ನವೆಂಬರ್ : ಸರ್ಕಾರಿ ಪಕ್ಷ ಮಾಸ

ನವೆಂಬರ್ : ಸರ್ಕಾರಿ ಪಕ್ಷ ಮಾಸ

ನವೆಂಬರ್ 1 ರಾಜ್ಯೋತ್ಸವದ ದಿನ. ಕನ್ನಡಕ್ಕಾಗಿ ದುಡಿದ ಎಲ್ಲ ಪಿತೃಗಳನ್ನು ಅವರು ಮಾಡಿದ ಕಾರ್ಯವನ್ನು ನೆನಪಿಸಿಕೊಳ್ಳುವ ಸರ್ವಪಿತೃಗಳನ್ನು ನೆನೆಯುವ ದಿನ ಅಂದು ಶುರುವಾದ ಚಟುವಟಿಕೆಗಳು ಅನುಕೂಲ ಸಿಂಧುವಾಗಿ ಇಡೀ ತಿಂಗಳಿನಲ್ಲಿ ನಡೆಯುತ್ತಲೇ ಇರುತ್ತವೆ.
ಪ್ರತಿ ವರ್ಷ ನವೆಂಬರ್ ಸಮೀಪಿಸಿದ ಹಾಗೆ ನಮ್ಮ ಮತ್ತು ಇಲಾಖೆಗಳ ಸಮುದಾಯದಲ್ಲಿ ಒಂದು ರೀತಿಯ ಜ್ವರ ಕಾಣಿಸಿಕೊಳ್ಳಲಾರಂಭಿಸುತ್ತದೆ. ಬ್ರಾಹ್ಮಣ ಸಮುದಾಯದಲ್ಲಿ ಪ್ರತಿ ಪಕ್ಷ ಮಾಸದಲ್ಲಿ ಪಿತೃಗಳಿಗೆ ತರ್ಪಣೆ ಕೊಡುವ, ಅವರನ್ನು ನೆನಪು ಮಾಡಿಕೊಳ್ಳುವ ಸಂದರ್ಭ ಬಂದಾಗ ಎಲ್ಲ ಕರ್ತೃಗಳು ಅವರವರ ವಂಶವೃಕ್ಷದ ಪಟ ಹಿಡಿದುಕೊಂಡು ಸವ್ಯ, ಅಪಸವ್ಯ ಸಮಯದಲ್ಲಿ ಜನಿವಾರದ ಮಗ್ಗುಲು ಬದಲಿಸುತ್ತ ತರ್ಪಣ ಬಿಡುವುದು ಕಡೆಗೊಮ್ಮೆ ನೀರಲ್ಲಿ ಜನಿವಾರ ಅದ್ದಿ ಕಣ್ಣಿಗೊತ್ತಿಕೊಂಡು ಕೃತಾರ್ಥರಾಗುವ ಎಲ್ಲ ಕ್ರಿಯೆಗಳ ಹೋಲಿಕೆಯ ಚಟುವಟಿಕೆಗಳಲ್ಲಿ ಕಂಡು ಬರುವುದು ನವೆಂಬರ್ ಮಾಸದಲ್ಲಿ. ಮುಂಚೆ ಶ್ರಾದ್ಧ, ಪಕ್ಷಗಳು ವ್ಯಕ್ತಿಗತವಾಗಿ ಮನೆಯಲ್ಲಿ ನಡೆಯುತ್ತಿದ್ದವು. ಕಾಲ ಬದಲಾದಂತೆ, ಕರ್ತೃಗಳ ಸಂಖ್ಯೆ ಹೆಚ್ಚಾದಂತೆ ಅದಕ್ಕೊಂದು ಸಾಂಸ್ಥಿಕ ರೂಪು ಬಂದು ಮನೆಯಿಂದ ಮಠಕ್ಕೆ ಗುತ್ತಿಗೆ ಆಧಾರಿತವಾಗಿ ಬಂದವು ಅಂದರೆ, ಕಲಾಕ್ಷೇತ್ರ ಸಾರ್ವಜನಿಕ ಸಭಾಗ್ರಹ, ಪಂಚತಾರಾ ಹೋಟೆಲುಗಳು ಬಂದವು. ಪುರೋಹಿತರ ಬದಲು ಮಂತ್ರಿಗಳು, ಆಪ್ತಮಂತ್ರಗಳ ಬದಲು ಅಂಕರ್ಗಳು (anchor), ದೇವರ ಸ್ಥಾನ, ಪಿತೃ ಸ್ಥಾನದಲ್ಲಿ ಇಲಾಖಾ ಮಂತ್ರಿಗಳು, ಆಯ್ಕೆ ಸಮಿತಿ ಸದಸ್ಯರು ಅಧಿಕಾರಿಗಳು ಹೀಗೆ ಊಹಿಸಿಕೊಳ್ಳುವ ರೀತಿಯಲ್ಲಿ ಬದಲಾವಣೆಗಳು. ಪ್ರಶಸ್ತಿಗಾಗಿ ಬಯೋಡೇಟಾಗಳು, ಅರ್ಜಿಗಳು, ಶಿಫಾರಸ್ಸುಗಳ ಪತ್ರಗಳು, ಜನ ಪ್ರತಿನಿಧಿಗಳ ಮನೆ ಕಚೇರಿಗಳ ಅಲೆದಾಟ, ಸಂಬಂಧಪಟ್ಟ ಅಧಿಕಾರಿಗಳ ಊರ ಹೊರಗಿನ ಕಲಾ, ನೃತ್ಯ ಶಿಲ್ಪ ಗ್ರಾಮಗಳಲ್ಲಿ, ರಿಸಾರ್ಟ್‍ಗಳಲ್ಲಿ ಒಂದಿಷ್ಟು ಆಫೀಸಿಯಲ್ ಒಂದಿಷ್ಟು ಅನಾಫಿಸಿಯಲ್ ಅನ್ನಬಹುದಾದ ಸಮಿತಿಗಳು, ಸಮಿತಿಯೇತರ ಸಭೆಗಳು ಚಾಲು ಆಗಿ ಚಾಲಕಿತನದ ವರ್ತನೆಗಳು ಇನ್ನೂ ಜ್ವರ ಏರುವಂತೆ ಮಾಡುತ್ತವೆ. ಪಾರದರ್ಶಕತೆ ಪ್ರತಿಪಾದಕ ಸರ್ಕಾರವಾಗಲಿ, ಸಮಿತಿಗಳಾಗಲಿ ಇದು ಹೀಗೆ ಹೀಗೆ ಅಂತ ಮುಕ್ತವಾಗಿ ಹೇಳುವುದಿಲ್ಲ ಪರೀಕ್ಷೆಗೆ ಮೊದಲು ಗೌಪ್ಯ ಮುಖ್ಯ. ಆದರೆ ನಂತರ ಬೇಕೇ? ಹಾಗಿದ್ದರೆ ಮರು ಮೌಲ್ಯಮಾಪನವೇಕೆ ಅದಕ್ಕೆ ಫೀ ಆಕರಿಸುವುದು ಏಕೆ? ಪ್ರತಿ ಮೌಲ್ಯಾಮಾಪನಕ್ಕೊಂದು ಮಾಪನ ವಿಧಾನ ಇರುತ್ತದೆ. ಹೀಗೆ ಪ್ರಶಸ್ತಿಗಳಲ್ಲಿ ಇರುತ್ತದಾ? ಕೆಲವರು ಪ್ರಶಸ್ತಿ ನೀಡಿಕೆ ಪರೀಕ್ಷೆ ಅಲ್ಲ, ಅದು ಪ್ರತಿಭೆಗೆ ಪುರಸ್ಕಾರ ಯಾರೂ ಅರ್ಜಿ ಹಾಕೋ ಕಾರಣವಿಲ್ಲ. ಸರ್ಕಾರ ಅಥವಾ ಸಮಿತಿ ನಿರ್ಧರಿಸುತ್ತದೆ ಅಂತ ಹೇಳಬಹುದು ಎಲೆಯ ಮರೆಯ ಕಾಯಿಯಂತೆ ಇದ್ದ ಪ್ರತಿಭೆ ಅಲ್ಲಿಯೇ ಒಂದು ದಿನ ಉದುರಿ ಬೀಳುತ್ತವೆ. ಹುಟ್ಟಿದ್ದು, ಮಾಡಿದ್ದು, ಸತ್ತದ್ದು ಸಹ ಗೊತ್ತಾಗುವುದಿಲ್ಲ. ಯಾರೂ ಅಧಿಕಾರ ಕೇಂದ್ರದ ಹತ್ತಿರ ರಾಜಧಾನಿಯಲ್ಲಿ ಬ್ಯುರೋಕ್ರಾಟ್‍ಗಳ ಸುತ್ತಮುತ್ತಲಿನ ಸೇವೆಯಲ್ಲಿ, ದೇಶದಲ್ಲಿ, ವಿದೇಶದಲ್ಲಿ ಕರೆಸುವರು, ಆತಿಥ್ಯ ಮಾಡುವವರು ಮಾತ್ರ ಕಾಣುತ್ತಾರೆ ಅಥವಾ ಸಿಗುತ್ತಾರೆ. ಇದರಲ್ಲಿ ಕ್ರೀಡಾಪಟುಗಳು, ನಟ, ನಟಿಯರು, ನಿರ್ದೇಶಕರು, ಖ್ಯಾತ ವೈದ್ಯರ ಇಂಜನಿಯರ್‍ಗಳ ಪ್ರತಿಭೆ ಎಲ್ಲಿ ಎಲ್ಲೆಯೋ ಪರೀಕ್ಷೆ ಆಗಿ ಸಮುದಾಯದ ದೃಷ್ಟಿಯಿಂದ ಪ್ರಶಸ್ತಿ ಪಾರದರ್ಶಕವೇ. ಪ್ರದರ್ಶಕ ಕಲೆಗಳ ಮಹತ್ವವೇ ಅದು. ಈ ಕ್ಷೇತ್ರದ ಸಾಧನೆಗೆ ಸಾಮರ್ಥ್ಯವೇ ಮತ್ತೇನೂ ಅಲ್ಲ. ಒಬ್ಬ ಪ್ರಸಿದ್ಧ, ನಟ, ನಟಿ, ಆಟಗಾರನಿಗೆ ಪ್ರಶಸ್ತಿ ನೀಡಿದಾಗ ಯಾರೂ ಅವರ ಜಾತಿ, ಪ್ರಾದೇಶಿಕತೆ ಬಗ್ಗೆ ಕೇಳುವುದಿಲ್ಲ. ಉಳಿದ ಕ್ಷೇತ್ರಗಳ ಬಗ್ಗೆ ಅದರದೇ ಆದ ಮಾಪನಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಪ್ರತಿಭೆ ಮಾಡಿದ ಕೆಲಸ ನೋಡುವಂತೆ, ಕಾಣುವಂತೆ, ಅನುಭವಿಸುವಂತೆ ಇದ್ದರೆ ಅನುಕೂಲವಲ್ಲವೇ? ಪ್ರಶಸ್ತಿ ನೀಡುವಲ್ಲಿ ಇರಬಹುದಾದ ನಿಯಮಗಳನ್ನು ಮೊದಲೇ ಪ್ರಚುರಪಡಿಸಿದ್ದರೆ ಒಳ್ಳೆಯದು ಅಥವಾ ನಿಯಮಗಳು, ಕಾನೂನುಗಳು ಮುಖ ನೋಡಿ ಬದಲಾಗುತ್ತವೆ ಅಂತಿದ್ದರೆ ಅದನ್ನೂ ಮುಂಚೆ ಹೇಳಿಬಿಡುವುದು ಇನ್ನು ಒಳ್ಳೆಯದು. ಸರ್ಕಿಟ್ ಹೌಸ್‍ಗಳಲ್ಲಿ ಕಾದಿರಿಸಿದ ರೂಮ್‍ಗಳು ಕಾದಿರಿಸಿಕೊಂಡವರಿಗಿಂತ ದೊಡ್ಡವರು ಬಂದರೆ ರದ್ದಾಗಿದೆ ಅಂತಾ ಹೇಳಿಸಿಕೊಳ್ಳುವುದಿಲ್ಲವೇ ಹಾಗೆ. ಪ್ರಶಸ್ತಿಗಳನ್ನು ನೀಡುವಾಗ ಪ್ರತಿಭೆ ಗುರುತಿಗೆ ಮಾನದಂಡಗಳ ಬಗ್ಗೆ ಪಾರದರ್ಶಕತೆ, ಕೊಡಬಹುದಾದ ಆದ್ಯತೆಗಳ ಬಗ್ಗೆ ನಿಖರತೆ ಬೇಕು. ಉದಾಹರಣೆಗೆ ಯಾವ ಕಾರ್ಯಕ್ಷೇತ್ರ, ವಯಸ್ಸು, ಅನುಭವ, ಮಾಡಿದ ಕಾರ್ಯದ ಪರಿಣಾಮ, ವೈಶಿಷ್ಟ್ಯತೆ, ಮೀಸಲಾತಿ ಅದರಲ್ಲೂ ಜಾತಿ, ಜಿಲ್ಲಾ, ಪ್ರಾದೇಶಿಕತೆ, ಭಾಷೆ, ಲಿಂಗ ರಾಜಕೀಯ ಮತ್ತು ಕೌಟುಂಬಿಕ, ವ್ಯಾವಹಾರಿಕ ಸಂಬಂಧದ ಸಾಮೀಪ್ಯದ ಇಲ್ಲ ಅಥವಾ ಇದೆ ಅನ್ನೋ ಸತ್ಯ ಕಾಣುವಂತೆ ಇದ್ದರೆ ಒಳ್ಳೆಯದು ಪ್ರಶಸ್ತಿಗೆ ಹೆಸರು ಅಂತಿಮ ಮಾಡೋ ಪೂರ್ವದಲ್ಲಿ ಭಾಜನರ ಒಪ್ಪಿಗೆ ಪಡೆದು ಸಭ್ಯ ಸಂಸ್ಕೃತಿಯ ಲಕ್ಷಣ. ಹೆಸರು ಪ್ರಕಟವಾದ ನಂತರ ಭಾಜನರು ತಿರಸ್ಕರಿಸಿದರೆ ಸರ್ಕಾರದ ಮಹತ್ವ ಮತ್ತು ವ್ಯಕ್ತಿಗತ ದಾರ್ಶನಿಕತೆ ಬಗ್ಗೆ ಪ್ರಶ್ನೆಗಳು ಏಳುತ್ತವೆ. ಇನ್ನೂ ಪ್ರಶಸ್ತಿಗಳ ಮಹತ್ವ ಅವು ಕೇಂದ್ರ ಸರಕಾರದ್ದವೇ, ರಾಜ್ಯ ಸರ್ಕಾರದ್ದೇ, ಅಕಡೆಮಿಗಳದ್ದಾ, ಅಥವಾ ಬೇರೆ ಬೇರೆ ಸಂಸ್ಥೆಗಳದ್ದಾ ಅನ್ನುವದರ ಮೇಲೆಯೂ ಇರುತ್ತದೆ. ಪ್ರಶಸ್ತಿಗಳನ್ನು ನೀಡುವುದರಲ್ಲಿ ಒಂದಿಲ್ಲೊಂದು ರೀತಿಯ ಜಾಗತಿಕ, ರಾಷ್ಟ್ರೀಯ, ಪ್ರಾದೇಶಿಕ, ರಾಜಕೀಯ ಆರ್ಥಿಕ, ಸಾಮಾಜಿಕ, ಸಂಪರ್ಕ, ಸಾಮೀಪ್ಯಗಳ ಪ್ರಭಾವ ವಲಯ ಇದ್ದೆ ಇರುತ್ತದೆ. ಇದು ನೋಬಲ್ ಪ್ರಶಸ್ತಿಯನ್ನೂ ಬಿಟ್ಟಿಲ್ಲ ಇನ್ನು ಉಳಿದ ಪ್ರಶಸ್ತಿಗಳ ಪಾಡೇನು. ಮಹಾತ್ಮ ಗಾಂಧೀಜಿಯವರ ಹೆಸರು ಆರು ಬಾರಿ ಶಿಫಾರಸ್ಸು ಆದರೂ ಸಿಗಲಿಲ್ಲ ಮತ್ತು ನಿಧನದ ವರ್ಷ ಆಯ್ಕೆಯಾದರೂ ಸತ್ತ ವ್ಯಕ್ತಿಗೆ ನೋಬಲ್ ಪ್ರಶಸ್ತಿ ನೀಡುವುದಿಲ್ಲ ಎಂಬ ಪರಂಪರೆಯಿಂದಾಗಿ ಕೊನೆಗೂ ಗಾಂಧೀಜಿಯವರಿಗೆ ಪ್ರಶಸ್ತಿ ಸಿಗಲಿಲ್ಲ ಅನ್ನುವುದು ಸಹ ಸತ್ಯ. ಗಾಂಧೀಜಿ ನೋಬಲ್‍ಗಿಂತ ನೋಬಲ್ ಆಗಿದ್ದರು ಅಂತ ಸಮಾಧಾನ ಹಚ್ಚಿಕೊಳ್ಳುವುದು ಬೇರೆ ಮಾತು. ಇಂತಹ ಸಮಾಧಾನ ಹಚ್ಚಿಕೊಳ್ಳುವುದು ಈಗ ಜಿಲ್ಲಾ, ರಾಜ್ಯ ಕೆಲಮಟ್ಟಿಗೆ ಕೇಂದ್ರ ಸರ್ಕಾರ ಮಟ್ಟಗಳಲ್ಲಿ ಸಾಮಾನ್ಯವಾಗುತ್ತಿದೆ. ಪ್ರಶಸ್ತಿಯ ಬಾಯಾರಿಕೆ ತಣಿಸಲು ಈಗ ಹಲವು ಸೇವಾ ಸಂಸ್ಥೆಗಳು ಸಂಘಟಿಸುವ ಸೆಮಿನಾರ್, ವಿಚಾರ ಸಂಕಿರಣ, ಸಮಾವೇಶಗಳು ನೋಂದಣಿ ಫೀ ತಗೊಳ್ಳುತ್ತ ಭಾಜನರ ಬಯೋಡೆಟಾ ಶ್ರೀಮಂತಗೊಳಿಸುವ ಕ್ರಿಯೆಗೆ ಸಿದ್ಧವಾಗಿವೆ. ಮಂತ್ರಿ ಮಹೋದಯರನ್ನು ಆಮಂತ್ರಿಸಿ ಆಕರ್ಷಕ ಪ್ರಶಸ್ತಿ ಕೊಟ್ಟು ಕಳಿಸುತ್ತಾರೆ. ನೋಂದಣಿ ಫೀ ಎಲ್ಲ ವೆಚ್ಚ ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಇಂತಹವುಗಳಿಗೆ ಮಾಸ ಅಂತ ಇಲ್ಲ ಯಾವಾಗ ಬೇಕಾದಾಗ ಬಸ್ ತುಂಬಿದಾಗ ಮಾತ್ರ ಬಿಡು ಬಸ್ ಇದ್ದಂತೆ. ಇವು ಒಂದು ರೀತಿಯಲ್ಲಿ ಸತ್ತ ತಿಥಿಗೆ ಅನುಗುಣವಾಗಿ ಮಾಡುವ ಶ್ರಾದ್ಧಗಳಿದ್ದಂತೆ.
ಕೃಪೆ : ಸಂಯುಕ್ತ ಕರ್ನಾಟಕ

Leave a Reply