ಬಯಕೆಯ ಗಾಳಿಪಟಗಳು..!

ಅದು ಅರಮನೆ ಮೈದಾನ; ಗಾಳಿಪಟದ ಉತ್ಸವ ಆಯೋಜಿಸಲಾಗಿತ್ತು. ಮಕ್ಕಳಿಂದ ಮಹಾಜನರವರೆಗೆ ಎಲ್ಲರೂ ಕಲೆತು ಗಾಳಿಪಟ ಹಾರಿಸುವ ಕಾಯಕದಲ್ಲಿ ನಿರತರಾಗಿದ್ದರು. ಎಲ್ಲರ ಮೊಗದಲ್ಲೂ ಉತ್ಸಾಹದ ಉಸಿರು. ಸಂತೋಷ ಅಲ್ಲಿ ಕೆನೆ ಕಟ್ಟಿತ್ತು. ಬಣ್ಣಬಣ್ಣದ , ಚಿತ್ರ-ವಿಚಿತ್ರ ಆಕಾರದ ಗಾಳಿಪಟಗಳು. ಹುಲಿ, ಗರುಡ, ಆಕ್ಟೋಪಸ್, ಪಾತರಗಿತ್ತಿ, ಕಾಳಿಂಗಸರ್ಪ…. ಹೀಗೆ ವಿವಿಧ ವರ್ಣ, ಆಕಾರದ ಗಾಳಿಪಟಗಳನ್ನು ಹಾರಿಸುತ್ತಾ, ಒಬ್ಬರಿಗೊಬ್ಬರು ಸ್ಪರ್ಧೆ ಒಡ್ಡುತ್ತಾ, ಆ ಬೆರಗಿನ ಸಂಭ್ರಮದ ಸವಿಯನ್ನು ಸವಿಯುತ್ತಿದ್ದ ಹೊತ್ತು.
ಅಲ್ಲಿ ಬಣ್ಣಗಳದ್ದೇ ಕಾರುಬಾರು. ಬಾನಲ್ಲಿ ಹಸಿರು, ಕೆಂಪು, ನೀಲಿ, ಹಳದಿ, ಕಪ್ಪು-ಬಿಳುಪುಗಳು ಮಿಶ್ರಗೊಂಡ ತರಹೇವಾರಿ ಪತಂಗಗಳ ಚಿತ್ತಾರ. ಒಂದೊಂದೂ ತಮ್ಮ ಚೆಲುವಿನಿಂದ ಕಣ್ಮನ ಸೆಳೆಯುತ್ತಿದ್ದವು. ತಮ್ಮ ಮೇಲೆ ಬೀಳುವ ಬೆಳಕಿಗೆ ಅಕ್ಕಪಕ್ಕದ ಪ್ರಕೃತಿಯ ಬಣ್ಣಗಳನ್ನು ಪ್ರತಿಫಲಿಸುವುದರಿಂದ ಅವುಗಳು ಹೆಚ್ಚು ರಂಗು ರಂಗಾಗಿ ಕಾಣಿಸುತ್ತಿದ್ದವು. ಅವರವರ ಉಮೇದು – ಉತ್ಸಾಹಕ್ಕೆ ತಕ್ಕಂತೆ; ಚಿಣ್ಣರ ಕೈಲಿ ಚಿಕ್ಕದಾದರೆ, ದೊಡ್ಡವರ ಕೈಯಲ್ಲಿ ದೊಡ್ಡ ಪಟಗಳು. ಖುಷಿ ಖುಷಿಯಿಂದ ಬೀಗುತ್ತಾ, ಮನಸಾರೆ ಕುಣಿದು ಕುಪ್ಪಳಿಸುತ್ತಾ, ಕೇಕೆ ಹಾಕುತ್ತಿದ್ದ ದೃಶ್ಯ ಚೇತೋಹಾರಿಯಾಗಿತ್ತು.

ಎಲ್ಲರೂ ಆಟದ ತುರುಸಿನಲ್ಲಿ ಮೈಮರೆತಿರುವಾಗ, ಕೊಳ್ಳುವ ವ್ಯವಧಾನವಾದರೂ ಯಾರಿಗಿದ್ದೀತು…? ಎಲ್ಲರ ಕಣ್ಣುಗಳು ಗಗನದ ಎತ್ತರದ ಬಯಲು ಗಾಳಿಯಲ್ಲಿ ಜಿಗಿ ಜಿಗಿಯುತ ನಲಿಯುವ ಬಣ್ಣದ ಪಟಗಳತ್ತ ಇತ್ತೇ ಹೊರತು, ನಿಂತ ನೆಲದ ವ್ಯಾಪರ ಯಾರ ಗಮನಕ್ಕೂ ಹತ್ತಿದಂತಿರಲಿಲ್ಲ.

ಈ ಎಲ್ಲ ಸಡಗರ ಸಂಭ್ರಮದ ಮದ್ಯದಲ್ಲಿ ತಟ್ಟನೆ ನನ್ನ ಕಣ್ಣು ಸೆಳೆದದ್ದು ಆ ದೃಶ್ಯ. ವಿವಿಧ ಬಣ್ಣಗಳ ಮಣಿಸರ ಹಿಡಿದು ಅತ್ತಿತ್ತ ಹೆಜ್ಜೆ ಹಾಕುತ್ತಿದ್ದ ಆಕೆ. ಅವಳ ಕೈಯಲ್ಲಿ ಚಿಕ್ಕ, ದೊಡ್ಡ, ತೆಳ್ಳನೆಯ, ಬೆಳ್ಳನೆಯ, ಉರುಟಾದ, ಚೌಕಾಕ, ಅಷ್ಟಭುಜದ, ಷಟ್ಭುಜಾಕೃತಿಯ ನವ ನವೀನ ಮಾದರಿಯ ಗೊಂಚಲು ಮಣಿಸರಗಳ ವೈವಿಧ್ಯಮಯ ಮಾಲೆ. ಮಗುವಿನಿಂದ ಮುದುಕಿಯವರೆಗೂ ವಯಸ್ಸಿನ ಅಂತರವಿಲ್ಲದೇ ಧರಿಸಬಲ್ಲ ಸರಗಳವು. ಬಿಸಿಲಿನ ಝಳಕ್ಕೆ ಮಿಂಚಿನಂತೆ ಥಳಥಳಿಸುತ್ತಾ, ಎರಡೂ ಕೈಲಿ ಮೊಣಕೈಯಿಂದ ಮಣಿಕಟ್ಟಿನವರೆಗೂ ತೂಗಾಡುತ್ತಿವೆ. ಅವೆಲ್ಲಾ ಬಿಕರಿಗಿಟ್ಟ ಮಾಲುಗಳು. ಮಣಿ, ಮಣಿಯ ಪ್ರತಿ ಚುಕ್ಕಿಯಲ್ಲೂ, ಗಿರಾಕಿಗಳ ಕಣ್ಮನ ಸೆಳೆಯುವ ಹೊಂಚು ನೋಟ. ಹೊಟ್ಟೆ ತುಂಬಿಸಿಕೊಳ್ಳುವ ಯೋಚನೆಯಲ್ಲಿ ಸಾಕಷ್ಟು ಮಣಿ ಸರಗಳು ಮಾರಾಟ ಆಗಬಹುದೆಂಬ ನಿರೀಕ್ಷೆಯಿಂದ ಅತ್ತಿಂದಿತ್ತ ಹೋಗುವವರನ್ನು ಆಸೆಯ ಕಂಗಳಿಂದ ನೋಡುತ್ತಿದ್ದಳು. ಮನದಲ್ಲಿ ಸೂತ್ರ ಹರಿದ ಆಸೆಯ ಗಾಳಿಪಟವೊಂದು ಲಾಗ ಹಾಕುತ್ತಲೇ ಇತ್ತು.
ಹತ್ತಿರ ಬಂದ ಆಕೆಯನ್ನು ಅಪಾದಮಸ್ತಕ ನೋಡಿದೆ. ವಯಸ್ಸು ಹೆಚ್ಚೇನೂ ಆಗಿರಲಾರದು. ವಯಸ್ಸಾದಂತೆ ರೂಪುಗೊಂಡಂತಿತ್ತು ಆ ಮುಖ. ಅಲ್ಲಲ್ಲಿ ತೇಪೆ ಹಾಕಿದ, ಧೂಳು ಹಿಡಿದು ಕೊಳೆಯಾದ ಬಟ್ಟೆ. ಕೆದರಿದ ಕೂದಲು ಎಣ್ಣೆ ಕಾಣದೇ ಕಂದು ಬಣ್ಣಕ್ಕೆ ತಿರುಗಿತ್ತು. ಸೊಂಟದಲ್ಲಿ ಮೂಳೆ-ಚಕ್ಕಳಗಳೇ ಎದ್ದು ಕಾಣುವ ಕೂಸು; ನೀರು ಕಾಣದ ಅದರ ಒರಟೊರಟಾದ ಮೈ. ಹಸಿವಿನ ಸಂಕಟದಿಂದ ಬಳಲಿದ ಆ ಮುಖ ಯಾರ ಕಣ್ಣಿಗಾದರೂ ರಾಚುವಂತಿತ್ತು. ಆಗಿನಿಂದಲೂ ಆಕೆ ‘ಅಕ್ಕೋರೇ…. ಸರ, ಅಮ್ಮೋರೇ…. ಮಣಿಸರ’ ಅಂತ ಕೂಗುತ್ತಾ ಅತ್ತಿಂದಿತ್ತ ಸುತ್ತುತ್ತಿದ್ದಳು. ಆಸೆ-ನಿರಾಸೆಗಳ ಮಿಶ್ರ ಭಾವ ಕಣ್ಣುಗಳಲ್ಲಿ ಎದ್ದು ತೋರುತ್ತಿತ್ತು. ಕನಸುಗಳು ಕೂಡಾ ಆಕೆಯ ಅಶಕ್ತ ಕಣ್ಣುಗಳಲ್ಲಿ ನಿತ್ರಾಣಗೊಂಡಂತೆ ಕಾಣುತ್ತಿತ್ತು.
ಎಲ್ಲರೂ ಆಟದ ತುರುಸಿನಲ್ಲಿ ಮೈ ಮರೆತಿರುವಾಗ, ಕೊಳ್ಳುವ ವ್ಯವಧಾನವಾದರೂ ಯಾರಿಗಿದ್ದೀತು….? ಎಲ್ಲರ ಕಣ್ಣುಗಳು ಗಗನದ ಎತ್ತರದ ಬಯಲು ಗಾಳಿಯಲ್ಲಿ ಜಿಗಿ ಜಿಗಿಯುತ ನಲಿಯುವ ಬಣ್ಣದ ಪಟಗಳತ್ತ ಇತ್ತೇ ಹೊರತು, ನಿಂತ ನೆಲದ ವ್ಯಾಪಾರ ಯಾರ ಗಮನಕ್ಕೂ ಹತ್ತಿದಂತಿರಲಿಲ್ಲ. ಈ ಹೊತ್ತಿನಲ್ಲಿ ಆಕೆಯ ಹಸಿವೂ ಕೂಡಾ ಮಣಿಸರದ ತೂಗುಯ್ಯಾಲೆಯಲ್ಲಿ ಬಂಧಿ. ಇನ್ನು ಆಟದ ನಮ್ಮೋಹಿನಿಗೆ ಸಿಲುಕಿದವರ ಕಿವಿಗಳಿಗೆ ಆಕೆಯ ಮೊರೆ ಕೇಳಿಸುವುದಾದರೂ ಹೇಗೆ….?
ಸರ ಮಾರುವುದರಿಂದಲೇ ಆಕೆ ನಡೆಸಬಹುದಾದ ಜೀವನವನ್ನು ಕಲ್ಪಿಸಿಕೊಂಡೆ. ಅಬ್ಬಾ….! ಬದುಕು ಎಷ್ಟೊಂದು ಪರಿಪಾಟಲು; ಒಬ್ಬೊಬ್ಬರದೂ ಒಂದೊಂದು ಬಗೆ. ದಿನವೆಲ್ಲಾ ಕಷ್ಟಪಟ್ಟು ಕೈಯಲ್ಲಿರುವ ಅಷ್ಟೂ ಸರ ಮಾರಿದರೂ ಅಷ್ಟೇನು ರೊಕ್ಕ ಕೈಗೆ ಹತ್ತಲಾರದು ಅನ್ನಿಸಿತು. ಆಕೆ ದಿನದ ತುತ್ತು ಕೂಳಿಗೆ ಎಷ್ಟೆಲ್ಲಾ ಹರಸಾಹಸ ಪಡಬೇಕು….!
ಹೀಗೆಯೇ ಸಾಗಿತ್ತು ನನ್ನ ಯೋಚನಾ ಲಹರಿ. ಆ ಉತ್ಸವದ ಸಂಭ್ರಮದಲ್ಲಿ ಭಾಗಿಯಾಗಲೆಂದೇ ಬಂದ ನನಗೆ ಗಾಳಿಪಟದ ಹಬ್ಬದ ಖುಷಿಯನ್ನು ತುಂಬಿಕೊಳ್ಳಲು ಆಗಲೇ ಇಲ್ಲ. ಬದುಕಿನ ಈ ಆಭಾಸ, ಅತಾರ್ಕಿಕತೆ, ನಿರ್ದಯತೆಗಳ ಮಂಥನ ಮನದಲ್ಲಿ ನಡೆಯುತ್ತಲೇ ಇತ್ತು.

                                                                                               *ಹೊಸ್ಮನೆ ಮುತ್ತು.

Leave a Reply