Need help? Call +91 9535015489

📖 Print books shipping available only in India. ✈ Flat rate shipping

ಹೀಗೊಂದು ದಿನ

ಹೀಗೊಂದು ದಿನ

ಮನೆಯವರೆಲ್ಲಾ ಪ್ರವಾಸಕ್ಕೆಂದು ಹೊರಡುತ್ತಿದ್ದರು. ನನಗೆ ಪ್ರವಾಸ ತುಂಬಾ ಖುಷಿಕೊಡುವ ವಿಷಯ. ಮಿನಿಬಸ್‍ನಲ್ಲಿ ಹಾಡುತ್ತಾ ಕುಣಿಯುತ್ತಾ ಹೋಗುತ್ತಿದ್ದೆವು. ಮೊದಲು ಸಮುದ್ರದಲ್ಲಿ ಆಡುವುದು ಎಂದು ನಿರ್ಧರಿಸಲಾಗಿತ್ತು. ನಡುವೆ ಇನ್ನೇನು ಸ್ವಲ್ಪವೇ ದೂರದಲ್ಲಿ ಸಮುದ್ರ ಇತ್ತು. ತೆರೆಗಳ ಮಿಂಚಿನ ಓಟ ದೂರದಿಂದ ಕಾಣಿಸುತ್ತಿತ್ತು. ಮನೆಯವರೆಲ್ಲಾ ಎಲ್ಲೆಲ್ಲೊ ಅಡ್ಡಾಡುತ್ತಾ ಹೋದರು. ನಾನು ಮಾತ್ರ ಸಮುದ್ರವನ್ನು ದೂರದಿಂದಲೇ ತದೇಕಚಿತ್ತದಿಂದ ವೀಕ್ಷಿಸುವುದರಲ್ಲಿ ಮನಸ್ಸನ್ನು ಕೇಂದ್ರೀಕರಿಸಿದ್ದೆ. ನೋಡು ನೋಡುತ್ತಿದ್ದಂತೆ ನನ್ನ ಮುಂದಿದ್ದ ಎಲ್ಲರೂ ಮಾಯವಾದರು. ನಾನೊಬ್ಬಳೆ ಒಂಟಿಯಾದೆ. ನನ್ನ ಸುತ್ತ ಭಯ ಆವರಿಸಿತು. ಹಾಗೇ ಮುಂದೆ ಮುಂದೆ ಸಮುದ್ರದ ಕಡೆಗೇ ನಡೆದೆ. ಎಲ್ಲರನ್ನು ಕ್ಷಣಮಾತ್ರದಲ್ಲೆ ಮರೆತೆ. ಅಲೆಗಳು ಬಂದು ಅಪ್ಪಳಿಸಿ ಕಾಲನ್ನು ತಂಪಾಗಿಸಿದವು. ಇನ್ನೂ ಮುಂದೆ ಸಾಗಿದೆ. ದೂರದಲ್ಲಿ ದೊಡ್ಡ ಸಮುದ್ರದ ಅಲೆಯೊಂದು ಭೋರ್ಗರೆಯುತ್ತಾ ಬರುತ್ತಿತ್ತು! ನಾನು ಒಂದೇ ಉಸಿರಿನಲ್ಲಿ ನಿಲ್ಲಲಾರದೆ ಕಡಲಿಗೆ ಬೆನ್ನು ಮಾಡಿ ಓಟಕ್ಕಿತ್ತೆ! ತೆರೆಯ ಓಟಕ್ಕೆ ನನ್ನ ಓಟ ಸಮನಾದೀತೆ? ತೆರೆಯೋ ಕ್ಷಣಾರ್ಧದಲ್ಲಿ ರೊಯ್ಯನೆ ಬಂದೇ ಬಿಟ್ಟಿತು. ತಪ್ಪಿಸಿ ಓಡುವುದು ಅಸಾಧ್ಯವೆನಿಸಿ ನೆಲಕ್ಕುರುಳಿ ಮರಳಿನಲ್ಲಿ ಅಂಗಾತ ಮಲಗಿಬಿಟ್ಟೆ. ಕಣ್ತೆರೆದಾಗ ತೆರೆ ಮತ್ತೆ ಹಿಂದಕ್ಕೆ ಹೋಗಿತ್ತು. ದೇವರೇ ಕಾದನೆಂದು ಎದ್ದು ಸುತ್ತ ಕಣ್ಣಾಡಿಸಿದೆ ಎಲ್ಲೆಡೆ ಮೌನ! ಯಾರೂ ಕಾಣಲಿಲ್ಲ. ಒಂದು ಜೀವದ ಸುಳಿವೂ ಇಲ್ಲ. ಸುದೀರ್ಘ ನಡೆದೆ. ಅದಾವುದೊ ಅಪರಿಚಿತ ಸ್ಥಳ ನಡೆದೇ ನಡೆದೆ. ನಡೆದಷ್ಟು ದಟ್ಟ ಅರಣ್ಯ. ಕತ್ತಲು ಸುತ್ತ ಆವರಿಸಿತ್ತು. ಗಿಡಮರಗಳ ಹಿತಕರ ಗಾಳಿ, ದೂರದಲ್ಲಿ ಎಲ್ಲೋ ಪ್ರಾಣಿಗಳ ಕೂಗಾಟ! ಕತ್ತಲಲ್ಲಿ ಬೇಟೆಯ ಕಾಯಕ ನಡೆಸಿದಂತೆ ತೋರುತ್ತಿತ್ತು. ಇದ್ದಕ್ಕಿದ್ದಂತೆ ಸಮೀಪದಲ್ಲೇ ಘರ್ಜನೆ ಕೇಳಿಸಿತು. ಎದೆ ಝಲ್ ಎಂದಿತು. ಹೃದಯ ಒಂದೇ ಸಮನೆ ಲಬ್‍ಡಬ್, ಲಬ್‍ಡಬ್ ಎಂದು ಬಡಿಯುತ್ತಿತ್ತು. ಹೃದಯ ಬಡಿತದ ಶಬ್ದ ಕಿವಿಯಲ್ಲಿ ರಿಂಘಣವಾಗುತ್ತಿತ್ತು. ಎದುರಿಗೆ ಸಣ್ಣ ಸಣ್ಣ ಎರಡು ಟಾರ್ಚ್ ಬಿಟ್ಟಂತೆ ಬೆಳಕು ಕಾಣಿಸಿತು. ಹೃದಯ ಬಡಿತ ನಿಲ್ಲುವುದೊಂದೇ ಬಾಕಿ. ಆ ಟಾರ್ಚ್‍ಗಳೆರಡೂ ನನ್ನ ಸಮೀಪಿಸುತ್ತಿದ್ದವು. ನಾನೂ ಹಿಂದೆ ಹಿಂದೆ ಸರಿದಷ್ಟು ಅವು ಮುಂದೆ ಮುಂದೆ ಬರುತ್ತಲೇ ಇದ್ದವು. ಕ್ಷಣಮಾತ್ರದಲ್ಲಿ ಅದು ಹುಲಿ ಎಂದು ತಿಳಿಯಿತು. ಯಾವಾಗಲೋ ಕೇಳಿದ್ದೆ, ಕಾಡು ಪ್ರಾಣಿಗಳು ಹತ್ತಿರ ಬಂದಾಗ ಸತ್ತಂತೆ ಮಲಗಬೇಕು ಎಂದು. ಸರಿ, ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿದೆ. ಹುಲಿಯೋ ನನ್ನ ಪಾದವನ್ನು, ಕೈಗಳನ್ನು ನಂತರ ಮುಖವನ್ನು ಮೂಸುತ್ತಿತ್ತು. ನನ್ನ ಜೀವ ನನ್ನ ಕೈಯಲ್ಲಿತ್ತು. ಇಂದಿಗೆ ನನ್ನ ಅಸ್ತಿತ್ವ ಭೂಮಿಯಲ್ಲಿ ಮುಗಿಯಿತು ಎಂದು ಮನಸ್ಸು ಹೇಳುತ್ತಿತ್ತು. ಹುಲಿ ಎದೆಯ ಬಡಿತವನ್ನು ಒಂದೇ ಸಮನೆ ಮೂಸಿ ಮೂಸಿ ನೋಡುತ್ತಿತ್ತು. ಏನಾಯಿತೋ ತಿಳಿಯದು. ಮೂರ್ಖಹುಲಿ ಹಿಂದಿರುಗಿ ಮೆಲ್ಲಗೆ ಮುಂದೆ ಹೆಜ್ಜೆ ಹಾಕಿತು. ನಾನೂ ದೀ…ರ್ಘ ಉಸಿರು ಬಿಡುತ್ತಾ ಅಲ್ಲೇ ಗಿಡಕ್ಕೆ ಒರಗಿ 1/2 ಗಂಟೆ ಕುಳಿತೆ. ನನಗೇ ತಿಳಿಯದಂತೆ ನಿದ್ದೆಗೆ ಜಾರಿದೆ. ಕಣ್ತೆರೆದಾಗ ಸುತ್ತ ಹೊಗೆ! ಓಹೋ ಹೊಗೆ ಅಲ್ಲ ಇಬ್ಬನಿ ಹೊಗೆಯಂತೆ ಜಾರುತ್ತಿತ್ತು. ನನ್ನ ಮೈನಡುಗುತ್ತಿತ್ತು. ಏನೋ ಪುಳಕ, ಅಲ್ಲಲ್ಲಿ ಪಕ್ಷಿಗಳು ಮೆಲ್ಲಗೆ ಕಲವರದ ಗಾಯನ ನಡೆಸಿದ್ದವು. ಹುಲಿಯ ಘಟನೆ ಕ್ಷಣದಲ್ಲೇ ಮರೆತೆ. ಭಾಸ್ಕರ ತನ್ನ ಬಾಲ್ಯದ ಎಳೆಯ ಬಾಹುಗಳನ್ನು ಬೀಸಿ ಒಳ ಪ್ರವೇಶಿಸಲು ಪ್ರಯತ್ನ ನಡೆಸಿದ್ದ. ಆ ಎಳೆಯ ಕಿರಣಗಳು ದಟ್ಟ ಗಿಡಮರಗಳ ಜೊತೆ ಕುಸ್ತಿಗಿಳಿದು ಮೆಲ್ಲಗೆ ಪ್ರವೇಶ ಪಡೆಯುತ್ತಿದ್ದವು. ಪಕ್ಕದಲ್ಲಿ ಝುಳುಝುಳು ನಿನಾದ ಕೇಳಿತು. ನಿಧಾನ ಎದ್ದು ನೋಡಿದರೆ ನದಿಯ ಝರಿಯೊಂದು ಬಿನ್ನಾಣದಿಂದ ಬಳುಕುತ್ತಾ ನಾದವನ್ನುಂಟು ಮಾಡುತ್ತಿತ್ತು. ಮುಖ ತೊಳೆದೆ ಹಿತಕರ ಅನುಭವವಾಯಿತು. ನೀರಲ್ಲಿ ಮೀಯುವ ಆಸೆಯಾಯಿತು. ಎಲ್ಲೂ ಕೂಡುವ ಕಲ್ಲು ಅಥವಾ ಬಂಡೆ ಕಾಣುತ್ತಿಲ್ಲ. ಮುಂದೆ ನಡೆದೆ ಸಣ್ಣ ಕಲ್ಲೊಂದು ಕಾಣಿಸಿತು. ಅಬ್ಬಾ! ಎಂದದ್ದೇ ಠಣ್‍ನೆ ಜಿಗಿದು ಮುಟ್ಟಿ ನೋಡಿದೆ ಜಾರುವಂತೇನೂ ಇರಲಿಲ್ಲ. ಧೈರ್ಯ ಮಾಡಿ ಕಲ್ಲಿನ ಮೇಲೆ ಕುಳಿತು ಕಾಲು ನೀರಲ್ಲಿ ಹಾಕಿದೆ. ಕಾಲಿಗಾದ ಆಯಾಸ ಕಡಿಮೆಯಾಯಿತು. ಮರಿಮೀನುಗಳು ಕಾಲನ್ನು ಸ್ವಚ್ಛಗೊಳಿಸಿದವು. ಏಳುವ ಮನಸ್ಸಾಗದೆ ಹಾಗೇ ಕುಳಿತೆ. ಮನಸ್ಸು ಕಲ್ಪನಾಲೋಕದಲ್ಲಿ ಸಂಚರಿಸಲು ಹಾರಿತು. ಕಾಲಿನಲ್ಲಿ ಐಸ್‍ನಂತೆ ಅನುಭವವಾಯಿತು. ಕಾಲನ್ನು ಮೆಲ್ಲಗೆ ಅಲುಗಾಡಿಸಿದೆ. ಅಲುಗಾಡಿಸಿದಷ್ಟು ಕಾಲ್ಕಡ್ಗದಂತೆ ಸುತ್ತಿದ ಅನುಭವವಾಯಿತು. ಏನೋ ಇದೆ ಎಂದು ಭಾಸವಾಯಿತು. ಹಳೆಯಕಾಲದ ಯಾವುದೋ ನಿಧಿ, ಕಾಲ್ಗೆಜ್ಜೆ ಇರಬಹುದು! ಅದನ್ನು ಒಯ್ದು ಅಮ್ಮ ಅಜ್ಜಿಗೆ ತೋರಿಸಬೇಕೆಂಬ ಕುತೂಹಲದಿಂದ ಕಾಲೆತ್ತಿದೆ. ಅದೊಂದು ದೊಡ್ಡ ಹೆಬ್ಬಾವು ಕಾಲನ್ನು ಸುತ್ತಿತ್ತು! ಅಯ್ಯೋ ಅಮ್ಮಾ…. ಎಂದು ಕಾಲನ್ನು ಎತ್ತಿ ದೇಹದ ಎಲ್ಲಾ ಶಕ್ತಿಯನ್ನು ಚೇತನವನ್ನೂ ಬಡಿದೆಬ್ಬಿಸಿ ಜಾಡಿಸಿ ಒದ್ದೆ! ಏನಾಶ್ಚರ್ಯ! ಒದ್ದ ತಕ್ಷಣ ಅಯ್ಯೋ ದೇವರೆ! ಪಾಪಿ! ನಾನೇನ್ಮಾಡಿದ್ದೆ ನಿನಗೆ? ರಾತ್ರಿಯೆಲ್ಲಾ ಎಷ್ಟು ಒಳ್ಳೊಳ್ಳೆ ಕಥೆ ಹೇಳ್ದೆ, ಸಿಂಹರಾಜನ ಕಾಡು, ಹಾವು ಸಮುದ್ರ ಮಂಥನ, ಎಲ್ಲಾ ಕೇಳಿ ಮಲಗಿ ಈಗ ನನಗೇ ಎಷ್ಟು ಜೋರಾಗಿ ಒದ್ದಿಬಿಟ್ಟಿಯಲ್ಲೇ! ಎಂದು ಒಂದೇ ಸಮನೆ ಬೈಗುಳದ ಸುಪ್ರಭಾತ ಕೇಳಿಸಿತು. ಇದೇನಪ್ಪಾ ಇಷ್ಟೆಲ್ಲಾ ಒಂದು ಹೆಬ್ಬಾವು ಮಾತಾಡ್ತಾ ಎಂದು ಗಾಬರಿಯಾಗಿ ಕಣ್ತೆರೆದು ನೋಡಿದರೆ ಅಜ್ಜಿ ಮಂಚದಿಂದ ಕೆಳಗೆ ಬಿದ್ದು ಅಳತಾ ಇದ್ಲು. ಅಮ್ಮಾ, ಅಪ್ಪ ಕೋಣೆಯಿಂದ ಬಂದು ಯಾಕೆ ಹಾಗೆ ಮಾಡ್ದೆ ಎಂದು ಬೈತಾ ಇದ್ರು. ಆಗ ನನಗೆ ಒಳಗೊಳಗೆ ನಗು ತೂರಿ ಬರುತ್ತಿತ್ತು. ಈಗ ತಿಳೀತು ನಾನು ಕಂಡದ್ದೆಲ್ಲಾ ಕನಸು ಎಂದು.

Leave a Reply

This site uses Akismet to reduce spam. Learn how your comment data is processed.