ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ…

ಸಾಮರಸ್ಯವನೆಂತು ಕಾಣ್ವುದೀ ವಿಷಮದಲೀ…
‘ ಅವಳು’ -ಗುಲ್ಬರ್ಗದವಳು. ಹೆಸರು ಕವಿತಾ. ಶಾಲೆಯ ಮೆಟ್ಟಿಲು ಏರಿದವಳಲ್ಲ. ಆಧಾರ ಕಾರ್ಡ್, ರೇಶನ್ ಕಾರ್ಡ್, ಮೋದಿಯವರ Zero bank account, Election Identity, ಇಂಥ ಕಾರಣಗಳಿಗಾಗಿ ಸಹಿ ಮಾಡಲು ಮೂರಕ್ಷರದ ತನ್ನ ಹೆಸರು ಬರೆಯುವದನ್ನು ಕಲಿಯಲು ಮೂರುದಿನ ತೆಗೆದುಕೊಂಡವಳು.
ಕುಲ ದೀಪಕನ ಹಂಬಲ ವಿಫಲವಾಗಿ ಹುಟ್ಟಿದ ಮೂವರು ಜನ ಅಕ್ಕ ತಂಗಿಯರು, ಕೊನೆಗೊಬ್ಬ ತಮ್ಮನೊಂದಿಗೆ ತೀವ್ರ ಬಡತನದಲ್ಲಿ ಬೆಳೆದವಳು. ಎಲ್ಲ ಅಕ್ಕಂದಿರ ಮದುವೆಯಾಗುವದರಲ್ಲಿ
ಇದ್ದು ಬಿದ್ದುದನ್ನೂ ಕಳೆದುಕೊಂಡ ಮೇಲೆ
ಇವಳ ಹೊತ್ತಿಗೆ ಉಳಿದದ್ದು ಸಾಲ, ಬದುಕಿನ ಒತ್ತಡ ಇವೆರಡೇ…ಅವಳ ಕಷ್ಟ- ಕೋಟಲೆಗಳನ್ನು ವೈಭವೀಕರಿಸುವದು ನನ್ನ ಉದ್ದೇಶವಲ್ಲ. ಅಲ್ಲದೇ ಕಷ್ಟಗಳ ಪರಿಚಯ ಗೊತ್ತಿರದಷ್ಟು ಶ್ರೀಮಂತರೂ ಯಾರೂ ಇರುವದಿಲ್ಲ. ನನಗೆ ಹೇಳಬೇಕಾಗಿರುವದು ಅವಳು ಅವುಗಳನ್ನು ಎದುರಿಸಿದ ರೀತಿಯ ಬಗೆ…ಅದರಲ್ಲೂ ಇವಳೊಬ್ಬಳೇ ಹಾಗೆ ಮಾಡಿದವಳೇನೂ ಅಲ್ಲ, ಅಂಥವರಲ್ಲಿ ಒಬ್ಬಳು ಅಷ್ಟೇ.
ಹಾಗೂ ಹೀಗೂ ಇವಳ ಮದುವೆ ಗೊತ್ತಾಗಿ ಕೆಲವೇ ದಿನಗಳಲ್ಲಿ ತಂದೆಯೂ ತೀರಿ ಹೋದ ಫಲವಾಗಿ ಮಾತನಾಡಿದ್ದನ್ನು ಮದುವೆ ಕಾಲದಲ್ಲಿ ಕೊಡಲಾಗದಕ್ಕೆ ಅತ್ತೆಯ ಮನೆಯಲ್ಲೂ ಪ್ರತ್ಯಕ್ಷ ನರಕ…ಆಗ ತನ್ನ ಎಳೆಯಮಕ್ಕಳನ್ನು ಹೊಲದ ಬದುವಿನಲ್ಲಿ ಮಲಗಿಸಿ ಕೆಲಸ ಮಾಡಿದರೂ ಮಳೆಯ ಅತಿವೃಷ್ಟಿ/ ಅನಾವೃಷ್ಟಿಯ ಕಣ್ಣುಮುಚ್ಚಾಲೆಯ ಪರಿಣಾಮ ಲಕ್ಷಗಟ್ಟಲೆ ಸಾಲದ ಹೊರೆ. ಅಲ್ಲಿಗೆ ಊರು ಬಿಡಲೇ ಬೇಕಾದ ಅನಿವಾರ್ಯತೆಯಿಂದ ಅವರ ಕುಟುಂಬವನ್ನು ಬೆಂಗಳೂರಿಗೆ ಕರೆತಂದಿತು.
ನಾವೂ ಅದೇ ಆಗ ಹೊಸ ಮನೆಗೆ shift ಆಗಿ ಕೆಲಸದವಳ ಹುಡುಕಾಟ-
ದಲ್ಲಿದ್ದೆವು. ನಮ್ಮ ಮನೆಗೆ ಕೆಲಸ ಕೇಳಿ ಬಂದವಳು ಸಂಕೋಚದಿಂದ ಹಿಡಿ ಮುಷ್ಟಿಯಾಗಿ , ಕಣ್ಣೀರೇ ‘ಹೆಣ್ಣಾಗಿ’ ನಿಂತಂತೆ ನಿಂತವಳು ಈಗ ಏಳು ವರ್ಷಗಳಲ್ಲಿ ನಮ್ಮ ಕಣ್ಣೆದುರೇ ಬೆಳೆದು ನಿಂತ ಪರಿ ಯಾವುದೇ ಉಲ್ಲೇಖನೀಯ ಸಾಧನೆಗೂ ಕಡಿಮೆಯಿಲ್ಲ.
‌ನಾವು ಓದುವ/ ಹೇಳುವ / fbಯಲ್ಲಿ ಬರೆಯುವ ಎಲ್ಲ ಸುಭಾಷಿತಗಳನ್ನು, ಸೂಕ್ತಿಗಳನ್ನು ಅವಳು ಅಕ್ಷರಶಃ ಬದುಕುತ್ತಿದ್ದಾಳೆ. ಕೇವಲ ದುಡಿತವೊಂದನ್ನೇ ಅವಳು ಬಲ್ಲಳು. ಕೆಲಸಕ್ಕೆ ಹೋಗುವ ಗಂಡ, ಮಕ್ಕಳಿಗೂ ಮಾಡಿಕೊಂಡು ಬೆಳಿಗ್ಗೆ ಐದರಿಂದ ರಾತ್ರಿಯವರೆಗೂ ದುಡಿತ. ಸದಾ ನಗುಮುಖ. ತನ್ನನ್ನು ಗೋಳಾಡಿಸಿದವರ ಬಗ್ಗೆ ಚಕಾರವಿಲ್ಲ. ಅದು ಅವರವರ ಸಂಸ್ಕಾರ ಎಂಬ ನಿರ್ಲಿಪ್ತತೆ. ಆಗೊಮ್ಮೆ ಈಗೊಮ್ಮೆ ಹಿಂದಿನ ದಿನಗಳನ್ನು ನೆನೆಸಿಕೊಂಡರೂ ಆ ಕಾರಣಕ್ಕೇನೇ ಊರು ಬಿಟ್ಟು ಬೆಂಗಳೂರಿಗೆ ವಲಸೆ ಬಂದು ಬದುಕು ಕಂಡುಕೊಂಡದ್ದರ ಸಮಾಧಾನ ಅವಳದು. ಆದದ್ದೆಲ್ಲಾ ಒಳಿತೇ ಆಯಿತು, ಆ ಕಾರಣದಿಂದಲೇ ‘ಹೊರಲೋಕದ ಪರಿಚಯವಾಗಿ ಸ್ವಲ್ಪಾದರೂ ಬೆಳೆದೆವು”- ಎಂಬ ಧನಾತ್ಮಕ ಭಾವ. ಎಂದಿಗೂ ಗಟ್ಟಿ ಕಾರಣವಿಲ್ಲದೇ ರಜೆ ಹೇಳುವದಿಲ್ಲ, ಮರುದಿನ ಕೆಲಸ ಹೆಚ್ಚಾದರೆ ಕಿಂಚಿತ್ತೂ ಗೊಣಗುವದಿಲ್ಲ. ಕರೆಯದ ಹೊರತು ಯಾರ ಮನೆ ಬಾಗಿಲಿಗೂ ಹೋಗುವದಿಲ್ಲ. ಅಂತಃಕರಣಕ್ಕೆ ಇನ್ನೊಂದು ಹೆಸರು. ಯಾವುದೇ ಬಂಧು- ಬಳಗದವರ ಕಾರ್ಯಕ್ರಮಗಳಾಗಲೀ, ಎಷ್ಟೇ ಹಣ ಖರ್ಚಾಗಲೀ ಊರಿಗೆ ಹೋಗಿ ಸಂಬಂಧಗಳನ್ನು ಹಸಿರಾಗಿಡಲು
ಪ್ರಯತ್ನಿಸುತ್ತಾಳೆ. ತಾನಾಯಿತು / ತನ್ನ ಕೆಲಸವಾಯಿತು ಎಂಬಂತಿರುವ ಆಕೆಯೆಂದರೆ ಎಲ್ಲರಿಗೂ ಅಕ್ಕರೆ.ಅವಳ ‘ಹಟಯೋಗಕ್ಕೆ’ ದೇವರೂ ಮೆಚ್ಚಿ ವರವಿತ್ತಿದ್ದಾನೆ, ಏಳು ವರ್ಷಗಳಲ್ಲಿ ಅವಳ ಎಲ್ಲ ಸಾಲ ಪೂರ್ತಿ ತೀರಿದೆ, ಊರಲ್ಲಿ ಮನೆ ಕಟ್ಟಲು ಪುಟ್ಟದೊಂದು ಜಾಗ ಖರೀದಿಸಿದ್ದಾಳೆ. ಹೆಚ್ಚಿಗೆ ಬಂದ ಆಕಸ್ಮಿಕ ಗಳಿಕೆಯನ್ನು ಬೇರೆಯಾಗಿಯೇ ಎತ್ತಿಟ್ಟು, ಎರಡು ಬಂಗಾರದ ಬಳೆ ಮಾಡಲು ಹಾಕಿ ‘ಬರೀ ದುಡಿತವನ್ನೇ ಕಂಡ ಕೈಗಳನ್ನು ಗೌರವಿಸಿ ಸಾಂತ್ವನ ಹೇಳುವ ಕನಸು’ ಹಣ್ಣಾಗಿಸುತ್ತಿದ್ದಾಳೆ.( ಅದು ನನ್ನ ಒತ್ತಾಯ). ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿದ್ದಾಗಿದೆ. ಮೂರು ಮೊಮ್ಮಕ್ಕಳ ಅಜ್ಜಿಯವಳು, ಇನ್ನಿಬ್ಬರು ಗಂಡುಮಕ್ಕಳ ಭವಿಷ್ಯಕ್ಕಾಗಿ
ಮುಂದಿನ ದುಡಿತ…ಈಗ ಕಣ್ಣ ಮುಂದೆ ಸದಾ ‘ಕಾಮನಬಿಲ್ಲು’ ಕಾಣಿಸುವ ‘ಹುಕಿ” ‘ಹುಮ್ಮಸು’ ಅವಳದು…
ಇದೊಂದು ‘ಸೋತು ಗೆದ್ದವಳ’ ಸಾಹಸಗಾಥೆ. ಎಲ್ಲರಿಗೂ ಮಾದರಿ. ನನಗಂತೂ ಅವಳು ‘ನಿತ್ಯಗುರು’.
‌ಕವಿತಾಳಿಗೆ( ಕ್ಯಾತಮ್ಮ) ‘ಕವಿತೆ’ ಗಳನ್ನು ಬರೆಯುವದು ಗೊತ್ತಿಲ್ಲ. ಆದರೆ ಬದುಕನ್ನೇ ‘ ಸುಂದರ ಕವಿತೆ’ ಯಾಗಿಸುವ
ಕಲೆ ಸಿದ್ಧಿಸಿದೆ…
‘ಅಶಿಕ್ಷಿತ’ ರೆಲ್ಲಾ ‘ಅಸಂಸ್ಕೃತ’ರಲ್ಲ…
‘Udaan’- Pankho se nahee, ‘housalo’ se hotee hai…
Leave a Reply