ನೀನೊಲಿದರೆ…

ನೀನೊಲಿದರೆ…
ರಾತ್ರಿ ಮಲಗುವ ತಯಾರಿಯಲ್ಲಿದ್ದ ಜಗದೀಶನಿಗೆ ಫೋನ್ ಘಂಟೆ ಕೇಳಿ ರಿಸೀವರ್ ಎತ್ತಿದ. ಆರು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಮುದ್ದಿನ ಮಗಳು ಜ್ಯೋತಿಯ ಫೋನದು.
“ಹಲೋ ಪಪ್ಪಾ, ಇವತ್ತು ರಾತ್ರಿ ಬಸ್ಸಿನಿಂದ ನಾನೂ ಮತ್ತು ಸೌರವ ಹುಬ್ಬಳ್ಳಿಗೆ ಬರ್ಲಿಕ್ಕೆ ಹತ್ತೀವಿ. ನಸುಕಿನಾಗ ಬರ್ತೇವಿ. ಗೇಟ್ ಕೀಲಿ ತೆಗೆದಿಟ್ಟಿರು.”
ಜಗದೀಶನಿಗೆ ಅಚ್ಚರಿ. ಜ್ಯೋತಿ ನೀನು ಬಂದು ಹೋಗಿ ಎಂಟು ದಿನಾನೂ ಆಗಿಲ್ಲಾ?”
“ಹೌದು ಪಪ್ಪಾ, ಕೆಲಸಾ ಅದ, ನಾಳೆ ಬರ್ತೀವಲ್ಲಾ ಆವಾಗ ಮಾತಾಡೋಣ” ಎಂದು ಫೋನ್ ಇಟ್ಟೇ ಬಿಟ್ಟಳು. ಮತ್ತೆ ತಾನೇ ಮಾಡಿದರೂ ಸಿಟ್ಟಿಗೇಳುತ್ತಾಳೆಂದು ಸುಮ್ಮನಾದರೂ ಮನಸ್ಸಿನಲ್ಲಿ ಅದೇ ವಿಚಾರ ಕೊರೆಯುತ್ತಿತ್ತು. ಕೇವಲ ಎಂಟೇ ದಿನಗಳಲ್ಲಿ ಮತ್ತೆ ಬರುವ ಕೆಲಸವೇನಿರಬಹುದೆಂದು?
ನಸುಕಿನಲ್ಲಿ ಸಹ ಜ್ಯೋತಿ ಬಂದವಳೇ ಎಂದಿನಂತೆ ಮಲಗಲೂ ಇಲ್ಲ ಅಥವಾ ಮಾತನಾಡುತ್ತ ಕೂಡಲೂ ಇಲ್ಲ. ತನ್ನ ಮತ್ತು ಸೌರವನ ಬಟ್ಟೆ ತೆಗೆದು ಗೀಜರ್ ಸ್ವಿಚ್ ಹಾಕಿದಳು. ಯಾವಾಗಲೂ ಪ್ರಯಾಣ ಮಾಡಿ ಬಂದರೆ ಎರಡು ತಾಸು ನಿದ್ರಿಸುವ ಜ್ಯೋತಿಯ ಇಂದಿನ ಚಟುವಟಿಕೆ ಅಚ್ಚರಿ ತಂದಿತು. ನಡುವೆ ಮಾತನಾಡಿಸಲು ಹೋದ ತಂದೆಗೆ ಮತ್ತೆ ಅದೇ ಉತ್ತರ ಹೇಳಿದಳು ಜ್ಯೋತಿ. “ಪಪ್ಪಾ, ಒಬ್ಬರನ್ನ ಭೇಟಿ ಆಗಬೇಕಾಗೇದ. ಆಮ್ಯಾಲೇನೇ ಗೊತ್ತಾಗೋದು ಏನು ಕೆಲಸಾ ಅಂತ, ನಾ ಎಲ್ಲಾ ಹೇಳ್ತೇನಿ ನಿಮಗ…”
ಇಬ್ಬರೂ ತಯಾರಾಗಿ ಮನೆ ಬಿಟ್ಟಾಗ ಗಂಟೆ 8.30.
ಜ್ಯೋತಿ ತನ್ನ ಮೆಚ್ಚಿನ ಶರಧಿ ಆಂಟಿಯನ್ನು ಕಾಣದೇ ಸುಮಾರು ಆರೇಳು ತಿಂಗಳುಗಳೇ ಕಳೆದಿವೆ. ಲಕ್ಷ್ಮೀಯಂತೆ ಸುಂದರವಾಗಿದ್ದ ಶರಧಿಯನ್ನು ವಿಧವೆಯ ರೂಪದಲ್ಲಿ ಮೊದಲ ಬಾರಿ ಕಾಣುತ್ತಿರುವುದು ಜ್ಯೋತಿಯನ್ನು ಉದ್ವಿಗ್ನಳನ್ನಾಗಿ ಮಾಡಿದೆ. ಎರಡನೆಯದಾಗಿ ಶರತ್ ತೀರಿಹೋದಾಗಿನಿಂದ ಒಮ್ಮೆಯೂ ತನ್ನೊಂದಿಗೆ ಮಾತನಾಡದ ಶರಧಿ ನಾಲ್ಕು ದಿನಗಳ ಹಿಂದೆ ತಾನೇ ಜ್ಯೋತಿಗೆ ಫೋನ್ ಮಾಡಿ ಅರ್ಜೆಂಟಾಗಿ ಭೇಟಿಯಾಗಬೇಕಿದೆ ಎಂದಿದ್ದಳು. ಅಷ್ಟೇ ಅಲ್ಲ, ಈ ವಿಷಯವನ್ನು ಜ್ಯೋತಿ ತನ್ನ ತಂದೆಗೆ ಈಗಲೇ ಹೇಳುವುದು ಬೇಡವೆಂದೂ ತಿಳಿಸಿದ್ದಳು. ಒಂಭತ್ತು ಗಂಟೆಗೆ ಶರಧಿಯ ಮನೆ ತಲುಪಿದ ಜ್ಯೋತಿ ಒಂದು ನಿಮಿಷ ನಿಂತು ಮನೆಯನ್ನು ನಿರುಕಿಸಿದಳು. ಮನೆಯ ಮುಂದಿನ ತೋಟ ಎಂದಿನಂತೆ ಗುಲಾಬಿಗಳಿಂದ ತುಂಬಿ ಸುಂದರವಾಗಿದೆ. ಗ್ಯಾರೇಜಿನಲ್ಲಿ ಜ್ಯೋತಿಯ ಮೆಚ್ಚಿನ ಕಾರು ಒಡೆಯನಿಲ್ಲದೆ ಅನಾಥವಾಗಿ ನಿಂತಿದೆ. ಅಷ್ಟರಲ್ಲಿ ಹೊರಗೆ ಬಂದ ಶರಧಿ ಅವರನ್ನು ಸ್ವಾಗತಿಸಿದಳು. ಔಪಚಾರಿಕ ಮಾತುಕತೆಗಳ ಅನಂತರ ಜ್ಯೋತಿಯ ಅಚ್ಚುಮೆಚ್ಚಿನ ಗುಂಡು ಪೊಂಗಲುಗಳು ಡೈನಿಂಗ್ ಟೇಬಲ್ ಮೇಲೆ ಕಾದಿದ್ದವು. ಆದರೆ ಜ್ಯೋತಿಗೆ ಇಂದು ಏನೂ ರುಚಿಸುತ್ತಿಲ್ಲ. ತಿಂದ ಶಾಸ್ತ್ರ ಮಾಡಿ ಮನಸ್ಸು ತಡೆಯದೆ ತಾನೇ ಮಾತು ತೆಗೆದಳು-
“ಆಂಟಿ, ಅರ್ಜೆಂಟ್ ಏನೋ ಮಾತಾಡೋದದ ಅಂದಿದ್ರಿ …” ಹೌದೆಂದು ಗೋಣು ಹಾಕಿದ ಶರಧಿ ಏನೋ ವಿಚಾರಗಳಲ್ಲಿ ಮುಳುಗಿದಳು.
ಮಗಳ ಮದುವೆಯ ತಯಾರಿಯಲ್ಲಿ ತೊಡಗಿದ್ದ ಜಗದೀಶನಿಗೆ ಅಂದು ಸಂಜೆ ಆರು ಗಂಟೆಗೆ ಶರತ್ ನ ಫೋನ್ ಬಂದಿತು-
“ಜಗ್ಗು, ಅರ್ಜೆಂಟ್ ಇವತ್ತ ಬಂದು ನನ್ನ ಭೇಟಿ ಮಾಡು.” ಜಗದೀಶ್ ಅಂದ – “ಅಯ್ಯೋ ತುರಿಸಿಕೊಳ್ಳಲಿಕ್ಕೂ ಟೈಮ್ ಇಲ್ಲ ಮಾರಾಯಾ ಏನದ ಫೋನಿನ್ಯಾಗ ಹೇಳಿಬಿಡು.”
“ವಾಹ್! ಹುಬ್ಬಳ್ಳಿಯ ಪ್ರಸಿದ್ಧ ಫಿಜಿಷಿಯನ್, ಹೃದಯರೋಗ ತಜ್ಞ ಶರತ್ ಜೊಶಿ ಅಪಾಯಿಂಟ್ ಮೆಂಟ್ ಸಲುವಾಗಿ ಜನಾ ಒದ್ದಾಡ್ತಾರ. ಇವನ್ನೋಡ್ರಿ ನಾನೇ ಫೋನ್ ಮಾಡಿ ಬಾ ಅಂದ್ರ ಬರ್ಲಿಕ್ಕೆ ಟೈಮಿಲ್ಲಾ ಅಂತೀಯಾ? ಅದೆಲ್ಲಾ ಗೊತ್ತಿಲ್ಲ, ಇವತ್ತ ಒಂದರ್ಧ ತಾಸು ಹೆಂಗಾದ್ರೂ ಮಾಡಿ ಬಂದು ಹೋಗ್ಲಿಕ್ಕೇ ಬೇಕು. ಕ್ಲಿನಿಕ್ಕಿಗೆ ಬಾ” ಎಂದು ಫೋನಿಟ್ಟ.
ಜಗದೀಶನಿಗೆ ನೆನಪಾಯಿತು. ‘ಕಳೆದ ವಾರ ಎಡಭುಜದಲ್ಲಿ ನೋವು, ಉಸಿರಾಟದಲ್ಲಿ ತೊಂದರೆ ಎಂದು ಕಂಪ್ಲೇನ್ ಮಾಡಿದಾಗ ಶರತ್ ತನ್ನ ಪ್ರಾಣಸ್ನೇಹಿತ, ತನ್ನನ್ನು ಕರೆದೊಯ್ದು ನೂರೆಂಟು ಪರೀಕ್ಷೆಗಳನ್ನು ಮಾಡಿಸಿದ್ದ. ರಿಪೋರ್ಟುಗಳು ಬಂದಿರಬೇಕು. ಹೋಗಿ ಭೇಟಿಯಾಗಬೇಕು’ ಎಂದುಕೊಂಡ.
ಸಂಜೆ ಇವನಿಗಾಗಿಯೇ ಕಾಯ್ದಿದ್ದ ಶರತ್ ರಿಪೋರ್ಟುಗಳನ್ನು ತೋರಿಸಿ, ಕಳೆದ ವಾರ ಜಗದೀಶನಿಗೆ ಒಂದು ಸಣ್ಣ ಹೃದಯಾಘಾತ ಆಗಿರುವುದಾಗಿಯೂ ಬ್ಲಾಕೇಡ್ ಜಾಸ್ತಿ ಇರುವುದರಿಂದ ಸಾಧ್ಯವಿದ್ದಷ್ಟು ಬೇಗನೆ ಆಪರೇಶನ್ ಆಗಬೇಕೆಂದೂ ಹೇಳಿದ. ವಿವರಗಳನ್ನು ಕೇಳಿ ಮಂಕಾಗಿ ಕುಳಿತ ಜಗದೀಶನಿಗೆ ಶರತ್ ಹೇಳಿದ-
“ನೀನೇನೂ ಹೆದರಿಕೋಬ್ಯಾಡ. ಈಗ ಮೆಡಿಕಲ್ ಸೈನ್ಸ್ ಭಾಳ ಮುಂದುವರೆದದ. ನೀ ಅರಾಂ ಆಗ್ತೀ.”
“ಶರತ್ ನನ್ನ ಚಿಂತೀ ಅದಲ್ಲ, ಈಗ ಜ್ಯೋತಿ ಮದುವಿಗೆ ಬರೀ ಎರಡು ತಿಂಗಳು ಉಳದಾವ. ಈಗ ನಾನೇನಾದ್ರೂ ಆಪರೇಶನ್ ಮಾಡಿಸಿಕೊಂಡು ಹೆಚ್ಚು ಕಡಿಮಿ ಆದ್ರ ಅಕೀ ಮದುವಿ ಗತಿ ಏನು? ಇಷ್ಟೆಲ್ಲ ಸಾಲ-ಸೋಲ ಮಾಡಿ ಎಲ್ಲಾ ತಯಾರಿ ಆಗೇದ. ರಮಾ ಆಮ್ಯಾಲ ಒಬ್ಬಾಕೀನ ಏನು ಮಾಡ್ಲಿಕ್ಕೆ ಸಾಧ್ಯ? ಮತ್ತ ನಿಂಗೊತ್ತದ ಈ ಸಮಾಜದಾಗ ಒಮ್ಮೆ ಮದುವಿ ಏನಾದ್ರೂ ಮುರಿದ್ರ ಎಷ್ಟು ತ್ರಾಸಂತ. ಅಲ್ಲದೇ ಆಪರೇಶನ್ ಖರ್ಚಿಗೂ ಸದ್ಯಕ್ಕ ನನ್ ಹತ್ರ ದುಡ್ಡಿಲ್ಲ. ನೀ ಕೊಡ್ತೀ ಆದ್ರ ಲಕ್ಷಗಟ್ಟಲೇ ನೀನss ಕೊಡೋದಂದ್ರ ಹೆಂಗ?”
“ಹಂಗಾದ್ರ ಜಗ್ಗೂ ನಾ ನಿಂಗ ಏನೂ ಅಲ್ಲಾ ಅಂದ್ಹಂಗಾತು?”
“ಹುಚ್ಚ, ನೀ ನಂಗ ಏನೂ ಅಲ್ಲಾ ಅಂತ ಯಾವ ಬಾಯಲ್ಲಿ ಅನ್ಲೀ? ನೀನss ನಂಗ ಎಲ್ಲಾ. ಈ ಸಮಸ್ಯಾದಿಂದ ನಾನು ಹೊರಗ ಬರೋತನಕಾ ನಿನ್ನ ಸಹಾಯ ಪ್ರತಿ ಹೆಜ್ಜೆಗೂ ಬೇಕು.”
“ಆಯ್ತಪ್ಪಾ, ಈಗ ನಾನು ಏನು ಮಾಡಬೇಕಂತೀ ಹೇಳು.”
“ಶರತ್, ರಮಾ ಇವತ್ತು ನಾಳೆ ಈ ರಿಪೋರ್ಟ್ ಬಗ್ಗೆ ಕೇಳೇ ಕೇಳ್ತಾಳ. ಮೊದಲನೆಯದಾಗಿ ಅಕೀಗೆ ಹೇಳಬೇಕು- ‘ನಂಗ ಏನೂ ತೊಂದ್ರೆ ಇಲ್ಲಾ, ಸ್ವಲ್ಪ ಪಿತ್ತ ಜಾಸ್ತಿ ಆಗಿತ್ತೂ’ ಅಂತ. ಈ ರೀತಿ ಸುಳ್ಳು ಹೇಳೋದು ನಿಮ್ಮ ವೈದ್ಯಕೀಯ ನೀತಿ ಸಂಹಿತೆಗೆ ವಿರುದ್ಧ ಇರಬಹುದು. ಆದ್ರ ಇವತ್ತಿನ ನಿನ್ನ ಒಂದು ಸುಳ್ಳಿನಿಂದ ನನ್ನ ಎಷ್ಟೋ ಸಮಸ್ಯೆಗೆ ಪರಿಹಾರ ಕೊಡ್ತದ. ಒಮ್ಮೆ ಮದುವಿ ಮುಗಿದು ಜ್ಯೋತಿ ತನ್ನ ಮನಿ ಸೇರಿದ ಮ್ಯಾಲ ನಾ ನೂರಕ್ಕ ನೂರು ನಿನ್ನ ಮಾತು ಪಾಲಿಸ್ತೇನಿ.”
ಶರತ್ ಚಿಂತೆಯಲ್ಲಿ ಮುಳುಗಿದ. ಅಷ್ಟರಲ್ಲಿಯೇ ಫೋನ್ ಮೊಳಗಿತು, ಎತ್ತಿದ- “ಹಲೋ, ಯಾರು? ರಮಾ ವೈನಿ, ಏನು ದುರ್ಗದ ಬೈಲಿಗೆ ಬಂದೀರಿ? ಹಂಗಾದ್ರ ನನ್ನ ಕ್ಲಿನಿಕ್ ಗೆ ಹತ್ತs ನಿಮಿಷದ ದಾರಿ. ಸ್ವಲ್ಪು ಬಂದ ಹೋಗ್ರಲ್ಲಾ? ಹ್ಞಾ ಹೌದು, ನಿಮ್ಮನಿಯವ್ರೂ ಇಲ್ಲೇ ಇದ್ದಾರ.”
ಜಗದೀಶ ಮತ್ತೆ ಕೈಮುಗಿದ.
“ಶರತ್ ದಯವಿಟ್ಟು ನನ್ನ ಪರಿಸ್ಥಿತಿ ಅರ್ಥ ಮಾಡ್ಕೋ, ರಮಾಗ ಏನೂ ಹೇಳಬ್ಯಾಡ, ಜ್ಯೋತಿ ನಿನ್ ಮಗಳೂ ಅಂತಿದ್ದೀ ಹೌದಲ್ಲೋ?” ಅವನ ಕಣ್ಣು ತೇವವಾಗಿತ್ತು.
ಅಷ್ಟರಲ್ಲಿ ರಮಾಳ ಧ್ವನಿ ಕೇಳಿತು. ವೇಗವಾಗಿ ತನ್ನ ಮುಂದಿದ್ದ ರಿಪೋರ್ಟ್ಗಳನ್ನು ಒಳಗೆ ಸೇರಿಸಿದ ಶರತ್. “ಬರ್ರೀ ರಮಾ ವೈನಿ.”
“ಏನು ಭಾವುಜೀ ನನ್ನ ಬರ್ಲಿಕ್ಕೆ ಹೇಳಿದ್ರಿ?” ಜಗದೀಶನ ದೈನ್ಯ ನೋಟವನ್ನೊಮ್ಮೆ ನೋಡಿ ರಮಾಳೆಡೆಗೆ ತಿರುಗಿದ.
“ಅಲ್ಲಾ ವೈನೀ, ಇಂಥ ಹೆದರುಪುಕ್ಕನ ಜತಿಗೆ ಏನು ಮದುವಿ ತಯಾರಿ ಮಾಡ್ತೀರಿ ನೀವು? ನನ್ನ ಮಾತು ಕೇಳ್ರೀ, ಇವತ್ತಿಂದ ಜ್ಯೋತಿ ಮದುವಿ ಮುಗಿಯೋತನಕಾ ಏನು ಸಹಾಯ ಬೇಕು? ಎಲ್ಲಿಗೆ ಹೋಗ್ಬೇಕು? ನಂಗ ಹೇಳ್ರಿ. ಮತ್ತ ಡ್ರೈವರ್ ವೆಂಕಟೇಶ ದಿನಾ ಒಂದು ಸಲಾ ನಿಮ್ಮನೀಗೆ ಬಂದು ಹೋಗ್ತಾನ. ಅಡ್ಡಾಡಲಿಕ್ಕೆ ಕಾರು ಉಪಯೋಗ ಮಾಡ್ಕೊಳ್ರಿ. ನಮ್ಮ ಹುಡುಗಿ ಮದುವಿ ನೋಡಿ ನಾಲ್ಕು ಜನಾ ದಂಗುಬಡೀಬೇಕು. ಹಂಗ ತಯಾರಿ ಮಾಡ್ತೇನಿ. ನಿಮ್ಮ ಯಜಮಾನ್ರಿಗೆ ಇನ್ನೊಂದು ನಾಲ್ಕು ಸ್ತೋತ್ರದ ಪುಸ್ತಕಾ ಕೊಟ್ಟು ತಣ್ಣಗ ದೇವರ ಮುಂದ ಕೂಡಂತ ಹೇಳ್ರಿ. ಸಣ್ಣ ಸಣ್ಣ ಮಾತಿಗೂ ಟೆನ್ಶನ್ ತಗೋತಾನ. ಮೊನ್ನೆ ಏನೋ ಸ್ವಲ್ಪ ತ್ರಾಸಾತಂತ ಇವತ್ತ ಓಡಿ ಬಂದಾನ, ನಂಗೇನಾಗೇದಂತ. ನಾನss ಹೇಳ್ದೆ ನಿಂಗೇನೂ ಆಗಿಲ್ಲಾ, ನೂರಕ್ಕೆ ನೂರು ಅರಾಂ ಇದ್ದೀ ಅಂತ. ಇನ್ನ ಶರಧೀದು ಯಾವುದೋ ಒಂದು ನೆಕ್ಲೇಸ್ ಜ್ಯೋತಿಗೆ ಸೇರಿತ್ತಂತ, ಪ್ಯಾಟರ್ನ್ ಸಲುವಾಗಿ ಕೇಳಿದಿರಂತಲ್ಲಾ, ಅದನ್ನ ನಾವು ಆರ್ಡರ್ ಕೊಟ್ಟೇವಿ. ಜ್ಯೋತಿಗೆ ಶರಧಿ ಆಂಟಿ ಉಡುಗೊರೆ ಅದು.”
“ಆತಲ್ಲಾ ವೈನಿ. ಇದು ನನ್ನ ಮೊಬೈಲ್ ನಂಬರ್. ಏನೂ ಭಿಡೆ ಇಲ್ಲದ ನಂಗ ಕೆಲಸಾ ಹೇಳ್ಬೇಕು ಅಷ್ಟ. ಶರಧಿ ಮ್ಯಾಲ ಇದ್ದಾಳ ಭೆಟ್ಟಿ ಆಗಿ ಬರ್ರಿ, ಆಮ್ಯಾಲ ಇಬ್ರನ್ನೂ ಮನೀಗೆ ಬಿಡ್ತೇನಿ.”
ರಮಾ ಮೇಲೆ ಹೋದಳು.
ಜಗದೀಶನ ಮುಖದ ಮೇಲಿನ ಭಾವನೆಗಳು ವರ್ಣನಾತೀತ. ಅವನಿಗೆ ಶಬ್ದಗಳೇ ಬರುತ್ತಿಲ್ಲ. ಮತ್ತೊಮ್ಮೆ ಕೈಜೋಡಿಸಿದ ಜಗದೀಶನನ್ನು ಅಪ್ಪಿಕೊಂಡ ಶರತ್.
ಶರತ್ ಮತ್ತು ಶರಧಿಯರ ಸಹಾಯದಿಂದ ಜ್ಯೋತಿಯ ಮದುವೆ ನಿರಾಯಾಸವಾಗಿ ಮುಗಿಯಿತು. ನೆಂಟರ ನಡುವೆ ಎರಡು-ಮೂರು ದಿನ ಕಳೆದವು. ಎಂಟನೆಯ ದಿನ ಮಗಳ ಮನೆಯಲ್ಲಿನ ಸತ್ಯನಾರಾಯಣ ಪೂಜೆಗೆ ಹೋಗಿದ್ದರು ಜ��ದೀಶ್ ಮತ್ತು ರಮಾ. ಊಟ ಮಾಡಿ ವಿರಮಿಸುತ್ತಿದ್ದಾಗ ಯಾರೋ ಪೇಪರ್ ನೋಡಿ ಹೇಳುತ್ತಿದ್ದರು-
“ಏನು ವಿಧಿ ವಿಪರ್ಯಾಸ ನೋಡ್ರಿ, ಯಾರೋ ಹುಬ್ಬಳ್ಳಿಯ ಪ್ರಸಿದ್ಧ ಹೃದಯರೋಗ ತಜ್ಞರಂತ. ಅವರಿಗೇ ಹೃದಯಾಘಾತದಿಂದ ಬರೀ ನಲ್ವತ್ತೆಂಟು ವರ್ಷಕ್ಕೆ ಸಾವು ಅಂದ್ರ…!”
ಜಗದೀಶ್ ದಿಗ್ಭ್ರಾಂತನಾಗಿ ಎದ್ದು ನೋಡಿದ ಪೇಪರ್. ಶರತ್ ನ ಸುಂದರ ಮುಗುಳ್ನಗುವಿನ ಫೋಟೋ. ತತ್ ಕ್ಷಣ ಹೊರಟು ಬಂದರು ಜಗದೀಶ್-ರಮಾ . ಜಗದೀಶನೇ ನಿಂತು ಎಲ್ಲ ವಿಧಿಗಳನ್ನು ಪೂರೈಸಿದ. ಶರತ್ ನ ಇಬ್ಬರೂ ಮಕ್ಕಳು ವಿನಯ್ ಮತ್ತು ಕಿರಣ್ 14 ಮತ್ತು 12ರ ಕಿಶೋರರು. ಶರಧಿ ತನ್ನ ದುಃಖವನ್ನು ಅಡಗಿಸಿಕೊಂಡು ವಾಸ್ತವಿಕತೆಯನ್ನು ಎದುರಿಸಲೇಬೇಕಾಯಿತು. ಜ್ಯೋತಿ ಅನಂತರ ಎರಡು-ಮೂರು ಬಾರಿ ಬಂದರೂ ಶರಧಿ ಆಂಟಿಯನ್ನು ಭೇಟಿಯಾಗುವ ಸಾಹಸವಿರಲಿಲ್ಲ. ಈಗ ಅವಳದೇ ಫೋನ್ ಬಂದಾಗ ಓಡಿ ಬಂದಿದ್ದಳು.
ಎಲ್ಲವನ್ನೂ ಕೇಳಿದ ಜ್ಯೋತಿಯ ಕಣ್ಣಲ್ಲಿ ನೀರು ತುಂಬಿತ್ತು. ತನ್ನ ಪಪ್ಪಾ ತನ್ನ ಮದುವೆಗಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟಿದ್ದರು.
ಶರಧಿ ಮತ್ತೆ ಎದ್ದು ಬಂದು ಅವಳ ಭುಜದ ಮೇಲೆ ಕೈಯಿಟ್ಟಳು-“ಜ್ಯೋತಿ, ಇದು ಕಂಗೆಡುವ ಸಮಯ ಅಲ್ಲಾ. ನಾಲ್ಕು ದಿನದ ಹಿಂದ ಶರತ್ ನ ರೂಮು ಸ್ವಚ್ಛ ಮಾಡುವಾಗ ಅವನ ಡೈರಿ ಸಿಕ್ತು. ನನಗೂ ಇದೊಂದು ಗೊತ್ತಿರ್ಲಿಲ್ಲ, ಓದಿದಾಗ ಎಲ್ಲಾ ತಿಳೀತು… ಈ ಎಂಟು ತಿಂಗಳದಾಗ ನಿಮ್ಮ ಪಪ್ಪಾ ಯಾವ ಡಾಕ್ಟರ ಹತ್ತಿರಾನೂ ಹೋದ್ಹಂಗ ಕಾಣೂದಿಲ್ಲಾ. ರಮಾ ಭಾಳ ಭಾವುಕ ವ್ಯಕ್ತಿ. ತಾನss ಮೊದಲು ಹೆದರತಾಳ. ನಿನ್ನ ತಮ್ಮ ರವಿ ಸಣ್ಣಾವ. ಈಗ ನೀವಿಬ್ರೂ ಸೇರಿ ಅವರ ಮನವೊಲಿಸಿ ಬೆಂಗಳೂರಿಗೆ ಕರ್ಕೊಂಡು ಹೋಗ್ರಿ. ಅವರ ಎಲ್ಲಾ ರಿಪೋರ್ಟ್ ಹುಡುಕಿ ಇಟ್ಟೇನಿ. ಕಿರಣ ಮತ್ತು ವಿನಯನ್ನ, ನನ್ನ ದವಾಖಾನೀನ ಬಿಟ್ಟು ನಂಗ ಬರ್ಲಿಕ್ಕೆ ಆಗೂದಿಲ್ಲಾ. ಆದ್ರ ಯಾವುದೇ ಸಹಾಯ ಅಥವಾ ಆರ್ಥಿಕ ಸಹಾಯ ಬೇಕಂದ್ರ ಖಂಡಿತಾ ಮಾಡ್ತೇನಿ. ಶರತ್ ತನ್ನ ಡೈರಿ ತುಂಬಾ ಅದನ್ನ ಬರದಾನ. ನನ್ನ ಒಂದು ಸುಳ್ಳಿನಿಂದ ಜಗದೀಶನ ಜೀವಾ ಒತ್ತೆ ಇಟ್ಟೇನಿ ಅಂತ. ಈಗ ಜಗದೀಶ ಅರಾಂ ಆದ್ರ ನನ್ನ ಶರತ್ ನ ಆತ್ಮಕ್ಕೂ ಶಾಂತಿ, ನಂಗೂ ಸಮಾಧಾನ.”
ಜ್ಯೋತಿಗೆ ಅವರ ವ್ಯಕ್ತಿತ್ವದ ಬಗ್ಗೆ ಗೌರವ ತುಂಬಿ ಬಂದಿತು. ತನ್ನ ಕಣ್ಣೊರೆಸಿಕೊಂಡು ಹೇಳಿದಳು-
“ಆಂಟೀ, ಪಪ್ಪಾ ಖಂಡಿತಾ ಅರಾಂ ಆಗ್ತಾರ, ಇಂಥ ಸ್ನೇಹಿತರ ಸದಾಶಯ ಇರೋ ವ್ಯಕ್ತಿಗೆ ದೇವ್ರೂ ಖಂಡಿತಾ ಒಳ್ಳೇದು ಮಾಡ್ತಾನ.”
ಕೆಲವು ದಿನಗಳಿಂದ ಜಗದೀಶ್ ಯಾವ ವೈದ್ಯರ ಬಳಿಯೂ ಹೋಗಿರಲಿಲ್ಲ. ಕೇವಲ ಯೋಗ, ಅಧ್ಯಾತ್ಮ, ಸತ್ಸಂಗಗಳಲ್ಲಿ ಕಾಲ ಕಳೆಯುತ್ತಿದ್ದ. ಅವನ ಮನಸ್ಸು ನಿರ್ಲಿಪ್ತವಾಗಿತ್ತು. ಆರೋಗ್ಯದ ಪ್ರತಿರೂಪದಂತಿದ್ದ ಸ್ನೇಹಿತನೇ ಕ್ಷಣಮಾತ್ರದಲ್ಲಿ ಇಲ್ಲವಾಗಿದ್ದ. ತನ್ನ ಹಣೆಯಲ್ಲಿ ಬರೆದಂತಾಗಲಿ ಎಂದು ಮನಸ್ಸನ್ನು ಪ್ರಶಾಂತವಾಗಿರಿಸಿಕೊಂಡಿದ್ದ.
ಎಲ್ಲ ರಿಪೋರ್ಟ್ಗಳೊಡನೆ ಮನೆ ಸೇರಿದ ಜ್ಯೋತಿ ತಂದೆಯ ಮನವೊಲಿಸಿ ಬೆಂಗಳೂರಿಗೆ ಕರೆದೊಯ್ದಳು. ಮತ್ತೊಮ್ಮೆ ಎಲ್ಲ ಪರೀಕ್ಷೆಗಳಾದವು. ಮೂರು ದಿನಗಳ ಅನಂತರ ಕರೆದಿದ್ದರು.
ಜ್ಯೋತಿಗೆ ಆತಂಕ-“ಡಾಕ್ಟರ್, ಆಪರೇಶನ್ ಯಾವಾಗ ಮಾಡ್ತೀರಿ?”
ಡಾಕ್ಟರ್ ಅವಳನ್ನು ನೋಡಿ ಮುಗುಳ್ನಕ್ಕರು.
“ಮಗೂ, ನನ್ನ ಮೂರು ದಶಕದ ವೃತ್ತಿಯಲ್ಲಿಯೇ ಕಾಣದಂಥ ಕೇಸಿದು. ನಿಮ್ಮ ತಂದೆಯ ಹಳೆಯ ರಿಪೋರ್ಟ್ ನೋಡಿದರೆ ಆಪರೇಶನ್ ಬೇಕಾಗಿತ್ತು. ಆದ್ರೆ ಈಗ ಅದರ ಅವಶ್ಯಕತೆಯೇ ಇಲ್ಲ. ಒಂದು ಹೊಸ ನರ ಬೆಳೆದು ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆ ಆಗ್ತಾ ಇದೆ. ಬಿಪಿ ಕೂಡ ನಾರ್ಮಲ್. ನಿನ್ನ ಸಮಾಧಾನಕ್ಕೆ ಕೆಲವು ಔಷಧಿ ಕೊಡ್ತೇನೆ. ಏನೂ ಚಿಂತೆಗೆ ಕಾರಣವಿಲ್ಲ. ನಿಮ್ಮ ಪಪ್ಪಾ ಪೂರ್ಣ ಅರಾಂ ಆಗಿದ್ದಾರೆ.”
ಜ್ಯೋತಿ ಸಂತೋಷದಿಂದ ಹೊರಬಂದಳು ತಂದೆಯೊಂದಿಗೆ. ತಾನು ಶಾಲೆಯಲ್ಲಿದ್ದಾಗ ಹಾಡುತ್ತಿದ್ದ-
“ನೀನೊಲಿದರೆ ಕೊರಡು
ಕೊನರುವುದಯ್ಯಾ
ನೀನೊಲಿದರೆ ವಿಷವು
ಅಮೃತವಹುದಯ್ಯಾ” ಎಂಬ ಸಾಲುಗಳು ನೆನಪಾದವು.

Leave a Reply