ಶಾಂತಿ ಎಲ್ಲಿದೆ..?

ಶಾಂತಿ ಎಲ್ಲಿದೆ..?

ಮನಸೊಂದು ಗೊಂದಲದ ಗೂಡು. ಇಲ್ಲಿ ಹಳೆಯ ನೆನಪುಗಳು ಮಧುರ ಅನುಭೂತಿ ಒದಗಿಸಿದರೆ, ಕೆಲವು ನೋವು ನೀಡುತ್ತವೆ. ನಿನ್ನೆಯ ಜಗಳ, ಮೊನ್ನೆಯ ವಿರಸ.. ಇವು ಮನಸಿನ ಶಾಂತಿಯನ್ನು ಕದಡುತ್ತವೆ. ನಮ್ಮ ಮನಸ್ಸಿನ ಶಾಂತಿಯನ್ನು ಕಾಪಾಡಿಕೊಂಡು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವ, ಸುತ್ತ ಮುತ್ತಲಿನವರ ಮನಶ್ಶಾಂತಿಯನ್ನು ಕಾಪಾಡುವ ಬಗೆ ಹೇಗೆ… ಅದಕ್ಕಾಗಿಯೇ ಇಲ್ಲಿವೆ ಕೆಲವು ಸೂತ್ರಗಳು..
1. ಬೇರೆಯವರು ಕೇಳದೆ ಅವರ ವೈಯಕ್ತಿಕ ವಿಷಯದಲ್ಲಿ ತಲೆತೂರಿಸಿ, ಸಲಹೆಯನ್ನು ಕೊಡದಿರುವುದು ಉತ್ತಮ. ಪ್ರತಿಯೊಬ್ಬರಿಗೂ ದೇವರು ವಿಚಾರ ಶಕ್ತಿಯನ್ನು ಕೊಟ್ಟಿರುತ್ತಾನೆ. ಅವರವರ ಸಮಸ್ಯೆಯನ್ನು ತಮತಮಗೆ ತೋಚಿದ ರೀತಿಯಲ್ಲಿ ಅವರು ಬಗೆಹರಿಸಿಕೊಳ್ಳುತ್ತಿರುತ್ತಾರೆ. ಯಾರೂ ನಮ್ಮ ಸಹಾಯ ಹಾಗೂ ಸಲಹೆಗಳನ್ನು ಕೇಳದೆ ಹೋದರೂ ನಮ್ಮ ಅಭಿಪ್ರಾಯವನ್ನು ಅವರ ಮೇಲೆ ಹೇರುವುದರಿಂದ ಸಮಸ್ಯೆಗಳನ್ನು ನಮ್ಮ ಮೇಲೆ ಎಳೆದುಕೊಂಡಂತೆ. ನಮಗೆ ನಮ್ಮ ದಾರಿಯೇ ಸರ್ವಶ್ರೇಷ್ಠ. ನಮ್ಮ ತಾರ್ಕಿಕತೆಯೇ ಬೆಲೆಯುಳ್ಳದ್ದು. ನಮ್ಮ ದಾರಿಯನ್ನು ಯಾರು ಒಪ್ಪಲಾರರೋ ಅವರನ್ನು ಟೀಕಿಸುತ್ತೇವೆ. ನಮ್ಮ ವಿಚಾರ ಲಹರಿಯನ್ನು ಒಪ್ಪಿಕೊಳ್ಳಲು ಒತ್ತಾಯಿಸುತ್ತೇವೆ. ಇದು ವ್ಯಕ್ತಿಯೊಬ್ಬನ ವೈಯಕ್ತಿಕತೆ ಸ್ವಂತಿಕೆಯನ್ನು ಅಲ್ಲಗಳೆದಂತಾಗದೇ? ಭಿನ್ನ ವ್ಯಕ್ತಿಗಳ ವೈಯಕ್ತಿಕ ಆಲೋಚನಾಲಹರಿ ಪರಸ್ಪರ ಭಿನ್ನವಾಗಿರುತ್ತದೆ. ಇಬ್ಬರು ಎಂದಿಗೂ ಒಂದೇ ಮಾರ್ಗದಲ್ಲಿ ಯೋಚಿಸಲಾರರು. ಕಾರ್ಯವೈಖರಿಯೂ ಭಿನ್ನವಾಗಿರುತ್ತದೆ. ಆದ್ದರಿಂದ ನಮ್ಮನ್ನು ಸಲಹೆಗಾಗಿ, ಸಹಾಯಕ್ಕಾಗಿ ಯಾಚಿಸದಿರುವವರಿಗೆ ನಾವು ಮೇಲೆ ಬಿದ್ದು ಸಲಹೆ ಕೊಡುವುದರಿಂದ ಅವರಿಗೆ ಇರಸುಮುರಿಸು ಉಂಟಾಗುತ್ತದೆ.
2. ಮರೆವು ದೇವರು ನಮಗೆ ದಯಪಾಲಿಸಿದ ವರ. ‘ಕ್ಷಮೆ’ ಮಾನವೀಯತೆಯ ಉನ್ನತಿಯ ಸೋಪಾನ. ಆದ್ದರಿಂದಲೇ “ಮರೆಯಿರಿ–ಕ್ಷಮಿಸಿರಿ” -–ಇದು ಮಾನಸಿಕ ಸಂತುಲನವನ್ನು ಕಾಪಾಡಿಕೊಳ್ಳುವ ಅತಿ ಶ್ರೇಷ್ಠ ಮಾರ್ಗ. ನಮ್ಮನ್ನು ಅಪಮಾನಿಸಿದವರ, ನಮಗೆ ಕೆಡುಕನ್ನುಂಟುಮಾಡಿದವರ ಬಗ್ಗೆ ನಾವು ಶತೃತ್ವದ ಭಾವನೆಯನ್ನು ತಳೆದಿರುತ್ತೇವೆ. ಇದರಿಂದಾಗಿ ಒಮ್ಮೊಮ್ಮೆ ರಾತ್ರಿಯಿಡೀ ನಿದ್ರೆ ಬಾರದೆ ಹೊರಳಾಡುತ್ತೇವೆ. ಅಲ್ಸರ್, ಏರಿದ ರಕ್ತದೊತ್ತಡ, ಖಿನ್ನತೆ ಮುಂತಾದ ರೋಗಗಳಿಗೆ ಈಡಾಗುವ ಸಾಧ್ಯತೆ ಯನ್ನು ಕೂಡ ತಳ್ಳಿಹಾಕುವಂತಿಲ್ಲ. ಈ ಅವಮಾನ, ಈ ನೋವು ಒಂದೇ ಬಾರಿಗೆ ಘಟಿಸಿದ್ದರೂ ಅದನ್ನು ನಾವು ಪೋಷಿಸುತ್ತಹೋಗುತ್ತೇವೆ. ಇದು ಬಹಳ ಕೆಟ್ಟ ಹವ್ಯಾಸ. ಇದನ್ನು ನಾವು ಕುಡಿಯಲ್ಲಿಯೇ ಚಿವುಟಿ ಹಾಕಬೇಕು. ಈ ಜೀವನವನ್ನು ಪ್ರೀತಿ ಮಾಡಲಿಕ್ಕೇ ಸಮಯ ಸಾಲದು. ಇನ್ನು ದ್ವೇಷಕ್ಕೆಲ್ಲಿಯ ಸಮಯ? ಆದ್ದರಿಂದಲೇ ಬೇರೆಯವರ ತಪ್ಪುಗಳನ್ನು ಮರೆತು, ಅವರನ್ನು ಕ್ಷಮಿಸಿ, ಪ್ರೀತಿಸಿ. ಕೊಡುವ-ತೆಗೆದುಕೊಳ್ಳುವ ದಿಸೆಯಲ್ಲಿ ಸಾಗಬೇಕು.
3 ನಮ್ಮನ್ನು ಜಗತ್ತಿನಲ್ಲಿ ಎಲ್ಲರೂ ಗುರುತಿಸಬೇಕು… ಮಹತ್ವ ಕೊಡಬೇಕು.. ಎಂಬ ಈ ಪ್ರಸಿದ್ಧಿಯ ಹಸಿವು ಸಲ್ಲದು. ಈ ಜಗತ್ತು ಸ್ವಾರ್ಥದಿಂದ ತುಂಬಿದೆ. ಯಾರೂ ಯಾರನ್ನೂ ಸ್ವಾರ್ಥವಿಲ್ಲದೆ ಹೊಗಳುವುದಿಲ್ಲ. ನೀವು ಇಂದು ಉನ್ನತ ಸ್ಥಾನದಲ್ಲಿದ್ದರೆ, ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ. ಆಧಿಕಾರ ಕಳೆದುಕೊಂಡ ಮರುದಿನದಿಂದಲೇ ನೀವು ಅವರಿಗೆ ಮಾಡಿದ ಉಪಕಾರಗಳನ್ನು ಮರೆತು, ನಿಮ್ಮ ಮಹತ್ಕಾರ್ಯಗಳನ್ನು ಮರೆತು, ನಿಮ್ಮಲ್ಲಿ ತಪ್ಪು ಹುಡುಕತೊಡಗುತ್ತಾರೆ. ನಿಮ್ಮ ಸಮಯವನ್ನು ಹಾಳು ಮಾಡಿಕೊಂಡು ಅವರ ಹೆಸರನ್ನು ಸುಮ್ಮಸುಮ್ಮನೆ ಪ್ರಸಿದ್ಧಗೊಳಿಸುವ ಕಾರಣವೇನಿದೆ? ನ್ಯಾಯಯುತವಾಗಿ ಯಾರಿಗೆ ನಿಮ್ಮ ಉಪಕಾರ ಸಲ್ಲಬೇಕೋ ಅವರಿಗೆ ಸಲ್ಲಲಿ. ನಿಮ್ಮ ಕೆಲಸಕಾರ್ಯಗಳನ್ನು ನೀವು ಪ್ರಾಮಾಣಿಕತೆಯಿಂದ ಮಾಡಿದರೆ ಸಾಕು. ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದೂ ಇದೇ ಅಲ್ಲವೇ? ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ ಎಂದಲ್ಲವೇ?
4. ಅಸೂಯೆಯು ನಮ್ಮನ್ನು ಎಂದೂ ಪ್ರಗತಿ ಯತ್ತ ಕೊಂಡೊಯ್ಯದು. ಅಸೂಯೆಯಿಂದಾಗಿ ನಮ್ಮ ಮನಶ್ಶಾಂತಿ ಯಾವ ರೀತಿಯಲ್ಲಿ ಹಾಳಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಒಮ್ಮೊಮ್ಮೆ ನಾವು ನಮ್ಮ ಸಹೋದ್ಯೋಗಿ ಗಳಿಗಿಂತಲೂ ಪ್ರಾಮಾಣಿಕವಾಗಿ, ಕಷ್ಟ ಪಟ್ಟು ದುಡಿಯುತ್ತೇವೆ. ಆದರೆ ಬೇರೆಯವರು ಭಡ್ತಿ ಪಡೆಯುತ್ತಾರೆ. ನಾವಲ್ಲ. ಕೆಲವೊಮ್ಮೆ ನಾವು ಎಷ್ಟೋ ವರ್ಷಗಳಿಂದ ಒಂದು ವ್ಯಾಪಾರವನ್ನು ಪ್ರಾರಂಭಿಸಿರುತ್ತೇವೆ. ಆದರೆ ಅದರಲ್ಲಿ ಲಾಭ ಮಾತ್ರ ಮೂರಕ್ಕಿಳಿಯದೆ ಆರಕ್ಕೇರದೆ ಹೊರಟಿರುತ್ತದೆ. ನಮ್ಮ ಮುಂದಿನ ಯುವಕನೊಬ್ಬ ಇಂಥದೇ ವ್ವವಹಾರವನ್ನು ಪ್ರಾಂರಭಿಸಿ ಇನ್ನೂ ಒಂದು ವರ್ಷವೂ ಆಗಿರುವುದಿಲ್ಲ. ಆದರೂ ಅತ್ಯಂತ ಯಶಸ್ಸು ಸಂಪಾದಿಸುತ್ತಾನೆ. ಇಂಥ ಅನೇಕ ಉದಾಹರಣೆಗಳಿವೆ, ನಮ್ಮ ಪ್ರತಿನಿತ್ಯದ ಜೀವನದಲ್ಲಿ. ಇದಕ್ಕಾಗಿ ನಾವು ಹೊಟ್ಟೆಕಿಚ್ಚು ಪಡುವ ಕಾರಣವೇನಿದೆ? ಬೇಡವೇ ಬೇಡ. ಎಲ್ಲರ ಜೀವನದಲ್ಲಿಯೂ ಪ್ರತಿಯೊಂದು ವಿಷಯವೂ ಅವರವರ ಅದೃಷ್ಟದ ಮೇಲೆಯೆ ನಿರ್ಧರಿಸಲ್ಪಟ್ಟಿರುತ್ತದೆ. ಕಾರ್ಯ ಮಾಡುವುದಷ್ಟೇ ನಮ್ಮ ಧರ್ಮ. ಯಶಸ್ಸು ನಮ್ಮ ಗುರಿಯಾಗಿರಲಿ. ಆದರೆ ಅಸೂಯೆ ಪಡುವುದು ನಮ್ಮ ಧರ್ಮವಾಗಿರಬೇಕಿಲ್ಲ. ಅದರಿಂದ ನಮ್ಮ ಮನಶ್ಶಾಂತಿ ಹಾಳಾಗುತ್ತದೆ.
5. ಪರಿಸ್ಥಿತಿಗನುಸಾರವಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ನಾವು ಒಬ್ಬರೇ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೊಂದು ವೇಳೆ ಪ್ರಯತ್ನಿಸಿದರೂ ಅದರಲ್ಲಿ ಅಸಫಲತೆಯೆ ಹೆಚ್ಚು. ಬದಲಾಗಿ ನಮ್ಮನ್ನು ನಾವು ಬದಲಾಯಿಸಿಕೊಂಡರೆ ನಮ್ಮ ವಿರುದ್ಧವಾಗಿರುವ ಕೆಲ ಪರಿಸ್ಥಿತಿಗಳು ಕೂಡ ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತವೆ.
6. ನಮಗೆ ಎಷ್ಟು ನುಂಗಲು ಸಾಧ್ಯವೊ ಅಷ್ಟು ಮಾತ್ರ ಬಾಯಿಗೆ ಹಾಕಿಕೊಳ್ಳುವುದು ಉತ್ತಮ. ಈ ಮಾತನ್ನು ನಾವು ಯಾವಾಗಲೂ ನೆನಪಿನಲ್ಲಿ ಇರಿಸಿಕೊಳ್ಳಬೇಕು. ನಾವು ಸಾಮಾನ್ಯವಾಗಿ ನಮ್ಮ ಯೋಗ್ಯತೆಗಿಂತ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿ ಕೊಳ್ಳುತ್ತೇವೆ. ಇದಕ್ಕೆ ನಾವು ನಮ್ಮ ದೊಡ್ಡಿಸ್ತಿಕೆಯನ್ನು ತೋರಿಸಬೇಕೆನ್ನುವುದೇ ಕಾರಣ. ನಮ್ಮ ಸೀಮೆಯನ್ನು ನಾವು ಅರಿತಿರುವುದು ಉತ್ತಮ. ನಮ್ಮ ಮನಶ್ಶಾಂತಿ ಕದಡುವ ಹೆಚ್ಚಿನ ಹೊಣೆಗಾರಿಕೆ ನಮಗೇಕೆ? ನಮ್ಮ ವೇಳಾಪಟ್ಟಿಯಲ್ಲಿ ಪ್ರಾರ್ಥನೆ, ಆತ್ಮ ವಿಮರ್ಶೆ, ಧ್ಯಾನ ಇವುಗಳಿಗೂ ಸ್ಥಾನವಿರಲಿ. ಇದು ನಮ್ಮ ಮನಸ್ಸನ್ನು ಒತ್ತಡದಿಂದ ಮುಕ್ತಗೊಳಿಸುತ್ತದೆ.
7. ಗುಣಪಡಿಸಲಾಗದುದನ್ನು ಸಹಿಸಿಕೊಂಡು ಹೋಗುವುದನ್ನು ಕಲಿಯಬೇಕು. ಇದು ನಿರುಪಯುಕ್ತ ತೆಯನ್ನು ಉಪಯುಕ್ತತೆಯನ್ನಾಗಿ ಬದಲಿಸುವ ಉತ್ತಮ ಮಾರ್ಗ. ಜೀವನವೆಂದರೆ ಸುಖದ ಸುಪ್ಪತ್ತಿಗೆಯೇನಲ್ಲ. ಮಾನಸಿಕ ಹಾಗೂ ದೈಹಿಕವಾಗಿ ನೋವು, ಕಷ್ಟ ಎಲ್ಲವೂ ಎಲ್ಲರಿಗೂ ಸಾಕಷ್ಟು ಇದ್ದೇ ಇರುತ್ತವೆ. ಕೆಲವೊಮ್ಮೆ ಗುಣಪಡಿಸಲು ಆಗದಂಥವೂ ಇರುತ್ತವೆ. ಆದ್ದರಿಂದ ಅವುಗಳೊಂದಿಗೆ ರಾಜಿಯಾಗಿ ಬಾಳುವುದನ್ನು ಕಲಿಯಬೇಕು. ನಮಗಿಂತ ಸುಖವಾಗಿ ಇರುವವರನ್ನು ನೋಡಿ ದುಃಖ ಪಡುವುದರಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಿಲ್ಟನ್ ಕುರುಡನಾಗಿದ್ದರೂ ಮಹಾಕವಿಯಾದ. ‘ಪ್ಯಾರಡೈಜ್ ಲಾಸ್ಟ್’ ನಂಥ ಅದ್ಬುತ ಕೃತಿ ರಚನೆ ಮಾಡಿ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸಿದ. ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿದರೆ ಜೀವನ ಸಹನೀಯವಾಗುತ್ತದೆ. ನಮ್ಮ ಅಂತಃಸತ್ವದಲ್ಲಿ ನಮಗೆ ನಂಬಿಕೆಯಿದ್ದರೆ ಮಾತ್ರ ಮನಸ್ಸು ಶಾಂತವಾಗಿರುತ್ತದೆ.
8 ಧ್ಯಾನವು ಶಾಂತಿಯೆಡೆಗೆ ಕೊಂಡೊಯ್ಯುವ ರಾಜಮಾರ್ಗ. ಧ್ಯಾನವು ನಮ್ಮ ಮನಸ್ಸನ್ನು ಗೊಂದಲಕ್ಕೀಡುಮಾಡುವ ವಿಚಾರಗಳಿಂದ ಮುಕ್ತಗೊಳಿಸುತ್ತದೆ. ಪ್ರತಿ ದಿನ ಆಸಕ್ತಿಯಿಂದಲೇ ಅರ್ಧ ಗಂಟೆ ಧ್ಯಾನದಲ್ಲಿ ತೊಡಗಿದರೆ ಮನಸ್ಸು ಶಾಂತಗೊಳ್ಳುತ್ತದೆ. ಉಳಿದ 23 -1/2 ಗಂಟೆಗಳು ನಮ್ಮ ಗೊಂದಲಗಳನ್ನು ಕಡಿತಗೊಳಿಸಿ ಏಕಾಗ್ರತೆಯನ್ನು ಸಾಧಿಸಲು ಅನುಕೂಲವಾಗುತ್ತದೆ. ನಮ್ಮ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ. ಹೆಚ್ಚಿನ ಯಶಸ್ಸು ಕೂಡ ನಮ್ಮದಾಗುತ್ತದೆ.
9. ವಿಚಾರಶೂನ್ಯ ಮೆದುಳು ದೆವ್ವದ ಆಗರ. ಪ್ರತಿಯೊಂದು ಕೆಡುಕಿನ ಆಲೋಚನೆಯೂ ಖಾಲಿ ತಲೆಯಿಂದಲೇ ಆರಂಭವಾಗುತ್ತದೆ. Empty mind is devil’s work shop !! ಸದಾ ನಮ್ಮ ಮನಸ್ಸನ್ನು ಧನಾತ್ಮಕ ಆಲೋಚನೆಗಳಲ್ಲಿ ತೊಡಗಿಸಿದರೆ ಅಥವಾ ಉಪಯುಕ್ತ ಕೆಲಸಗಳಲ್ಲಿ ತೊಡಗಿಸಿದರೆ ಒಳ್ಳೆಯದು. ಒಳ್ಳೆಯ ಹವ್ಯಾಸಗಳನ್ನು ಹುಟ್ಟು ಹಾಕಿಕೊಳ್ಳಬಹುದು. ಜೀವನದಲ್ಲಿ ಯಾವಾಗಲೂ ಹಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕೆಂದೇನಿಲ್ಲ. ಕೆಲವೊಂದು ಕೆಲಸ ಕಾರ್ಯಗಳು ನಮ್ಮ ಮನಸ್ಸಿಗೆ ಮುದವನ್ನೀಯುತ್ತವೆ. ಅಂಥ ಆನಂದವನ್ನು ಎಷ್ಟು ಹಣ ಕೊಟ್ಟರೂ ಕೊಳ್ಳಲಾಗದು. ನಮ್ಮ ಕೆಲ ಹವ್ಯಾಸಗಳು, ಕೆಲ ಸಾಮಾಜಿಕ ಕಾರ್ಯಗಳು, ಧಾರ್ಮಿಕ ಕಾರ್ಯಗಳು ನಮಗೆ ಹಣವನ್ನು ತರಲಿಕ್ಕಿಲ್ಲ. ಆದರೆ ಸಂತೋಷ, ತೃಪ್ತಿ, ಏನನ್ನೋ ಸಾಧಿಸಿದ ಪರಿಪೂರ್ಣತೆಯ ಅನುಭವವನ್ನು ತಂದಾವು. ವಿಶ್ರಾಂತಿ ಸಮಯದ ಒಳ್ಳೆಯ ಪುಸ್ತಕಗಳ ಓದೂ ಕೂಡ ಮನಃಶಾಂತಿಯನ್ನು ಕೊಟ್ಟೀತು!
10. ಆಲಸ್ಯವು ಕೂಡ ನಮ್ಮ ವ್ಯಕ್ತಿತ್ವಕ್ಕೆ ಮಾರಕಶಕ್ತಿಯೇ. ಆಲಸ್ಯವು ಅಮೃತವನ್ನೂ ವಿಷವಾಗಿಸುತ್ತದೆ. ಆದ್ದರಿಂದ ಆಲಸ್ಯ ಎಂದೂ ಸಲ್ಲದು. ಯಾವುದೇ ಒಂದು ಉತ್ತಮ ಕಾರ್ಯ ಪ್ರಾರಂಭ ಮಾಡುವದಕ್ಕಾಗಿ ಮುಹೂರ್ತವನ್ನು ಕಾಯಬೇಕಿಲ್ಲ. ಅದರಲ್ಲಿಯೇ ದಿನ, ವಾರ, ತಿಂಗಳುಗಳು ಉರುಳಿ ಹೋದಾವು! ಭವಿಷ್ಯದ ಬಗ್ಗೆ ನಾವು ಯೋಜನೆಗಳನ್ನು ಹಾಕಬಹುದು. ಆದರೆ ಅವು ಹಾಗೆಯೇ ನಡೆಯಬೇಕೆಂಬುದು ವೈಜ್ಞಾನಿಕ ಸತ್ಯವೇನಲ್ಲ. ಏಕೆಂದರೆ ಭವಿಷ್ಯದ ಆಗುಹೋಗುಗಳು ನಮ್ಮ ಕೈಯಲ್ಲಿ ಇಲ್ಲ. ಹಾಗೆಂದು ಯೋಜನೆಗಳೇ ಬೇಡ ಎಂದೇನಿಲ್ಲ. ಯಾವುದನ್ನು ಮಾಡುವುದು ಅವಶ್ಯವಿದೆಯೋ ಅದನ್ನು ಮಾಡಲೇಬೇಕು. ಯಶಸ್ಸು ಒಮ್ಮೊಮ್ಮೆ ನಮ್ಮ ಕೈತಪ್ಪಬಹುದು. ಆದರೆ ಸೋಲು ಗೆಲುವಿನ ಸೋಪಾನವಾಗುತ್ತದೆ. ಹಿಂದಿನ ಸೋಲಿನಿಂದ ದುಃಖಿತರಾಗಿ ಕುಳಿತರೆ ನಾವು ಸುಖವನ್ನು ಪಡೆಯಲಾರೆವು. ಯಶಸ್ಸು ನಮ್ಮ ಕೈಗೆಟುಕಲಾರದು. ಚೆಲ್ಲಿದ ಹಾಲಿಗಾಗಿ ಅತ್ತರೆ ನಮ್ಮ ಕೈಗೆ ಸಿಗುವುದಾದರೂ ಏನು? ಏನಾಯಿತೋ ಅದು ಆಗಲೇಬೇಕೆಂದಿತ್ತು. ಮಾಡಿದ ತಪ್ಪುಗಳು ತಿದ್ದಿಕೊಳ್ಳಲು ಅವಕಾಶವೀಯುವ ನಮ್ಮ ಗುರುಗಳು.
ಈ ಹತ್ತು ಮೆಟ್ಟಿಲುಗಳು ಮನಸ್ಸನ್ನು ಶಾಂತಿಯೆಡೆಗೆ ಒಯ್ಯುವುದಕ್ಕಾಗಿ ಸಹಾಯ ಮಾಡುವ ಸಾಧನಗಳು. ಇವುಗಳಲ್ಲಿ ನಾವು ಕೆಲವನ್ನಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು. ನಮ್ಮ ವ್ಯಕ್ತಿತ್ವವೇ ಬದಲಾಗುವುದರಲ್ಲಿ ಸಂಶಯವಿಲ್ಲ.
ಮಾಲತಿ ಮುದಕವಿ, ಧಾರವಾಡ.

Leave a Reply