ದಿಮ್ಮಿ ಮತ್ತು ಕಪ್ಪೆಗಳು

ದಿಮ್ಮಿ ಮತ್ತು ಕಪ್ಪೆಗಳು

ಒಂದು ದೊಡ್ಡ ಕಾಡು. ಅಲ್ಲೊಂದು ಸಣ್ಣ ಕೊಳ (ಕೆರೆ). ಅದರ ಹತ್ತಿರ ಕಪ್ಪು, ತಿಪ್ಪು, ಬೆಪ್ಪು, ಸೊಪ್ಪು………. ಎಂಬ ನಾಲ್ಕು ಕಪ್ಪೆಗಳಿದ್ದವು. ಅವೆಲ್ಲವೂ ಜೀವದ ಗೆಳೆಯರು. ಒಂದು ದಿನ ಅವೆಲ್ಲವೂ ವಾಯುವಿಹಾರಕ್ಕೆ (ವಾಕಿಂಗ್) ಅಂತ ಕೆರೆ (ಕೊಳೆ) ದಂಡೆ ಕಡೆಗೆ ಹೊರಟವು. ಕೆರೆಯಲ್ಲಿ ಒಂದು ಮರದ ದಿಮ್ಮಿ ತೇಲಾಡುತ್ತಿತ್ತು. ಅದನ್ನು ನೋಡಿ ತಿಪ್ಪು, “ಬನ್ರೊ ನಾವೆಲ್ರೂ ಆ ಮರದ ದಿಮ್ಮಿ ಮೇಲೆ ಕುಳಿತು ಹರಟೆ ಹೊಡೆಯೋಣ” ಎಂದಿತು. ಎಲ್ಲ ಕಪ್ಪೆಗಳು ಆ ಮಾತಿಗೆ ಒಪ್ಪಿಕೊಂಡು, ತಮ್ಮ ರೂಢಿಯಂತೆ ಒಮ್ಮೆಲೆ ‘ಚಂಗ್’ ಅಂತ ನೆಗೆದು ಮರದ ದಿಮ್ಮಿ ಮೇಲೆ ಕುಳಿತುಕೊಂಡವು.

ಕೆರೆಯಲ್ಲಿ ಬಹಳಷ್ಟು ಕೀಟಗಳು ಹಾರಾಡುತ್ತಿದ್ದವು. ಅವುಗಳನ್ನು ನೋಡಿದ್ದೆ ಒಂದಾದ ನಂತರ ಒಂದು ಕೀಟಗಳನ್ನು ‘ಗುಳುಂ’ ಮಾಡತೊಡಗಿದವು. ಕಪ್ಪು ಎಲ್ಲ ಗೆಳೆಯರಿಗಿಂತಲೂ ಹೆಚ್ಚು ಹುಳುಗಳನ್ನು ‘ಗಬಗಬ’ನೆ ತಿನ್ನುತ್ತಿತ್ತು. ಇದನ್ನು ನೋಡಿದ ಬೆಪ್ಪು, “ಎಲ್ಲರ ಪಾಲಿನ ಕೀಟಗಳನ್ನು ನೀನೊಬ್ಬನೆ ತಿಂತೀದ್ದೀಯಲ್ಲ?” ಎಂದಿತು ಕೋಪದಿಂದ. ಕಪ್ಪು ಮಾತ್ರ ಉಳಿದವರ ಪಾಲಿನ ಹುಳುಗಳನ್ನು ಗಬಗಬನೇ ನುಂಗುವುದನ್ನು ನಿಲ್ಲಿಸಲಿಲ್ಲ. ಹೇಳಿಹೇಳಿ ಸಾಕಾದ ಬೆಪ್ಪು, “ಎಷ್ಟು ಹೇಳಿದರೂ ನೀನು ಕೇಳ್ತಾನೇ ಇಲ್ಲ. ನಾನು ನೀರಿನಲ್ಲೇ ಇಳಿದು ಹುಳ-ಹುಪ್ಪಟೆಗಳನ್ನು ತಿನ್ನುತ್ತೇನೆ” ಎನ್ನುತ್ತ ನೀರಿಗೆ ಹಾರಿತು.

ಬೆಪ್ಪು ನೀರಿಗೆ ಹಾರಿದ್ದನ್ನು ನೋಡಿದ ತಿಪ್ಪು, ಈ ಕಪ್ಪುವಿನ ಹತ್ತಿರ ಕುಳಿತಿದ್ದರೆ ನನಗೂ ತಿನ್ನೋದಕ್ಕೆ ಏನೂ ಸಿಗುವುದಿಲ್ಲ. ಇದರ ಸಹವಾಸವೇ ಬೇಡ…” ಎನ್ನುತ್ತ ಅದೂ ನೀರಿಗೆ ಜಿಗಿಯಿತು.

“ಏನಾದರಾಗಲಿ, ನಾನು ಮಾತ್ರ ಇಲ್ಲೇ ಕುಳಿತಿರುತ್ತೇನೆ!!” ಎಂದು ಸೊಪ್ಪು ದಿಮ್ಮಿಯ ಮೇಲೆಯೇ ಸುಮ್ಮನೇ ಕುಳಿತಿತು. ಆಗ, ಪಕ್ಕದಲ್ಲೇ ಕುಳಿತಿದ್ದ ಕಪ್ಪು, “ನೀನ್ ಮಾತ್ರ ಯಾಕೆ ಕುಳಿತಿದ್ದೀಯಾ? ನೀನೂ ಹೋಗಿ ನೀರಲ್ಲೇ ಬೀಳು” ಎನ್ನುತ್ತ ಸೊಪ್ಪುನನ್ನು ನೀರಿಗೆ ನೂಕಿಬಿಟ್ಟಿತು. ಸೊಪ್ಪು ನೀರಿಗೆ ಬಿದ್ದದ್ದೇ ತಡ ಮರದ ದಿಮ್ಮಿ ವಾಲತೊಡಗಿತು. ಕಪ್ಪುವಿಗೆ ಆಯತಪ್ಪಿ ಬೀಳುವಂತಾಯಿತು. ಎಲ್ಲವುಗಳನ್ನೂ ನೀರಿಗೆ ಬೀಳಿಸಿದ ಕಪ್ಪುವಿಗೆ, ತಾನು ನೀರಿನಲ್ಲಿ ಬೀಳುವುದು ಬೇಕಾಗಿರಲಿಲ್ಲ. ಆದರೆ, ಎಷ್ಟೇ ಪ್ರಯತ್ನಿಸಿದರೂ ಕಪ್ಪುವಿಗೆ ದಿಮ್ಮಿಯ ಸಮತೋಲನ ಕಾಯ್ದುಕೊಳ್ಳುವುದು ಆಗಲಿಲ್ಲ. ಅದೂ ನೀರಿಗೆ ಬಿದ್ದಿತು.

ಇತ್ತ ಉಳಿದ ಮೂರು ಕಪ್ಪೆಗಳು ನೀರಿನಲ್ಲಿ ಕೀಟಗಳನ್ನು ಹಿಡಿಯುವುದರಲ್ಲಿ ಮಗ್ನವಾಗಿದ್ದವು. ಇದ್ದಕ್ಕಿದ್ದಂತೆ ಕಪ್ಪುವು ಭಯ, ಸಂಕಟಗಳಿಂದ ಕೂಗುವುದು ಹೆಚ್ಚಾಯಿತು. ಅದನ್ನು ಕೇಳಿದ ಈ ಕಪ್ಪೆಗಳೆಲ್ಲ ಬೇಗ ಬೇಗನೆ ಅದರ ಹತ್ತಿರ ಹೋದವು. ಕಪ್ಪುವಿಗೆ ದಿಮ್ಮಿಯನ್ನು ಹತ್ತಲು ಸಹಾಯ ಮಾಡಿದವು.

ಉಳಿದವೂ ದಿಮ್ಮಿಯನ್ನು ಹತ್ತಿ ಕುಳಿತವು. ದಿಮ್ಮಿಗೆ ಮತ್ತೆ ಸಮತೋಲನ ಬಂದಿತು. ಕಪ್ಪು ಪಶ್ಚಾತ್ತಾಪದಿಂದ, “ಗೆಳೆಯರೇ ನನ್ನನ್ನು ಕ್ಷಮಿಸಿಬಿಡಿ. ನಿಮ್ಮ ಪಾಲಿನ ಕೀಟಗಳನ್ನೂ ನಾನೇ ತಿನ್ನುತ್ತಿದೆ. ಆದರೂ ನೀವು ನನ್ನ ಮೇಲೆ ಕೋಪಗೊಳ್ಳಲಿಲ್ಲ. ಬದಲಾಗಿ, ಕಷ್ಟದಲ್ಲಿ ಸಿಕ್ಕಿಕೊಂಡಾಗ ನನಗೆ ಸಹಾಯ ಮಾಡಿದಿರಿ….” ಎಂದು ನುಡಿಯಿತು. ಎಲ್ಲ ಕಪ್ಪೆಗಳೂ ನಗುತ್ತ “ನಿನಗೆ ಬುದ್ಧಿ ಕಲಿಸುವ ಸಲುವಾಗಿಯೇ ನಾವು ನೀರಿಗೆ ಜಿಗಿದಿದ್ದು. ನೀನು ಸೊಪ್ಪುವನ್ನು ನೀರಿಗೆ ತಳ್ಳಿಯೇ ತಳ್ಳುತ್ತೀಯಾ ಎಂದೂ ನಮಗೆ ಗೊತ್ತಿತ್ತು. ಜೊತೆಗೆ ನೀನು ಖಂಡಿತ ಬುದ್ಧಿ ಕಲಿಯುತ್ತೀಯಾ ಎಂದೂ ನಮಗೆ ಭರವಸೆ ಇತ್ತು. ಅದು ಹಾಗೆಯೇ ಆಯಿತು” ಎಂದು ಪ್ರೀತಿಯಿಂದ ಹೇಳಿದವು. ಆಮೇಲೆ, ಅವೆಲ್ಲವೂ ಮೊದಲಿನಂತೆಯೆ ಉತ್ತಮ ಗೆಳೆಯರಾಗಿ ಸುಖವಾಗಿ ಬಾಳಿದವು.

Leave a Reply