ಜಯಂತಿಯ ಸುತ್ತಮುತ್ತ

ಜಯಂತಿಯ ಸುತ್ತಮುತ್ತ

ಜಯಂತಿ ಅಂದಾಕ್ಷಣ 60ರ ಆಸುಪಾಸಿನವರಿಗೆ ಅದೂ ಕರ್ನಾಟಕದವರಿಗೆ ನೆನಪಾಗುವುದು ಎಡಕಲ್ಲು ಗುಡ್ಡದ ಮೇಲೆ, ಬೆಟ್ಟದ ಹುಲಿ, ಬಹಾದ್ದೂರ್ ಗಂಡು, ಕಸ್ತೂರಿ ನಿವಾಸದ ಅಭಿನೇತ್ರಿ ಜಯಂತಿಯೇ. ಬೆಟ್ಟದ ಹುಲಿಯ ಕಪ್ಪು ಬಿಳುಪಿನಲ್ಲಿಯೂ ‘ಏನೋ ತಲ್ಲಣ ಏಕೋ ಈ ದಿನಾ ಆಶೆಯೂ ಹೆಚ್ಚಿ ಸಾವಿರ ಯೋಚನೆ ಹಾಕಿ’ ಕಾವು ಏರಿಸಿದ ಜಯಂತಿಯ ಅಭಿನಯ ಮೈಮನಗಳಲ್ಲಿ ಮದ ಏರಿಸುವ ಅಂದಿನ ಮಾಟ ಎಂಥಹ ಸಮ್ಮೋಹಿನಿ ಬದಲಾವಣೆ ಮಾಡ್ತಿತ್ತು.
ಇಂದಿನ ಜಯಂತಿಯ ಕಲ್ಪನೆಯಲ್ಲಿ ಸ್ವಲ್ಪ ಬದಲಾವಣೆ ಆ ಜಯಂತಿ ಬಗ್ಗೆ ಮಾತನಾಡದೆ ಮತ್ತೊಂದು ಬೇರೆ ಜಯಂತಿ ಬಗ್ಗೆ ವಿಚಾರಮಾಡುವದು ಇದೆ. ಇಲ್ಲೂ ಸಹ ಮದ ಏರಿಸುವ ಹುಚ್ಚು, ಮತದ ಹೊಳೆ ಹರಿಸೋ ಹುನ್ನಾರಗಳು ಪ್ರತಿ ಜಯಂತಿಯಲ್ಲಿ ಏನೋ ತಲ್ಲಣ, ಆಶೆಯೂ ಹೆಚ್ಚಿ ಸಾವಿರ ಯೋಚನೆ ಹಾಕಿ.. ಅನ್ನುವ ಅನುಭವ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಯಂತಿಯ ರಾಜ್ಯದಲ್ಲಿ ಇಂದು ಎಷ್ಟು ಎಷ್ಟು ಜಯಂತಿಗಳು ಅಂದ್ರೆ ತಲೆ ಚಿಟ್ಟು ಹಿಡಿಸುವಷ್ಟು, ಅದರಲ್ಲಿ ಸರಕಾರವೇ ಹಲವಾರು ಸುಂದರ ಸೂಟಿಗಳ ಹಲವು ಜಯಂತಿಗಳನ್ನು ಕನ್ನಡಿಗರಿಗೆ ಕೊಟ್ಟದ್ದು ಕರುನಾಡ ಭಾಗ್ಯವೇ ಸರಿ. ಸರ್ಕಾರವೇನೂ ಯಾವುದೇ ಉತ್ಪನ್ನಗಳನ್ನು ತಯಾರು ಮಾಡುವ ಕಾರ್ಖಾನೆ ಅಲ್ಲ. ಯಾವ ರಾಜಕೀಯ ಪಕ್ಷಗಳಾಗಲಿ ಚುನಾಯಿತ ಪ್ರತಿನಿಧಿಗಳಾಗಲಿ ಬಂಡವಾಳ ಹೂಡಿಲ್ಲ. ಲಾಭವೇನು, ನಷ್ಟವೇನು? ಯಾರದೋ ರೊಕ್ಕಾ ಯಲ್ಲಮ್ಮನ ಜಾತ್ರೆ ಅಂತ ಉತ್ತರ ಕರ್ನಾಟಕದಲ್ಲಿ ಹೇಳತಾರೆ. ಸರ್ಕಾರ ಮೊದಮೊದಲು ಗಾಂಧೀಜಿ, ನೆಹರು ಚಾಚಾರಿಗೆ ಮಾತ್ರ ಮೀಸಲಿದ್ದ ಜಯಂತಿಯನ್ನು ಇನ್ನು ಕೆಲವರಿಗೆ ವಿಸ್ತರಣೆ ಮಾಡಿದರು.
ಈಗಂತೂ ಭಾಗ್ಯಗಳ ರಾಜ್ಯದಲ್ಲಿ ಎಷ್ಟೊಂದು ಜಯಂತಿಗಳು? ಎಷ್ಟೊಂದು ಅಧಿಕೃತವಾಗಿ ಆಗಲ್ಪಟ್ಟಿವೆ? ಲೆಕ್ಕ ಇಡಲಾರದಷ್ಟು. ಮಧ್ವ, ಕನಕ, ಶಂಕರ, ವಾಲ್ಮೀಕಿ, ಅಂಬೇಡ್ಕರ್, ಬುದ್ಧ, ಮಹಾವೀರ, ಪೈಗಂಬರ್, ಟಿಪ್ಪು, ಜಗಜೀವನರಾಮ, ರಾಧಾಕೃಷ್ಣನ್, ಶ್ರೀರಾಮ, ಹನುಮ, ಕೃಷ್ಣ, ಮೌಲಾನಾ ಅಬ್ದುಲ್ ಕಲಾಂ, ಗುರುನಾನಕ, ಬಸವೇಶ್ವರ, ಶಿವಾಜಿ, ಲೋಕಮಾನ್ಯ ತಿಲಕ, ವಿವೇಕಾನಂದ ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಗೂಗಲ್ ತನಿಖಾ ಇಂಜಿನ್‍ಗೆ ಹೋದರೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಏನೇನೋ ಸಾಧಿಸಿದವರ ದೊಡ್ಡ ಪಟ್ಟಿಯೇ ಸಿಗುತ್ತದೆ. ಕ್ರಿಯೇಟಿವ್ ಜನಾ ತಮಗೇನು ಬೇಕೋ ಹುಡುಕಿಕೊಳ್ಳಬಹುದು. ಪ್ರತಿ ದಿನ ಯಾರೋ ಹುಟ್ಟುತ್ತಾರೆ ಸಾಯುತ್ತಾರೆ ಕೋಟಿಯಲ್ಲಿ ಒಬ್ಬರು ಏನೋ ಸಾಧನೆ ಸುಧಾರಣೆ ಮಾಡುತ್ತಾರೆ. ಹೀಗೆ ಎಷ್ಟು ಜಯಂತಿಗಳನ್ನು ಮಾಡುತ್ತ ಹೋಗುವದು? ಇತಿಹಾಸ ಸಂಸ್ಕೃತಿಯ ದೃಷ್ಟಿಯಿಂದ ಮಹಾನ್ ವ್ಯಕ್ತಿಗಳ ಬಗ್ಗೆ ಗೊತ್ತಿರುವದು ಅವಶ್ಯಕವಾದರೂ ಆ ಕೆಲಸವನ್ನು ನಮ್ಮ ಶಾಲೆ, ಕಾಲೇಜು ಪಠ್ಯಪುಸ್ತಕ, ಮಾಸ್ತರರು, ಪ್ರೊಫೆಸರ್‍ಗಳಿಗೆ ಬಿಡುವದು ಒಳ್ಳೆಯದು.
ನಮ್ಮ ಸಾಂಪ್ರದಾಯಿಕ ರಾಜಕಾರಣಿಗಳನ್ನು ಇಲ್ಲಿ ಪ್ರಶಂಸೆ ಮಾಡಲೇಬೇಕು. ಯಾವ ಸಮಾಜ ಶಾಸ್ತ್ರಜ್ಞರಿಗೂ ಹೊಳೆಯದ ಮತ ಬ್ಯಾಂಕ್ ಕೊಳ್ಳೆ ಹೊಡೆಯುವ ಭಯಂಕರ ಕ್ರಿಯೇಟಿವ್ ಐಡಿಯಾಗಳು ಹೊಳೆಯುತ್ತವೆ. ಜಯಂತಿಗೊಂದು ರಜೆ, ಜಯಂತಿಯ ಹೆಸರಿನಲ್ಲಿ ಸರ್ಕಾರಕ್ಕಿಷ್ಟು ವೆಚ್ಚ ತೋರಿಸಲು, ಮಾಡಲು ಸುಲಭವಾದ ಯೋಜನೆಗಳನ್ನು ಹೊಸದೆ ಬಿಡುತ್ತಾರೆ. ನೂರಾರು ಆಶೆ, ಸಾವಿರ ಯೋಚನೆ ತಲ್ಲಣಗಳು ಚುನಾವಣೆಗಳಲ್ಲಿ ಜಯ ನೀಡುವ ಜಯಂತಿ ಯಾವ ಯಾವವು ಆಗಬಹುದು ಅನ್ನುವ ಸಾವಿರ ವಿಚಾರಗಳು. ರಾಜಕೀಯ ಪಕ್ಷಗಳಲ್ಲಿ ಜಯಂತಿಯೆಂದರೆ ಒಂದು ಮತ ಬ್ಯಾಂಕ್ ಆರಾಧನೆ.
ಪ್ರತಿ ಜಯಂತಿಯ ಹಿಂದೆ ಗ್ಯಾರಂಟಿ ಆಗಬಹುದಾದ ಮತಗಳು ಎಷ್ಟು? ಎಷ್ಟು ಮತಗಳನ್ನು ಒಡೆಯಬಹುದು? ಯಾವ ಜಯಂತಿಯ ಮೂಲಕವಾಗಿ ಹೆಚ್ಚು ಮತ ಗಿಟ್ಟಿಸಬಹುದು? ಸರ್ಕಾರದ ಸುಪರ್ದಿಯಲ್ಲಿ ನೇರವಾಗಿ ಯಾವ ಜಯಂತಿ ಮಾಡಬಹುದು ಎಲ್ಲಿ ಯಾವ ವೇಷ ಹಾಕಬಹುದು? ಶಂಕರ, ಮಧ್ವರ ಜಯಂತಿಯಲ್ಲಿ ಯಾವ ಮುಖ್ಯ ಅಥವಾ ಯಾವುದೇ ಮಂತ್ರಿ ಶಂಕರ, ಮಧ್ವರ ವೇಷ ಹಾಕಿದ್ದು ನೋಡಿದ್ದೀರಾ? ಶಕ್ಯವೇ ಇಲ್ಲ ಟಿಪ್ಪುವಿನ ವೇಷ ಹಾಕಬಹುದು. ಜಯಂತಿಗಳನ್ನು ಜನರಿಗೆ ಆಚರಿಸಲು ಬಿಡಬೇಕು ಯಾರಿಗೆ ಯಾವುದು ಬೇಕೋ ಅದನ್ನು ಮಾಡಿಕೊಳ್ಳುತ್ತಾರೆ ಇಲ್ಲಾ ಬಿಟ್ಟು ಬಿಡುತ್ತಾರೆ. ಆದರೆ ಸರ್ಕಾರದ ಅಂದರೆ ಆಳುವ ಪಕ್ಷದ ಗುಪ್ತ ಉದ್ದೇಶಗಳಾದ ಮತದಾರನ ಓಲೈಕೆ ಬಜೆಟ್ ವೆಚ್ಚ, ಕಟ್ಟಡ ಕಾಮಗಾರಿಗಳು ಆಗುವದಿಲ್ಲ. ಸರ್ಕಾರವೇ ಜಯಂತಿ ಆಚರಿಸುವ ಜವಾಬ್ದಾರಿ ತಗೊಂಡಾಗ ಅಷ್ಟೇ ಪ್ರೀತಿಯಿಂದ, ಅಷ್ಟೇ ವೈಭವದಿಂದ, ಎಲ್ಲಾ ಜಯಂತಿ ಮಾಡುವದು ಆಪೇಕ್ಷಣೀಯವಲ್ಲವೇ? ಎಲ್ಲರ ಜಯಂತಿಗೂ ಅಷ್ಟೇ ಬಜೆಟ್, ಅಷ್ಟೇ ಭವನಗಳು ಮಾಡಿದರೆ ಹೇಗೆ ಅನ್ನುವ ವಿಚಾರ ಬರುವುದೇ ಇಲ್ಲ. ಶಂಕರ, ಮಧ್ವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದೇ ಇಲ್ಲ.
ಈಗ ಲೇಟೆಸ್ಟ್ ಉದಾಹರಣೆಯೆಂದರೆ ಟಿಪ್ಪು ಜಯಂತಿ ಮತ್ತು ಮೌಲಾನಾ ಅಬ್ದುಲ್ ಕಲಾಂ ಆಜಾದರ ಜಯಂತಿ. ಎರಡೂ ಒಂದರ ಬೆನ್ನಿಗೆ ಬಂದ ಜಯಂತಿಗಳು. (ಆಚಾರ್ಯ ಜೆ.ಪಿ.ಕೃಪಲಾನಿ ಹುಟ್ಟಿದ್ದೂ ನವೆಂಬರ್ 11) ಕೇಂದ್ರ ಸರ್ಕಾರ ಆಜಾದರ ಜಯಂತಿಯನ್ನು ರಾಷ್ಟ್ರೀಯ ಶಿಕ್ಷಣ ದಿನವೆಂದು ಅರ್ಥಪೂರ್ಣವಾಗಿ ಆಚರಿಸಲು ಕರೆ ಕೊಟ್ಟಿದೆ. ಮತ್ತು ಮಂತ್ರಿಗಳಿಗೆ ಗೊತ್ತಿದೆಯೋ ಇಲ್ಲವೋ ಶಿಕ್ಷಣ ಇಲಾಖೆಯು ಸಹ ಅಧಿಕೃತ ಸುತ್ತೋಲೆ ಹೊರಡಿಸಿ ಕೈ ತೊಳೆದುಕೊಂಡರೂ ಸಹ ಕೆಲವು ನಿಷ್ಠಾವಂತ ಅಧಿಕಾರಿಗಳು ಮೌಲಾನಾ ಅಬ್ದುಲ್ ಕಲಾಮ್ ಆಜಾದರ ಭಾವಚಿತ್ರ ಹುಡುಕಿಸಿ ಸ್ವಚ್ಛ ಮಾಡಿ ದೀಪ ಹಚ್ಚಿ ಮಾಲೆ ಹಾಕಿ ಗೌರವ ಸೂಚಿಸಿ ಫೋಟೋ ತೆಗೆದು ವರದಿ ಸಲ್ಲಿಸಿ ಕೃತಾರ್ಥರಾದರು. ಟಿಪ್ಪುವಿನ ವೇಷ ಹಾಕಿಕೊಂಡು ಖುಷಿಪಡೋ ಮಂತ್ರಿಗಳು ಕನಿಷ್ಠ ಮೌಲಾನಾ ಅವರ ವಿಶಿಷ್ಟ ಕಾಬೂಲಿವಾಲಾ ಟೊಪ್ಪಿಗೆಯನ್ನು ಹಾಕಿ ಫೋಟೋ ತೆಗೆಸಿಕೊಂಡಿದ್ದರೆ. ಮಾಧ್ಯಮಗಳಿಗೆ ಮತ್ತೊಂದು ದರ್ಶನ ಭಾಗ್ಯವಾಗುತ್ತಿತ್ತು. ಯಾವುದು ಬ್ಯಾಂಕ್ವೆಟ್ ಹಾಲ್‍ನಲ್ಲಿ ವೈಶಿಷ್ಟಪೂರ್ಣವಾಗಿ ಆಗಬೇಕಾಗಿತ್ತು ಆದರೆ ಹಾಗಾಗಲಿಲ್ಲ. ಏಕೆಂದರೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರು ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿ, ನಮ್ಮ ಶಿಕ್ಷಣದ ಪ್ರಗತಿ ಹಾದಿಗೆ ಅಡಿಪಾಯ ಹಾಕುವ ನೀತಿಗಳನ್ನು, ಸಾಂಸ್ಕೃತಿಕ ಬೆಳವಣಿಗೆಗೆ ಅನುಕೂಲವಾಗುವ ಅಕಾಡೆಮಿಗಳ ಆರಂಭ IITಗಳ ಸ್ಥಾಪನೆ, ಕಡ್ಡಾಯ ಮತ್ತು ಉಚಿತ ಶಿಕ್ಷಣದ ಹಕ್ಕಿನ ಪ್ರತಿಪಾದನೆ, ಸಾಕ್ಷರತೆ, ವಯಸ್ಕ ಶಿಕ್ಷಣ, ಸ್ತ್ರೀಯರ ಶಿಕ್ಷಣ ಪ್ರತಿಪಾದನೆಗಳನ್ನು 11 ವರ್ಷಗಳಕಾಲ ಸಿದ್ಧಾಂತಗಳನ್ನು ಅನುಷ್ಠಾನಕ್ಕೆ ತರಲು ಕೇಂದ್ರಮಂತ್ರಿಯಾಗಿ ಸಾಮರ್ಥ್ಯ ಪೂರ್ಣ ಕಾರ್ಯ ಮಾಡಿದ್ದು ಎಷ್ಟು ಜನರಿಗೆ, ಮಂತ್ರಿಗಳಿಗೆ ಗೊತ್ತಿದೆ? ಸಿಗಬೇಕಾದ ಪ್ರಚಾರ ಸಿಕ್ಕಿಲ್ಲ. ಯಾಕಿರಬಹುದು? ಬಹುಶಃ ಅವರು ಜನನಾಯಕ, ಮತ ನಿರ್ಧರಿಸುವ ವ್ಯಕ್ತಿ ಅಲ್ಲ. ಒಂದು ತರಹ APJಕಲಾಮ್ ಇದ್ದ ಹಾಗೆ. ಅದಕ್ಕಾಗಿ ವೈಭವದ ಮಂತ್ರಿಮಹೋದಯ, ಶಾಸಕ ಸಂಸದರು ಆರ್ಥಿಕ ಇಲಾಖೆ, ಮಾಧ್ಯಮಗಳು ಯಾರೂ ಹೆಚ್ಚಿನ ಅಷ್ಟೊಂದು ಆಸಕ್ತಿ ತೋರಿಸದೆ ಈ ಜಯಂತಿ ಹಾಗೆಯೇ ಹೋಗಿಯೇ ಬಿಟ್ಟಿತು. ಯಾವುದೇ ಪತ್ರಿಕೆಯಲ್ಲಿ ಏನಾದರೂ ಚಾರುಚುರು ಸುದ್ದಿಬಂದಿದ್ದರೆ ಅದು ಆಯಾ ಸಂಸ್ಥೆಯವರು ಪತ್ರಿಕಾ ಪ್ರಕಟನೆಗಾಗಿ ಕಳುಹಿಸಿದ ವರದಿ ಆಧಾರಿತ ಅಂತಾನ ಹೇಳಬಹುದು.
ಇಂತಹ ಜಯಂತಿಗಳು ಹೆಚ್ಚಾಗಿವೆ. ಪ್ರತಿಯೊಂದು ಮಾಡುತ್ತಾ ಹೋದ್ರೆ ನಾಳೆ ಪೊರ್ಶನ್ ಮುಗಿಸೋದು ಹೇಗೆ ಅಂತ ಪ್ರಾಚಾರ್ಯರ ಗೋಳು. ಅದಕ್ಕಾಗಿ ಹೊಸ ವಿಧಾನ ಹೊಸ ತಂತ್ರ ಹುಡಕಬೇಕಾಗುತ್ತದೆ. ರಾಜಕೀಯ ಪಕ್ಷಗಳಿಗೆ ಹಿತವಾದ ಮತ ಬೇಕು. ಅವರಿಗೆ ವೈಯಕ್ತಿಕ ಅಭಿಮತ ಬೇಡ. ಓಪ್ಪು ಒಂದು ರೀತಿಯಿಂದ ಮತದ ಹಸಿರು ಚಿಪ್ಪು. ವೇಗದ ಮೈಕ್ರೋಪ್ರೊಸೆಸರ್ ಇದ್ದ ಹಾಗೆ. ಕಲಾಮ್ ಆಗಲಿ, ಮತ್ತು ಮೌಲಾನಾ ಆಜಾದ್ ಆಗಲಿ ಸಮೂಹಸನ್ನಿಯ ಮತ ಹುಟ್ಟಿಸಲಾರರು. ಅದಕ್ಕಾಗಿಯೇ ಎರಡನೇ ಜಯಂತಿ ಪ್ರಚಾರ, ಆಚರಣೆ ಪಡೆಯಲಿಲ್ಲ. ಎಷ್ಟೋ ಜನ ಬುದ್ಧಿ ಜೀವಿಗಳಿಗೆ ಎಡವಾಗಲಿ, ಬಲವಾಗಲಿ ಮೌಲಾನ್ ಆಜಾದ್ ಬಗ್ಗೆ ಗೊತ್ತಿಲ್ಲ. ಟಿಪ್ಪು ಜಯಂತಿಯ ಹಾಗೆ. ಬ್ರಿಟಿಷರು ಆಡಳಿತ ಮಾಡುತ್ತಿದ್ದ ಸಮಯದಲ್ಲಿ ಅಖಂಡ ಭಾರತದ ಪರಿಕಲ್ಪನೆ ಎಷ್ಟು ಜನ ರಾಜರಿಗೆ, ಸಂಸ್ಥಾನಿಕರಿಗೆ ಇತ್ತು ಅನ್ನುವುದು ಊಹೇಗೆ ಬಿಟ್ಟಿದ್ದು. ಕೆಲವರು ಬ್ರಿಟಿಷರಿಗೆ ಸ್ನೇಹಿತರಾದರು ಕೆಲವರು ಬೇಲಿ ಮೇಲೆ ಇದ್ದ ಹಾಗೆ, ಇನ್ನು ಕೆಲವರು ಬ್ರಿಟಿಷರ ಜತೆ ಯುದ್ಧಕ್ಕೆ ಇಳಿದರು. ಬ್ರಿಟಿಷರ ಜತೆ ಹೋರಾಡಿದವರೆಲ್ಲ ಅಖಂಡ ಭಾರತಕ್ಕಾಗಿ ಹೋರಾಡಿದರು ಅಂತ ಹೇಗೆ ಹೇಳುವದು? ಪ್ರತಿ ರಾಜನಿಗೂ, ರಾಣಿಗೂ ಚಿಕ್ಕ ಪುಟ್ಟ ಸಂಸ್ಥಾನಿಕರಿಗೂ ಅವರವರದೆ ಆದ ಅಜೆಂಡಾಗಳಿದ್ದವು. ಗಾಂಧೀಜಿ ಮತ್ತು ಪಟೇಲರು ಮಾತ್ರ ಅಖಂಡ ಭಾರತದ ಸ್ವಾತಂತ್ರ್ಯದ ತತ್ವ ಎತ್ತಿದವರು. ಇನ್ನೂ ಧರ್ಮ ಸಹಿಷ್ಣುತೆ, ದತ್ತಿ ದಾನ, ಮತಾಂತರ, ಧರ್ಮ ಪ್ರಸಾರ ಇತ್ಯಾದಿಗಳ ಬಗ್ಗೆ ಹೇಳುವದಾದರೆ, ಅಧಿಕಾರ ಇರುವಲ್ಲೇ ಧನ ಬಲ. ಹೀಗಾಗಿ ಆಗಿದ್ದರೆ ಆಶ್ಚರ್ಯವಿಲ್ಲ. ಆಗಲೂ ಇರಬಹುದು. ಈಗಲೂ ಇಲ್ಲವೇ? ಮಠ, ಮಸಿದೆ, ಚರ್ಚ್ ದೇವಾಲಯಗಳಿಗೆ ಪಕ್ಷ ಕೇಂದ್ರೀಕೃತ ಸರ್ಕಾರಗಳು ಧನ ಸಹಾಯ ನೀಡುವುದಿಲ್ಲವೇ? ದಾನ, ದತ್ತಿ, ಸಹಾಯ, ಸಾಲ ಯಾವುದೇ ರೂಪದಲ್ಲಿ ನೀಡಿದರೂ ಭ್ರಷ್ಟತೆಯ ಬಾಗಿಲು ತಟ್ಟಿದಂತೆಯೇ. ಇನ್ನೂ ಕೆಲವೊಮ್ಮೆ ಅಕ್ರಮಗಳನ್ನು ಸಕ್ರಮಗೊಳಿಸುವ ಭರದಲ್ಲಿ ದಾನ ದತ್ತಿ, ಜಾಗಿ��ು ನೀಡುವುದು, ಜನಪರ ಭಾಷೆ ಬಿಟ್ಟು ತಮ್ಮ ಭಾಷೆಯನ್ನು ಹೇರುವುದು. ಆ ಭಾಷೆ ಆಳುವರ ಭಾಷೆಯೇಯಾಗಿರುತ್ತದೆ. ಪರ್ಷಿಯನ್, ಉರ್ದು, ತುಳು, ಹಿಂದಿ ತಮಿಳು ಇತ್ಯಾದಿ ಯಾವುದೇ ಭಾಷೆಯಾಗಿರಬಹುದು. ರಾಜನ ಧರ್ಮವೇ ಸೇವಾ ಸಿಬ್ಬಂದಿಯ ಧರ್ಮವಾಗುವದು ಅಶಕ್ತ ಜನಾಂಗದಲ್ಲಿ ಒಮ್ಮೊಮ್ಮೆ ಅನಿವಾರ್ಯ. ಇದು ಟಿಪ್ಪುವಿನ ಕಾಲದಲ್ಲಿ ಆಗಿದ್ದರೆ… ನಮ್ಮ ಕಣ್ಣಮುಂದೆ ಕಾಶ್ಮೀರದಲ್ಲಿ ಒಲ್ಲದ ಪಂಡಿತರನ್ನು ಬಲದಿಂದ ಹೊರಹೋಗುವಂತೆ ಮಾಡಲಿಲ್ಲ? ಅಷ್ಟೇ ಏಕೆ, ಲೇಟೆಸ್ಟ್ ಕೇಸ್ ಎಂದರೆ ರೋಹಿಂಗ್ಯಾಗಳದ್ದು ಇನ್ನೂ ತಾಜಾ ವಿಷಯ. ಹೀಗೂ ಆಗಿರಬಹುದಲ್ಲವೇ? ಆದರೆ ಎಲ್ಲ ಆಟಗಳಲ್ಲಿ ಸೂಕ್ಷ್ಮ ಸಂದರ್ಭ ಬಂದಾಗ benefit of doubt ಅಂತ ನೇಮ ಉಪಯೋಗಿಸಿ ಒಂದು ಜಯಂತಿ ಕೈ ಬಿಟ್ಟರೆ ತಪ್ಪೇನು? ಹೇಗಿದ್ದರೂ ಜಯಂತಿಗಳು ಬಹಳವಾಗಿವೆ ಒಂದೆರಡು ಬಿಡಿ, ಇಲ್ಲಾ ಎಲ್ಲವನ್ನೂ ರದ್ದುಗೊಳಿಸಿ. ಉತ್ಪಾದಕ ದಿನಗಳು ಆದರೂ ಹೆಚ್ಚಾದವು.
ಹೇಗಿದ್ದರೂ ಜಿ.ಡಿ.ಪಿ ಪ್ರಗತಿ ಕಡಿಮೆಯಾಗುತ್ತಿದೆ ಅಂತ ಕೆಲವರು ಹೇಳುವದನ್ನು ಕೇಳುವದಾದರೂ ತಪ್ಪುತ್ತದೆ. ಆಕಾಶ ಕಡಿದು ಬೀಳುವುದಿಲ್ಲ.

ಕೃಪೆ : ಸಂಯುಕ್ತ ಕರ್ನಾಟಕ

Leave a Reply