Your Cart

Need help? Call +91 9535015489

📖 Print books shipping available only in India. ✈ Flat rate shipping

ಇವು ಮಾತಾಡುವ ಭಾಷೆ ಯಾವುದು-?

ಇವು ಮಾತಾಡುವ ಭಾಷೆ ಯಾವುದು-?

ಬೇಂದ್ರೆಯವರು ಹಾರುವ ದುಂಬಿಯ ನಾದವನ್ನು ಸಂಗೀತದ ಹಾಗೆ ಆಸಕ್ತಿಯಿಂದ ಕೇಳುತ್ತಿದ್ದರು. ಅದು ಕೊರೆದ ಕಟ್ಟಿಗೆಯಲ್ಲಿ ಅಕ್ಷರಗಳನ್ನು ಹುಡುಕುತ್ತಿದ್ದರು. ಕಪ್ಪೆಗಳು ಒದರುವ ಧ್ವನಿಯಲ್ಲಿ ಅವುಗಳ ಭಾವವನ್ನು ತಿಳಿಯುತ್ತಿದ್ದರು. ಫ್ಯಾನ್ ತಿರುಗುವಾಗ ಕೇಳಿಸುವ ಸಪ್ಪಳದಲ್ಲಿ ‘ಓಂ’ಕಾರ ಆಲಿಸುತ್ತಿದ್ದರು. ಅವರಿಗೆ (ಇಂತಹದರಲ್ಲಿ) ಕುತೂಹಲ ಕೌತುಕ ಇರುತ್ತಿತ್ತು.
ಒಮ್ಮೆ ಧಾರವಾಡದಲ್ಲಿ ಎರಡು ದಿವಸಗಳಿಂದ ಮಳೆ ಸುರಿದಿತ್ತು, ಮನೆ ಎದುರಿನ ಕೆರೆ ತುಂಬಿತ್ತು. ರಾತ್ರಿ ಒಂದು ಗಂಟೆಗೆ ಎದ್ದು ಬಂದು ಬಾಗಲಾ ತಗದರು. ಬಾಳನನ್ನು ಎಬ್ಬಿಸಿದರು. ಅವರು ತಂದೆಯ ಮಾತು ಎಂದೂ ಇಲ್ಲ ಅಂದವರಲ್ಲ. ಬೇಸರ ಪಟ್ಟುಕೊಂಡವರಲ್ಲ. ‘ಏನು?’ ಕೇಳಿದರು. ‘ಕೆರೆಯೊಳಗ ಕಪ್ಪೆ ಒಟಗುಡಲಿಕ್ಕೆ ಹತ್ಯಾವ ಅಲ್ಲೆ ಹೋಗಿ ಬರೋಣ’ ಅಂದ್ರು. ಬಾಳಣ್ಣ ಮರುಮಾತನಾಡದೇ ಬ್ಯಾಟ್ರಿ ಹಿಡಿದು, ಕಾಲಲ್ಲಿ ಚಪ್ಪಲಿ ಹಾಕಿಕೊಂಡು ಹೊರಟರು. ಆ ಕತ್ತಲೆಯೊಳಗೆ ಛಳಿಯಲ್ಲಿ ಕೆರೆಯ ದಂಡೆಯ ಮೇಲೆ ಹೋಗಿ ಕುಳಿತರು. ಕಪ್ಪೆಗಳ ಒಟಗುಡುವ ಧ್ವನಿಗೆ ಜೀರುಂಡೆಗಳ ‘ಜುಂಯಿ’ ಸಪ್ಪಳದ ಸಾಥ ಬಿಟ್ಟರೆ, ಬ್ಯಾರೆ ಏನೂ ಕೇಳುತ್ತಿರಲಿಲ್ಲ. ಅಷ್ಟು ಪ್ರಶಾಂತ ವಾತಾವರಣ ಇತ್ತು.
ಕೆರೆಯ ದಂಡೆಯ ಮೇಲೆ ತಾಸಗಟ್ಟಲೇ ಮೌನವಾಗಿ ಕುಳಿತರು. ಹೊರಗೆ ಭಾಳ ಛಳಿ ಇತ್ತು. ಗೋವಾ ರಸ್ತೆಯ ಮೇಲಿಂದ ಆಗಾಗ ವಾಹನಗಳ ಹೆಡ್‍ಲೈಟ್ ಬಿಟ್ಟರೆ, ಸುತ್ತೆಲ್ಲ ಕತ್ತಲೆ. ಎರಡು ತಾಸು ಆಯಿತು.
‘ಇನ್ನ ಹೋಗೋಣ?’ ಅಂತ ಬಾಳಣ್ಣ ಕೇಳಿದರು.
‘ಇನ್ನೂ ಕೂಡು, ಅವುಗಳ ಭಾಷೆ ಯಾವುದು? ಏನ ಮಾತಾಡತಾವ? ಹ್ಯಾಂಗ ಮಾತಾಡತಾವ? ಕೇಳೋಣ. ನಾಳೆ, ಹಿಂಗ ಮಾತಾಡತಾವಂತ ಹೇಳಲಿಕ್ಕೆ ಬರೋದಿಲ್ಲ.’ ಅಂತ ಬೆಳಗಿನ ನಾಕೂ ಮೂವತ್ತರತನಕ ಕುಳಿತು ಆಲಿಸಿದರು. ಬೇಂದ್ರೆಯವರು ನಾದಪ್ರಿಯರಾಗಿದ್ದರು. ಅಂತೆಯೆ ‘ನಾದಬೇಕು, ನಾದಬೇಕು.
ನಾದಾನ ನಾದಬೇಕು.. ತುದಿಮುಟ್ಟಾನು ನಾದಬೇಕು ಅಂತ ಬರೆದಿದ್ದಾರೆ.
“ತಿಳಿದದ ಅಂದ ಕೂಡಲೆ ಸೊಕ್ಕು ತಲಿಗೇರ್ತದ, ಮತ್ತ ತಿಳಿಕೊಂಬೋದು ಇನ್ನೂ ಅದ ಅನ್ನಿಸಿದಾಗ ಸೊಕ್ಕು ತಲೆಯಿಂದ ಕೆಳಗ ಇಳಿತದ. ತಲಿಗೆ ಏರೋದು ಮತ್ತು ಇಳಿಯೋದು ಇದರ ಮಧ್ಯಕ್ಕ ಇರ್ತದ ತಿಳಕೊಂಬೋದು. ತಿಳಿಕೋಬೇಕಾದದ್ದು ಇನ್ನೂ ಅದ ಅಂತ ಎನಿಸುವುದೇ ನಿಜವಾದ ತಿಳುವಳಿಕೆ ಮಟ್ಟ”

ಸುತ್ತಲಿನ ಪರಿಸರ ಕೆಟ್ಟದರಿ
ಅವರ ಮನೆಗೆ ಯಾರೋ ಒಂದಿಬ್ಬರು ಬಂದಿದ್ದರು. ಅದೂ ಇದೂ ಮಾತನಾಡುತ್ತವರೊಳಗೊಬ್ಬರು ‘ಸುತ್ತಲಿನ ಪರಿಸರನ ಕೆಟ್ಟದರಿ’ ಅಂದಾಗ-
‘ಹಂಗ ಅನಬ್ಯಾಡಾ. ತಿಪ್ಪಿಯೊಳಗ ಬೆಳೆದ ಒಂದು ಗುಲಾಬಿ ಗಿಡ, ಪರಿಸರ ಕೆಟ್ಟದಂತ, ತಾನು ಬಿಟ್ಟ ಹೂವಿಗೆ ತಿಪ್ಪಿವಾಸನಿ (ದುರ್ವಾಸನಿ) ಬೀರೋದಿಲ್ಲ. ಗುಲಾಬಿ, ತಿಪ್ಪೀ ಪರಿಸರವಾಗಿದ್ದರೂ ಅದರ ದುರ್ವಾಸನೆಯನ್ನು ಪರಿಮಳವಾಗಿ ಪರಿವರ್ತಿಸುವಂತೆ ನೀವು ನಿಮ್ಮಲ್ಲಿರುವ ಉತ್ತಮ ಗುಣದಿಂದ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿರಿ. ಮುಂದಿನ ಪೀಳಿಗೆಗೆ ಆದರ್ಶವ್ಯಕ್ತಿಗಳಾಗರಿ ಎಂದು ವಿವರಿಸಿ ಕೆಟ್ಟ ಸಮಾಜವನ್ನು ಸುಧಾರಿಸಲೋಸುಗ ಯಾರೇನು ತ್ಯಾಗ ಮಾಡಿದರನ್ನೋದನ್ನ ಹೇಳಿ, ಅಲ್ಲಿದ್ದವರ ಋಣಾತ್ಮಕ ತಿಳವಳಿಕೆ ತಿದ್ದಿದರು.

ಹೇಳಿದಂಗ ಕೇಳಿಕ್ಕೆ ಅದೇನ ಬೇಂದ್ರೆಯೇನು? ಅದು ಬಂದರ್!
ಕರ್ನಾಟಕ ರಾಜ್ಯ ಸರಕಾರದ ವಾರ್ತಾ ಇಲಾಖೆಯವರು ಬೇಂದ್ರೆಯವರ ಸಾಕ್ಷಿಚಿತ್ರ (ವ್ಯಕ್ತಿ ಚಿತ್ರಣದ ಡಾಕ್ಯೂಮೆಂಟರಿ ಫಿಲ್ಮ) ತಯಾರಿಸಲು ಗಿರೀಶ್ ಕಾರ್ನಾಡರಿಗೆ ಒಪ್ಪಿಸಿದ್ದರು. ಅಂದು ಬೆಳಿಗ್ಗೆ ಚಿತ್ರೀಕರಣ ಪ್ರಾರಂಭವಾಗುವ ವೇಳೆಗೆ ‘ಸುರೇಶನಿಂದ ಪ್ರಾರಂಭವಾಗಲಿ’ ಬೇಂದ್ರೆಯವರು ಹೇಳಿದರು. ಎಲ್ಲ ತಯಾರಿಯಾಯಿತು. ಮುಖದ ಮೇಲೆ ಸ್ವಲ್ಪು ಹೆಚ್ಚು ಬೆಳಕು ಬೇಕು ಎಂದೆನಿಸಿ ಛಾಯಾಗ್ರಾಹಕ ಗೋವಿಂದ ನಿಹಲಾನಿ ಸ್ಟ್ಯಾಂಡ್ ಲೈಟನ್ನು ಸರಿಸಲು ಬಂದಾಗ, ನೇರಳೆಕರ ಸ್ಟುಡಿಯೋದಿಂದ ತಂದ ಲೈಟಿನ ವೈರ್ ಕಟ್ಟಾಗಿತ್ತು, ಮುಟ್ಟಿದಾಗ ಶಾಕ್ ಹೊಡೆಯಿತು. ಮಹಾ ಅನಾಹುತ ಆಗುವುದು ತಪ್ಪಿತು. ಶಾಕ್ ಹೊಡೆಸಿಕೊಂಡ ಕ್ಯಾಮರಾಮನ್‍ಗೆ ವೈದ್ಯಕೀಯ ಉಪಚಾರ ನಡೆದು ಸಂಜೆ ನಾಲ್ಕು ಗಂಟೆಯಿಂದ ಚಿತ್ರೀಕರಣ ಮುಂದುವರೆಯಿತು.
ಕಾರ್ನಾಡರು, ಬೇಂದ್ರೆಯವರಿಗೆ ಕೆಲವು ಸೂಚನೆಗಳನ್ನು ಕೊಡುತ್ತಿದ್ದರು ‘ಇಲ್ಲಿ ಕುಳಿತು ಬರೆಯಿರಿ. ಇಲ್ಲಿ ಓಡಾಡುತ್ತಾ ಕಾವ್ಯ ವಾಚನ ಮಾಡಿರಿ….’ ಹೀಗೆ ಸೂಚನೆಗಳ ನಂತರ ಚಿತ್ರೀಕರಣ ನಡೆಯುತ್ತಿತ್ತು. ಬೇಂದ್ರೆಯವರಿಗೆ ಇದು ಹೊಸ ಅನುಭವ. ಬೇಂದ್ರೆಯವರ ಸ್ವತಂತ್ರ ಮನೋವೃತ್ತಿಗೆ ಅದು ಹಿಡಿಸದೆ ಇದ್ದರೂ ಮೂರ್ನಾಲ್ಕು ಗಂಟೆಗಳ ಕಾಲ ಒಳ ಚಿತ್ರೀಕರಣ ನಡೆಯಿತು. ಅವರ ವಾಚನಾಲಯ, ಮೊಮ್ಮಕ್ಕಳೊಂದಿಗೆ ಕೇರಂ ಆಟ, ಅಡಿಗೆ ಮನೆಯಲ್ಲಿ ಊಟ.. ಹೀಗೆ
ನಂತರ ಜಡಭರತರು (ಶ್ರೀ ಜಿ.ಬಿ.ಜೋಶಿ), ಕೀರ್ತಿನಾಥ ಕುರ್ತಕೋಟಿ, ರಮಾಕಾಂತ ಜೋಶಿ, ಗೀರಿಶ್ ಕಾರ್ನಾಡ್ ಮತ್ತು ನಿಹಲಾನಿ ಮರುದಿನದ ಕಾರ್ಯಕ್ರಮದ ಬಗ್ಗೆ ಚರ್ಚಿಸುತ್ತ ಕುಳಿತರು. ಕೀರ್ತಿಯವರು, ‘ಬೇಂದ್ರೆಯವರು ಪ್ರಾಣಿ ಪ್ರಿಯರು. ಬೇಂದ್ರೆಯವರು ಜಿಂಕೆ ಸಾಕಿದ್ದರು, ಅವರ ಮನೆಯಲ್ಲಿಯ ಬೆಕ್ಕಿನ ವಿಶೇಷತೆಯ ಬಗ್ಗೆ, ನಾಯಿಯ ಕವನದ ಬಗ್ಗೆ, ಮಂಗನ ಜೊತೆಗೆ ಮಾತನಾಡುವ ಬಗ್ಗೆ, ಹಾವಾಡಿಗನ ಜೊತೆಗೆ ಶಿರಹಟ್ಟಿಯಲ್ಲಿ ಕಳೆದ ಘಟನೆಯ ಬಗ್ಗೆ ನೆನಪಿಸುತ್ತಿದ್ದರು. ಬೇಂದ್ರೆಯವರು ಆ ಮಾತುಕತೆಯಲ್ಲಿ ನೇರವಾಗಿ ಭಾಗವಹಿಸದೇ ದೂರ ಕುಳಿತು ಕೇಳುತ್ತಿದ್ದರು. ಒಟ್ಟಿನಲ್ಲಿ ಮರುದಿವಸ ಬೆಳಿಗ್ಗೆ 9 ಗಂಟೆಯಿಂದ ಚಿತ್ರೀಕರಣ ಪ್ರಾರಂಭ ಎಂದು ನಿರ್ಧರಿಸಿ ಎಲ್ಲರೂ ಹೊರಟರು.
ಮರುದಿವಸ ಬೆಳಿಗ್ಗೆ ಎಲ್ಲ ಸಿದ್ಧತೆಗಳು ಅಚ್ಚುಕಟ್ಟಾಗಿ ನಡೆಯುತ್ತಿದ್ದವು. ಬೇಂದ್ರೆಯವರು ಹೊರಗೆ ಬಂದರು. ಸಾಧನಕೇರಿಯ ಕೆರೆಯ ದಂಡೆಯ ಮೇಲೆ ಕರಿಮುಖದ ಮಂಗವೊಂದು ಕುಳಿತಿದ್ದನ್ನು ನೋಡಿದರು. ಕಾರ್ನಾಡರನ್ನು ಕರೆದು ‘ನಿನ್ನೆ ನೀವು ಬೇಂದ್ರೆ ಮಂಗನ ಜೊತೆ ಮಾತಾಡತಿರತಾರ ಅಂತ ಮಾತಾಡತಿದ್ರಿ, ಅಲ್ಲೆ ಮಂಗ ಕೂತದ. ಅದನ್ನ ಕರೆದು ಮಾತಾಡಿಸಲೇನು?’ ಕೇಳಿದರು. ಕಾರ್ನಾಡರಿಗೆ ಆಶ್ಚರ್ಯ! ನಿಹಲಾನಿಯವರಿಗೆ ತಿಳಿಸಿದರು. ಅವರು ಆನಂದದಿಂದ, ಆಶ್ಚರ್ಯದಿಂದ ‘ಆಗಲಿ’ ಅಂದರು. ಅದಕ್ಕ ಬೇಂದ್ರೆಯವರು ‘ಎಲ್ಲೆ ಕರಿಬೇಕು ಅನ್ನೋದನ್ನ ನಿರ್ಧರಿಸಿ, ನಿಮ್ಮ ಕ್ಯಾಮರಾ ಸಿದ್ಧಪಡಿಸಿಕೊಳ್ಳಿರಿ’ ಅಂದರು. ಅವರು ಸಿದ್ಧರಾದ ಮೇಲೆ ಬೇಂದ್ರೆಯವರು ಆ ಮಂಗನನ್ನು ಕೈ ಮಾಡಿ ಕರೆದರು. ಕವಲೊಡೆದ ಮರದ ಸ್ಥಳಕ್ಕೆ ಮಂಗ ಬಂದೊಡನೆಯೇ ಸೇಂಗಾ ಕೊಟ್ಟರು. ಏನೋ ಮಾತನಾಡಿಸಿದರು. ಅದೊಂದು ಅಪರೂಪದ ಚಿತ್ರೀಕರಣವಾಗಿತ್ತು. ಬಂದವರೆಲ್ಲಾ ಆಶ್ಚರ್ಯದಿಂದ ನೋಡುತ್ತಿದ್ದರು. ಟೇಕ್ ‘ಓ.ಕೆ’ ಆಯಿತು. ಬೇಂದ್ರೆಯವರು
‘ಇನ್ನ ಹೋಗಲಿಕ್ಕೆ ಹೇಳಲ್ಯಾ?’ ಅಂದರು.
‘ಆಗಲಿ’ ಕಾರ್ನಾಡರು ಸಮ್ಮತಿಸಿದರು.
‘ಜಾ ಅತ್ತಾ’ ಅಂತ ಬೇಂದ್ರೆಯವರು ಅದನ್ನು ಕಳಿಸಿದರು. ಮಂಗ ಯಾರಿಗೂ ಹೆದರದೇ ಅವರ ಕಂಪೌಂಡ ಮೇಲೆ ಹೋಗಿ ಕುಳಿತಿತು. ಅದನ್ನು ನೋಡಿ ಕಾರ್ನಾಡರು
‘ನಿಮ್ಮ ಐ ಲೆವಲ್ಲಿಗೆ (ಕಣ್ಣಿನ ನೇರಕ್ಕೆ ಬರುವಂತೆ) ಒಂದು ಶಾಟ್ ಮಂಗ್ಯಾನ್ನ ಕರೀರಿ’ ಅಂದರು. ಅದಕ್ಕೆ ಬೇಂದ್ರೆಯೇನು, ಅದು ಬಂದರ್. ಅದು ಸ್ವತಂತ್ರ ಅದ.’

Leave a Reply