ಸಮಸ್ಯೆ ಚಿಗಿಯದಂತೆ ನೋಡುವುದು

ಸಮಸ್ಯೆ ಚಿಗಿಯದಂತೆ ನೋಡುವುದು
ನಮ್ಮ ನಾಡು, ನಮ್ಮ ದೇಶ ಎನ್ನುವುದೇಕೆ? ನಾವೆಲ್ಲರೂ ಒಂದು ಚೌಕಟ್ಟಿನಲ್ಲಿ ಸಾಮರಸ್ಯದಿಂದ ಬಂಧಿತರಾಗಿ ಪರಸ್ಪರ ಅಭ್ಯದಯದ ಜೊತೆಗೆಯೇ ನಾಡಿನ, ದೇಶದ ಉನ್ನತಿಗಾಗಿ ಶ್ರಮಿಸಬೇಕಲ್ಲವೇ? ಹಾಗೆಯೇ ಶ್ರಮಿಸುತ್ತಿರುವಾಗ ಎಡರು ತೊಡರುಗಳಂತೆ ಇಂಥ ಭಯೋತ್ಪಾದಕರು ಮಧ್ಯದಲ್ಲಿಯೇ ಬಂದು ಉನ್ನತಿಗೆ ಅಡ್ಡಿ ಉಂಟು ಮಾಡುತ್ತಿರುತ್ತಾರೆ. ಉದಾಹರಣೆಗೆ ನಾವು ದಾರಿ ಮಧ್ಯದಲ್ಲಿಯ ಕಲ್ಲು ತಾಕಿ ನಮ್ಮ ಕಾಲಿಗೆ ರಕ್ತ ಬರುತ್ತದೆ. ಆಗ ನಾವೇನು ಮಾಡುತ್ತೇವೆ. ಆ ಕಲ್ಲನ್ನೆತ್ತಿ ದಾರಿಯ ಮಧ್ಯದಿಂದ ಆಚೆಗೆ ಎಸೆಯುತ್ತೇವೆ. ಯಾಕೆ? ನಮಗೆ ರಕ್ತ ಬರುವಂತಾಯಿತು ಎನ್ನುವ ಸಿಟ್ಟಿನಿಂದಲ್ಲ ಪರಂತು ಮತ್ತೊಬ್ಬರಿಗೆ ತಾಕಿ ನಮ್ಮ ಹಾಗಾಗದಿರಲಿ ಎಂದು. ಹಾಗೆಯೇ ಈ ಭಯೋತ್ಪಾದಕರನ್ನು ಇಲ್ಲವಾಗಿಸುವುದು. ಮತ್ತೆ ಅವರು ಚಿಗಿತು ಇನ್ನಷ್ಟು ಮತ್ತಷ್ಟು ಜನರನ್ನು ಕೊಲ್ಲದಿರಲಿ ಎಂದು. ಅದನ್ನು ಬಿಟ್ಟು ಅವರಿಗೆ ಕ್ಷಮೆಯನ್ನು ನೀಡುವುದು ಎಳ್ಳಷ್ಟು ಸರಿಯಲ್ಲ. ಎಷ್ಟು ಭಯೋತ್ಪಾದಕರು ಸಿಕ್ಕರೂ ಅವರನ್ನೆಲ್ಲರನ್ನೂ ನೇಣಿಗೆ ಹಾಕುವುದು ಸೂಕ್ತ. ಅವರ ಹಿಂಸಾತ್ಮಕವಾದ ಕೃತ್ಯಕ್ಕೆ ಮತ್ತೊಮ್ಮೆ ವಿಚಾರ ಮಾಡುತ್ತಾರೆ. ಅವರನ್ನು ಕೂಡಿಟ್ಟು ಕೋರ್ಟಿಗೆ ಎಡತಾಕಿಸಿ ಅವರ ಖರ್ಚನ್ನೆಲ್ಲ ಸರ್ಕಾರವೇ ಭರಿಸಿ, ಅವರಿಗೆ ಮನಸೋಕ್ತ ಅಂದರೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಇರಲು ಅವಕಾಶ ನೀಡುವುದು ಎಳ್ಳಷ್ಟು ಸರಿಯಲ್ಲ. ಹಾಗೆ ಇರಲು ಬಿಟ್ಟರೆ ಅವರು ದುಡ್ಡಿನ ಆಮಿಷವನ್ನೊಡ್ಡಿ ಜಾಮೀನು ಪಡೆದು ಹೊರಬರುತ್ತಾರೆ. ಮತ್ತೆ ಅವರು ತಮ್ಮ ಹಳೆಯ ಚಾಳಿಯನ್ನು ಬಿಡುತ್ತಾರೆ ಎನ್ನುವುದಕ್ಕೇನು ಗ್ಯಾರಂಟಿ? ಈಗ ಅಫ್ಜಲ್ ಆಯಿತು. ಅಬುಸಲೇಮ್, ಕಸಬ್ ಹಿಂದೆ ಹೀಗೇ ಕ್ಯೂ ಹತ್ತುತ್ತದೆ. ಮುಂದೊಂದು ದಿನ ದಾವೂದ್ ಇಬ್ರಾಹಿಂನ್ನು ಹಿಡಿದಾದ ಮೇಲೆ ಆತ ಜಾಮೀನು ಪಡೆದು ಹೊರಬಂದು ರಾಜಾರೋಷವಾಗಿ ತಿರುಗಾಡಬಲ್ಲ, ಇಲೆಕ್ಷನ್ನಿಗೂ ನಿಂತು ದಂಡಿ ದುಡ್ಡು ಸುರಿದು ಪ್ರಧಾನಿ ಕೂಡ ಆಗಬಲ್ಲ! ಇದು ಈ ದೇಶದ ಕನ್ನಡಿ ಅಷ್ಟೇ. ಈಗ ಮುತ್ತಪ್ಪರೈ ಬಿಡುಗಡೆಗೊಂಡು ಸಭೆ ಸಮಾರಂಭಗಳಿಗೆಲ್ಲ ಅತಿಥಿಯಾಗಿ ಆಗಮಿಸುತ್ತಿರುತ್ತಾನಲ್ಲ! ಹಾಗೇ, ದೇಶಕ್ಕಾಗಿ ಪ್ರಾಣ ತೊರೆದ ಸೈನಿಕರ ಪ್ರಾಣಕ್ಕೆ ಬೆಲೆಯೇ ಇಲ್ಲವೇ? ಇದನ್ನೆಲ್ಲ ನೋಡುತ್ತಿದ್ದರೆ ಮನಸ್ಸು ಕುದ್ದು ಆವಿಯಾಗುತ್ತಿದೆ.
ಈ ಭಯೋತ್ಪಾದಕರನ್ನು ಬಿತ್ತಿ ಬೆಳೆಸಿದವರೇ ರಾಜಕಾರಣಿಗಳು. ಅವರಿಗೆ ತಾವು ಮಂತ್ರಿ ಮಾಗಧರಾಗಬೇಕಷ್ಟೇ ಯಾರು ಸತ್ತರೂ ಬಿದ್ದರೂ ಪರವಾ ಇಲ್ಲ. ಎಲ್ಲೆಡೆ ಅರಾಜಕತೆ, ಅಶಾಂತಿ ಇದ್ದರೆ ಮಾತ್ರ. ಅವರ ಬೇಳೆ ಬೇಯುತ್ತಿರುತ್ತದೆ. ಹೀಗಾಗದಿರಲು ಕೆಲವೊಂದು ಕ್ವಾಲಿಫಿಕೇಶನ್ನನ್ನು ವಿಧಿಸಬೇಕಾದದ್ದು ಅವಶ್ಯ. ಎಲೆಕ್ಷನ್ನಿನ ಟಿಕೆಟ್ ನೀಡಲು ಆತ ಅಥವಾ ಆಕೆ ಪದವೀಧರರಾಗಿರಲೇಬೇಕು. ಜಾತಿ ಆಧಾರವಾಗದೇ ಕೇವಲ ದೇಶವೊಂದೇ ಗುರಿಯಾಗಿರಬೇಕು. ಆತ ಅಥವಾ ಆಕೆಯ ಮೇಲೆ ಯಾವುದೇ ಕೇಸು ಇರಕೂಡದು ಆಸ್ತಿಯ ವಿವರ ಲಗತ್ತಿಸಿರಬೇಕು.
ಆಕಾಶದಲ್ಲಿ ನಿರಭ್ರತೆಯಿದ್ದರೆ ಕೆಳಗೂ ಗಾಳಿ ಹವೆ ಶುದ್ಧವಾಗಿರುತ್ತದೆ. ಅಂತೆಯೇ ಮೇಲೆ ನಮ್ಮನ್ನಾಳುವ ಮಂತ್ರಿ ಮಾಗಧರು ಶುದ್ಧ ಹಸ್ತರಿದ್ದಾಗಲೇ ತಮ್ಮ ಕೆಳಗಿನವರನ್ನು ಅವರು ಸರಿಯಾಗಿ ಕಂಟ್ರೋಲ್ ಮಾಡಬಲ್ಲರು.
ಹಾಗೆ ನೋಡಿದರೆ ನಕ್ಸಲ್ ಸಮಸ್ಯೆ ಸಮಸ್ಯೆಯೇ ಅಲ್ಲ. ಅದನ್ನು ಪೋಷಿಸಿ ಬೆಳೆಸಿದವರು ನಮ್ಮ ರಾಜಕೀಯದ ಜನ ಬಡ ಜನರನ್ನು ಶೋಷಿಸಿ ತಾವು ಕೆಲಸ ಮಾಡದೇ ದುಡ್ಡು ತಿಂದು ಮತ್ತಿಷ್ಟು ದುಂಡಗಾಗಿರುತ್ತಾರೆ. ಬಡವರು ಮತ್ತಿಷ್ಟೂ ಬಡವರು. ಹೀಗಾಗಿ ತಾರತಮ್ಯ ಅಳಿಸಲು ನಕ್ಸಲ್ ರು ಬಂದೂಕು ಹಿಡಿಯುತ್ತಾರೆ. ಅವರಿಗೆ ಈಗ ಹೊರದೇಶದವರೂ (ವೈರಿ ದೇಶದವರೂ) ಬೆಂಬಲ ನೀಡುತ್ತಾರೆ. ಅವರ ಗುರಿ ತಮ್ಮೆಡೆಗೇ ಎಂದಾಗ ರಾಜಕಾರಣಿಗಳು ಎಚ್ಚೆತ್ತು ಜಾಗೃತರಾಗುತ್ತಾರೆ. ಹೀಗಾಗದಿರಲು ಜನಪ್ರತಿನಿಧಿಗಳಾದ ತಾವುಗಳು ಅವರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಕಿವಿ ಇತ್ತು ಪರಿಹರಿಸಿದ್ದೇ ಆದರೆ ಎಲ್ಲಿಯ ನಕ್ಸಲ್ ಸಮಸ್ಯೆ?
ಪ್ರತಿಯೊಂದು ಸಮಸ್ಯೆಯನ್ನು ಪರಾಮರ್ಶಿಸಿ, ವಿವೇಚಿಸಿ ಮುಂದಾಲೋಚನೆಯಿಂದ ಪರಿಹರಿಸಿದರೆ ಯಾವ ಸಮಸ್ಯೆಯೂ ಬೃಹದಾಕಾರವಾಗಿ ಬೆಳೆಯುವುದು ಸಾಧ್ಯವಿಲ್ಲ. ಅದಕ್ಕೆ ನಮ್ಮ ಕರ್ತವ್ಯವೇನು? ಹಾಗೇ ಸಮಸ್ಯೆ ಚಿಗಿಯಲು ಅವಕಾಶ ನೀಡದೇ ಇರುವುದೇ ಆಗಿದೆ.

 

Leave a Reply