ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!

ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕರು!

ನನಗೆ ಗೊತ್ತಿರುವ ಉದ್ಯಮಿಯೊಬ್ಬರು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿಯುತ್ತಿದ್ದರು. ದೇಶವಿದೇಶ ಸುತ್ತುತ್ತಿದ್ದರು. ತಾವೇ ಆಫೀಸಿನಲ್ಲಿ ಕೂತು ಅಕೌಂಟ್ಸು ನೋಡುತ್ತನಿ, ಸರಿಯಾಗಿ ಕಸ ಗುಡಿಸಿದ್ದಾರಾ ಅಂತ ಗಮನಿಸುತ್ತ, ಯಾರು ರಜೆ ಹಾಕಿದ್ದಾರೆ ಅನ್ನುವುದನ್ನು ಗೊತ್ತು ಮಾಡಿಕೊಳ್ಳುತ್ತ, ಆಫೀಸಿಗೆ ಬಂದವರೊಂದಿಗೆ ತಾವೇ ಮಾತಾಡುತ್ತ, ವ್ಯವಹಾರಕ್ಕೆ ಬಂದೊಡನೆ ಹತ್ತು ಪೈಸೆಗೂ ಜಗಳ ಕಾಯುತ್ತ, ಬ್ಯಾಂಕಿನವರು ಹತ್ತುರೂಪಾಯಿ ಬ್ಯಾಂಕ್‌ ಛಾರ್ಜು ಹಾಕಿದರೂ ಯಾಕೆಂದು ವಿಚಾರಿಸಿ, ಅದನ್ನು ರಿವರ್ಸು ಮಾಡುವಂತೆ ಒತ್ತಾಯಿಸುತ್ತ ಇರುತ್ತಿದ್ದರು. ಅವರ ಕಣ್ತಪ್ಪಿಸಿ ಏನೂ ನಡೆಯುತ್ತಿರಲಿಲ್ಲ. ಅವರ ಮನೆಯವರೇ ಅವರ ಕಟ್ಟುನಿಟ್ಟಿನ ಗುಣ ಇಷ್ಟಪಡದೇ ಜಿಪುಣಾಗ್ರೇಸರ ಅನ್ನುತ್ತಿದ್ದರು. ಇವನೇನು ಹೋಗುವಾಗ ತಗಂಡು ಹೋಗ್ತಾನಂತೋ ಅಂತ ಅವರ ತಮ್ಮನೇ ಗೊಣಗಾಡುತ್ತಿದ್ದ.
ಆಫೀಸು ಮುಗಿದ ನಂತರ ಅವರು ನಮ್ಮೆಲ್ಲರ ಜೊತೆ ಮಾತಿಗೆ ಕೂರುತ್ತಿದ್ದರು. ಆಗೆಲ್ಲ ಜಿಡ್ಡು ಕೃಷ್ಣಮೂರ್ತಿ, ಭಗವದ್ಗೀತೆಯ ಕುರಿತು ಮಾತಾಡುತ್ತಿದ್ದರು. ವೈರಾಗ್ಯವೇ ಮೈವೆತ್ತಂತೆ ವಾದಿಸುತ್ತಿದ್ದರು. ಯಾರು ಹಿತವರು ನಿನಗೆ ಈ ಮೂವರೊಳಗೆ, ಕಾಲನ ದೂತರು ಕಾಲಿಡಿದೆಳೆವಾಗ ತಾಳು ತಾಳೆಂದರೆ ತಾಳುವರೇ, ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ, ಲೊಳಲೊಟ್ಟೆ ಬದುಕು ಲೊಳಲೊಟ್ಟೆ- ಮುಂತಾದ ದಾಸರ ಪದಗಳನ್ನು ಗಮನವಿಟ್ಟು ಕೇಳುತ್ತಿದ್ದರು. ಐಷಾರಾಮಿ ಜೀವನದ ನಿರರ್ಥಕತೆಯನ್ನು ಸಾರುವ ಶೆಲ್ಲಿಯ ಓಜಿಮಾಂಡಿಯಸ್‌ ಪದ್ಯದ ಸಾಲುಗಳನ್ನು ಹೇಳುತ್ತಿದ್ದರು.
ಅವರ ಕಚೇರಿಯ ವರ್ತನೆಗೂ ಹೊರಗಿನ ವರ್ತನೆಗೂ ಸಂಬಂಧವಿಲ್ಲ ಅಂತ ನಾವೆಲ್ಲ ತಮಾಷೆ ಮಾಡುತ್ತಿದ್ದೆವು. ಅದು ಅವರಿಗೂ ಗೊತ್ತಿತ್ತು. ಒಮ್ಮೆ ಯೂಜಿ ಕೃಷ್ಣಮೂರ್ತಿಯವರನ್ನು ನೋಡಲು ಹೋದಾಗ ಈ ಬಗ್ಗೆ ಅವರನ್ನೇ ನೇರವಾಗಿ ಕೇಳಿದ್ದೆವು. ಆಗ ಅವರೆಂದಿದ್ದರು:
“ವೈರಾಗ್ಯ ಇದ್ದಾಗಲೇ ಜೀವನವನ್ನು ಗಾಢವಾಗಿ ಪ್ರೀತಿಸೋದಕ್ಕೆ ಆಗೋದು. ವೈರಾಗ್ಯ ಅಂದರೆ ಏನೂ ಕೆಲಸ ಮಾಡದೇ, ಸಂಪಾದನೆ ಮಾಡದೇ ಇರೋದಲ್ಲ. ಸಂಪಾದನೆ ಮಾಡಿರೋದು ನಶ್ವರ ಅಂತ ಗೊತ್ತಿರೋದು. ನನಗೆಷ್ಟು ಬೇಕು ಅಂತ ತಿಳ್ಕೊಂಡಿರೋದು. ನಾನು ಪರಮ ವಿರಾಗಿ ಅಂತ ದುಡಿಯದೇ ಇದ್ದುಬಿಡ್ತೀನಿ ಅಂದೊRಳಿ. ಆಗ ನಾನು ಭಿಕಾರಿಯಾಗಿರ್ತೀನಿ. ಭಿಕ್ಷುಕನ ವೈರಾಗ್ಯಕ್ಕೆ ಅರ್ಥವಿಲ್ಲ. ಸಂಪತ್ತಿರುವವನು ಮಾತ್ರ ವಿರಾಗಿ ಆಗಬಲ್ಲ. ಅರಮನೆಯಲ್ಲಿ ಹುಟ್ಟಿದ ಸಿದ್ಧಾರ್ಥ ಅದರ ನಶ್ವರತೆಯನ್ನು ತಿಳಕೊಂಡು ಬಿಟ್ಟು ಹೋದಾಗಲೇ ಅದನ್ನು ತ್ಯಾಗ ಅನ್ನೋದು. ತ್ಯಾಗ ಮಾಡೋದಕ್ಕೆ ಏನಾದರೂ ಇರಬೇಕಲ್ವ ನಮ್ಮ ಹತ್ರ. ನಾನು ಲಕ್ಷಾಂತರ ದುಡೀತೀನಿ ನಿಜ. ಆದರೆ ಬಳಸೋದು ಎಷ್ಟು? ನಮ್ಮನೇಲಿ ಕಡಿಮೆ ತಿನ್ನೋನು ನಾನು. ಕಡಿಮೆ ಸುತ್ತಾಡೋನು ನಾನು, ವರ್ಷಕ್ಕೆ ನಾಲ್ಕೇ ಜೊತೆ ಬಟ್ಟೆ ತಗೊಳ್ಳೋದು. ನನ್ನ ಹತ್ರ ಇರೋದು ಎಂಟು ವರ್ಷ ಹಳೆಯ ಕಾರು. ನನಗೆ ಷೋಕಿ ಇಲ್ಲ. ನಾನು ಇಷ್ಟೊಂದು ಕೆಲಸ ಮಾಡದೇ ಹೋದರೆ ಕಂಪೆನಿ ಮುಚ್ಚಿಹೋಗತ್ತೆ. ಸಂಬಳ ಜಾಸ್ತಿ ಮಾಡಕ್ಕಾಗಲ್ಲ. ನನ್ನ ಜೊತೆ ಇರೋರಿಗೆ ಅನ್ಯಾಯ ಆಗುತ್ತೆ. ನಮ್ಮ ನೌಕರರಿಗೆ ತೊಂದರೆ ಆಗುತ್ತೆ. ಅವರು ಇವತ್ತು ಕೈ ತುಂಬ ಸಂಬಳ ತಗೋತಿರೋದು ನಾನು ಜಿಪುಣತನ ಮಾಡೋದರಿಂದ, ಹಲ್ಲು ಕಚ್ಚಿ ದುಡಿಯೋದರಿಂದ. ಅವರೂ ಹಾಗೆ ಕೆಲಸ ಮಾಡಬೇಕು. ಸಂಪಾದನೆ ಮಾಡಬೇಕು. ಅದು ವ್ಯರ್ಥ ಅಂತಾನೂ ತಿಳ್ಕಂಡಿರಬೇಕು. ವೈರಾಗ್ಯ ಅಂದರೆ ಅಗಾಧವಾದ ಜೀವನ ಪ್ರೀತಿಯೇ ಹೊರತು, ಜೀವವಿರೋಧಿ ನಿಲುವು ಅಲ್ಲ ‘.
.
ಅವರ ಮಾತುಗಳು ಮತ್ತೆ ನೆನಪಾಗಲು ಕಾರಣ ಇತ್ತೀಚೆಗೆ ಕೇಳಿದ ಒಂದು ಹಾಡು. ಇದನ್ನು ಗೆಳೆಯರೊಬ್ಬರು ವಾಟ್ಸಾಪಿನಲ್ಲಿ ಕಳಿಸಿದ್ದರು. ಮೊದಲ ಸಲ ಕೇಳುವ ಹೊತ್ತಿಗೆ ಇದನ್ನು ಬರೆದವರು ಯಾರೆಂಬುದು ಕೂಡ ಗೊತ್ತಿರಲಿಲ್ಲ. ಆದರೆ, ಕೇಳುತ್ತ ಹೋದ ಹಾಗೆ, ಇದು ಇಷ್ಟವಾಗುತ್ತ ಹೋಯಿತು. ಬದುಕಿನ ಸರಳ ಸತ್ಯಗಳನ್ನು ಕಟ್ಟಿಕೊಡುವ ಇಂಥ ಪದ್ಯಗಳನ್ನು ಈಗೀಗ ಬರೆಯುವವರು ಕಡಿಮೆ. ಆದ್ದರಿಂದ ಇದು ಹಳೆಯ ತತ್ವಪದ ಇರಬಹುದೇನೋ ಅಂದುಕೊಂಡಿದ್ದೆ. ಆಮೇಲೆ ಇದು ಗಿರೀಶ್‌ ಹಂದಲಗೆರೆ ಬರೆದದ್ದು ಅಂತ ತಿಳಿಯಿತು.
ಪದ್ಯ ಹೀಗೆ ಶುರುವಾಗುತ್ತದೆ:
ಏಕಾಂಗಿಯಾಗಿ ಹೊರಡು
ಯಾರಾದರೂ ಸಿಕ್ಕಾರು
ಏನನ್ನು ಬಯಸದೇ ಹೊರಡು
ಬೇಕಾದುದು ಸಿಕ್ಕೀತು.
ಏಕಾಂಗಿಯಾಗಿ ಹೊರಡು ಅನ್ನುವ ಹೊತ್ತಿಗೆ, ಯಾರಾದರೂ ಸಿಕ್ಕಾರು ಎಂದು ಹಂಬಲಿಸುವುದು, ಏಕಾಂಗಿಯಾಗಿ ಹೊರಡುವುದರಿಂದಲೇ ಯಾರಾದರೂ ಸಿಗುತ್ತಾರೆ ಎಂದು ಭಾವಿಸುವುದು, ಯಾರಾದರೂ ಸಿಕ್ಕಲೆಂದೇ ಏಕಾಂಗಿಯಾಗಿ ಹೊರಡುವುದು, ಯಾರಾದರೂ ಸಿಕ್ಕಾಗಲೇ ಏಕಾಂಗಿ ಆಗಬಲ್ಲೆವೆಂದು ಭಾವಿಸುವುದು- ಹೀಗೆ ಏಕಾಂತಕ್ಕೆ ಹಲವು ಸ್ಥಿತಿಗಳಿವೆ. ಕೊಂಚ ಅಗೆದು ಬಗೆದು ನೋಡಿದರೆ ಆ ಎಲ್ಲ ಸ್ಥಿತಿಗಳನ್ನೂ ಈ ಸಾಲು ಹೇಳುತ್ತಿದೆ ಅನ್ನಿಸುತ್ತದೆ. ಅದು ಮುಂದಿನ ಸಾಲಲ್ಲಿ ಮತ್ತಷ್ಟು ಖಚಿತವಾಗುತ್ತದೆ. ಏನನ್ನೂ ಬಯಸದೇ ಹೊರಡು, ಬೇಕಾದುದು ಸಿಕ್ಕೀತು. ಇಲ್ಲಿನ ಸಂದಿಗ್ಧತೆ ಗಮನಿಸಿ. ಏನನ್ನೂ ಬಯಸದೇ ಹೊರಡುವವನಿಗೆ ಬೇಕಾದುದು ಸಿಗುವುದು ಹೇಗೆ? ಬಯಸದವನಿಗೆ ಬೇಕಾದುದು ಯಾವುದು?
ಹಾಗಿದ್ದರೆ ಈ ಸಾಲುಗಳಲ್ಲೇ ದೋಷವಿದೆಯಾ? ಜಯಂತ ಕಾಯ್ಕಿಣಿ ಬರೆಯುತ್ತಾರೆ: ನೀ ಕಾಣುವೆ ಈ ಕಾಡಿನ ರಮಣೀಯ ನೋಟ, ಹೆದ್ದಾರಿಯ ತೊರೆದಾಗಲೇ, ನೀ ಕೇಳುವೆ ನಿನ್ನಾಳದ ಅಪರೂಪದ ಹಾಡು, ಒಳದಾರಿಯ ಹಿಡಿದಾಗಲೇ. ಗಿರೀಶ್‌ ಹಂದಲಗೆರೆ ಸಾಲು ಹೀಗಿದೆ- ದಾರಿ ತೊರೆದು ನಡೆ, ಬಯಲು ಸಿಕ್ಕೀತು.
ತೊರೆಯುವುದು ಮತ್ತು ಪಡೆಯುವುದು- ನಮ್ಮ ಆಳದ ಆಸೆಗಳೆಂದು ನಮಗೇ ಗೊತ್ತಿದೆ. ನಮ್ಮ ಕತೆ, ಕವಿತೆ, ಪುರಾಣಗಳೆಲ್ಲ ಅದನ್ನೇ ಹೇಳುತ್ತವೆ. ಲೌಕಿಕವನ್ನು ತೊರೆದಾಗ ಅಲೌಕಿಕವಾದದ್ದು ಸಿಗುತ್ತದೆ ಅನ್ನುವಾಗಲೂ ನಾವು ಲೌಕಿಕವನ್ನು ಮರೆಯುವಂತಿಲ್ಲ. ಅಲೌಕಿಕದ ಅರಿವಾಗಬೇಕಿದ್ದರೆ ನಮಗೆ ಲೌಕಿಕ ಯಾವುದೆಂದು ಗೊತ್ತಿರಬೇಕಲ್ಲ. ದಿವವನ್ನು ಸವಿಯಲು ಭವದ ಭಂಗವೂ ತಿಳಿದಿರಬೇಕಲ್ಲ. ಹಂದಲಗೆರೆಯ ಕವಿತೆ ತೊರೆಯುವುದು ಮತ್ತು ಪಡೆಯುವುದನ್ನು, ತೊರೆದು ಪಡೆಯುವುದನ್ನು, ತೊರೆದದ್ದನ್ನು ಪಡೆಯುವುದನ್ನು ಕುರಿತಾಗಿದೆ ಎಂದು ಅನ್ನಿಸುವಂತಿದೆ.
ಈ ಎರಡು ಸಾಲುಗಳನ್ನು ನೋಡಿ-
ನದಿಯ ಜಾಡು ಹಿಡಿ
ಕಡಲಾಗಬಹುದು
ಧರ್ಮದ ನೆರಳ ತೊರೆ
ಮಹಾಮನೆ ಕಂಡೀತು
ನದಿಯ ಜೊತೆ ಸಾಗಿದರೆ ಕಡಲಾಗಬಹುದು, ಧರ್ಮದ ನೆರಳ ತೊರೆದರೆ ಮಹಾಮನೆ ಕಂಡೀತು. ಕಡಲು ಎಲ್ಲ ನದಿಗಳ ಒಡಲು, ಮಹಾಮನೆಯೂ ಧರ್ಮಸ್ಥಾನವೇ. ಹೀಗೆ ಹುಡುಕುತ್ತಾ ಹೊರಟು ಮತ್ತೆ ಹೊರಟಲ್ಲಿಗೇ ಬಂದು ತಲುಪುವುದರಲ್ಲೇ ಬದುಕಿನ ಅರ್ಥ ಅಡಗಿದೆಯಾ? ಹೊರಟು ಹೊರಟಲ್ಲಿಗೆ ಸೇರುವ ನಡುವಿನ ಪ್ರಯಾಣದಲ್ಲೇ ಜೀವನ ಅಡಗಿದೆಯಾ? ಹೊರಡುವುದೇ ಬದುಕಿನ ಉದ್ದೇಶವಾ? ಬದುಕು ಎಂಬುದು ಕೇವಲ ಕ್ರಿಯಾಪದವಾ?
ಸಾವನ್ನು ಹುಡುಕಿ ನಡೆ
ಬದುಕು ಸಿಕ್ಕೀತು
ಹಾಗಿದ್ದರೆ ಬದುಕನ್ನು ಹುಡುಕಿ ನಡೆದರೆ ಸಾವು ಸಿಗುತ್ತದೆಯಾ? ನಾವು ಯಾವುದನ್ನು ಹುಡುಕುತ್ತಿರುತ್ತೇವೆ? ಬದುಕನ್ನೋ ಸಾವನ್ನೋ? ಒಂದು ಕ್ಷಣ ಮುಗಿದ ತಕ್ಷಣ ಆ ಕ್ಷಣಕ್ಕೆ ನಾವು ಸತ್ತಂತೆ, ನಮ್ಮ ಪಾಲಿಗೆ ಆ ಕ್ಷಣ ಸತ್ತಂತೆ. ಕಾಲ ಮತ್ತು ನಾವು ಒಟ್ಟೊಟ್ಟಿಗೇ, ಏಕಕಾಲಕ್ಕೇ ಸಾಯುತ್ತಾ ಹೋಗುತ್ತೇವೆ. ನಾವು ಕಾಲವನ್ನು ಕೊಲ್ಲುತ್ತೇವಾ, ಕಾಲ ನಮ್ಮನ್ನು ಕೊಲ್ಲುತ್ತದಾ? ಕೊಲ್ಲುವವನನ್ನು ಕಾಲಪುರುಷ ಅನ್ನುವುದು ಅದೇ ಕಾರಣಕ್ಕಾ?
ನಿನ್ನ ವಿರುದ್ಧ ನೀನು ಹೋರಾಡು
ಗೆದ್ದರೆ ಸಂತನಾಗುವೆ ನೀ
ಈ ಸಾಲನ್ನು ಓದುತ್ತಿದ್ದಾಗ ಯೇಟ್ಸ್‌ ಬರೆದ ಸಾಲೊಂದು ನೆನಪಾಗುತ್ತದೆ.
Now his wars on God begin;
At stroke of midnight God shall win.
ಈಗ ಶುರು ದೇವರ ಜೊತೆಗಿನ ಯುದ್ಧ. ನಡುರಾತ್ರಿ ಬಾರಿಸಿದಾಗ ದೇವರೇ ಗೆದ್ದ.
ನಾವು ನಮ್ಮ ವಿರುದ್ಧವೇ ಹೋರಾಡುತ್ತಿರುತ್ತೇವೆ. ನಮ್ಮ ವಿರುದ್ದ ಹೋರಾಡುವುದು ಎಂದರೆ ದೇವರ ವಿರುದ್ಧ ಹೋರಾಡಿದಂತೆಯೇ. ಯಾಕೆಂದರೆ ಅಹಂ ಬ್ರಹ್ಮಾಸ್ಮಿ. ನಮಗೆ ನಾವೇ ದೇವರೆಂದು ಗೊತ್ತಿದೆ. ನಮ್ಮ ವಿಧಾತರಾಗಿ ನಾವು ನಮ್ಮ ಜೊತೆಗೆ ಹೋರಾಡುತ್ತಾ, ನಾವು ಬರೆದ ರೇಖೆಯನ್ನು ನಾವೇ ಅಳಿಸುತ್ತಾ, ನಾವು ಕೊರೆದ ಕೊರಕಲನ್ನು ನಾವೇ ಮುಚ್ಚುತ್ತಾ, ನಾವು ಮಾಡಿಕೊಂಡ ಕೊಳೆಯನ್ನು ನಾವೇ ತೊಳೆಯುತ್ತಾ, ನಮ್ಮನ್ನು ನಾವು ಗೆಲ್ಲಲು ಹೊರಡುತ್ತಲೇ ಇರುತ್ತೇವೆ. ದೇವರು ಗೆಲ್ಲುತ್ತಾನೆ. ಸಂತನಾಗಲು ಹೊರಟವನು ಕೂಡ ದೇವರನ್ನು ಗೆಲ್ಲಲು ಹವಣಿಸುವವನೇ. ದೇವರು ಸಂತನಲ್ಲ. ತನ್ನೊಳಗಿನ ದೇವರನ್ನು ಕೊಂದುಕೊಂಡವನು ಸಂತ.
ಗಿರೀಶ್‌ ಹಂದಲಗೆರೆಯವರ ಕವಿತೆಯ ಅನೇಕ ಸಾಲುಗಳು ಏನೇನೋ ಅರ್ಥ ಹೊರಡಿಸುತ್ತವೆ. ಅರ್ಥವಿರುವುದು ಕವಿತೆಯಲ್ಲಿ ಮಾತ್ರವಲ್ಲ, ಓದುಗನಲ್ಲೂ. ಅವರೆಡೂ ಒಂದು ಬಿಂದುವಿನಲ್ಲಿ ಸಂಧಿಸಿದಾಗ ಮತ್ತೇನೋ ಘಟಿಸುತ್ತದೆ. ಹಾಗೆ ಘಟಿಸುವಂತೆ ಮಾಡುವ ಮತ್ತೂಂದಷ್ಟು ಸಾಲುಗಳು ಇಲ್ಲಿವೆ.
ಸತ್ಯವ ಹುಡುಕದಿರು
ಕಂಡದ್ದು ಸುಳ್ಳಾದೀತು
ಚಲನೆಗೆ ಸಾಕ್ಷಿಯಾಗು
ಶೂನ್ಯ ತಬ್ಬಿಕೊಂಡೀತು
ಎಲ್ಲವನೂ ಕಳಚಿಟ್ಟು ಹೊರಡು
ಉಡಲು ಬೆಳಕೇ ಸಿಕ್ಕೀತು
ಇತ್ತೀಚಿನ ದಿನಗಳಲ್ಲಿ ಇಂಥ ಕವಿತೆಯೊಂದು ಓದಲು ಸಿಕ್ಕಿರಲಿಲ್ಲ. ಅಥವಾ ಅಷ್ಟೊಂದು ಗಮನವಿಟ್ಟು ಓದಿರಲಿಲ್ಲವೋ ಏನೋ? ಬದುಕಿನಾಚೆ ನಿಂತು ಬದುಕನ್ನು ನೋಡುವುದು ಕವಿಗೆ ಕಷ್ಟದ ಕೆಲಸ. ಕವಿ ತತ್ವಜ್ಞಾನಿ ಆಗಲು ಹೊರಟಾಗೆಲ್ಲ ಸುಳ್ಳಾಗುತ್ತಾನೆ. ತತ್ವಜ್ಞಾನಿ ಕವಿಯಾಗಲು ಹೊರಟಾಗಲೆಲ್ಲ ಪೊಳ್ಳಾಗುತ್ತಾನೆ. ಅಪರೂಪಕ್ಕೆ ಕವಿ ಮತ್ತು ತತ್ವಜ್ಞಾನಿ ಸಂಧಿಸುತ್ತಾನೆ. ಅಥವಾ ಸಂಧಿಸಿದ್ದಾರೆ ಅಂತ ಓದುಗರಿಗೆ ಅನ್ನಿಸಿಬಿಡುತ್ತದೆ.

ಕೃಪೆ: ಉದಯ ವಾಣಿ

– ಜೋಗಿ

Leave a Reply