ನಾವು ಮಹಿಳೆಯರು; ಛಲವಿರಲಿ

ನಾವು ಮಹಿಳೆಯರು; ಛಲವಿರಲಿ
‘ಹ್ಯಾಪಿ ವುಮೆನ್ಸ್ ಡೇ’ ಅಂತ ನಾವೆಲ್ಲರೂ ಅಲಂಕಾರಿಕವಾಗಿ ಕೈ ಕುಲುಕಿ ಅಪ್ಪಿಕೊಂಡು ಶುಭಕೋರುತ್ತೇವೆ. ಹಿಂದಿನ ದಿನದಿಂದಲೇ ನಾವು ಎಂಥ ಬಟ್ಟೆ ಧರಿಸಬೇಕು ಎಂಬ ತಯಾರಿಯೂ ಇಲ್ಲದಿಲ್ಲ. ಅಪ್ಪ, ಅಣ್ಣ, ತಮ್ಮ, ಪತಿ, ಸಂಬಂಧಿಕರಿಂದ ಕೊಡುಗೆಯ ನರೀಕ್ಷೆಯಲ್ಲಿರುವವರನ್ನು ಗಮನಿಸಿದ್ದೇನೆ. ಅಂದರೆ ಮಹಿಳೆಯರ ದಿನ ಸ್ವಾರ್ಥಕವಾಗಿರದೇ, ಸಾರ್ಥಕವಾಗಿರಬೇಕು. ಅಂದಾಗ ಮಾತ್ರ ಮಹಿಳಾ ದಿನಾಚರಣೆ ಆಚರಿಸಿದ್ದಕ್ಕೂ ಹೆಮ್ಮೆಯಾಗುತ್ತದೆ.
ನಮ್ಮ ದಿನ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಆದರೆ ಎಷ್ಟೋ ಮಹಿಳೆಯರಿಗೆ ತಮ್ಮತನದ ಸ್ವಾತಂತ್ರ್ಯ ದೊರೆತಿಲ್ಲ. ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದ್ದೇನೆ. ಕೆಲವು ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಸಿನಲ್ಲಿ, ವ್ಯಾಪಾರ ಮಾಡುವ ಸ್ಥಳಗಳಲ್ಲಿ, ಕಚೇರಿಗಳಲ್ಲಿ, ಕ್ಷುಲ್ಲಕ ಕಾರಣಕ್ಕಾಗಿ ಹೆಣ್ಣಿನ ಕುರಿತು ಅವಹೇಳನಕಾರಿ ಮಾತುಗಳನ್ನು ಹೇಳುತ್ತಾರೆ. ಬೆಳಗಾದರೆ ಸಾಕು; ಆ ಮಗ, ಈ ಮಗ…ಏನೂ ಅರಿಯದ ಆ ತಾಯಿಗೆ ಈ ಬೈಗುಳ. ನಾವೆಲ್ಲರೂ ಆ ತಾಯಿಯ ಗರ್ಭದಿಂದಲೇ ಈ ಭುವಿಗೆ ಬಂದದ್ದಲ್ಲವೇ, ಯಾಕೆ ಈ ಅಸಭ್ಯತೆ.
‘ಹೆಣ್ಣು ಭವದ ಬೀಜ’ ಎಂದು ಅಲ್ಲಮಪ್ರಭು ಹೇಳಿದ್ದಾರೆ. ಹೆಣ್ಣಿಲ್ಲದೇ ನಾಡಿಲ್ಲ, ತಾಯಿಯೇ ಮೊದಲ ಗುರು ಎಂಬುದು ಅಕ್ಷರಶಃ ನಿಜ. ಹೆಣ್ಣಿನಿಂದಲೇ ಭವಿಷ್ಯವಿರುವಾಗ ಆಕೆಯ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಕಾಯಿದೆ ಕಾನೂನುಗಳು ದಿನನಿತ್ಯ ನಡೆಯುವಂಥ ಮಹಿಳಾ ದೌರ್ಜನ್ಯಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯು ಅಭಿವೃದ್ಧಿ ಪಥದತ್ತ ಸಾಗಲು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ‘ Time is now; Rural and urban activists transforming women’s lives’- ಎಂಬುದು ಈ ವರ್ಷದ ವಿಶ್ವ ಮಹಿಳಾ ದಿನಾಚರಣೆಯ ಉತ್ತೇಜಿತ ಘೋಷಣೆಯಾಗಿದೆ.
ವಿಶ್ವದಾದ್ಯಂತ ಗ್ರಾಮ ಮತ್ತು ನಗರಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವಂಥ ಅಸಮಾನತೆ, ಲಿಂಗ ತಾರತಮ್ಯ, ಹಿಂಸೆ, ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ, ಬಾಲ್ಯವಿವಾಹ, ಇವೆಲ್ಲವುಗಳ ಮೇಲೆ ಕಾನೂನಿನ ಸಹಕಾರದಿಂದ ಮೆಟ್ಟಿನಿಂತು, ಅವಳಲ್ಲಿ ಆಶಾವಾದ, ಧೀರತೆ, ಪ್ರೋತ್ಸಾಹ ತುಂಬುವ, ಎಲ್ಲ ಕ್ಷೇತ್ರದಲ್ಲಿ ಕಾರ್ಯಮಾಡುವಂಥ ಮಹಿಳೆಯರನ್ನು ಹುರಿದುಂಬಿಸುವ ಮತ್ತು ಸಮಾನತೆಯನ್ನು ಕಾಪಾಡುವ ಧ್ಯೇಯವನ್ನು ಈ ದಿನಾಚರಣೆ ಹೊಂದಿದೆ.
ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಈ ಶಿಕ್ಷಣದಿಂದಲೇ ಅವಳು ತನ್ನ ಸಾಮರ್ಥ್ಯವನ್ನು ತೋರಿಸಬಲ್ಲಳು. ಶಿಕ್ಷಣ ಪಡೆಯುತ್ತಿರುವಂಥ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ಮನೆಯವರಿಂದಲೇ ಪ್ರಾರಂಭವಾಗಬೇಕು. ಇಂದಿನ ಯುಗದಲ್ಲಿ ಅವಳು ಯಾವುದರಲ್ಲಿ ಕಡಿಮೆಯಾಗಿದ್ದಾಳೆ? ಅವಳು ಉತ್ತಮ ಶಿಕ್ಷಣ ಪಡೆದಲ್ಲಿ ಸ್ವಾವಲಂಬಿಯಾಗಿ ಬದುಕುತ್ತಾಳೆ. ಎಲ್ಲ ಕ್ಷೇತ್ರಗಳಲ್ಲಿ ಸಾಧನೆಗೈಯಲು ಅವಳಿಗೆ ಸಹಕಾರ, ಪ್ರೋತ್ಸಾಹ, ಸಿಕ್ಕಲ್ಲಿ ಅವಳಿಗೆ ಯಶಸ್ಸು ಕೀರ್ತಿ ಕಟ್ಟಿಟ್ಟ ಬುತ್ತಿ, ಅವಳ ಉತ್ಸಾಹಕ್ಕೆ ಪ್ರೇರಣೆಬೇಕು. ಏನೇ ಸಾಧಿಸಲು ಮುಂದುವರೆಯಲು ಮನೆಯ ಸದಸ್ಯರು ಪ್ರೇರೇಪಿಸಬೇಕು. ಅವಳಲ್ಲಿ ಸಾಧನೆಯ ಛಲ ತುಂಬಬೇಕು.
ಪುರುಷ ಪ್ರಧಾನವಾದ ನಮ್ಮ ದೇಶದಲ್ಲಿ ಇಂದು ಹೆಣ್ಣುಮಕ್ಕಳು ಎಷ್ಟೋ ಸಾಧನೆಯನ್ನು ಮಾಡಿದ್ದರೂ ಅವಳನ್ನು ಕೀಳು ದೃಷ್ಟಿಯಿಂದಲೇ ಕಾಣಲಾಗುತ್ತಿದೆ. ಅತ್ಯಾಚಾರ, ಅನಾಚಾರಗಳು ನಡೆಯುತ್ತಲೇ ಇವೆ. ಈ ದೌರ್ಜನ್ಯಕ್ಕೆ ಕೊನೆ ಇಲ್ಲದಂತಾಗಿದೆ. ಕಾನೂನಿನ ಯಾವುದೇ ಶಿಕ್ಷೆಗೆ ಹೆದರಿಕೆ ಇಲ್ಲದಂತಾಗಿದೆ. ಕಾನೂನಿನ ಯಾವುದೇ ಶಿಕ್ಷೆಗೆ ಹೆದರಿಕೆ ಇಲ್ಲದಂತಾಗಿದೆ. ಕಾನೂನಿಗೆ ಹೆದರದ ನೀಚ ಕಿರಾತಕರಿದ್ದಾರೆ.
ಹೆಣ್ಣು ತನ್ನ ಬಯಕೆಗಳನ್ನು ಹತ್ತಿಕ್ಕುತ್ತ ಹೋಗಿ ಮಾನಸಿಕ ಒತ್ತಡಕ್ಕೆ ಒಳಗಾಗುವುದುಂಟು. ಹೆಣ್ಣಿನ ಮನಸ್ಸನ್ನು ಅರಿಯಿರಿ. ಅವಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳಬೇಡಿ. ಅವಳಿಗೆ ಪ್ರೋತ್ಸಾಹ ನೀಡಿ, ದೃಢನಿರ್ಧಾರ, ಆತ್ಮವಿಶ್ವಾಸ ಮಹಿಳೆಯರಲ್ಲಿ ಇದ್ದಾಗ ಸಾಧನೆಯ ಶಿಖರಕ್ಕೆ ಯಾವುದೂ ಅಡ್ಡಿಯಾಗುವುದಿಲ್ಲ. ಗಂಡಸರೊಂದಿಗೆ ನಾನು ಸಮನಾಗಿ ಕೆಲಸ ಮಾಡಬಲ್ಲೆ ಎಂಬ ಕ್ರಿಯಾತ್ಮಕ ಚಿಂತನೆ, ನಿರ್ವಹಣೆ, ಸಾಧಿಸುವ ಛಲ, ಗುಣ, ಕರ್ತವ್ಯ ನಮ್ಮ ವ್ಯಕ್ತಿತ್ವದಲ್ಲಿದ್ದರೆ ಖಂಡಿತವಾಗಿ ಮಹಿಳೆಯರ ಏಳ್ಗೆಗೆ ಸಾಧ್ಯವಾಗುತ್ತದೆ. ಯಾವುದೇ ಕೆಲಸದಲ್ಲಿನ ಹಿಂಜರಿತ, ನಮ್ಮನ್ನು ಕುಗ್ಗಿಸಿಬಿಡುತ್ತದೆ. ಅದಕ್ಕಾಗಿ ಹಿಂಜರಿತವನ್ನು ಮನಸ್ಸಿನಿಂದ ಕಿತ್ತುಹಾಕಬೇಕು. ಮಕ್ಕಳ ಮೇಲಾಗುವ ದೌರ್ಜನ್ಯ ಅವರ ಮುಂದಿನ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಅಪರಾಧಿ ಭಾವ, ಆತಂಕ, ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತವೆ.
ಮಹಿಳೆ ಯಾವಾಗಲೂ ದುಡಿಯುತ್ತ ಇರುತ್ತಾಳೆ. ಕುಟುಂಬದ ಒಳ ಹೊರ ಕಾರ್ಯಗಳಲ್ಲಿ ಮಾತ್ರವಲ್ಲದೇ ವೃತ್ತಿ ಕಾರ್ಯಕ್ಷೇತ್ರದಲ್ಲಿ ಪ್ರವೇಶಿಸಿ ತನ್ನ ವ್ಯಕ್ತಿತ್ವವನ್ನು ಮೆರೆದಿದ್ದಾಳೆ. ಆರ್ಥಿಕ ಸ್ವಾತಂತ್ರ್ಯ ಹೊಂದಿ, ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾಳೆ. ಇದರಿಂದ ಅವಳು ತನ್ನ ಪ್ರತಿಭೆಯನ್ನು ಹೊರಹಾಕಿ ತೃಪ್ತಿಕಂಡುಕೊಂಡಿದ್ದಾಳೆ. ಅನೇಕ ರೀತಿಯಲ್ಲಿ ಸಾಧನೆಗೈದ ಮಹಿಳೆಯರನ್ನು ನೋಡಿದಾಗ ಮುಂಬರುತ್ತಿರುವ ಇತರ ಮಹಿಳೆಯರಿಗೆ ಮಾದರಿಯಾಗಿದೆ. ನಮ್ಮ ವೈಯಕ್ತಿಕ ಸ್ವ-ಸ್ವಾತಂತ್ರ್ಯವನ್ನು ಹೊಂದುವಲ್ಲಿ ನಮ್ಮತನವನ್ನು ಉಳಿಸಿಕೊಳ್ಳೋಣ.

Leave a Reply