ ಒಂಥರಾ ಕುಲಗೆಟ್ಟು ಭೂತಾಕಾರವಾಗಿತ್ತು. ಕುಬಸಕ್ಕೂ ಸೀರೆಗೂ ಅಜಗಜಾಂತರ. ತೊಡೆಯ ಎರಡೂ ಬದಿಗೂ ಒರೆಸಿದ್ದ ಅರಷಿಣದ ಬಣ್ಣದ ಕಲೆ ಅಲ್ಲಲ್ಲಿ, ಒದ್ದೆ ಮುದ್ದೆಯಾಗಿದ್ದನ್ನು ಗಡಿಬಿಡಿ ಗಾಬರಿಯಿಂದ ಸರಿಯಾಗಿ ಗಮನಿಸಿಯೇ ಇರಲಿಲ್ಲ. ಈಗ ಅದೆಲ್ಲ ಮುಜುಗರ ಉಂಟು ಮಾಡುತ್ತಿತ್ತು. ದಾತಾರ ಕಾಕು ಮಾತ್ರ ಯಾವುದೇ ಕೀಳರಿಮೆಗೂ ಅವಕಾಶವಿಲ್ಲದಂತೆ ನಡೆಯುತ್ತಿದ್ದಳು. ಅವಳ ಧೈರ್ಯದ ಮೇಲೆ ನಮ್ಮ ಅವ್ವ. ಅಷ್ಟರಲ್ಲಿ ದವಾಖಾನಿ ಬಂದು ಇಬ್ಬರೂ ಡಾಕ್ಟರರನ್ನು ಭೆಟ್ಟಿಯಾದರು. ನಮ್ಮವ್ವ ಯಾವಾಗಲೂ ಹೊರಗೆ ಬಂದಾಗ ಶಿಸ್ತಿನಲ್ಲಿರುವವಳು. ಇಂದು ಅವಳ ಅವತಾರವನ್ನು ಕಂಡ ಪರಿಚಿತ ಡಾಕ್ಟರರು, ‘ಯಾಕ್ರೀ ಅಮ್ಮಾ ಅವರೇ, ಹೀಂಗ್ಯಾಕ ಬಂದೀರಿ’ ಎಂದಾಗ “ನಮ್ಮ ಹುಡುಗೀದು ಎಕ್ಸಿಡೇಂಟ ಆಗೇದ, ಟ್ರಕ್ಕ ಹಾಯ್ದು ಅವಳನ್ನು ಇಲ್ಲೆ ದವಾಖಾನೀಗೆ ಕರ್ಕೊಂಡ ಬಂದಾರಂತ ನಮ್ಮ ಹುಡುಗ ಹೇಳ್ಕೊಂಡ ಬಂದ. ಮತ್ತ ಎಲ್ಲೆ ಇದ್ದಾಳ ನಮ್ಮ ಹುಡುಗಿ.”
ಮಧ್ಯ ಮಧ್ಯದಲ್ಲಿ ಬಿಕ್ಕುತ್ತಾ ಚೂರು ಹೇಳುತ್ತಾ ಹೇಳಿ ಮುಗಿಸಿದಳು ಅವ್ವ. “ಛೇ, ಛೇ. ಯಾರೋ ಸುಳ್ಳ ಹೇಳ್ಯಾರ್ರೀ ಅಮ್ಮಾವ್ರ, ಮುಂಜಾನಿಂದ ಇಲ್ಲೇ ಇದ್ದೀನಿ. ಮೂರು ಡೆಲಿವರಿ ಬಿಟ್ಟ್ರ ಬ್ಯಾರೇ ಕೇಸ ಬಂದಿಲ್ರೀ. ಯಾಕೋ ಅವ್ವಗ ಸುಳ್ಳ ಹೇಳಿ ಗಾಬರಿಮಾಡಿ ಕರ್ಕೊಂಡು ಬಂದೀ’ ಅಂತ ತಲೀಗೆ ಒಂದು ಮೊಟಕಿದಾಗ ಸುಳ್ಳಿನ ರಾಜಾ ಕಿಸಿಕಿಸಿ ಮನೀ ಕಡೆಗೆ ಜಿಕ್ಕೋತ ಓಡಿ ಹೋಗತೊಡಗಿದ. ಹಿಂದಿನ ದಿವಸ ತನ್ನ ಅಕ್ಕನ ಜೊತೆ ನಡೆದ ಜಗಳದಾಗ ಅವ್ವ ಅಕ್ಕನ ಪರ ವಹಿಸಿ ಇವಗ ಬಡಿದದ್ದೇ ನೆಪವಾಗಿ ಇಂದು ಈ ರೀತಿ ಸೇಡು ತೀರಿಸಿಕೊಂಡಿದ್ದ ಸುಳ್ಳಿನ ರಾಜಾ.
ದಾತಾರ ಕಾಕು ಒಂದೇ ಸಮನೆ ಬೈಗುಳದ ಸುರಿಮಳೆ ಸುರಿಸ್ತಿದ್ದರೆ ನಮ್ಮ ಅವ್ವ ತಲೀಮ್ಯಾಲಿನ ಭಾರ ಇಳಿದಷ್ಟು ಖುಷ ಆದಳು. ಸತ್ತಿಲ್ಲ ಅನ್ನೂದರೇ ಖಾತ್ರಿ ಆತಲ್ಲ. ಮನಸ್ಸನ್ಯಾಗ ಜೋಡ ಟೆಂಗಿನಕಾಯಿ ಒಡೀತೀನಿ ಅಂತ ಬೇಡ್ಕೊಂಡಿದ್ದ ಅವ್ವ ಯಾವ್ಯಾವ ದೇವರಿಗೆ ಎಷ್ಟೆಷ್ಟು ಬೇಡ್ಕೊಂಡಿದ್ದೆ ಅನ್ನೂದನ್ನು ಲೆಕ್ಕಾ ಹಾಕಲಿಕತ್ತಿದ್ಲು. ಅಷ್ಟರಾಗ ಮನೀಗೆ ಬಂದರೆ ಮನೀ ಅಂಗಳದ ತುಂಬೆಲ್ಲಾ ಕಾಲಿಡಲಿಕ್ಕೆ ಜಾಗಾ ಇಲ್ಲದಂಗ ಮಂದೀ ತುಂಬ್ಕೊಂಡು ಬಿಟ್ಟಿದ್ದರು. ಸೋದರತ್ತೆಯ ಎದೆ ಎದೆ ಬಡಿದುಕೊಂಡು ಅಳುವ ಪ್ರಹಸನ ಒಂದು ಕಡೆಯಾದರೆ ಒಲೀಮ್ಯಾಲೆ ಇಟ್ಟ ಅನ್ನ ಹೊತ್ತಿ ಹುರಕಡ್ಲಿ ಆಗಿದ್ದು ಇನ್ನೊಂದು ಕಡೆ. ಸುಶೀಲಳ ಕೂದಲಿನ ತುದಿಯಿಂದ ಹೊರಡಿಸುವ ಹೂಂಕಾರ ಮತ್ತೊಂದು ಕಡೆ. ನಾವೆಲ್ಲ ಮಕ್ಕಳು ಕಕ್ಕಾಬಿಕ್ಕಿಯಾಗಿ ಜನರ ಕಡೆಗೊಮ್ಮೆ, ಸೋದರತ್ತೆಯೆಡೆಗೊಮ್ಮೆ ಸುಶೀಲಳ ಕಡೆಗೊಮ್ಮೆ ನೋಡುತ್ತ ನಿಂತಿದ್ದೆವು. ಅಕ್ಕಪಕ್ಕದವರ ಮನೆಮಂದಿಯೆಲ್ಲಾ ಸೇರಿಬಿಟ್ಟಿದ್ದರು. ಯಾರ್ಯಾರೋ ಸೋದರತ್ತೆಯನ್ನು ಸಂಭಾಳಿಸುತ್ತಾ ಸಮಾಧಾನಿಸುತ್ತಿದ್ದರೆ, ಯಾರ್ಯಾರೋ ನಮ್ಮ ಅಕ್ಕನ ಗುಣಗಾನ ಮಾಡುತ್ತಿದ್ದರು. ಆಕೆಯ ಅಂದ ಚೆಂದಗಳನ್ನು, ತುಂಟಾಟಗಳನ್ನು ವರ್ಣಿಸುತ್ತಿದ್ದರು. ಆಕೆಯ ತುಂಟಾಟದಿಂದ ಅವರಿಗೆ ತೊಂದರೆ ಆಗಿದ್ದರೂ ಅವನ್ನೆಲ್ಲ ಆ ಕ್ಷಣದಲ್ಲಿ ಮರೆತಿದ್ದರು. ಅವನ್ನೆಲ್ಲ ನೋಡಿದ ನಮ್ಮ ಅವ್ವ, ‘ಅಯ್ಯ ವೈನ್ಸ್ ಅಳಬ್ಯಾಡರೀ ಅಕೀಗೇ ಏನೂ ಆಗಿಲ್ಲ…. ಈ ಉಡಾಳಟೋಪ ಸುಳ್ಳ ಹೇಳ್ಯಾನ…. ಅಂತಂದು ಮತ್ತೆ ಸ್ನಾನ ಮಾಡಲಿಕ್ಕೆ ಬಚ್ಚಲು ಮನೀ ಕಡೆಗೆ ನಡೆದಳು. ಹಿಂದಿಂದೆ ದಾತಾರ ಕಾಕು ಎಲ್ಲರನ್ನೂ ಎಬ್ಬಿಸಿ ಅವರವರ ಮನಿಗೆ ಕಳಿಸಿದ್ರು, ಹಾಕಿ ಹಣೀಬೇಕಂದ್ರ ಈ ಭೂಪ ಸುಳ್ಳಿನ ಸರದಾರ ನಾಪತ್ತೆ! ಓಣಿಯ ಮಕ್ಕಳೇ ಅಕ್ಕನ ಗೆಳತೀ ಮನೆಯಲ್ಲಿ ಆಡುತ್ತಿದ್ದ ಆಕಿಯನ್ನು ಕರಕೊಂಡು ಬಂದಾಗ್ಲೇ ಮನೆಮಂದಿಗೆ ಸಮಾಧಾನ. ಅಣ್ಣನ ಅವಾಂತರವನ್ನು ನೆನೆಸುತ್ತಿದ್ದರೆ ಇಂದಿಗೂ ನಗೆ ಉಕ್ಕಿ ಉಕ್ಕಿ ಬರುತ್ತದೆ. ತಾಯಿಯ ಅಂದಿನ ಅವಸ್ಥೆಯನ್ನು ನೆನೆಸಿಕೊಂಡು ಇಂದಿಗೂ ಮೋಜೆನಿಸಿದರೂ ಆಕೆಯ ಅನುಪಸ್ಥಿತಿ ಕಣ್ಣಲ್ಲಿ ನೀರು ಬರಿಸುತ್ತದೆ.’

 

Leave a Reply