ಮೀಸಲಾತಿ ನೂರಕ್ಕೆ ನೂರು ಮಾಡಿ

ಮೀಸಲಾತಿ ನೂರಕ್ಕೆ ನೂರು ಮಾಡಿ

ಮೀಸಲಾತಿ ಹೆಚ್ಚಳವನ್ನು ಶೇಕಡಾ 70ಕ್ಕೆ ಹೆಚ್ಚು ಮಾಡುವುದನ್ನು ಕುರಿತು ಪೂರಕವಾಗಿ ಮುಖ್ಯಮಂತ್ರಿಗಳು ವಾಲ್ಮೀಕಿ ಜಯಂತಿ ದಿನ ಹೇಳಿಕೆನೋ, ಘೋಷಣೆನೋ ಮಾಡಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೀಸಲಾತಿ ಕುರಿತು ಮೂರು ಸತ್ಯಗಳು ನಮ್ಮ ಮುಂದೆ ಇವೆ. ಒಂದು ವೈಜ್ಞಾನಿಕ, ಇನ್ನೊಂದು ಸಾಮಾಜಿಕ, ಮತ್ತೊಂದು ಪಾರಮಾರ್ಥಿಕ ಇವುಗಳಲ್ಲಿ ಸಾಮಾಜಿಕವೇ ಮುಖ್ಯವಾದುದು ಅಂತ ನನ್ನ ಭಾವನೆ. ಸಂವಿಧಾನ ತಯಾರಾಗುವ ತಾತ್ಕಾಲಿಕ ಮಾತ್ರ ಅಂತ ಇದ್ದುದು ಈಗ ಶಾಶ್ವತ ಅನ್ನೋಮಟ್ಟಿಗೆ ಬಂದು ನಿಂತಿದೆ. ಈಗ ವೈಜ್ಞಾನಿಕವಾಗಿ ವಿಚಾರ ಮಾಡಹತ್ತಿದರೆ ಎಷ್ಟೋ ಜನಾ, ಅದರಲ್ಲೂ creamy layerದವರೆಲ್ಲ ಹೊರಹೋಗುತ್ತಾರೆ. ಆರ್ಥಿಕವಾಗಿ ಮುಂದುವರೆದಿದ್ದರೂ ಸಂಪತ್ತು ಇದ್ದರೂ ಸಿಗಲಾರದ ಮನ್ನಣೆ, ರಕ್ಷಣೆ, ಅಂತಸ್ತು, ಮತ್ತಿತರ ಭಾಗ್ಯಗಳು ಭಾಗ್ಯಗಳ ನಾಡಿನಲ್ಲಿ ಸಿಗಲಿಕ್ಕಿಲ್ಲ ಅನ್ನುವ ಭಯ ಸಾಮಾಜಿಕ ಸತ್ಯಕ್ಕೆ ವಾಲುವದನ್ನು ತಪ್ಪಿಸಲಾಗದ ಸ್ಥಿತಿಗೆ ಬಂದು ನಿಂತಿವೆ. ನಮ್ಮ ಸೋ ಕಾಲ್ಡ್ ಸೆಕ್ಯುಲರಿಸಂ ಮತ್ತು ಡೆಮೋಕ್ರಸಿ. ಸುಪ್ರೀಂಕೋರ್ಟ್ ಏನೇ ಹೇಳಲಿ, ಆ ರಾಜ್ಯ, ಈ ರಾಜ್ಯದಲ್ಲಿ ಹೀಗಿದೆ ಹಾಗಿದೆ ಸಮಜಾಯಿಷಿ ಸಹ ಮಾಧ್ಯಮಗಳಲ್ಲಿ ವರದಿಯಾಗಿದೆ. ಮತಕ್ಕಾಗಿ, ಚುನಾವಣೆ ಮೂಲಕ ಅಧಿಕಾರಕ್ಕಾಗಿ ನಾರದರು ಹೇಳಿದ ಹಾಗೆ ಅಂದರೆ ಭಿನ್ನಾಭಿಪ್ರಾಯ ಹುಟ್ಟಿಸುವ ಸಲುವಾಗಿ ಹೇಳುವುದಕ್ಕಾಗಿ, ಚೀಪಾದ ಜನಪ್ರಿಯತೆ ಗಳಿಸುವುದಕ್ಕಾಗಿ ರಾಜಕಾರಣಿಗಳು ಘೋಷಣೆ ಮಾಡುತ್ತಾರೆ. ಕ್ರಿಯೇಟಿವ್ ಆಗಿ ವಿಚಾರ ಮಾಡುವುದಿಲ್ಲವೇನೋ ಅನಿಸುತ್ತದೆ. ಇದು ಮುಂದುವರಿದವರಿಗೂ ಅನ್ವಯವಾಗುತ್ತದೆ. ಮೀಸಲಾತಿ ಅಂದರೆ ಟೀಕೆ ಯಾಕೆ? ಬಂದದ್ದು ಬರಲಿ ಗೋವಿಂದನ ದಯೆವೊಂದಿರಲಿ. ವಿದ್ರೋಹದ ಬಾಣ ಬರುವುದು ರಕ್ಷಣೆಯ ಕೋಟೆಯಿಂದಲೇ ಅನ್ನುವದನ್ನು ಅರಿಯಬೇಕು. ಹೀಗೆ ವಿಚಾರ ಮಾಡಿದರೆ ಹೇಗೆ ಎಲ್ಲ ಜಾಹೀರಾತುಗಳಲ್ಲಿ ಸಣ್ಣ ಅಕ್ಷರಗಳಲ್ಲಿ ಎಲ್ಲದಕ್ಕೂ ಕಂಡಿಷನ್ಸ್ ಅನ್ವಯವಾಗುತ್ತವೆ ಎಂದು ಮುದ್ರಿಸಿರುತ್ತಾರೆ. ಯಾರು ಎಲ್ಲಾ ಒಪ್ಪಿಕೊಂಡು ಲಾಭ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ನಾನು ಮೀಸಲಾತಿಯಿಂದಲೇ ಅಭಿವೃದ್ಧಿ, ಪದೋನ್ನತಿ, ನೇಮಕಾತಿ, ಪ್ರವೇಶ ಪಡೆದಿದ್ದೇನೆ ಅಂತ ಘೋಷಣೆ ಮಾಡಿಕೊಳ್ಳಲಿ ಬಿಡಿ. ಲಾಭದಲ್ಲಿ ಸಹ ಪ್ರಾಮಾಣಿಕತೆ ಇರಬೇಕು ಹೇಳುವುದರಲ್ಲಿ, ಬರೆಯುವುದರಲ್ಲಿ, ಪಾಲಿಸುವಲ್ಲಿ ಪ್ರಾಮಾಣಿಕತೆ ಇರಬೇಕಾದುದು ನ್ಯಾಯವಲ್ಲವೇ? ನೂರಕ್ಕೆ ನೂರು ಮೀಸಲಾತಿ ಮಾಡಿಬಿಡಿ ಮಂತ್ರಿಗಳೇ ಕಾಳಜಿಯೇ ಬೇಡಾ ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಪ್ರತಿಭೆ, ಕೌಶಲ್ಯ ಇದ್ದವರಿಗೆ ಎಲ್ಲಿಯಾದರೂ ಜಾಗವಿದ್ದೇ ಇರುತ್ತದೆ. ನೂರಕ್ಕೆ ನೂರು ಮೀಸಲಾತಿ ಮಾಡಿದರೆ ಏನಾಗಬಹುದು? ಕಾಯಿದೆ ಕಾನೂನು ಅಂತ ಸಂವಿಧಾನವನ್ನೇ ಬದಲಿಸಿ. ಆಗ ಕೋರ್ಟ್‍ಗಳು ಏನು ಮಾಡುತ್ತವೆ ಶಾಸಕ, ಸಂಸದರೆ ಕಾನೂನು ಮಾಡುವರಲ್ಲವೇ ಮಾಡಿಬಿಡಿ, ಎಲ್ಲ ಸರ್ಕಾರಿ ನೌಕರಿಗಳು ನೂರಕ್ಕೆ ನೂರು ಮೀಸಲಾತಿಯಿಂದಲೇ ತುಂಬಲಿ, ಎಲ್ಲ ಚುನಾವಣೆಯ ಕ್ಷೇತ್ರಗಳು ಅನ್ವಯವಾಗಲಿ, ಉಳಿದವರೆಲ್ಲ ಖಾಸಗಿ ಕ್ಷೇತ್ರ, ವ್ಯಾಪಾರ ಖಾಸಗಿ ಸಂಶೋಧನೆ ಅಥವಾ ಬೇರೆ ಬೇರೆ ದೇಶಗಳಿಗೆ ಅವಕಾಶಗಳ ಶೋಧಿಸುತ್ತ ಹೋಗಿ ಅಲ್ಲಿಯೇ ಸೆಟಲ್ ಆಗಬಹುದು. ಈಗ ಲೋಕೋಪಯೋಗಿ ಇಲಾಖೆಯಿಂದ ಹಿಡಿದು ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಕಲ್ಪನೆ, ಯೋಜನೆ, ವಿನ್ಯಾಸ ಉಸ್ತುವಾರಿ ಎಲ್ಲದರಲ್ಲೂ ಖಾಸಗಿ ಸಲಹೆಗಾರರು ಕೆಲಸ ಮಾಡುತ್ತಿಲ್ಲವೇ? ಒಂದು ಕಾಲದಲ್ಲಿ ಎಲ್ಲವೂ ಇಲಾಖೆಯಲ್ಲಿಯ ನೌಕರದಾರರಿಂದಲೇ ಆಗುತ್ತಿದ್ದವು ಅನ್ನುವದನ್ನು ನೆನಪಿಸಿಕೊಳ್ಳಬೇಕಾಗಿದೆ. ದಡ್ಡರ ಸಂಖ್ಯೆ ಹೆಚ್ಚಾದಂತೆ ಹೊರಗಿನಿಂದ ಕಾರ್ಯ ಮಾಡಿಕೊಳ್ಳುವ ಸನ್ನಿವೇಶ ಈಗ ನಿರ್ಮಾಣವಾದುದು ಅನುಭವಕ್ಕೆ ಬಂದ ಸಂಗತಿ. ಎಲ್ಲರೂ ದಡ್ಡರು ಅಂಥ ಅಭಿಪ್ರಾಯವಲ್ಲ. ಆತ್ಮ ವಿಶ್ವಾಸದ ಕೊರತೆ, ಜವಾಬುದಾರಿ ತೆಗೆದುಕೊಳ್ಳದಿರುವಿಕೆ, ಕೀಳರಿಮೆ ಹೀಗೆ ಏನೇನೋ ಕಾರಣಗಳು ಇರಬಹುದು. ಉತ್ಪಾದಕತೆ ಕಡಿಮೆ ಅನಿಸಬಹುದು. ಆಗಲಿ ಬಿಡಿ ಅದೂ ಭಾಗ್ಯವೇ. ಖಾಸಗಿ ಕ್ಷೇತ್ರದ ಕೆಲಸಗಳು ಜಾಸ್ತಿ ಆಗುತ್ತಾ ಹೋಗುತ್ತವೆ. ಸರ್ಕಾರಿ ಶಾಲೆಗಳಲ್ಲಿ ಈಗಲೇ ಪ್ರವೇಶಗಳು ಕಡಿಮೆಯಾಗುತ್ತಾ ಹೋಗುತ್ತಿವೆ. ಕಾರ್ಯಕ್ಷಮತೆ ಖಾಸಗಿಯಲ್ಲಿ ಜಾಸ್ತಿಯಾಗುತ್ತವೆ ಖಾಸಗಿ ಕ್ಷೇತ್ರದಲ್ಲಿ ಸಹ ಮೀಸಲಾತಿ ತಂದರೆ ಹೆಚ್ಚೇನು ಆಗಬಹುದು? ಪ್ರಾಮಾಣಿಕವಾಗಿ ಮೀಸಲಾತಿಯ ಲಾಭದ ಘೋಷಣೆ ಮಾಡಿಕೊಂಡಾಗ ಏನಾಗುತ್ತದೆ ಅನ್ನುವದನ್ನು ಊಹಿಸಬಹುದಾಗಿದೆ. ಶತಮಾನಗಳ ಉದ್ದಕ್ಕೂ ಶೋಷಣೆಯಾಗಿದೆ ಅನ್ನುವರೆಲ್ಲ ಇನ್ನು ಮುಂದೆ ಶೋಷಣೆ ಮಾಡಿ ಉಳಿದವರಿಗೆ ನೋಡದ ಸರಿಯಾಗಿ ತಿಳಿಯದ ಇತಿಹಾಸ ಅರಿಯುವಂತೆ ಮಾಡಲಿ, ಪಿತೃಗಳು ಶೋಷಣೆ ಮಾಡಿದ್ದಾರೆ ಅನ್ನುವ ಸ್ಥಿತಿಯಿಂದ ಇಂಥ ಸಾಮಾಜಿಕ ನಿರ್ಮಾನ ಅಸಮತೋಲನ ಆಗಿದೆ ಅನ್ನುತ್ತಾ ಈಗಿನ ಸಂತಾನ ಯುವ ಜನಾಂಗಕ್ಕೆಲ್ಲ ಶೋಷಣೆ ಮಾಡಲಿ ಮುಂದೆ ಬರುವ ಶತಮಾನಗಳ ಉದ್ದಕ್ಕೂ. ಆಗುವುದು ಆಗೇ ಆಗುತ್ತದೆ ಎಲ್ಲದಕ್ಕೂ ಬೈಸಿಕೊಳ್ಳುವ ಮನು ನಾಲ್ಕೇ ವರ್ಣ ಅಥವಾ ವರ್ಗ, ಜಾತಿಗಳನ್ನು ಮಾಡಿದ್ದರೆ, ಇಂದು ಆ ಆಯೋಗ, ಈ ಆಯೋಗಗಳು ಸಾವಿರಗಟ್ಟಲೇ ಜಾತಿಗಳನ್ನು ಹುಟ್ಟಿಸಿವೆ ಹೀಗಾಗಿ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ನೂರಕ್ಕೆ ನೂರು ಇನ್ನೂ ನೂರು ವರ್ಷ ವಿಸ್ತರಿಸಿದರೂ ತಪ್ಪೇನಿಲ್ಲ ಅಂತ ಅನಿಸುವುದಿಲ್ಲವೇ? ಹಳೆಯ ರಾಜರುಗಳು ಹೋದರು. ಹೊಸ ರೂಪದಲ್ಲಿ ಮಂತ್ರಿಗಳು ಬಂದರು. ವಂಶ ಪರಂಪರೆಯ ರಾಜವಂಶಗಳು ಹೋಗಿ ಮಂತ್ರಿ, ಶಾಸಕ, ಸಂಸದರ ವಂಶಗಳು ಬಂದವು. ಮೀಸಲಾತಿಯ ನಂತರ ಒಳ ಮೀಸಲಾತಿ ಹೀಗೆ ಕಾಲಾಯ ತಸ್ಮೈ ನಮಃ ಮುಂದುವರಿಯಲೇಬೇಕು. ಚಿನ್ನ ಚಿನ್ನವೇ. ಆಕರ್ಷಕ ಆಭರಣವಾಗಬೇಕೆಂದರೆ ತುಸು ಬೇರೆ ಲೋಹ ಕೂಡಿದರೆ ಅಲ್ಲವೇ 17, 18, 20, 21, 22ರ ಕ್ಯಾರೆಟ್ ಅಂತ ಕರೆಸಿಕೊಳ್ಳುವ ಬಂಗಾರದ ಆಭರಣವಾಗುವುದು. ನೂರಕ್ಕೆ ನೂರು ಬೇರೆ ಲೋಹವೆ ಆದರೆ ಅದರ ಆಕರ್ಷಣೆ, ಮೌಲ್ಯವೇ ಬೇರೆಯಾಗುವುದಿಲ್ಲವೇ? ಅದಕ್ಕಾಗಿ ಚಿಂತಿಸಬೇಕಿಲ್ಲ. ದಕ್ಷಿಣ ಆಫ್ರಿಕಾದಲ್ಲಿ reserved for whites ಅನ್ನುವ ಫಲಕ ನೀತಿಯೇ ಅಲ್ಲವೇ ಗಾಂಧೀಜಿಯನ್ನು ಹುಟ್ಟಿಸಿದ್ದು? ಎಲ್ಲವೂ ನಿಮಗಾಗಿ ಸೂಜಿ ಮೊನೆಯಷ್ಟು ನೆಲವನ್ನು ಕೊಡುವುದಿಲ್ಲ ಎಂದ ಕೌರವ 18ಕ್ಕೆ ಸೋತ ಅನ್ನುವದು ಪೌರಾಣಿಕ ಸತ್ಯ. ನಂಬುವುದು ಬಿಡುವುದು ಅವರವರ ಇಷ್ಟ. ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತು ಭಾರತ ಎಂಬುವದು ಗೊತ್ತಿದ್ದ ಸಂಗತಿ. ಸಮುದ್ರ ಮಂಥನವಾದ ಹಾಗೆ ವಿಚಾರ ಮಂಥನವಾಗಿ ಎಲ್ಲರಿಗೂ ಬೇಕಾದ ಸಮಾನತೆಯ ಅಮೃತ ಬರುವ ಮೊದಲು ಬರುವದೆಲ್ಲವೂ ಬರಲೇಬೇಕು ಬಂದದ್ದಕ್ಕೆಲ್ಲ ಒಂದು ಪರಿಹಾರ, ಸಮಾಧಾನ ಇರಲೇಬೇಕು. ಸುಂದರ ಆಶೆಯ ಮೋಹಿನಿಗೆ ಒಬ್ಬ ಭಸ್ಮಾಸುರ ಸಿದ್ಧ ಇದ್ದೆ ಇರುತ್ತಾನೆ!

ಕೃಪೆ : ಸಂಯುಕ್ತ ಕರ್ನಾಟಕ

Leave a Reply