ಅನಿಂದಿತಾ

ಅನಿಂದಿತಾ

ಅರವಿಂದನ ಮುಖದ ಮೇಲಿನ ಆತಂಕ, ಅಸಹಾಯಕತೆ, ಅವನ ಹೆಂಡತಿ ಯಾಮಿನಿಯ ಮುಖದ ಮೇಲಿನ ಅಸಹನೆ, ಇವೆರಡಕ್ಕೂ ತಾನೇ ಕಾರಣನೇನೋ ಎನ್ನುವ ಕೀಳರಿಮೆಯಿಂದ ಶೂನ್ಯದಲ್ಲಿ ದೃಷ್ಟಿ ನೆಟ್ಟು ಮಲಗಿದ ಅರವಿಂದನ ತಂದೆ ಸದಾಶಿವರಾಯರು, ಎಲ್ಲರನ್ನೂ ಮೌನವಾಗಿ ನೋಡಿದಳು ನರ್ಸ್ ಅನಿಂದಿತಾ. ಸದಾಶಿವರಾಯರಿಗೆ ಇಂಜೆಕ್ಷನ್ ಕೊಟ್ಟು ಹೊರಟರೆ ಅಂದಿಗೆ ಅವಳ ಡ್ಯೂಟಿ ಇರದಿದ್ದರಿಂದ ಮನೆಗೆ ಹೋಗಿ ವಿರಮಿಸಬೇಕೆಂದುಕೊಂಡಿದ್ದಳು. ಆದರೆ ಅವರ ಮಾತುಕತೆಯಿಂದ ಅವಳಿಗೆ ಪರಿಸ್ಥತಿ ಅರ್ಥವಾಗಿತ್ತು. ಅಂತೆಯೇ ಕೇಸ್ ಶೀಟ್ ನೋಡುವ ನೆವದಲ್ಲಿ ಸ್ವಲ್ಪ ಹೊತ್ತು ಅಲ್ಲಿಯೇ ನಿಂತಳು. ಯಾಮಿನಿಗೆ ಪತಿ ತಮ್ಮ ಮಗನ ಅಭ್ಯಾಸವನ್ನು ನಿರ್ಲಕ್ಷಿಸಿ, ದವಾಖಾನೆಯಲ್ಲಿ ತಂದೆಯ ಸೇವೆಗಾಗಿ ನಿಲ್ಲುವುದು ಇಷ್ಟವಿರಲಿಲ್ಲ. ಅದಕ್ಕಾಗಿಯೇ ದಿನಕ್ಕೆ 50ರೂ. ಕೊಟ್ಟು ನೇಮಿಸಿದ ಹುಡುಗ ಅಂದು ಬರಲೇ ಇಲ್ಲ. ಅದೇ ಯಾಮಿನಿಯ ಅಸಹನೆಗೆ ಕಾರಣವಾಗಿತ್ತು. ಅರವಿಂದ ತಂದೆಯ ಮುಂದೆಯೇ ಇದೆಲ್ಲ ಚರ್ಚೆ ನಡೆದಿದ್ದರಿಂದ ಒಂದು ರೀತಿಯ ಮುಜುಗರಕ್ಕೆ ಒಳಗಾಗಿದ್ದ. ಅರ್ಧ ಗಂಟೆಯಿಂದ ಗಮನಿಸುತ್ತಿದ್ದ ಅನಿಂದಿತಳಿಗೆ ಕೊನೆಗೆ ಮನಸ್ಸು ತಡೆಯಲಿಲ್ಲ. ಅವಳು ಈ ರೀತಿ ರೋಗಿಗಳಿಗೆ ಸಹಾಯ ಮಾಡುವುದು ಹೊಸದೇನಲ್ಲ. ಅಂತೆಯೇ ಆ ರಾತ್ರಿ ಸದಾಶಿವರಾಯರನ್ನು ಬೇಕಾದರೆ ತಾನೇ ನೋಡಿಕೊಳ್ಳುವುದಾಗಿ ಹೇಳಿದಳು. ತನಗೆ ನೈಟ್ ಡ್ಯೂಟಿ ಇಲ್ಲವಾದ್ದರಿಂದ ಯಾವುದೇ ಸಮಸ್ಯೆಯಿಲ್ಲವೆಂದಳು.
ಯಾಮಿನಿಯ ಮುಖ ಸಂತಸದಿಂದ ಅರಳಿತು. ಅನಿಂದಿತಳಿಗೆ “ದುಡ್ಡಿನ ಬಗ್ಗೆ ಚಿಂತಿ ಬ್ಯಾಡಾ, ನೀವು ಹೇಳಿದಷ್ಟು ಕೊಡೋಣಾಂತ…” ಎಂದಾಗ ಅವಳ ಮುಖದ ಮೇಲೆ ವಿಷಾದದ ನಗೆ ತೇಲಿತು. ಅರವಿಂದ ಮತ್ತು ಯಾಮಿನಿ ನಿಶ್ಚಿಂತೆಯಿಂದ ಹೊರಟರು. ಅನಿಂದಿತಾ ತನ್ನ ಯೂನಿಫಾರಮ್ ಬದಲಾಯಿಸಿ ತನ್ನ ನಿತ್ಯದ ಉಡುಗೆಯಲ್ಲಿ ಬಂದು ಸದಾಶಿವರಾಯರ ಮುಂದಿನ ಕುರ್ಚಿಯಲ್ಲಿ ಕುಳಿತಳು.
“ಸರ್, ಈಗ ಹೇಳಿ ನಿಮ್ಮ ಸೇವೆಗೆ ನಾನು ಸಿದ್ಧ” ಅವಳ ಮುಗುಳ್ನಗು ತುಂಬಿದ ಮುಖವನ್ನೇ ದಿಟ್ಟಿಸುತ್ತ ರಾಯರು ನುಡಿದರು-
“ಮಗೂ ಈಗ ನಂಗೇನೂ ಬೇಕಾಗಿಲ್ಲ. ನೀನೂ ದಣಿದಿರಬೇಕು, ಮಲಕ್ಕೋ. ನಂಗೇನಾದ್ರೂ ಬೇಕು ಅನಿಸಿದ್ರೆ ನಿನ್ನ ಕರೀತೀನಿ.”
“ಸರ್, ನಮಗ ನಾಲ್ಕು ತಾಸಿಗಿಂತ ಹೆಚ್ಚು ನಿದ್ದೀ ಬರೂದೇ ಇಲ್ಲಾ. ಇಷ್ಟು ಲಗೂನ ಮಲಗಿದ್ರ ನಡುರಾತ್ರಿ ಭೂತದ್ಹಂಗ ಎದ್ದು ಕೂಡ್ಬೇಕಾಗ್ತದ. ಹಿಂಗss ನಿಮ್ಮ ಜತೀಗೆ ಮಾತಾಡಿಕೋತ ಕೂಡ್ತೇನಿ. ಹ್ಞಾ ಹಂಗಂತ ನೀವು ಮಾತಾಡಿ ಆಯಾಸ ಮಾಡಿಕೊಳ್ಳೋದು ಬ್ಯಾಡಾ, ನಾನss ಮಾತಾಡ್ತೇನಿ ನೀವು ಕೇಳ್ರೀ…”
“ಈ ಮುದುಕನ ಹತ್ರ ಏನು ಮಾತಾಡ್ತೀ ತಾಯೀ?”
“ಅರೇ ಹಂಗ ಯಾಕ ಅನ್ತೀರಿ? ಮುಪ್ಪು ದೇಹಕ್ಕ ಮಾತ್ರ. ಭಾವನೆಗಳಿಗೆ, ಅನಿಸಿಕೆಗಳಿಗೆ ಎಲ್ಲೀ ಮುಪ್ಪುss , ಎಲ್ಲೀ ಯೌವನ?”
ಸದಾಶಿವರಾಯರು ಉತ್ತರಿಸಲಿಲ್ಲ. ಮತ್ತೆ ಅನಿಂದಿತಳೇ ಮಾತನಾಡಿದಳು-
“ಸರ್, ನಿಮ್ಮ ಮನಸ್ಸಿಗೆ ಈಗ ನೋವಾಗೇದ. ನಂಗ ಅರ್ಥ ಆಗ್ತದ. ಹೆತ್ತು, ಹೊತ್ತು ಎಷ್ಟು ಜೋಪಾನದಿಂದ ಮಕ್ಕಳ ಜೀವನಾನ ರೂಪಿಸಿದ ತಂದೆ-ತಾಯಿಗಳಿಗೆ ಅವರ ಮ್ಯಾಲ ಯಾವುದೇ ಅಧಿಕಾರ ಇಲ್ಲೇನು ಅಂತ ನಿಮಗೀಗ ಅನಿಸ್ಲಿಕ್ಕ್ ಹತ್ತೇದ, ಹೌದಲ್ಲೋ?”
ರಾಯರು ಅಚ್ಚರಿಯಿಂದ ಅವಳನ್ನೇ ದಿಟ್ಟಿಸಿದರು. ಎಷ್ಟು ಸರಿಯಾಗಿ ಹೇಳಿದ್ದಳವಳು. ಅವರ ಮನಸ್ಸಿನಲ್ಲಿ ಸರಿಯಾಗಿ ಅದೇ ದ್ವಂದ್ವ ನಡೆದಿತ್ತು. ಹೌದೆಂದು ತಲೆಯಾಡಿಸಿದರು.
“ಸರ್, ನನ್ನ ಸಲಹಾ ಅಂದ್ರ, ಇಂಥದಕ್ಕೆಲ್ಲಾ ಬೇಜಾರು ಮಾಡಿಕೊಳ್ಳಲೇಬಾರದು. ವೈಯಕ್ತಿಕ ವಿಷಯಾದಾಗ ತಲೀ ಹಾಕ್ತೇನಂತ ಅಂದುಕೋಬ್ಯಾಡ್ರಿ. ಅನಿಸಿಕೆಗಳನ್ನು ಹಂಚಿಕೊಳ್ಳೋದ್ರಿಂದ ಮನಸ್ಸು ಹಗುರಾಗ್ತದ. ನಿಮ್ಮ ಸೊಸೆಗೆ ತನ್ನ ಗಂಡ ನಿಮ್ಮ ಮ್ಯಾಲ ತೋರಿಸೋ ಆದರ, ಪ್ರೀತಿ ನೋಡಿ ಸ್ವಲ್ಪ ಮತ್ಸರ ಉಂಟಾಗೇದ. ಅದು ಮನಸ್ಸಿಗೆ ಅಭದ್ರತಾನ ಉಂಟುಮಾಡೋದ್ರಿಂದ ಈ ಥರಾ ವರ್ತಿಸ್ತಾರ ಅಷ್ಟ, ನಿಮ್ಮ ಬಗ್ಗೆ ದ್ವೇಷಾ ಏನೂ ಇಲ್ಲಾ. ಮತ್ಸರ ಭಾಳ ಕೆಟ್ಟದ್ದು ಸರ್, ಏನೆಲ್ಲಾ ಅನಾಹುತಾ ಆಗ್ತಾವ ಅದ್ರಿಂದ….”
“ಮಗೂ ನಂಗೊತ್ತಿಲ್ಲಾ. ನನ್ನ ಭ್ರಮಾನೋ, ಏನು ಖರೇನೋ ನಿನ್ನ ಮುಖಾ ಅಪರಿಚಿತ ಅನಿಸ್ತಾ ಇಲ್ಲಾ. ನಿಂಗೇನಾದ್ರೂ ನನ್ನ ಗುರ್ತು ಸಿಕ್ತಾ?”
ಅನಿಂದಿತಳಿಗೆ ಅತೀವ ಹರ್ಷವೆನಿಸಿತು.
“ಹೌದು ಸರ್, ನಿಮಗನಿಸಿದ್ದು ಖರೇನ ಅದ. ಸುಮಾರು 20 ವರ್ಷಗಳ ಹಿಂದೆ ಮಾಸೂರಿನ ಸರ್ವಜ್ಞ ಸ್ಕೂಲಿನ್ಯಾಗ ನಂಗ ಬಯಾಲಜಿ ಕಲಿಸೀರಿ ನೀವು. ಅಷ್ಟೇ ಅಲ್ಲಾ ನನ್ನ ತಂದೆಯನ್ನ ಭೆಟ್ಟಿಯಾಗಿ ನನ್ನ ಡಾಕ್ಟರಳನ್ನಾಗಿ ಮಾಡ್ರೀ ಅಂತ ಸಿಫಾರಸ್ಸೂ ಮಾಡಿದ್ರಿ” ಅವಳ ಧ್ವನಿ ಆರ್ದ್ರವಾಯಿತು. ಹಿಂದಿನ ದಿನಗಳಲ್ಲಿ ಕಳೆದು ಹೋದಂತೆ ಸುಮ್ಮನಾದಳು.
“ಓಹ್! ನೀನು ಅನಿಂದಿತಾ ಜೋಶಿ ಅಲ್ವಾ? ಕ್ಲಾಸಿಗೆ ಯಾವಾಗಲೂ ಫಸ್ಟ್ ಬರ್ತಾ ಇದ್ದೀ…?” ಮತ್ತೊಮ್ಮೆ ಅವಳ ಕಣ್ಣುಗಳು ಮಿನುಗಿದವು. “ಹೌದು ಸರ್, ನಾನು ಅನಿಂದಿತಾ ಜೋಶಿನೇ. ಆದ್ರ ನನ್ನ ಪಾಲಿಗೆ ನಿಮ್ಮ ಆಶೀರ್ವಾದ ಖರೇ ಆಗ್ಲಿಲ್ಲಾ. ನೀವು ಹೇಳಿದ್ಹಂಗ ನಾನು ಯಾವುದೇ ಗುರಿ ಸಾಧಿಸಲಿಲ್ಲಾ…”
ಅವಳ ಧ್ವನಿಯಲ್ಲಿನ ನೋವು ಸದಾಶಿವರಾಯರನ್ನು ತಟ್ಟಿತು.
“ಅನೂ, ನಿನ್ನ ಧ್ವನಿಯೊಳಗಿನ ನೋವು ಬರೀ ಗುರಿ ಸಾಧಿಸದೇ ಹೋದ ವೈಫಲ್ಯದ್ದು ಅನಿಸ್ತಾ ಇಲ್ಲ. ನಾನು ಅಷ್ಟು ಆತ್ಮೀಯ ಅನಿಸಿದ್ರ ನಿನ್ನ ನೋವನ್ನ ಹಂಚಿಕೋ… ನೀನೇ ಹೇಳಿದ್ಯಲ್ಲಾ ನೋವು ಹಂಚಿಕೊಳ್ಳೋದ್ರಿಂದ ಕಡಿಮಿ ಆಗ್ತದಂತ…”
“ಖಂಡಿತಾ ಹೇಳ್ತೇನಿ ಸರ್, ನನ್ನ ಕನಸುಗಳಿಗೆ ಒಂದು ಕಾಲದಾಗ ಬಣ್ಣಾ ತುಂಬಿದೋರು ನೀವು. ಇವತ್ತ ಆ ಕನಸುಗಳು ಚದುರಿ ಹೋದ ಕಥೀನ ಕೇಳಬೇಕಾಗೇದ. ಜೀವನಾ ಎಷ್ಟು ವಿಚಿತ್ರ?
“ನಿಮ್ಮ ಪ್ರೋತ್ಸಾಹ ನನ್ನ ಮನಸ್ಸಿಗೆ ಹೊಸ ಶಕ್ತಿ ಕೊಟ್ಟಿತ್ತು. ತುಂಬು ಉತ್ಸಾಹದಿಂದ ಗುರಿ ಸಾಧಿಸೋ ಛಲ ಹೊಕ್ಕಿತ್ತು. ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ 10ನೆಯ ರಾಂಕ್ ಬಂದು ಪಾಸಾದಾಗ ನನ್ನ ಕಾಲು ಭೂಮಿ ಮ್ಯಾಲ ಇರಲೇ ಇಲ್ಲ ಅನ್ನಿಸಿತ್ತು. ತಂದೆ ನನ್ನ ಕಾಲೇಜಿಗೆ ಕಳಿಸ್ಲಿಕ್ಕೆ ತಯಾರಾದ್ರು. ಮಧ್ಯಮ ವರ್ಗದವರಾದ ನಮಗ ಹಾಸ್ಟೆಲಿನಲ್ಲಿ ಕಲಿಸೋದು ಅಷ್ಟು ಸುಲಭ ಇರ್ಲಿಲ್ಲ. ಅವ್ವನಿಗಂತೂ ಹೆಣ್ಣು ಹುಡುಗಿಗೆ ಈಗ ಕಲಿಸಿದ್ದೇ ಬೇಕಾದಷ್ಟು ಅಂತ ಅವಳ ಮತ.
“ನನ್ನ ಸುದೈವಕ್ಕ ಅಕ್ಕನ ಗಂಡನಿಗೆ ಧಾರವಾಡಕ್ಕೆ ವರ್ಗ ಆತು. ಅಲ್ಲಿಗೆ ಸಮಸ್ಯೆ ಮುಗಿದ್ವು ಅನಿಸ್ತು. ಆದ್ರ ಸಮಸ್ಯೆ ಪ್ರಾರಂಭ ಆಗಿದ್ದೇ ಆವಾಗ. ರೂಪ, ವಿದ್ಯಾ ಎರಡರಲ್ಲೂ ಮುಂದಿದ್ದ ನನ್ನ ಬಗ್ಗೆ ಅಕ್ಕನಿಗೆ ಮೊದ್ಲಿಂದ್ಲೂ ಮತ್ಸರ ಹೆಚ್ಚು. ಗಂಡನ ಮಾತಿಗೆ ಕಟ್ಟುಬಿದ್ದು ನನ್ನನ್ನು ಮನೆಯಲ್ಲಿ ಏನೋ ಇಟ್ಟುಕೊಂಡ್ಲು. ಆದ್ರ ನನ್ನ ಇರುವಿಕೆಯಿಂದ ಆಕಿ ಸಂತೋಷದಿಂದಿಲ್ಲ ಅನ್ನೋ ಸತ್ಯ ಭಾಳ ಲಗೂನ ಗೋಚರಿಸಲಿಕ್ಕೆ ಸುರು ಆತು.
“ಅಕ್ಕನ ಅಸಹನೆ ಹೆಚ್ಚಾದಷ್ಟೂ ನನ್ನ ಉತ್ಸಾಹ ಕಡಿಮೆ ಆತು. ಭಾವ ಹೇಳೀಕೊಡೋ ಪಾಠಗಳು ತಲೀ ಒಳಗ ಹೋಗ್ತಿರಲಿಲ್ಲ. ಅವ್ನಿಗೆ ಎಲ್ಲಾ ಅರ್ಥ ಆಗ್ತಿತ್ತು. ನನಗ ಧೈರ್ಯ ತುಂಬಿ ಪ್ರೋತ್ಸಾಹ ಕೊಡ್ತಿದ್ದ. ತನ್ನ ಗರ್ಭಿಣಿ ಪತ್ನಿಯನ್ನೂ ಸರಿಯಾಗಿ ನೋಡಿಕೊಳ್ಳಬೇಕಾಗಿತ್ತು. ನಾನು ಪಿಯುಸಿ ಮೊದಲ ವರ್ಷದ ಪರೀಕ್ಷಾ ಮುಗಿಸಿ ಊರಿಗೆ ಹೋದೆ. ಅಕ್ಕನೂ ಹೆರಿಗೆಗೆ ಬಂದಿದ್ಲು. ಆಕೀಗೆ ಮುದ್ದಾದ ಮಗ ಹುಟ್ಟಿದ. ಈಗ ಮಾತ್ರ ಅಕ್ಕ ನಿರ್ಧರಿಸಿಬಿಟ್ಟಿದ್ಲು, ತಮ್ಮ ಪುಟ್ಟ ಸಂಸಾರದೊಳಗ ಮತ್ತ ನನ್ನನ್ನ ಸೇರಿಸಿಕೊಳ್ಳೋದು ಬ್ಯಾಡಂತ. ನಾನು ದ್ವಂದ್ವದೊಳಗ ಬಿದ್ದಿದ್ದೆ. ಎಲ್ಲಾನೂ ನಿರ್ಲಕ್ಷಿಸಿ ಮುಂದೆ ಓದುವುದೋ ಬೇಡವೋ ಅಂತ.
“ಆದರ ಆ ದ್ವಂದ್ವ ಭಾಳ ದಿನಾ ಏನೂ ಮುಂದುವರೀಲಿಲ್ಲ. ಅವ್ವನೇ ನನ್ನ ಓದಿಗೆ ಅಂತ್ಯ ಹಾಡಿದ್ಲು. ಅಕ್ಕ ಅವ್ವನ ಮನಸ್ಸಿನಾಗ ಸಲ್ಲದ ವಿಚಾರಗಳನ್ನೆಲ್ಲಾ ತುಂಬಿದ್ಲು. ನಾನು ಮತ್ತು ಭಾವ ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೇವೆಂದೂ ಅದರಿಂದ ಅವಳನ್ನ ಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದೇವೆಂದೂ ಹೇಳಿದ್ದಳು. ನಾನು ಮತ್ತೆ ಅಲ್ಲಿಯೇ ಹೋದರೆ ನಮ್ಮಿಬ್ಬರ ಜೀವನಾನೂ ಹಾಳಾಗುತ್ತದೆಂದೂ ಅವ್ವನನ್ನು ನಂಬಿಸಿಬಿಟ್ಟಿದ್ಲು. ಅದು ಸಂಪೂರ್ಣ ಸುಳ್ಳು ಅನ್ನೋದು ಆಕೀಗೂ ಗೊತ್ತಿತ್ತು. ಆದ್ರಿಂದ ನಂಗ ಹೆಚ್ಚು ನೋವಾಗಿದ್ದು, ಅಲ್ಲಿಗೆ ದೇವರಂಥಾ ಭಾವನ ಚಾರಿತ್ರ್ಯದ ವಧಾ ಮತ್ತು ನನ್ನ ಮುಗ್ಧತೆಯ ಕೊಲೇನೂ ಆಗಿತ್ತು.
“ಅಕ್ಕನ ದ್ವೇಷ, ಮತ್ಸರ ನಂಗ ಅರ್ಥ ಆಗ್ತಿತ್ತು. ಆದ್ರ ಈ ಮಟ್ಟಕ್ಕ ಏರಿದ್ದು ನಂಬ್ಲಿಕ್ಕೆ ಆಗ್ತಿರಲಿಲ್ಲ. ಈ ನಡುವೆ ಅಪ್ಪನ ಅನಿರೀಕ್ಷಿತ ಸಾವಿನಿಂದ ಅವ್ವನೂ ತೀರಾ ಹತಾಶ ಆಗಿಬಿಟ್ಟಳು. ನಾನಂತೂ ಓದನ್ನು ಮರ್ತೇ ಬಿಟ್ಟೆ. ಅವ್ವ ಸ್ವಲ್ಪ ಚೇತರಿಸಿಕೊಂಡ್ಲು. ಆಕೀ ಸಮಾಧಾನಕ್ಕಾದ್ರೂ ಅಕೀ ತೋರಿಸಿದವ್ರನ್ನ ಮದುವೆಯಾಗಿಬಿಡೋದು ಅಂತ ನಿರ್ಧರಿಸಿದೆ. ಆದ್ರ ವಿಧಿ ಅಲ್ಲೂ ನನ್ನ ಬೆನ್ನು ಬಿಡ್ಲಿಲ್ಲ. ಸ್ವಂತ ಅಕ್ಕ ಕಟ್ಟಿದ ಕಥೀನೇ ಆದರೂ ಬೇರೆಯವರ ಪಾಲಿ ಗೆ ಸತ್ಯ ಅನ್ನಿಸಿಬಿಡ್ತು. ‘ಬೆಂಕಿಯಿಲ್ಲದ ಹೊಗೆ ಆಡ್ತದಾ?’ ‘ಯಾವ ಹುತ್ತದಾಗ ಯಾವ ಹಾವೋ?’ ಅಂತೆಲ್ಲ ಮಂದಿ ಮಾತಾಡ್ಲಿಕ್ಕೆ ಸುರು ಮಾಡಿದ್ರು.
“ಬಂದ ಮೂರು -ನಾಲ್ಕು ಸಂಬಂಧಗಳನ್ನ ತಿರಸ್ಕರಿಸಿದ್ರು. ಕ್ರಮೇಣ ಮದುವೆ ವಿಚಾರ ನಿಂತೇ ಹೋತು. ಗೆಳತಿ ಒಬ್ಬಳ ಸಹಾಯದಿಂದ ಈ ನರ್ಸ್ ಟ್ರೈನಿಂಗ್ ಮುಗ್ಸಿ ಇಲ್ಲೇ ನೌಕರಿಗೆ ಸೇರಿದೆ. ಈ ಜೀವನಕ್ಕ ಹೊಂದಿಕೊಂಡೇನಿ. ಮನಸ್ಸು ವ್ಯಗ್ರ ಆದಾಗ ಸಮಾಧಾನ ತಂದುಕೋತೀನಿ. ಡಾಕ್ಟರ್ ಆಗ್ದೇ ಹೋದ್ರೂ ರೋಗಿಗಳ ಸೇವಾ ಮಾಡೋ ಅವಕಾಶ ಅಂತೂ ಸಿಕ್ತಲಾ ಇಷ್ಟೇ ಸಾಕು.”
ಸತತವಾಗಿ ಆಡಿದ ಮಾತಿನಿಂದಲೋ ಅವರ ಪ್ರತಿಕ್ರಿಯೆಗೆ ಕಾಯುವಂತೆಯೋ ಮಾತು ನಿಲ್ಲಿಸಿ ನೋಡಿದಳು ಅನಿಂದಿತಾ.
ಶೂನ್ಯದಲ್ಲಿ ಅವರ ದೃಷ್ಟಿಯಿಂದ ಅವರ ಭಾವನೆಗಳು ತಿಳಿಯಲಿಲ್ಲ. ಆದರೆ ಅವರ ಕೆನ್ನೆಯ ಮೇಲೆ ಉರುಳಿದ್ದ ಒಂದೆರಡು ಹನಿ ಕಂಬನಿ ‘ನಿನ್ನ ನೋವು ನಾವರಿಯಬಲ್ಲೆವು’ ಎಂದಂತಾಯಿತು ಅವಳಿಗೆ.

Leave a Reply