ಸಾರ್ಥಕದ ಸಾವು!

ಸಾರ್ಥಕದ ಸಾವು!
ಅನುದಿನವೂ ದಿನಕ್ಕಿಂತ ಹೆಚ್ಚುತ್ತಿದೆ ಶೋಕ ಮೌನದಲ್ಲೂ ಉಕ್ಕುವ ಕಂಬನಿ ತಡೆಯಲಾಗದ ದುಃಖ
ಕೇಳಿದಷ್ಟು ಮತ್ತೆ ಮತ್ತೆ ಕೇಳಲು ಬಯಸುತ್ತಿದೆ ನಿನ್ನದೇ ಮಾತು ಈ ಜೀವ
ನೋಡಿದಷ್ಟೂ ನೋಡುತ್ತಲೇ ಇರಬೇಕೆನ್ನುವ ಭಾವ
ದಿನ ದಿನವೂ ನೀ ಮತ್ತೆ ಮತ್ತೆ ಹುಟ್ಟುತ್ತಲೇ ಇರುವ ಮಾಣಿಕ್ಯ
ಸಾವ ಕಂಡ ಕ್ಷಣದಿಂದ ಜೀವಂತವಾದ ಪುನೀತ ರಾಜಕುಮಾರ
ಬದುಕುವುದಾದರೆ ಹೀಗೆ ಬದುಕಬೇಕೆಂದು ತೋರಿಸಿದ ಭಾಗ್ಯವಂತ
ಕೋಟಿ ಕೋಟಿ ಕನ್ನಡಿಗರಿಗೆ ಪ್ರೇಮದ ಕಾಣಿಕೆ ನೀಡಿದ ಸಿರಿವಂತ
ನೊಂದ ಹೆಂಗಳೆಯರ ದಾರಿ ದೀಪವಾಗಿ ದಾರಿ ತೋರಿದ ಬೆಟ್ಟದ ಹೂ
ಕೊಟ್ಟ ಕೈಗೂ ಗೊತ್ತಾಗದಂತೆ ದಾನ ಮಾಡಿದ ಯುವರತ್ನ
ಎಲೆಮರೆಯ ಕಾಯಿಯಂತೆ ಸುಳಿ ಕೊಡದೆ ಸಾವಿರಾರು ದೀನರ ಸಲುಹಿದ ಸಾಹುಕಾರ
ಸರಳ ಸಜ್ಜನ ಮಮತಾಮಯಿ ಮುತ್ತು ತನಯ
ಸತ್ತು ಬದುಕಿದ ಪರಮಾತ್ಮ ದೊಡ್ಡಮನೆಯ ಕಣ್ಮಣಿ
ಸರ್ವರಲು ಮಾತೃ ಹೃದಯ ಜಾಗೃತಿ ಇಂದು ನಿನ್ನಿಂದ ಓ ಅರಸು
ಆದರ್ಶದ ಬೀಜ ಬಿತ್ತಿ ಮೊಳಕೆ ಓಡೆಸಿದ ಸನಾದಿ ಅಪ್ಪಣ್ಣ
ಕಂಡ ಕಂಡವರ ಬಾಯಲ್ಲಿ ಹಾದಿ ಬೀದಿಯಲಿ ರಾರಾಜಿಸುತ್ತಿಹೆ ಇಂದು ರಾಜಕುಮಾರ
ಚಿತ್ರಪಟಗಳು ಮರೆಯಾಗುತ್ತಿಲ್ಲ ಕಣ್ಣ ಅಂಚಿಂದ
ಮತ್ತೆ ಹುಟ್ಟಿ ಬಾ ಆದರ್ಶದ ಪಾಠ ಕಲಿಸಲು ಸೃಜನಶೀಲ
ತಾನು ಬೆಳೆದು ಪರರ ಬೆಳೆಸಿ ಹೊಸಬೆಳಕು ಚೆಲ್ಲಿದ ಆಕಾಶದ ಚಂದ್ರಮ
ಬದುಕಿನ ಅತ್ಯಮೂಲ್ಯ ಪಾಠ ಕಲಿಸಿದ ರಣವಿಕ್ರಮ
ಮಾನವೀಯತೆಯ ಸಾಕಾರ ಮೂರ್ತಿ ನೀನಾದೆ ಇಂದು ರಾಜಕುಮಾರ
ಈ ಮಾಯಾ ಬಜಾರನಲ್ಲಿ ಮಿಂಚಿ ಮಾಯವಾದ ನಟಸಾರ್ವಭೌಮ
ಲೋಕದ ಡೊಂಕ ದಿದ್ದದೆ ತನ್ನ ಕಾಯಕ ತಾ ನಿಭಾಯಿಸಿದ ನಿಷ್ಠಾವಂತ
ಅಧ್ಬುತ ಸಾಧನೆಗೆಂದೇ ಈ ಪೃಥ್ವಿಯಲ್ಲಿ ಹುಟ್ಟಿ ಬಂದ ಸಂತ
ಸಾವೇ ಬಂದರು ಇಂಥಾ ಸಾವು ಬರಲಿ ಎಂಬ ಪರಿಪಾಠ ನೀನಾದೆ ಕನ್ನಡದ ಕಂದ
ಮರೆಯದ ಮಾಣಿಕ್ಯ ನೀನೆಂದು ಅಮರ ಅಮರ ಅಮರ!
ಕೋಟಿ ಕೋಟಿ ನಮನವು ಈ ಅಜರಾಮರ ಪುನೀತನಿಗೆ
ಉಮಾ ಭಾತಖಂಡೆ.
Leave a Reply