ಹಿಂಗ್ಯಾಕೆ ನಾವೆಲ್ಲ…! ಭಾಗ-2

ಮಾಧ್ಯಮಗಳು

                                             —– ರಘೋತ್ತಮ ಕೊಪ್ಪರ್

ಇಂದು ಟಿವಿ ಚಾನೆಲ್‍ಗಳ ಸಂಖ್ಯೆ ಅಧಿಕವಾಗಿದೆ. ಎಲ್ಲ ಚಾನೆಲ್‍ಗಳೂ ಜನಮನ ಸೆಳೆಯೋಕೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನೊ ಅಥವಾ ದುರ್ಘಟನೆ, ಅಪರಾಧಗಳ ವೈಭವೀಕರಣವನ್ನು ಮಾಡುತ್ತಲೇ ಇದ್ದಾರೆ. ಟಿವಿ ಚಾನೆಲ್‍ಗಳು ಪ್ರಸಾರ ಮಾಡುತ್ತಿರುವ ಕೆಲವು ಕಾರ್ಯಕ್ರಮಗಳು ಕೇವಲ ಟಿ.ಆರ್.ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಗಾಗಿಯೇ ಮಾತ್ರ. ಅವುಗಳಿಂದ ಯಾರಿಗೆ ಎಷ್ಟು ಉಪಯೋಗ ಎಂಬುದು ಬೇರೆ ವಿಷಯ. ಉದಾಹರಣೆಗೆ -ಬ್ರೇಕಿಂಗ್ ನ್ಯೂಸ್! ಯಾವುದೊ ಒಂದು ಪ್ರಕರಣ!. ಅರ್ಧ ತಾಸು ಕಳೆದರೂ ಪ್ರಕರಣದ ಸಂಪೂರ್ಣ ಮಾಹಿತಿ ನಮಗೆ ತಿಳಿಯುವುದಿಲ್ಲ. ಅವರ ಸಂಭಾಷಣೆ ಹೀಗಿತ್ತು, ಇದೀಗ ಒಂದು ಬ್ರೇಕಿಂಗ್ ನ್ಯೂಸ್ ಬರ್ತಾ ಇದೆ ಬನ್ನಿ ನೋಡೋಣ ! ಟಿಂ ಟಿಂ ಟಿಂ ಪ್ರಕರಣ (ಯಾವುದೋ ಸ್ವಾಮಿಗಳ ಬಗ್ಗೆ ಇಲ್ಲವೇ ಕೊಳವೆ ಬಾವಿ, ಗಂಡ ಹೆಂಡಂದಿರ ಜಗಳ, ನಕಲಿ ವೈದ್ಯ, ಪ್ರಳಯ ಆಗುತ್ತಾ!, ಹೀಗೆ ಯಾವುದೊ ಒಂದು ಬ್ರೇಕಿಂಗ್ ನ್ಯೂಸ್.), ಬನ್ನಿ ಈ ಬಗ್ಗೆ ವಿಶೇಷ ಮಾಹಿತಿ ನೀಡಲು ನಮ್ಮ ಪ್ರತಿನಿಧಿ ಲೈನ್‍ನಲ್ಲಿ ದ್ದಾರೆ. ಹೇಳಿ ಪ್ರತಿನಿಧಿ ಇದೀಗ ಅಲ್ಲಿ ಏನು ಬೆಳವಣಿಗೆ ನಡಿತಾ ಇದೆ, ಎನೇನ ಮಾಹಿತಿ ನಿಮಗೆ ಸಿಕ್ತು. ಆಗ ಪ್ರತಿನಿಧಿ ಆ ಕಡೆಯಿಂದ, ಈಗ (ನಿರೂಪಕರ ಹೆಸರನ್ನು ಹೇಳುತ್ತ) ಇಲ್ಲಿ ಈ ಪ್ರಕರಣ ನಡೆದರೂ ಯಾವುದೇ ಮಾಹಿತಿ ಸ್ಪಷ್ಟವಾಗಿಲ್ಲ. ಇಲ್ಲಿದ್ದ ಜನರು ಈ ಬಗ್ಗೆ ಹೀಗೆ ಎನ್ನುತ್ತಿದ್ದಾರೆ. ಇಲ್ಲಿ ಯಾರ ತಪ್ಪು ಎಂದು ತಿಳಿಯುತ್ತಿಲ್ಲ.. .. .. ಹೀಗೆ ಅವರ ಮಾತು ಮಾತ್ರ ಮುಂದುವರೆಯುತ್ತೆ ಹೊರತು ಏನಾಯಿತು ಎಂಬುದು ಆಗ ವೀಕ್ಷಕರಿಗೆ ತಿಳಿಯುವುದೇ ಇಲ್ಲ.

ಈ ಮಾತು ನಡೆದ ಒಂದು ತಾಸಿನ ನಂತರ ಒಂದು ತಜ್ಞರ ಗುಂಪೊಂದು ಅಲ್ಲಿ ಹಾಜರು. ಅವರ ಚರ್ಚೆ ಶುರುವಾಗತ್ತೆ. ಆಗ ನಿರೂಪಕರು ಸಾರ್/ಮೇಡಮ್ ಇವತ್ತು ಈ ಘಟನೆ ನಮ್ಮನ್ನೆಲ್ಲ ಬೆಚ್ಚಿ ಬೀಳಿಸಿದೆ ಈ ಬಗ್ಗೆ ನೀವೇನು ಹೇಳುತ್ತಿರಾ, ನಿಮ್ಮ ಅಭಿಪ್ರಾಯ ತಿಳಿಸಿ. ಆಗ ಅವರು ಅದಕ್ಕೆ ಎನೇನೋ ಕಾರಣಗಳನ್ನು ಹೇಳಿ.. .. .. .. ಒಂದು ಇಡೀ ದಿನ ಇದನ್ನೇ ತೋರಿಸಲಾಗುತ್ತದೆ. ಅದನ್ನು ನೋಡುವ ನಾವು ಬಹುತೇಕ ಎಲ್ಲರೂ ಅದರ ಬಗ್ಗೆ ಬಯ್ಯುತ್ತೇವೆ ಆದರೂ ಅದನ್ನೇ ನೋಡುತ್ತೇವೆ.

ಒಂದೊಂದು ಬಾರಿ ಚಾನೆಲ್‍ನವರೂ ಹತ್ತು ಹಲವು ಬ್ರೇಕ್ ತೆಗೆದುಕೊಂಡರು ಅಯ್ಯೋ ಬ್ರೇಕು ಎಂದು ರಿಮೋಟ್ ಕೈ ಯಲ್ಲಿ ಹಿಡಿದು ಐದು ನಿಮಿಷ ಬೇರೆ ಚಾನೆಲ್ ನೋಡಿ ನಂತರ ಬ್ರೇಕಿಂಗ್ ನ್ಯೂಸ್‍ಗೆ ಮರಳುತ್ತೇವೆ.

ಕೆಲವು ಚಾನೆಲ್ ಗಳಿಗೆ ಚರ್ಚಾ ಗುಂಪೊಂದು ರೆಡಿನೇ ಇರುತ್ತೆನೋ ಎಂಬಂತೆ ನಮ್ಮೆಲ್ಲರಿಗೆ ಭಾಸವಾಗುತ್ತೆ. ಪ್ರಕರಣ ನಡಿಯೋದೆ ತಡ ಇವರು ತಟ್ಟನೆ ಪ್ರತ್ಯಕ್ಷ. ಚಾನಲ್ ನವರು ನಮ್ಮ ತಾಳ್ಮೆ ಪರೀಕ್ಷಿಸುತ್ತಿದ್ದಾರೆಯೋ ಅಥವಾ ಚಾನೆಲ್ ನವರು ಏನೇ ತೋರಿಸಿದರೂ ನಾವಿದ್ದೇವೆ ನೋಡಲು ಎಂದು ಶೆಡ್ಡು ಹೊಡೆದು ನಾವೇ ನಿಂತಿದ್ದೇವೆಯೋ ತಿಳಿಯದು. ಮರುದಿನ ಟಿವಿ ಆನ್ ಮಾಡಿ ನೋಡಿ, ಆ ಸುದ್ದಿಯೇ ಮಾಯ! ಅದರ ಬದಲು ಬೇರೊಂದು ಬ್ರೇಕಿಂಗ್ ನ್ಯೂಸ್ ಇರುತ್ತೇ. ಇಲ್ಲಿ ಚಾನಲ್ ನವರು ತೋರಿಸಲೇ ಬಾರದು ಎಂದಲ್ಲ. ಅವರಷ್ಟು ತೋರಿಸಿದರೂ ನಾವು ಬಿಡದೇ ನೋಡುತ್ತಿವಲ್ಲ, ನೋಡಿದರೂ ಅವರು ನಮಗೆ ಏನು ತಿಳಿಸಲು ಬಯಸುತ್ತಾರೆ ಎಂಬುದನ್ನು ನಾವು ಮರೆಯುತ್ತೇವೆ ಎಂಬುದು ಗಮನಾರ್ಹ.

ಇಲ್ಲಿರುವ ಪ್ರಕರಣಗಳ ಬಗ್ಗೆ ಅಷ್ಟೊತ್ತು ತೋರಿಸಿದರೂ ಜನರಿಗೆ ಬುದ್ಧಿ ಬರಲಿಲ್ಲ ಎಂಬುದು ಮಾಧ್ಯಮದವರ ವಿಷಾದ, ನಮಗೂ ಜಗಳ, ಅತ್ಯಾಚಾರ, ಕೊಳವೆ ಬಾವಿ, ಅಪಘಾತ ಸುದ್ದಿಗಳು ಹೊಸತಲ್ಲ ಎಂಬಂತೆ ನಾವೂ ಎಲ್ಲರನ್ನು ಎಲ್ಲವನ್ನು ಬಯ್ಯುತ್ತ ಇರುತ್ತೇವೆ ಆದರೂ ನೋಡುತ್ತಾನೇ ಇರುತ್ತೇವೆ. …………..ಹಿಂಗ್ಯಾಕೆ ನಾವೆಲ್ಲ…!

Leave a Reply