ಸೋಲನ್ನೇ ಕಾಣದ ತೆನಾಲಿರಾಮ

ಸೋಲನ್ನೇ ಕಾಣದ ತೆನಾಲಿರಾಮ

ತೆನಾಲಿರಾಮನಿಗೆ ನಗುವುದು ನಗಿಸುವುದು ದೇವರು ಕೊಟ್ಟ ವರ. ಈ ಕಲೆಯಿಂದಲೇ ತನ್ನ ಜೀವನದಲ್ಲಿ ಎದುರಾದ ಎಷ್ಟೋ ಆಪತ್ತುಗಳಿಂದ ಪಾರಾಗಿದ್ದನು. ತೆನಾಲಿರಾಮ ವಿಜಯನಗರದ ಕೃಷ್ಣದೇವರಾಯನ ಆಸ್ಥಾನದಲ್ಲಿ ಬಹಳ ಪ್ರೀತಿ ವಾತ್ಸಲ್ಯದಿಂದ ಇದ್ದನು. ಈ ವಿಷಯದ ಬಗ್ಗೆ ಆಸ್ಥಾನಿಕರಲ್ಲಿ ಅಸೂಯೆ ಇತ್ತು.
ಒಂದು ಬಾರಿ ಆಸ್ಥಾನದಲ್ಲಿ ಎಲ್ಲಾ ಪಂಡಿತರೂ ನೆರೆದಿದ್ದರು. ಕೃಷ್ಣದೇವರಾಯ ತೆನಾಲಿರಾಮನನ್ನು ಸಲಿಗೆಯಿಂದ ಕರೆದು ಇಂದು ನಾವಿಬ್ಬರೇ ಪಗಡೆ ಆಟ ಆಡೋಣ ಎಂದನು. ತೆನಾಲಿರಾಮ ರಾಜನ ಆಜ್ಞೆಯನ್ನು ಉಲ್ಲಂಘಿಸದೆ ರಾಜನ ಸಂತೋಷಕ್ಕಾಗಿ ಒಪ್ಪಿ ಪಗಡೆ ಆಟಕ್ಕೆ ಕುಳಿತನು. ಆಟದಲ್ಲಿ ಅವನಿಗೆ ಅಷ್ಟೊಂದು ಅನುಭವವೂ ಇರಲಿಲ್ಲ.
ತುಂಬಾ ಹೊತ್ತು ಪಗಡೆ ಆಟ ಜರುಗಿತು. ರಾಜನೇ ಪ್ರತಿ ಆಟದಲ್ಲೂ ಗೆಲ್ಲುತ್ತಾ ಬಂದನು. ತೆನಾಲಿರಾಮನು ಪ್ರತಿ ಆಟದಲ್ಲೂ ಸೋಲುತ್ತಿದ್ದರೂ, ಸೋಲಿನ ಗುರುತೇ ಅವನ ಮುಖದಲ್ಲಿ ಕಂಡುಬರುತ್ತಿರಲಿಲ್ಲ. ಅವನು ರಾಜನ ಕಡೆ ಮಂದಹಾಸದಿಂದ ನೋಡುತ್ತಾ ಆಟ ಮುಂದುವರಿಸುತ್ತಲೇ ಇದ್ದನು. ಆಟದಲ್ಲಿ ಅನುಭವವಿದ್ದ ಪಂಡಿತರು ಗೊಳ್ಳನೆ ನಗತೊಡಗಿದರು.
ರಾಜ ಈ ಬಾರಿ ಆಟ ಪ್ರಾರಂಭವಾಗುತ್ತಿದ್ದಂತೆಯೇ ಹೇಳಿದ – “ತೆನಾಲಿ ರಾಮ, ಈ ಬಾರಿಯೂ ನೀನು ಸೋತರೆ ನಾಳೆ ದರ್ಬಾರಿನಲ್ಲಿ ಬರುವಾಗ ತಲೆ ಕೂದಲನ್ನು ಬೋಳಿಸಿಕೊಂಡು ಬರಬೇಕು”.
ದರ್ಬಾರಿನಲ್ಲಿ ನೆರೆದಿದ್ದವರು ರಾಜನ ಮಾತನ್ನು ಕೇಳಿತ್ತಿದ್ದಂತೆ ನಗತೊಡಗಿದರು. ತೆನಾಲಿರಾಮ ಮರುಮಾತಾಡದೆ ಸಮ್ಮತಿಸಿದವನಂತೆ ತಲೆ ತೂಗಾಡಿಸುತ್ತಾ ಆಟವನ್ನು ಮುಂದುವರಿದ. ಈ ಬಾರಿಯೂ ಅವನೇ ಸೋತ. ದರ್ಬಾರಿನವರೆಲ್ಲರೂ ಗೇಲಿ ಮಾಡಿ ಚಪ್ಪಾಳೆ ತಟ್ಟಿದರು.
ತೆನಾಲಿರಾಮ ಸೋಲು ಮುಖ ಮಾಡಿಕೊಳ್ಳಲಿಲ್ಲ. ಎಂದಿನಂತೆ ಗಂಭೀರ ನಗೆಯೊಂದಿಗೆ ರಾಜನ ಮುಖ ನೋಡತೊಡಗಿದನು. ರಾಜ ನಗುತ್ತಾ ಹೇಳಿದ, “ಈ ಬಾರಿಯೂ ಸೋತೆ ತಾನೇ? ಕೊಟ್ಟ ಮಾತಿನಂತೆ ನಾಳೆ ಬರುವಾಗ ತಲೆಕೂದಲನ್ನು ತೆಗೆಸಿಕೊಂಡು ಬರಬೇಕು” ಎಂದನು. “ಆಯಿತು” ಎನ್ನುತ್ತಾ ತೆನಾಲಿರಾಮ ಹೊರಟನು.
ಮಾರನೆಯ ದಿನ ಸಭೆ ಸೇರಿತು. ತೆನಾಲಿರಾಮ ಅದೇ ನಗುಮೊಗದೊಂದಿಗೆ ರಾಜನೆದುರಿಗೆ ನಿಂತಿದ್ದನು. ರಾಜನ ಕಣ್ಣುಗಳು ಕೆಂಪಗಾಗಿದ್ದವು, ತೆನಾಲಿರಾಮನನ್ನು ನೋಡುತ್ತಾ ರಾಜಾಜ್ಞೆಯನ್ನು ಉಲ್ಲಂಘಿಸುವಷ್ಟು ಧೈರ್ಯ ಬಂದಿತಾ ನಿನಗೆ ಎಂದನು.
ಆಗ ತೆನಾಲಿರಾಮ “ಕ್ಷಮಿಸಿ ಪ್ರಭು, ನಾನು ನನ್ನ ತಲೆಕೂದಲನ್ನು ಸಾಲಕ್ಕಾಗಿ ಅಡ ಇಟ್ಟಿದ್ದೇನೆ. ಅವನ ಹಣ ತೀರಿಸಿಲ್ಲ. ಆದ್ದರಿಂದ ತಲೆಕೂದಲನ್ನು ತೆಗೆಸಿಲ್ಲ” ಎಂದನು. ರಾಜನು, “ಈಗಲೇ ಕೋಶಾಧಿಕಾರಿ ಬಳಿ ಹೋಗಿ ನಿನ್ನ ಸಾಲದ ಹಣವನ್ನು ಪಡೆದು, ಸಾಲ ತೀರಿಸಿ ನಾಳೆ ಬರುವಾಗ ತಲೆ ಬೋಳಿಸಿಕೊಂಡು ಬಾ” ಎಂದನು.
ಮಾರನೆಯ ದಿನವೂ ಸಭೆ ಸೇರಿತು. ತೆನಾಲಿರಾಮ ಆ ದಿನವೂ ತಲೆ ಬೋಳಿಸಿಕೊಂಡು ಬಂದಿರಲಿಲ್ಲ. ರಾಜ ಮನಸ್ಸಿನಲ್ಲಿಯೇ ನಗುತ್ತಾ, ಕೋಪದ ನಟನೆಯ ಮುಖಭಂಗಿಯಲ್ಲಿ ಪ್ರಶ್ನಿಸಿದ “ಈ ದಿನ ಇನ್ನೇನು ಸುಳ್ಳು ನೆಪ ಹುಡುಕಿ ತಂದಿರುವೆ? ಏಕೆ ಈ ದಿನವೂ ತಲೆ ಬೋಳಿಸಿಲ್ಲ?”
ತೆನಾಲಿರಾಮ ವಿನೀತ ಭಾವದೊಂದಿಗೆ, ದುಃಖಿತನಂತೆ ಹೇಳಿದ “ಮಹಾಸ್ವಾಮಿ, ತಂದೆ ತಾಯಿ ಸತ್ತಾಗ ಮಗ ಕರ್ಮವನ್ನು ನಿಷ್ಠೆಯಿಂದ ಮಾಡಲು ತಲೆ ಬೋಳಿಸಿಕೊಳ್ಳುವುದು ಸಹಜ. ಆದರೆ ನನ್ನ ತಾಯಿ-ತಂದೆ ಇಬ್ಬರೂ ತೀರಿಹೋಗಿ ಎಷ್ಟೋ ವರ್ಷಗಳಾಗಿವೆ. ಈಗ ನನ್ನ ಭಾಗಕ್ಕೆ ನೀವೇ ತಂದೆ-ತಾಯಿ ಎಲ್ಲಾ. ನೀವು ಬದುಕಿದ್ದೂ ನಾನು ಹಾಗೆ ಮಾಡಿದರೆ ಅದು ನಿಮಗೇ ಅಮಂಗಳ. ನಿಮ್ಮನ್ನೇ ನಂಬಿರುವ ನಾನು ತಿಳಿದೂ ತಿಳಿದೂ ಹೇಗೆ ಅಂತಹ ಅಮಂಗಳ ಕಾರ್ಯವನ್ನು ಮಾಡಲಿ? ನೀವೇನೇ ಶಿಕ್ಷೆಯನ್ನು ನನ್ನ ಈ ಅಪರಾಧಕ್ಕಾಗಿ ವಿಧಿಸಿದರೂ ಅನುಭವಿಸಲಿಕ್ಕೆ ಸಿದ್ಧವಾಗಿ ಬಂದದ್ದೀನಿ. ಬೇಗ ಶಿಕ್ಷೆ ವಿಧಿಸಿ” ಎಂದನು. ಮನದಲ್ಲಿಯೇ ಅಸೂಯೆಪಡುತ್ತಿದ್ದ ದರ್ಬಾರಿನ ಜನರು ತೆನಾಲಿರಾಮನ ಬುದ್ಧಿವಂತಿಕೆಯ ಮಾತನ್ನು ಕೇಳಿ ದಂಗಾದರು. ಕೃಷ್ಣದೇವರಾಯನಂತೂ ತುಂಬಾ ಸಂತೋಷಗೊಂಡು, ಸಿಂಹಾಸನದಿಂದ ಎದ್ದು ಬಂದು ತೆನಾಲಿರಾಮನನ್ನು ಪ್ರೀತಿಯಿಂದ ಅಪ್ಪಿಕೊಂಡನು.

Leave a Reply