ಅಧ್ಯಯನ ಮತ್ತು ಸಂಶೋಧನೆ

ಅಧ್ಯಯನ ಮತ್ತು ಸಂಶೋಧನೆ

ಸಂಶೋಧನೆ ಮತ್ತು ಕಲಿಕೆಯ ಬಗ್ಗೆ ಇತ್ತೀಚಿನ ದಿನಗಳಲ್ಲಿ ಯಾಕೋ, ಏನೋ ಕಾಡುತ್ತಿರುವ ಒಂದು ವಿಚಾರ. ಒಂದು ಕಾಲೇಜು, ಒಂದು ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮತ್ತು ಕಲಿಕೆ ವಿಧಾನಗಳು ಹೇಗೆ ಇರಬೇಕು, ಹೇಗೆ ಇವೆ ಅನ್ನುವ ವಿಚಾರಗಳೆ. ಇದರಲ್ಲಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನು ಬೇರೆ ಬೇರೆಯಾಗಿ ಕಾಣಬೇಕೆ ಅಥವಾ ಎರಡನ್ನು ಒಂದೇ ದೃಷ್ಟಿಕೋನದಲ್ಲಿ ನೋಡಬೇಕೆ ಅನ್ನುವುದು ಮಹತ್ತರವಾದ ಪಾತ್ರವಹಿಸುತ್ತದೆ. ಇದರಲ್ಲಿ ಇನ್ನೊಂದು ಕಹಾನಿ ಮೆ twist. ಅಂದರೆ ಕೆಲವು ಕಾಲೇಜುಗಳಿಗೆ ಸ್ವಾಯತ್ತತೆ ನೀಡಿ ಇನ್ನೂ ಹೆಚ್ಚಿನದನ್ನು ಅಪೇಕ್ಷಿಸುವುದು. ಕೇಂದ್ರ ಸರಕಾರದ MHRD ಯಿಂದ ಹಿಡಿದು ರಾಜ್ಯಗಳ ಆಡಳಿತದವರೆಗೆ ಎಲ್ಲರೂ ಸಂಶೋಧನೆ/ ಕಲಿಕೆ ಎರಡರ ಬಗ್ಗೆ ಪ್ರಶ್ನೆಗಳನ್ನು ಕೇಳುವದು. ಅದರಲ್ಲೂ ವಿಶೇಷತಃ ಯಾವುದೂ ಗೊತ್ತಿಲ್ಲದೇ, ಪ್ರಶ್ನೆ ಕೇಳುವ ಅಧಿಕಾರ ಹೊಂದಿರುವುದು. ಕಾಲೇಜು, ವಿಶ್ವವಿದ್ಯಾನಿಲಯಗಳು ಇಂದು ಹೆಚ್ಚಿನ ಮಟ್ಟಿಗೆ ಪಠ್ಯಕ್ರಮ ಕಲಿಸುವುದು, ಪರೀಕ್ಷೆ ನಡೆಸುವುದು, ಮೌಲ್ಯಮಾಪನ ಮತ್ತು ಪದವಿ ಪ್ರದಾನ ಮತ್ತು ಸಂಲಗ್ನತೆ ನೀಡುವುದು. ಇದೇ ಕಾರ್ಯಗಳಲ್ಲಿ ಮುಳುಗಿ ಅದೇ ಅವಕ್ಕೆ ಸಾಕಾಗಿ ಹೋಗಿದೆ. ಅಂತಹ ಪರಿಸ್ಥಿತಿ ಬಂದು ಹೋಗಿದೆ. ಸಂಶೋಧನೆಯ ಕೆಲಸವಂತೂ ನಿಂತ ಅಥವಾ ಆಮೆ ವೇಗದಲ್ಲಿ ನಡೆಯುತ್ತಿರುವುದು. ಎಲ್ಲರ ಗಮನಕ್ಕೆ, ಅನುಭವಕ್ಕೆ ಬಂದ ಸಂಗತಿ. ಇಂದು ಹೆಚ್ಚಿನ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಸಂಶೋಧನೆ ಎಂದರೆ Ph.D  ಪದವಿ ಪಡೆಯುವುದಾಗಿದೆ. ಪ್ರತಿಯೊಬ್ಬ ಪ್ರಾಧ್ಯಾಪಕನ Ultimate ಗುರಿ Ph.D  ಪದವಿ ಪಡೆಯುವುದು ಅಥವಾ Ph.D  ಪದವಿ ಪಡೆದು ಕಾಲೇಜು/ವಿಶ್ವವಿದ್ಯಾನಿಲಯಕ್ಕೆ ಕೆಲಸಕ್ಕೆ ಸೇರುವುದು ಅಥವಾ ಯಾವುದಾದರೂ ಧನಸಹಾಯ ಪಡೆಯಲು ಬೇಕೆಂದರೆ ಡಾಕ್ಟರೇಟ್‍ಗಳ ಸಂಖ್ಯೆ ಜಾಸ್ತಿಯಾಗಬೇಕು ಅನ್ನುವುದು. ಇನ್ನೂ ಈಗಿದ್ದ ಡಾಕ್ಟರೇಟ್‍ಗಳ ಕಡೆ ಒಮ್ಮೆ ದೃಷ್ಟಿ ಹಾಕಿದರೆ ಯೋಗ್ಯತೆ, ಗುಣಮಟ್ಟದ ಬಗ್ಗೆ ಒಂದಿಷ್ಟು ವಿಶ್ಲೇಷಣಾತ್ಮಕ ದೃಷ್ಟಿ ಹಾಯಿಸಿದರೆ ಲಕ್ಷ್ಯಕ್ಕೆ ಬರುವ ಸಂಗತಿಗಳು ಯಾವುವೆಂದರೆ,
Ph.D  ಪದವಿಗಳಲ್ಲಿ ಕಲೆ, ಸಂಗೀತ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ಭಾಷೆ, ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರಗಳನ್ನು ಅಂತಾ ಗುರುತಿಸಿದರೆ, ಯಾವುದರಿಂದ ಏನು ಆಗಿದೆ, ಸಮಾಜದ ಮೇಲೆ, ಆಡಳಿತದ ಮೇಲೆ, ತಂತ್ರಜ್ಞಾನದಲ್ಲಿ, ವೈದುಕೀಯ ಕ್ಷೇತ್ರದಲ್ಲಿ ಅಂತಾ ನೋಡಿದರೆ ನಿರಾಶಾದಾಯಕವಾದ ಚಿತ್ರ ಕಾಣುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತವಾಗಿದೆ. ಯಾವುದಾದರೂ ಸಂಶೋಧನೆ ಜೀವನ ಶೈಲಿ, ಚಿಂತನೆ ಕ್ರಮ ಬದಲಿಸಿವೆಯಾ? ಅದಕ್ಕೆ ಕಾರಣ ಅದರ ಬಗ್ಗೆ ಸಂಶೋಧನೆಗಳು ನಡೆದಿದ್ದು, ಹೊಸದು ಸಿಕ್ಕಿದ್ದು ಎಲ್ಲವೂ ಭಾರತದ ನೆಲದಿಂದ ಅಲ್ಲ. ಹೊರದೇಶದಲ್ಲಿಯ ಕೆಲಸ, ಸಂಶೋಧನೆ ಮಾಡಿದವರು. ಯಾರೇ ಇದ್ದರೂ ತಂತ್ರಜ್ಞಾನಕ್ಕೆ ನಾವು ಬೆಲೆ ನೀಡಲೇಬೇಕು, ನೀಡಿದ್ದೇವೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ ಒಮದು ಇದರಲ್ಲಿ ಬೇರೆಯಾಗಿ ನಿಲ್ಲುತ್ತಿದೆ. ಸ್ವಾಯತ್ತತೆ, ಸ್ವವಿಳಾಸ ಪಡೆದ ಏಕಮೇವ ಸಂಸ್ಥೆ ಭಾರತೀಯರು ಭಾರತದ ನೆಲದಲ್ಲಿ ಸಂಶೋಧನೆ ಮೂಲಕ ಎಷ್ಟು ಪೇಟೆಂಟ್ ಪಡೆದಿದ್ದಾರೆ. ಯಾವ ಸಂಶೋಧನೆಯಿಂದ ಜೀವನಶೈಲಿ, ಚಿಂತನ ಕ್ರಮ ಬದಲಾಗಿದೆ. ಭಾಷೆಯಲ್ಲಿ ಅದು ಪ್ರಾದೇಶಿಕ ಭಾಷೆ, ರಾಷ್ಟ್ರೀಯ ಭಾಷೆ ಯಾವುದೇ ಆಗಿರಲಿ ಅದರಿಂದ Ph.D  ಪದವಿ ಬಿಟ್ಟು ಮತ್ತೇನು ಲಾಭವಾಗಿದೆ? ನಮ್ಮ ಎಲ್ಲ ವೈದ್ಯರು, ಯಾವ ಸಂಶೋಧನೆ ಮಾಡಿದ್ದಾರೆ. ಅವರ ಸೇವಾಕ್ಷೇತ್ರದಲ್ಲಿ ಪ್ರಾಕ್ಟೀಸ್ ಮಾಡುತ್ತ ರೋಗಪೀಡಿತರ ಶುಶ್ರೂಷೆ-ಆರೈಕೆ ನಿವಾರಣೆ ಬಿಟ್ಟರೆ ಮತ್ತೆ ಬೇರೆ ಬೇರೆ ಕ್ಲಿನಿಕಲ್ ಸಂಶೋಧನೆ ನಡೀತಿದ್ರೆ ಅದು ಔಷಧ ಕಂಡುಹಿಡಿದು ಗೊತ್ತು. ರೋಗಿಗಳಿಗೆ ಗೊತ್ತಿರುತ್ತದೊ ಇಲ್ಲವೊ ಎಂಬುದು ಅನುಮಾನದ ಸಂಗತಿ. ಯಾಕೆಂದರೆ ಇಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಅವಧಿಯಲ್ಲಿ ಕ್ಲಿನಿಕಲ್ ಪರೀಕ್ಷೆಯಾದೀತು. ಹೀಗೆ ಆಯಿತು. ಹೇಗೆ ಆಯಿತು ಎಂಬುದರ ಸಾರಾಂಶ ಸಾರ್ವಜನಿಕರಿಗೆ ತಿಳಿಯುವಂತೆ ಪ್ರಚಾರ, ಪ್ರಸಾರ ಪಡೆದಿಲ್ಲ. ಇನ್ನು ನಮ್ಮ ನಿರ್ವಹಣೆ ಮತ್ತು ಇಂಜನಿಯರಿಂಗ್ ಕ್ಷೇತ್ರಗಳಲ್ಲಿಯ ಸಂಶೋಧನೆ ಎಷ್ಟರಮಟ್ಟಿಗೆ ಕ್ರಾಂತಿ ಉಂಟು ಮಾಡಿವೆ. ದಿಢೀರ್ ಆದ ಬದಲಾವಣೆ ತಂದಿವೆ ಅಂತಾ ವಿಚಾರ ಮಾಡಿದಾಗ್ಯೂ ಇದೇ ಪರಿಸ್ಥಿತಿ. IIT ಮತ್ತು NITಗಳಲ್ಲಿಯ ಸಂಶೋಧನೆಗಳಿಂದಲೂ ಏನು ಚಮತ್ಕಾರವಾಗುವ ಬದಲಾವಣೆ ಆಗಿದೆ. ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ಕ್ಷೇತ್ರಗಳಲ್ಲಿ ಪ್ರಬಂಧಗಳ ಶೀರ್ಷಿಕೆಯಲ್ಲಿ ಅಲ್ಪಸ್ವಲ್ಪ ಬದಲಾವಣೆ ಅಥವಾ ತೀರಾ ಚಿಕ್ಕದಾದ ಗಣನೆಗೆ ಬಾರದ ಹಾಗೆ ಸಂಶೋಧನ ಕ್ಷೇತ್ರವನ್ನು ಹೋಬಳಿ ಮಟ್ಟಕ್ಕೆ, ತಾಲೂಕು ಮಟ್ಟಕ್ಕೆ, ರಾಜ್ಯದ ಮಟ್ಟಿಗೆ ಹೊಂದಿಸಿಕೊಂಡು ಒಂದು ತುಲನಾತ್ಮಕ ಮೌಲಿಕ ಅಧ್ಯಯನವನ್ನು ಹೊಸ ಪದವಿ ಗಿಟ್ಟಿಸಿಕೊಳ್ಳುವ ಎಲ್ಲ ಸ್ವರೂಪಗಳನ್ನು ಹೊಂದಿರುತ್ತವೆ. Ph.D  ಪದವಿ ನಂತರದ ಸಂಶೋಧನೆಗಳಂತೂ ಕೇವಲ ಬೆರಳೆಣಿಕೆಯಷ್ಟು. ಅವೂ ಸಹಿತ ಎಲ್ಲಿಯೋ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಕೃಪಾಪೋಷಿತವಾಗಿರುತ್ತವೆ. Industry ಪ್ರಾಯೋಜಿತ ಸಂಶೋಧನೆಗಳು ಕಡಿಮೆ ಇದ್ದರೂ IIT ಮತ್ತು NITಗಳಿಗೆ ಸೀಮಿತವಾಗಿರುತ್ತವೆ. ಅವಕ್ಕೂ ಭಾರತೀಯರ ಜೀವನ ಶೈಲಿ, ಚಿಂತನಕ್ರಮ Instant ಆಗಿ ಬದಲಾವಣೆಗೆ ತಂದಿದ್ದೇವೆ ಅನ್ನುವುದು ಸಹ ಪ್ರಶ್ನೆಯೆ ಉಳಿದಿದೆ. ಭಾರತ ಜಗತ್ತಿಗೆ ಶೂನ್ಯವನ್ನು ನೀಡಿತು. ಶ್ರೀನಿವಾಸ ರಾಮನುಜನ್ ನಮ್ಮವರು ಅನ್ನುವ ನಾವು ಗಣಿತ ವಿಷಯದಲ್ಲಿ ಯಾವ ಘನಂದಾರಿ ಸಂಶೋಧನೆಗಳನ್ನು ನಮ್ಮ ಗಣಿತಜ್ಞರು ಮಾಡಿದ್ದಾರೆ ಅನ್ನುವ ವಿಷಯವೂ ಚಿಂತನೆಗೆ ಹಚ್ಚುತ್ತದೆ. ಒಂದು ವಿಶ್ವವಿದ್ಯಾಲಯದ ಒಂದು ಕಾಲೇಜಿನ ಸಂಶೋಧನಾ ಸಂಸ್ಕೃ ತಿಯ ಸಂಕೇತವು ಪೋಸ್ಟ್ ಡಾಕ್ಟರಲ್ ಸಂಶೋಧನೆಗಳು ಭರಪೂರವಾಗಿರುವುದು. ಸಂಶೋಧನ ಸಂಸ್ಕೃತಿಯಾಗಿ ಕಾಣಿಸಿಕೊಳ್ಳುವುದು ಹೆಚ್ಚಿನ ಜನ ಪ್ರಾಧ್ಯಾಪಕರು, ಮುಖ್ಯಸ್ಥರು, ವಿದ್ಯಾರ್ಥಿಗಳ ಒಂದೊಂದು ರೀತಿಯ ಸಂಶೋಧನ ವಿಷಯಗಳಲ್ಲಿ ತೊಡಗಿಕೊಂಡಿರುವರು. ಕನಿಷ್ಟ ಪಕ್ಷ ಸ್ವತಂತ್ರವಾದ ಮೂಲ ಸಂಶೋಧನ ಪ್ರಬಂಧಗಳನ್ನು ಬರೆದು ಮಂಡಿಸುವುದು. ಸಂಶೋಧನ ನಿಯತಕಾಲಿಕೆಗಳಲ್ಲಿ ಪ್ರಕಟಣೆ ಮಾಡುವುದು. ಪ್ರತಿಯೊಂದು ಪ್ರಬಂಧ ಯಾರಿಗೆ ಎಷ್ಟು ಪ್ರಯೋಜನವಾಗಿದೆ, ಎಷ್ಟು ಜನ ಓದಿದ್ದಾರೆ ಎನ್ನುವ ಅಂಶಗಳು. ಅಷ್ಟೇ ಅಲ್ಲದೆ ವಾಣಿಜ್ಯಾತ್ಮಕ ಪ್ರಯೋಜನೆ, ಪೇಟೆಂಟ್‍ಗಳನ್ನು ನೋಡಿದರೆ ಮತ್ತು ಸಂಭವನೀಯ ಪರಿಣಾಮಗಳ ಬಗ್ಗೆ ಇವೆಲ್ಲವುಗಳು ಯಾವ ಯಾವ ರೀತಿಯಲ್ಲಿ ಆ ಸಂಸ್ಥೆಯಲ್ಲಿ ಸಾಕಾರಗೊಳ್ಳುತ್ತವೆ ಅನ್ನುವುದು ಪ್ರಮುಖ ಅಂಶ. ಸಂಶೋಧನೆ ಯಾವ ಹಂತದಿಂದ ಆರಂಭವಾಗಬೇಕು ಅನ್ನುವುದು ಸಹ ಇನ್ನೂ ಚರ್ಚೆಯ ಪ್ರಶ್ನೆಯಾಗಿದೆ. ಹೈಸ್ಕೂಲ್ ಮಟ್ಟದಿಂದಲೇ ಈಗಿನ ಪದ್ಧತಿಯಲ್ಲಿ ಪಠ್ಯಕ್ರಮದಲ್ಲಿ ಮಾಡಿ-ನೋಡಿ, ನೋಡಿ-ಕಲಿ, ಕಲಿ-ನಲಿ Socially useful product work (supw)  ಅಂತಾ ಏನೆಲ್ಲ ಶೀರ್ಷಿಕೆಯಲ್ಲಿ ಕಲಿಸುವ ಕ್ರಿಯೆ ಆದರೂ ಅದರ ಪರಿಣಾಮ ನಿರೀಕ್ಷಿತ ಮಟ್ಟಕ್ಕಾಗಿಲ್ಲ. ಮಕ್ಕಳ ವಿಜ್ಞಾನ ಕಾಂಗ್ರೆಸ್ ಅನ್ನುವ ವಾರ್ಷಿಕ ಶಾಸ್ತ್ರವಾದರೂ ಅದು ಎಲ್ಲ ಶಾಲೆಗಳನ್ನು ಮುಟ್ಟುವುದೇ ಇಲ್ಲ. ಸ್ವತಃ ಹಲವು ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ನನಗೆ ಗೊತ್ತಿದ್ದ ಸಂಗತಿ ಎಲ್ಲ ಶಾಲೆಗಳು ಭಾಗವಹಿಸುವುದಿಲ್ಲ. ಎಲ್ಲರಿಗೂ ಗೊತ್ತಾಗುವಂತೆ ಮಾಡುವುದಿಲ್ಲ. ಕನ್ನಡ, ಇಂಗ್ಲೀಷ್ ಮಾಧ್ಯಮ ವಿದ್ಯಾರ್ಥಿ, ಖಾಸಗಿ, ಸರ್ಕಾರಿ, ಅನುದಾನಿತ ಶಾಲೆಗಳು, ಹಣ ಕಡಿಮೆ ಎಂದು ಯಾರಿಗೂ ತಿಳಿಸದೇ ಗಪ್‍ಚಿಪ್ ಆಗಿ ಶಾಸ್ತ್ರ ಮುಗಿಸುವ ಹವಣಿಕೆಯಲ್ಲಿ ಎಲ್ಲರೂ ಇರುತ್ತಾರೆ. ಹೀಗಾಗಿ ಸರ್ಕಾರದ ಆಶಯಗಳು ಈಡೇರುವುದಿಲ್ಲ. ಇನ್ನೂ ಮುಂದಿನದು ಮತ್ತೊಂದು ವಿಶೇಷ SSLC  ಯಲ್ಲಿ ಪರೀಕ್ಷೆಗೆ ಕೂಡುವುದು ಮತ್ತು ಪಾಸು-ನಪಾಸು ಆಗುವುದು. ಮುಂದೆ ಎರಡು ವರ್ಷದ ಅಥವಾ ಮೂರು ವರ್ಷದ ಡಿಪ್ಲೋಮಾ ಅಲ್ಲಿ ಮುಂದಿನ ಡಿಗ್ರಿಗಳಿಗೆ ಹೊರಗಿನ ತಯಾರಿ ಹೊರತು ಮತ್ಯಾವ ಸಂಶೋಧನ ಸಂಸ್ಕೃತಿಯ ಪೋಷಣೆ ಆಗುವುದಿಲ್ಲ. ಅದರ ಮುಂದೆ ಅದೇ ಗೋಳು. ಪರೀಕ್ಷೆಗಾಗಿ ಪಠ್ಯಕ್ರಮ ಅದಕ್ಕೆ ಪರೀಕ್ಷೆ, ಪದವಿ, ಕೆಲಸ ಹೀಗೆ ಚಕ್ರ ತಿರುಗುವುದು. ಕೆಲಸ ಸಿಕ್ಕಿಲ್ಲ ಅಂದರೆ ಸ್ನಾತಕೋತ್ತರ ಪದವಿಗೆ ಅರ್ಜಿ ಗುಜರಾಯಿಸುವುದು. ಅವರಿಗೆ ಕಲಿಸುವ ಪ್ರಾಧ್ಯಾಪಕರಿಗೆ Ph.D  ಸಿಕ್ಕಿರಬಹುದು ಅಥವಾ ಯಾವುದೋ ಯೋಜನೆಯಡಿಯಲ್ಲಿ ಸಹಾನುಭೂತಿಯ ಸಂಶೋಧನ Ph.D  ಪದವಿಗೆ ಮತ್ತೆ ಪ್ರಮೋಶನ್, ಎರಡೋ ಮೂರೋ ಇನ್‍ಕ್ರಿಮೆಂಟ್‍ಗಳು, ಹೀಗೆ ಮತ್ತೊಂದು ಚಕ್ರ. ಇದರಲ್ಲಿ Ph.D  ಬೇಕೇಬೇಕು ಅನ್ನುವ ವಿಶ್ವವಿದ್ಯಾನಿಲಯ ಧನಸಹಾಯ ಮಂಡಳಿ ಮತ್ತು ಸರ್ಕಾರಗಳ ನೀತಿ ನಿಯಮಾವಳಿಗಳು ವೇಗೋತ್ಕರ್ಷ ಸಹಾನುಭೂತಿಗಳನ್ನು ಹುಟ್ಟಿಸುವ ಕ್ರಿಯೆಗಳು. ಇದರಲ್ಲಿ ಕಲಿಕೆಯ ಪಾತ್ರವೇನು ಅನ್ನುವ ನಿರ್ಧಾರವಾಗುವುದಿಲ್ಲ.
ಸಂಶೋಧನೆ, ಕಲಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರತಿ ಸಂಶೋಧನೆಯ ಚಟುವಟಿಕೆಗಳು ಕಲಿಕೆಯ ಪಾಠಗಳು. ಪ್ರತಿ ಪಾಠದ ಕೊನೆಯ ಸಾರಾಂಶವೇ, ಒಳತಿರುಳೇ ಪಾಠದ ಸಂಶೋಧನೆಯ ಅರ್ಥ. ಪ್ರತಿ ವಿಷಯದ ಪಾಠ ಬೋಧನೆ ಹೊಸ ವಿಷಯವನ್ನಂತೂ ವಿದ್ಯಾರ್ಥಿಗಳಿಗೆ ತಿಳಿಸುತ್ತದೆ. ಪ್ರತಿ ಪಾಠದ ಅರ್ಥ ಮಾಡಿಕೊಳ್ಳುವ ವಿಧಾನವು ಸಹ ಸಂಶೋಧನೆಯ ಮಂತ್ರತಂತ್ರಗಳಾದ ಒಂದು ಸಿದ್ಧಾಂತ ಒಂದು ಅಧ್ಯಯನ, ಒಂದಿಷ್ಟು data collection ��ಅವರ ವಿಶ್ಲೇಷಣೆ ಇವುಗಳನ್ನು ಅವಲಂಬಿಸಿರುತ್ತದೆ. ಒಬ್ಬ ಸಂಶೋಧಕ ಅದನ್ನು ಸವಿಸ್ತಾರವಾಗಿ ದಾಖಲೆಗಳೊಂದಿಗೆ, ಚೇತನಪೂರ್ವಕವಾಗಿ ಬೋಧಿಸಿದಾಗ ವಿದ್ಯಾರ್ಥಿಗಳಿಗೆ ಅರಿವಾಗಿ ಅವರಲ್ಲಿ ಸ್ವಾಭಾವಿಕವಾಗಿ ಅವರು ಹೊಸ ಅರ್ಥ ಹುಡುಕಲು, ಹೊಸತನ್ನು ಕಂಡು ಹಿಡಿಯಲು, ಹೊಸ ಆವಿಷ್ಕಾರಗಳಿಗಾಗಿ ಸನ್ನದ್ಧರಾಗುತ್ತಾರೆ. ಸಂಶೋಧನೆ ಮತ್ತು ಕಲಿಕೆ ಎರಡೂ ಸಹ ವಿದ್ಯಾರ್ಥಿ ಕೇಂದ್ರಿತ ಶೈಕ್ಷಣಿಕ ಚಟುವಟಿಕೆಯಾಗುವುದು ಅನಿವಾರ್ಯ; ಮತ್ತು ಗುಣಮಟ್ಟ ಸುಧಾರಿಸುವಲ್ಲಿ ಒಂದು ಹೆಜ್ಜೆಯಾಗುತ್ತದೆ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply