ಕಹಿ ನೆನಪುಗಳು ಬೇಕು ಅರಿಯಲೀ ಬದುಕು

ಕಹಿ ನೆನಪುಗಳು ಬೇಕು ಅರಿಯಲೀ ಬದುಕು

“ಸುನೀ ಚಹಾ” ಎಂದು ಕೂಗಿ ಮತ್ತೆ ಮುಸುಕೆಳೆದ ಅರವಿಂದ, ಚಹಾ ಬರುವವರೆಗೂ ಮತ್ತೈದು ನಿಮಿಷ ಮಲಗುವ ಆಸೆಯಿಂದ. ಕಿವಿಗಳು ಗೆಜ್ಜೆಯ ಶಬ್ದದ ನಿರೀಕ್ಷೆಯಲ್ಲಿದ್ದವು. ಯಾವುದೇ ಶಬ್ದವಿಲ್ಲ. ಮತ್ತೆರಡು ನಿಮಿಷಕ್ಕೆ “ಅರೂ ಚಹಾ” ಎಂದ ತಂದೆಯ ಧ್ವನಿ ಕೇಳಿ ಅಚ್ಚರಿಯಿಂದ ಮುಸುಕು ತೆಗೆದ.
“ಅಪ್ಪಾಜೀ ನೀವ್ಯಾಕ ತಂದ್ರಿ? ಸುನೀ ಎಲ್ಲಿ?”
“ಯಾಕಪ್ಪಾ ನಾ ತಂದ ಚಹಾ ಸಪ್ಪಗನಿಸ್ತದ?”
“ಛೇ ಹಂಗಲ್ಲ, ನೀವ್ಯಾಕ ಇಷ್ಟು ಮ್ಯಾಲ ಹತ್ತಿ ಬರ್ಬೇಕಂತ ಅಷ್ಟ.”
“ಸುನೀತಾ ನಸುಕಿನ್ಯಾಗ ಹುಬ್ಬಳ್ಳಿಗೆ ಹೋಗ್ಯಾಳ. ನಿನ್ನೆ ಸಂಜಿಗೆ ಅವರ ತಂದೀದು ಫೋನ್ ಬಂದಿತ್ತು” ಸಾವಕಾಶವಾಗಿ ಹೇಳಿದರು ಶ್ರೀನಿವಾಸರಾಯರು.
“ಏನು? ನಾನss ಮುಂದಿನ ವಾರ ಕರ್ಕೊಂಡು ಹೋಗ್ತೀನಂತ ಸಾರಿ ಸಾರಿ ಹೇಳಿದ್ರೂ ಕೇಳಲಿಲ್ಲಾ, ಅಲ್ಲಾ ತಾಳ್ಮೆಯ ಪ್ರತಿರೂಪ ಸ್ತ್ರೀ ಅಂತೆಲ್ಲಾ ಹೇಳ್ತಾರ, ಇಷ್ಟ ಇವ್ರ ತಾಳ್ಮಿ ಎಲ್ಲಾ? ಕಡೀಕೂ ತಂದss ಹಟಾ ಸಾಧಿಸೋ ಬುದ್ಧಿ. ಇಷ್ಟು ದಿನದ ಮ್ಯಾಲ ನೀವೂ ಬಂದೀರಿ, ನಿಮ್ಮ ಊಟಾ ತಿಂಡಿಗೆ ಅನವಲ್ಯಾ ಆಗ್ತದ ಅಂತಾದ್ರೂ ಬುದ್ಧಿ ಬ್ಯಾಡಾ? ಹೋಗ್ಲಿ ಎಲ್ಲರ ಹಾಳಾಗಿ ಹೋಗ್ಲಿ. ಕೋಳಿ ಕೂಗದಿದ್ರ ಬೆಳಗಾಗೂದಿಲ್ಲಾ? ಬರ್ಲಿ ತಿರುಗಿ ಆವಾಗ ಹೇಳ್ತೇನಿ….”
ಅರವಿಂದನ ಗೊಣಗಾಟ ನಿಲ್ಲುವ ಲಕ್ಷಣವೇ ಕಾಣಲಿಲ್ಲ.
“ಅರೂ ಏನು ಹೆಂಗಸರಹಂಗ ವಟವಟಾ ಮಾಡ್ತೀಯೋ, ತಾಳ್ಮೆ ಬಗ್ಗೆ ಹೇಳಲಿಕ್ಕೆ ಹತ್ತೀ, ನಿನ್ನ ತಾಳ್ಮೆ ಎಷ್ಟಂತ ನನಗ ಗೊತ್ತಿಲ್ಲಾ? ಸುನೀತಾ ಅಂತ ಇಷ್ಟು ಸರಳವಾಗಿ ನಿನ್ನ ಜತೆ ಸಂಸಾರ ಮಾಡಿಕೊಂಡು ಇದ್ದಾಳ. ಸುಮ್ನ ಅಕೀ ಬಗ್ಗೆ ಗೊಣಗಾಟ ಮಾಡಬ್ಯಾಡಾ.”
“ಅಪ್ಪಾಜೀ ಇದು ನಿಮ್ಮ ಕಾಲಾ ಅಲ್ಲಾ, ಸ್ವಲ್ಪ ಸಲಿಗೆ ಕೊಟ್ರ ತಲೀ ಮ್ಯಾಲ ಏರ್ತಾರ ಈ ಹೆಂಗಸರು, ಎಷ್ಟಕ್ಕೋ ಅಷ್ಟಕ್ಕ ಇಡಬೇಕು ಅವ್ರನ್ನ.”
“ಅರೂ ನಿನ್ನ ಬಾಯಿಂದ ಇಂಥಾ ಮಾತು ಕೇಳಿದ್ರ ಕೆಟ್ಟನಿಸ್ತದ. ಇರ್ಲಿ ಸುನೀತಾ ಮೂರು ದಿನಾ ನಮಗ ಯಾವುದೇ ತೊಂದರೆ ಆಗದ್ಹಂಗ ವ್ಯವಸ್ಥಾ ಮಾಡಿ ಹೋಗ್ಯಾಳ. ಅಕೀ ಅಲ್ಲಿ ಹೋಗಿರೋ ಉದ್ದೇಶಾನೂ ನಾ ಈಗss ನಿನಗೆ ಹೇಳೋದಿಲ್ಲಾ ಮುಂದ ನಿಂಗss ತಿಳೀತದ. ಆದ್ರ ನಿನ್ನ ಮುಂಗೋಪ, ಸಿಟ್ಟು ತಿಳಿದಿರೋ ನಾನು ತಾಳ್ಮೆಯ ಮಹತ್ವದ ಮ್ಯಾಲ ನಿಂಗೊಂದು  ಕಥಿ ಹೇಳಬೇಕಂತ ಮಾಡೇನಿ, ಅದನ್ನ ಕೇಳಿದ ಮ್ಯಾಲ ನಿನ್ನೊಳಗ ಸ್ವಲ್ಪ ಬದಲಾವಣೆ ಆದ್ರೂ ನನ್ನ ಶ್ರಮಾ ಸಾರ್ಥಕ ಅಂದ್ಕೋತೇನಿ.”
ಚಹಾ ಕುಡಿದು ಕೈಗೆತ್ತಿಕೊಂಡ ಪೇಪರನ್ನು ಮಡಿಸಿ ಪಕ್ಕದಲ್ಲಿಟ್ಟ ಅರವಿಂದ.
“ನೀವು ಹೇಳ್ತೀರಿ ಅಂದ ಮ್ಯಾಲ ಏನೋ ಇರಲೇಬೇಕು ಅದರಾಗ, ಹೇಳ್ರಿ ಅಪ್ಪಾಜಿ” ಎಂದು ಆಸಕ್ತಿಯಿಂದ ನಿರುಕಿಸಿದ.
ಒಂದು ನಿಮಿಷ ಮೌನವಾಗಿ ಕುಳಿತ ಶ್ರೀನಿವಾಸರಾಯರು ಪ್ರಾರಂಭಿಸಿದರು-
“ಅವಿವೇಕ, ಸಿಟ್ಟು, ಛಲ, ಮೊಂಡುತನಗಳನ್ನು ಸೇರಿಸಿ ಒಂದು ರೂಪ ಕೊಟ್ಟರೆ ಬರುವ ಮೂರ್ತರೂಪವನ್ನು ಹೋಲುವ ವ್ಯಕ್ತಿ ಕೃಪಾಚಾರ್ಯರು. ಅವರ ಈ ಗುಣಗಳು ಅಲ್ಲ ದುರ್ಗುಣಗಳು ಸ್ವಲ್ಪವಾದರೂ ಕಡಿಮೆಯಾಗುವ ಲಕ್ಷಣಗಳೇ ಇರಲಿಲ್ಲ. ವಿಧಿಯ ವಿಪರ್ಯಾಸವೋ ಎನ್ನುವಂತೆ ಅವರಿಗೆ ಸಿಕ್ಕ ಚಿನ್ನದಂಥ ಹೆಂಡತಿ ಇಂದಿರಾ ತಾಳ್ಮೆಯ ಪ್ರತಿರೂಪ.
“ಭಾದ್ರಪದ ಮಾಸದ ಒಂದು ದಿನ ಮನೆಯಲ್ಲಿ ಗಣಪತಿ ಕೂಡ್ರಿಸಿದರು. ಮಡಿಯಲ್ಲಿ ಪೂಜೆ, ನೈವೇದ್ಯ ಮಾಡಲು ಹಿರಿಯರು ತಯಾರಿ ನಡೆಸಿದ್ದರು. ಜಡಿಮಳೆಯಿಂದ ಮಕ್ಕಳು ಹೊರಗೆ ಹೋಗದೆ ಮನೆಯ ಒಳಗೇ ಆಡಿಕೊಂಡಿದ್ದವು. ಕೃಪಾಚಾರ್ಯರ ನಾಲ್ಕು ವರ್ಷದ ಮಗಳು ಚೆಂಡು ಹಿಡಿದು ಆಡುತ್ತಿತ್ತು. ಅವರು ಹಾಯ್ದು ಹೋಗುವಾಗ ಮಗುವನ್ನು ದುರುಗುಟ್ಟಿ ನೋಡಿ ‘ಆ ಚೆಂಡೇನಾದ್ರೂ ಗಣಪತಿಗೆ ಬಡಿದು ಭಿನ್ನ ಆದ್ರ ನಿನ್ನ ರುಂಡಾನ ಹಾರಿಸ್ತೇನಿ’ ಎಂದು ಹೇಳಿಹೋದರು. ಮಗುವಿನ ದುರದೃಷ್ಟವೋ ಅಥವಾ ಅದರ ಆಯುಸ್ಸು ಮುಗಿದಿತ್ತೋ ಮಗು ಒಂದೆರಡು ನಿಮಿಷಕ್ಕೇ ಮತ್ತೆ ಆಡಲಾರಂಬಿಸಿತು. ಚೆಂಡು ಸೀದಾ ಹೋಗಿ ಗಣಪತಿಯ ಮುಖಕ್ಕೇ ಬಡಿದು ಮುಖ ಬಿದ್ದು ಹೋಯಿತು. ಕೃಪಾಚಾರ್ಯರು ಒಳಗಿನಿಂದ ಬಂದವರೇ ಸೀದಾ ಮಗುವನ್ನು ಎತ್ತಿ ಹೊರನಡೆದು ಅಂಗಳಕ್ಕೆ ಒಗೆದೇಬಿಟ್ಟರು. ಹೂವಿನಂಥ ಮಗುವಿನ ಪ್ರಾಣ ಹೊರಟುಹೋಯಿತು.
“ತನ್ನ ಕರುಳ ಕುಡಿಯನ್ನು ಕಣ್ಣ ಮುಂದೆಯೇ ಕಳೆದುಕೊಂಡು ಮಂಕಾಗಿದ್ದ ಇಂದಿರಾ ಕ್ರಮೇಣ ಚೇತರಿಸಿಕೊಂಡಳು. ಇಂಥ ಪತಿಯೊಡನೆ ನಡೆಸುತ್ತಿದ್ದ ಜೀವನದಲ್ಲಿ ಅವಳ ತಾಳ್ಮೆಯ ಪರೀಕ್ಷೆ ಪ್ರತಿದಿನ ಪ್ರತಿ ಕ್ಷಣವೆಂದರೂ ತಪ್ಪಲ್ಲ.
“ಮನೆಯಲ್ಲಿ ಒಂದು ಮದುವೆ ನಡೆಯಿತು. ನಾಲ್ಕು ದಿನಗಳ ಅನಂತರ ಕೃಪಾಚಾರ್ಯರು ಹೆಂಡತಿಯನ್ನು ಕರೆದು ಹೇಳಿದರು-
“ಏಯ್ ಸಿಹಿ ತಿಂದು ತಿಂದು ನಾಲಿಗೆ ಜಿಡ್ಡುಗಟ್ಟೇದ. ಇವತ್ತ ಛಲೋ ಭಕ್ಕರಿ, ಮೆಂತೆ ಪಲ್ಯಾ ಮಾಡು.”
“ಇಂದಿರಾಗೆ ಮೈ ತುಂಬಾ ಉತ್ಸಾಹ ತುಂಬಿತು. ತಾನೇ ತೋಟಕ್ಕೆ ಹೋಗಿ ತಾಜಾ ಮೆಂತೆ ಸೊಪ್ಪನ್ನು ತಂದಳು. ಶ್ರದ್ಧೆಯಿಂದ ಮಡಿಯುಟ್ಟು ಎಲ್ಲಾ ಅಡುಗೆ ತಯಾರು ಮಾಡಿದಳು. ಗಜ್ಜರಿ ಕೋಸಂಬರಿ, ಗುರೆಳ್ಳು ಚಟ್ನಿ, ಮೆಂತೆ ಪಲ್ಲೆ, ತಾಜಾ ಬೆಣ್ಣೆ ಎಲ್ಲವನ್ನು ತಯಾರಿಸಿಟ್ಟು ಭಕ್ಕರಿಗೆ ಎಸರು ಹಾಕಿದಳು. ಅಡುಗೆಮನೆಯಿಂದ ಹೊಮ್ಮುತ್ತಿದ್ದ ಸುವಾಸನೆ ಕೃಪಾಚಾರ್ಯರ ಪೂಜೆ ಬೇಗನೆ ಮುಗಿಯುವಂತೆ ಮಾಡಿತು.
“ಆಚಾರ್ಯರು ಎಲೆಯ ಮುಂದೆ ಕುಳಿತರು. ಎಲ್ಲ ಬಡಿಸಿ ಚಿತ್ರಾವತಿಯ ಮಟ್ಟಿಗೆ ಎಂದು ಸ್ವಲ್ಪವೇ ಅನ್ನ, ತುಪ್ಪ ಬಡಿಸಿದಳು. ಅನಂತರ ಗುಳ್ಳೋರಿಗೆಯಂತೆ ಉಬ್ಬಿದ ಭಕ್ಕರಿಯನ್ನು ಎರಡೂ ಕೈಯಲ್ಲಿ ಹಿಡಿದು ತಂದು ಹಾಕಿದಳು. ಮತ್ತೊಂದು ಭಕ್ಕರಿಯನ್ನು ಬಡಿಯುತ್ತ ಒಂದೇ ನಿಮಿಷ ಪತಿಯ ಸಂತೃಪ್ತ ಮುಖವನ್ನು ನೋಡುವ ಆಸೆಯಿಂದ ಹಿಂತಿರುಗಿ ನೋಡಿದಳು. ಅಷ್ಟೇ, ಸುಟ್ಟು ಬಿಡುವಂಥ ದೂರ್ವಾಸನ ದೃಷ್ಟಿಯಿಂದ ಅವಳ ಶಕ್ತಿ ಉಡುಗಿಹೋಯಿತು. ಕೃಪಾಚಾರ್ಯರು ಕೈಯಲ್ಲಿ ಎತ್ತಿ ಹಿಡಿದ ಕೂದಲೆಳೆಯಿಂದ ಭಕ್ಕರಿ ನೇತಾಡುತ್ತಿತ್ತು.”
“ಅಯ್ಯೋ ಕೂದಲು ಬಂತss ಅದನ್ನ ಬಾಜೂಕ ಇಟ್ಟು ಬಿಡ್ರಿ, ಬೇರೆ ಭಕ್ಕರಿನ ಹಾಕ್ತೇನಿ” ಧೈರ್ಯವನ್ನು ತಂದುಕೊಂಡು ತಡವರಿಸುತ್ತ ಹೇಳಿದಳು ಇಂದಿರಾ. ಒಂದೂ ಮಾತಾಡದೆ ದುರುಗುಟ್ಟಿ ನೋಡಿ ಆಪೋಶನ ತೆಗೆದುಕೊಂಡು ಎದ್ದೇಬಿಟ್ಟ ಪತಿಯನ್ನು ನೋಡಿ ಅಸಹಾಯಕತೆಯಿಂದ ಕಣ್ಣೀರು ತುಂಬಿ ಬಂದವು.
“ಅರ್ಧ ಗಂಟೆ ಕಳೆದಿರಬೇಕು. ದಪದಪ ಹೆಜ್ಜೆಯ ಶಬ್ದ ಕೇಳಿ ಹಿಂತಿರುಗಿ ನೋಡಿದರೆ ಉರಿ ಮೋರೆಯ ಕೃಪಾಚಾರ್ಯರು ಎದುರಿಗೆ ನಿಂತಿದ್ದಾರೆ. ಸೀದಾ ಬಂದವರೇ ಇಂದಿರಾಳ ಮುಡಿಗೆ ಕೈ ಹಾಕಿ ಎಳೆದರು. ಹಾಗೇ ರಟ್ಟೆಯನ್ನೂ ಹಿಡಿದು ದರದರ ಎಳೆದುಕೊಂಡು ಹೋದವರೇ ಅಂಗಳದಲ್ಲಿ ನೂಕಿದ ರಭಸಕ್ಕೆ ಇಂದಿರಾಬಾಯಿ ಕುಸಿದು ಕುಳಿತಳು.”
“ಏಯ್ ಮಾರುದ್ರಾ ಬೋಳಿಸಿಬಿಡು ಇಕಿ ತಲೀನ” ಎಂದರು ಕೃಪಾಚಾರ್ಯರು. ಆಗಲೇ ಇಂದಿರಾಗೆ ಎದುರಿಗೆ ನಿಂತಿದ್ದ ಹಜಾಮ ಮಾರುದ್ರ ಕಂಡಿದ್ದು. ಗಾಬರಿಯಾಗಿ ನಿಂತಿದ್ದ ಮಾರುದ್ರನಿಗೂ ತಲೆಬುಡ ಅರ್ಥವಾಗಲಿಲ್ಲ. ಅವನೂ ದಿಗ್ಮೂಢನಾದ. ಕೃಪಾಚಾರ್ಯರು ಮತ್ತೆ ಮತ್ತೆ ಬಯ್ಯುತ್ತ ಅವನಿಗೆ ಆಜ್ಞೆ ಮಾಡುತ್ತಿದ್ದರು.
“ಮಾರುದ್ರನ ರಕ್ತ ಕುದಿಯಲಾರಂಭಿಸಿತು- ಇಂಥ ಸಾಧ್ವಿಗೆ ಎಂಥ ಅತ್ಯಾಚಾರ ಮಾಡುತ್ತಿದ್ದಾನೆ ಈ ನೀಚ ಮನುಷ್ಯ ಎಂದು”. ಕೃಪಾಚಾರ್ಯರು ಮತ್ತೆ ನುಡಿದರು. ‘ಏಯ್ ಸೂಳೆಮಗನ, ನಿನಗ ಒಂದು ಹಜಾಮತಿಗೆ ಪಾವಾಣೆ ಸಿಗ್ತದ. ಭಾಳಂದ್ರ ಪೂರಾ ಒಂದ್ರೂಪಾಯಿ ಕೊಡ್ತೇನಿ, ಬೋಳಿಸಲೇ ಅಕೀ ತಲೀನ’. ಈಗ ಮಾತ್ರ ಮಾರುದ್ರನ ತಾಳ್ಮೆಯ ಕಟ್ಟೆ ಒಡೆದು ಹೋಯಿತು. ಸಾಕಷ್ಟು ರೀತಿಯಲ್ಲಿ ತಿಳಿ ಹೇಳಿ ಸೋತಿದ್ದ ಅವನು ಕೊನೆಗೆ ಹೇಳಿಯೇ ಬಿಟ್ಟ-
“ಸರಿ, ನೀ ಹೇಳಿದ್ಹಂಗ ಆಗಲಿ, ಅದ್ರ ಮೊದ್ಲು ನೀ ನನ್ನ ಕಣ್ಣು ಮುಂದ ಸಾಯಿ, ಆಮ್ಯಾಲ ನೀ ಹೇಳಿದ ಕೆಲಸ ಮಾಡ್ತೇನಿ.”
“ಕೃಪಾಚಾರ್ಯರಿಗೆ ತಮ್ಮ ಕಿವಿಗಳನ್ನು ನಂಬಲಾಗಲಿಲ್ಲ. ತಮ್ಮ ಹಜಾಮ ತಮಗೆ ಸಾಯಲು ಹೇಳುತ್ತಿದ್ದಾನೆ. ಏನಾಗುತ್ತಿದೆಯೆಂದು ತಿಳಿಯುವ ಮೊದಲೇ ಇಂದಿರಾ ಎದ್ದು ತನ್ನ ಹಿಟ್ಟಿನ ಮುಸುರೆಯ ಕೈಯಿಂದಲೇ ಮಾರುದ್ರನ ಕೆನ್ನೆಗೆ ಬಾರಿಸಿದ್ದಳು.”
“ಏಯ್ ಮಾರುದ್ರಾ ನಿನ್ನ ನಾಲಗೆ ಸೇದಿ ಹೋಗಾ. ನನ್ನ ಕಣ್ಣ ಮುಂದ ನನ್ನ ಸೌಭಾಗ್ಯಕ್ಕ ಶಪಿಸ್ತೀಯಾ? ಹಾಳಾಗಿ ಹೋಗು ಇಲ್ಲಿಂದ…”
“ಅಳುತ್ತಲೇ ಕುಸಿದು ಕುಳಿತ ಇಂದಿರಾಳನ್ನು ಮನೆಯ ಮಕ್ಕಳು, ಹೆಂಗಸರು ಸುತ್ತುವರಿದಾಗ ಕೃಪಾಚಾರ್ಯರು ಹೊರಟುಹೋದರು.” ಮಾರುದ್ರ ದೂರದಿಂದಲೇ ಇಂದಿರಾಗೆ ನಮಸ್ಕರಿಸಿದ-
“ಅವ್ವಾ ನನ್ನ ಕ್ಷಮಿಸು. ನಿನ್ನಂಥ ಪುಣ್ಯಾತಗಿತ್ತೀನ ಹಿಂಗ ಜೀವ ಹಿಂಡತಾನಲ್ಲಾ ಅಂತ ತಾಳ್ಮೆ ಕಳ್ಕೊಂಡು ಬಿಟ್ಟೆ. ನಂಗ ಹೊಡದೆ ಅಂತ ಮರುಗಬ್ಯಾಡಾ. ಆ ಶ್ರೀರಾಮಚಂದ್ರನ ಪಾದಸ್ಪರ್ಶದಿಂದ ಅಹಲ್ಯಾಗ ಮುಕ್ತಿ ಸಿಕ್ಕಿದ್ಹಂಗ ಇವತ್ತ ನಿನ್ನ ಕೈ ಏಟು ನನ್ನ ಪಾಪಾನ ನಾಶ ಮಾಡ್ಲಿ….” ಎಂದು ಹೊರಟುಹೋದ.
“ಇಂದಿರಾಳ ಸಣ್ಣ ಓ��ಗಿತ್ತಿ ಜಲಜಾ ಬಂದು ಅವರ ಪಕ್ಕ ಕುಳಿತಳು. ‘ಅಕ್ಕಾ ಏಳು ನದಿಗೆ ಹೋಗಿ ಮೈ ತೊಳಕೊಂಡು ಬರೋಣ. ಎರಡು ತುತ್ತು ಊಟಾ ಮಾಡಿ ಸ್ವಲ್ಪ ಮಲಗೀಯಂತ’ ಇಂದಿರಾಳ ಕೈ ಹಿಡಿದು ನಡೆಸಿದ ಜಲಜಾ ಸಮೀಪದಲ್ಲಿ ನಿಂತಿದ್ದ ಏಳು ವರ್ಷದ ಇಂದಿರಾಳ ಮಗನಿಗೆ ಹೇಳಿದಳು-
“ಚೀನಾ, ಹೋಗಿ ಅವ್ವನ ಸೀರಿ ತಗೊಂಡು ನಮ್ಮ ಜತಿಗೆ ಬಾ. ಅಲ್ಲೇ ಗಳದ ಮ್ಯಾಲೆ ಅದಾ ನೋಡು, ಜತೆಗೆ ಕುಪ್ಪಸಾನೂ ಅದ”. ನಡೆದ ಘಟನೆಗೆ ಸಾಕ್ಷಿಯಾಗಿ ನಿಂತಿದ್ದ ಮುಗ್ಧ ಹುಡುಗ ಬಟ್ಟೆಯೊಂದಿಗೆ ಹಿಂಬಾಲಿಸಿದ.
“ಅವರಿಬ್ಬರೂ ನೀರಿಗಿಳಿದಾಗ ಉಸುಕಿನಲ್ಲಿ ಗೂಡು ಕಟ್ಟಿ ಆಡುತ್ತಿದ್ದ ಚೀನನಿಗೆ ಒಮ್ಮೆಲೇ ಜಲಜಾ ಕಾಕೂಳ ಚೀರಾಟ ಕೇಳಿ ಗಾಬರಿಯಾಯಿತು. ಜನ ಸೇರಿದರು.”
“ಅಕ್ಕಾ ಸೀದಾ ಆ ಸುಳಿ ಕಡೇನ ನಡ್ಕೊಂಡು ಹೋದ್ಲು. ಅಕೀಗೆ ಗೊತ್ತದ ಆ ಬಾಜೂ ಸುಳಿ ಅದ ಅಂತ, ಆದ್ರೂ ಹೋದ್ಲು. ಅಕೀಗೆ ಜೀವಾ ಬ್ಯಾಡಾಗೇದ, ದಯವಿಟ್ಟು ಯಾರಾದ್ರೂ ಕಾಪಾಡ್ರಿ” ಜಲಜಾಳ ಅಳು ನಡೆದೇ ಇತ್ತು. ಜನರ ಪ್ರಯತ್ನ ಸಫಲವಾಗಲಿಲ್ಲ. ಪತಿಯಿಂದ ಅಂತ್ಯಕ್ರಿಯೆಯನ್ನೂ ನಿರೀಕ್ಷಿಸದ ಇಂದಿರಾಳ ದೇಹವೂ ಸಿಗಲಿಲ್ಲ.
“ತಾಯಿಯ ಸೀರೆಯನ್ನು ಎದೆಗೊತ್ತಿಕೊಂಡು ನಿಂತ ಮುದ್ದು ಬಾಲಕನ ಕಣ್ಣಲ್ಲಿ ಒಂದು ಹನಿಯೂ ನೀರಿರಲಿಲ್ಲ. ಆಮೇಲೆ ಎಷ್ಟೋ ಬಾರಿ ನದಿಯ ಕಡೆಗೆ ಹೋದರೂ ಅವನಿಗೆ ಅವ್ವ ಸ್ನಾನ ಮಾಡಿ ಈಗ ಎದ್ದು ಬಂದು ಬಿಡಬಹುದೇ ಎಂದೆನಿಸುತ್ತಿತ್ತು.”
“ಸ್ನಾನಕ್ಕೆ ಕರೆದೊಯ್ದ ತಾನೇ ಅಕ್ಕನ ಸಾವಿಗೆ ಕಾರಣನಾದೆನೇನೋ ಎನ್ನುವ ಕೊರಗು ಜಲಜಾಳನ್ನು ಸುಡುತ್ತಿತ್ತು. ತನ್ನ ಮಕ್ಕಳಿಗಿಂತಲೂ ಒಂದು ತೂಕ ಹೆಚ್ಚಾಗಿಯೇ ಪ್ರೀತಿಯಿಂದ ನೋಡಿಕೊಂಡಳು ಚೀನನನ್ನು. ಕೃಪಾಚಾರ್ಯರು ಪೂರ್ಣ ಬದಲಾದರು. ಆದರೆ ಊರು ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ”
“ಅರೂ, ಅದಕ್ಕ ಹೇಳೂದು ತಾಳ್ಮೆ ಬರೇ ಬೇರೆಯವರಿಂದ ನಿರೀಕ್ಷಿಸೋದು ಸರಿ ಅಲ್ಲ. ಪರಸ್ಪರ ಇದ್ರ ಒಳ್ಳೇದು. ಇಲ್ಲಾಂದ್ರ ಒಂದೇ ಕಡೆಯಿಂದ ಇರೋ ತಾಳ್ಮೆ ಮತ್ತೊಂದ ವ್ಯಕ್ತೀನ ತಪ್ಪು ದಾರಿಗೆ ಎಳೀತದ ಅಲ್ಲಾ?”
“ಅದಿರ್ಲಿ ಅಪ್ಪಾಜಿ, ನೀವು ಹೇಳಿದ ಕಥೀ ಭಾರೀ ಇಂಟರೆಸ್ಟಿಂಗ್ ಅನಿಸ್ತು.”
“ಅರೂ ಆ ಕಥಿಯೊಳಗಿನ ಪಾತ್ರ ಒಂದು ನಿನ್ನ ಮುಂದೇನ ಅದ, ಆ ಚೀನಾ ನಾನss” ಎಂದಾಗ ಮಾತ್ರ ಅರವಿಂದ ಕಣ್ಣರಳಿಸಿದ. ಒಂದು ನಿಮಿಷ ಬಿಟ್ಟು ಫೋನ್ ಮಾಡಿದ-
“ಯಾರು? ಸುನೀ ನಾ ಅರವಿಂದ. ನೀ ಮನೀ ಕಡೆ ಏನೂ ಚಿಂತೀ ಮಾಡಬ್ಯಾಡ. ಅಪ್ಪಾಜೀನ ನಾ ನೋಡ್ಕೋತಿನಿ. ನಿಂದೆಲ್ಲಾ ಕೆಲಸಾ ಮುಗಿಸ್ಕೊಂಡು ಆರಾಂ ಬಾ ಓ.ಕೆ.?”
ಶ್ರೀನಿವಾಸರಾಯರ ಮುಖದ ಮೇಲೆ ತೃಪ್ತಿಯ ಮುಗುಳ್ನಗು ತೇಲಿತು.

Leave a Reply