ಸಹನೆಯೇ ಗೆಲುವಿನ ದಾರಿ
ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೋಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರೂ ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಿಲಿನ ಬಳಿ ಬಂದರು.
ಆ ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕ ಇರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ವೃದ್ಧ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಾಂತಿಯನ್ನು ಪಡೆದ ನಂತರ ಮಹಿಳೆಯು ಬಿಸಿಬಿಸಿ ಅನ್ನ ಮತ್ತು ಸಾಂಬಾರ ಮಾಡಿ ಊಟಕ್ಕೆ ನೀಡಿದಳು.
ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಟ್ಟೆಯಲ್ಲಿದ್ದ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಕೆಳಗೆ ಚೆಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, “ಅರೇ ನೀನು ಸಹ ನಿನ್ನ ರಾಜ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯಲ್ಲ, ಅದಕ್ಕೆ ಕೈ ಸುಟ್ಟುಕೊಂಡೆ” ಎಂದಳು.
ಶಿವಾಜಿಯು ಆಶ್ಚರ್ಯದಿಂದ, “ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಹೇಗೆ ಹೇಳುತ್ತೀ?” ಎಂದು ಕೇಳಿದನು.
ಆಗ ಮಹಿಳೆಯು ಹೇಳಿದಳು, “ನೋಡು ಮಗನೆ, ಶಿವಾಜಿಯು ತನ್ನ ಅವಸರದಿಂದಾಗಿ ಶತ್ರುಗಳ ಸಣ್ಣಸಣ್ಣ ಕೋಟೆಗಳನ್ನು ಗೆಲ್ಲುವ ಬದಲಾಗಿ ದೊಡ್ಡದೊಡ್ಡ ಕೋಟೆಗಳನ್ನು ಗೆಲ್ಲಲು ಹೋಗುತ್ತಿದ್ದಾನೆ. ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನೂ ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ತಟ್ಟೆಯಲ್ಲಿ ತಣ್ಣಗಾಗಿರುವ ಅನ್ನವನ್ನು ಮೊದಲು ತಿನ್ನು”.
ಶಿವಾಜಿಯು ಕೂಡಲೇ ವೃದ್ಧ ಮಹಿಳೆಯ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು.
You must log in to post a comment.