ಜಾಣ ಜೇನ್ನೊಣ

ಜಾಣ ಜೇನ್ನೊಣ

ಒಂದಾನೊಂದು ಕಾಲದಲ್ಲಿ ಒಂದು ಕಾಡಿತ್ತು. ಆ ಕಾಡಿನಲ್ಲಿ ಒಂದು ಸಿಂಹರಾಜ ಇತ್ತು. ಅದು ಒಂದು ದಿನ ಕಾಡಿನ ಪ್ರಾಣಿಗಳಿಗೆ “ಎಲ್ಲಾರೂ ಸಭೆಗೆ ಬನ್ನಿ” ಅಂತ ಹೇಳಿತು.
ಸಿಂಹರಾಜನೇ ಕರೆದ ಮೇಲೆ ಹೋಗದೇ ಇರೋದಕ್ಕೆ ಆಗುತ್ತಾ? ಜಿಂಕೆ, ಸಾರಂಗ, ನರಿ ಮುಂತಾದ ಪ್ರಾಣಿಪ್ರತಿನಿಧಿಗಳೆಲ್ಲ ಸಭೆಗೆ ಹೋದವು.

ಸಿಂಹ ನೆರೆದಿದ್ದ ಪ್ರಾಣಿಗಳಿಗೆ ಹೇಳಿತು: “ನಾವು ಕಾಡಿನ ಪ್ರಾಣಿಗಳು ಕೀಟಗಳ ಮೇಲೆ ಯುದ್ಧ ಮಾಡಬೇಕಾದ ಪ್ರಸಂಗ ಬಂದಿದೆ. ನಾನು ನಿಮ್ಮೆಲ್ಲರ ಮುಖಂಡನಲ್ಲವೇ ಆದ್ದರಿಂದ ನಾನೇ ಈ ಯುದ್ಧದ ನಾಯಕನೂ ಆಗಿರುತ್ತೇನೆ. ಯುದ್ಧ ಶುರು ಮಾಡುವ ಮುಂಚೆ ನೀವೆಲ್ಲರೂ ನನ್ನ ಸೂಚನೆಗಳನ್ನು ಕೇಳಿಸಿಕೊಳ್ಳಿರಿ.
ನಾವು ಗಾತ್ರದಲ್ಲೇನೋ ದೊಡ್ಡದಾಗಿದ್ದೇವೆ. ಆದರೆ ಸಂಖ್ಯೆಯಲ್ಲಿ ಕೀಟಗಳು ಸಾವಿರ ಸಾವಿರ ಇವೆ. ಆದ್ದರಿಂದ ನಾವು ಜಾಗರೂಕತೆ ವಹಿಸಬೇಕು.”

ಸಿಂಹರಾಜ ಪ್ರಾಣಿಗಳನ್ನು “ಇನ್ನೂ ಹತ್ತಿರಕ್ಕೆ ಬನ್ನಿ” ಎಂದು ಕರೆಯಿತು. ತನ್ನ ಮಾತು ಮತ್ತು ಉಪಾಯ ಯಾರಿಗೂ ಗೊತ್ತಾಗಬಾರದು ಎಂದು ಪಿಸುಗುಟ್ಟುವ ಧ್ವನಿಯಲ್ಲಿ ಹೇಳಿತು.
“ಗಮನವಿಟ್ಟು ಕೇಳಿಸಿಕೊಳ್ಳಿ. ಯುದ್ಧ ಮಾಡುತ್ತಿರುವಾಗ ಎಲ್ಲರೂ ನನ್ನ ಮೇಲೆಯೂ ಒಂದು ಕಣ್ಣಿಟ್ಟಿರಬೇಕು. ನಾನು ಮುಂದೆ ನಿಂತು ಯುದ್ಧ ಮಾಡುತ್ತಿರುತ್ತೇನೆ, ಅಲ್ಲವೆ? ಆದ್ದರಿಂದ ನಾವು ಯುದ್ಧವನ್ನು ಗೆಲ್ಲುತ್ತಿದ್ದೇವೆಯೋ, ಸೋಲುತ್ತಿದ್ದೇವೆಯೋ ಎಂಬುದನ್ನು ನಾನು ಹೇಳಬಲ್ಲೆ. ನಾವು ಗೆಲ್ಲುತ್ತಿರುವವರೆಗೂ ನಾನು ನನ್ನ ಬಾಲವನ್ನು ಮೇಲೆತ್ತಿ ಹಿಡಿದಿರುತ್ತೇನೆ. ಆದರೆ ಯಾವುದಾದರೂ ಕಾರಣಕ್ಕೆ ನಾವು ಸೋಲುತ್ತೇವೆ ಎಂಬುದು ಗೊತ್ತಾಯಿತೋ, ನಾನು ಬಾಲ ಕೆಳಕ್ಕೆ ಹಾಕುತ್ತೇನೆ. ಅದೇ ನಿಮಗೆಲ್ಲಾ ಸೂಚನೆ. ಈ ಮಾತನ್ನು ಎಲ್ಲಾ ಪ್ರಾಣಿಗಳಿಗೂ ಹೇಳಿ.”

ಸಿಂಹದ ಮಾತುಗಳನ್ನು ಎಲ್ಲಾ ಪ್ರಾಣಿಗಳು ಗಮನವಿಟ್ಟು ಕೇಳಿಸಿಕೊಂಡವು. ಆಮೇಲೆ ಈ ಸೂಚನೆಗಳನ್ನು ಇತರ ಪ್ರಾಣಿಗಳಿಗೂ ಹೇಳಲೆಂದು ಹೊರಟವು.
ಸಿಂಹ ಒಂಟಿಯಾಗಿ ಕುಳಿತು ತನ್ನ ಯೋಜನೆಯ ಬಗ್ಗೆ ಮತ್ತೆ ಮತ್ತೆ ಯೋಚಿಸಿತು. ತನ್ನದು ಬಹಳ ಒಳ್ಳೆಯ ಯೋಜನೆ ಎಂದು ಸಂತೋಷದಿಂದ ನಸುನಕ್ಕಿತು.

ತಾನು ಹೇಳಿದ ಮಾತುಗಳು ಯಾರಿಗೂ ಕೇಳಿಸಿರಲಿಕ್ಕಿಲ್ಲ ಎಂದು ಸಿಂಹ ಅಂದುಕೊಂಡಿತ್ತು. ಆದರೆ ಅದಕ್ಕೆ ಒಂದು ವಿಷಯ ತಿಳಿದಿರಲಿಲ್ಲ. ಅದೇನೆಂದರೆ, ಪಕ್ಕದಲ್ಲಿಯೇ ಹೂಗಳ ಮರೆಯಲ್ಲಿ ಅಡಗಿದ್ದ ಒಂದು ಜೇನ್ನೊಣವು ಅದರ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿತ್ತು.

ಪ್ರಾಣಿಗಳಿಗೂ, ಕೀಟಗಳಿಗೂ ಯುದ್ಧ ಆರಂಭವಾಯಿತು. ಸಿಂಹ ಘರ್ಜಿಸುತ್ತಾ ಮುಂದೆ ಮುಂದೆ ಹೋಯಿತು. ಅದರ ಹಿಂದೆಯೇ ಆನೆ ಘೀಳಿಡುತ್ತಾ ದಾಪುಗಾಲಿಟ್ಟಿತು. ಎರಡೂ ತಂಡಗಳು ಸಾಹಸದಿಂದ ಯುದ್ಧ ಮಾಡುತ್ತಿದ್ದವು. ಸಿಂಹ ತಾನು ಹೇಳಿದಂತೆಯೇ, ಮುಂಚೂಣಿಯಲ್ಲಿ ನಿಂತು ತನ್ನ ಬಾಲವನ್ನು ಮೇಲೆತ್ತಿ ಕಾದಾಡುತ್ತಿತ್ತು. ಇದರಿಂದ ಹುಮ್ಮಸ್ಸು ಪಡೆದ ಇತರ ಪ್ರಾಣಿಗಳು ಮುನ್ನುಗ್ಗುತ್ತಿದ್ದವು.

ಬರಬರುತ್ತಾ ಪ್ರಾಣಿಗಳ ಕೈ ಮೇಲಾಯಿತು. ತಾವು ಸೋತುಬಿಡುತ್ತೇವೆ ಎಂದು ಕೀಟಗಳ ರಾಜನಿಗೆ ಅರಿವಾಯಿತು. ಒಡನೆಯೇ ಅದು ಪಕ್ಕದಲ್ಲಿಯೇ ಇದ್ದ ಪುಟ್ಟ ಜೇನ್ನೊಣದತ್ತ ತಿರುಗಿ ಹೇಳಿತು: “ಪುಟ್ಟ ಜೇನ್ನೊಣವೇ, ಈಗ ನಿನ್ನ ಸಹಾಯ ಬೇಕಾಗುತ್ತದೆ. ನಾವು ಮೊದಲೇ ಅಂದುಕೊಂಡಿದ್ದನ್ನು ನೀನು ಈಗ ಮಾಡಬೇಕು.”

ಕೀಟರಾಜ ಅಷ್ಟು ಹೇಳಿದ್ದೇ ತಡ, ಒಡನೆಯೇ ಆ ಪುಟ್ಟ ಜೇನ್ನೊಣ ಸಿಂಹದತ್ತ ಹಾರಿಹೋಯಿತು. ಅದಕ್ಕೆ ಸಿಂಹವನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ.

ಸಿಂಹ ಬಾಲವನ್ನು ಮೇಲೆತ್ತಿ ಗೆದ್ದೇಬಿಟ್ಟೆವು ಎಂಬ ಸಂತಸದಲ್ಲಿ ಕಾದಾಡುತ್ತಿತ್ತು. ಆಗ ಜೇನ್ನೊಣ ಮೆಲ್ಲನೆ ಹಾರಿಬಂದು ಗುಂಯ್…..ಯ್..ಯ್.. ಎನ್ನುತ್ತಾ ಸಿಂಹದ ಬಾಲವನ್ನು ಕುಟುಕಿತು.

ಸಿಂಹಕ್ಕೆ ನೋವು ತಾಳಲಾಗಲಿಲ್ಲ. ತಾನೇ ತಾನಾಗಿ ಅದರ ಬಾಲ ಕೆಳಕ್ಕೆ ಹೋಯಿತು. ಸಿಂಹ ನೋವಿನಿಂದ ಹಾಗೆಯೇ ಕುಸಿದು ಕುಳಿತಿತು. ಸಿಂಹ ಬಾಲ ಕೆಳಕ್ಕೆ ಮಾಡಿದ್ದನ್ನು ಮಾತ್ರ ಎಲ್ಲಾ ಪ್ರಾಣಿಗಳೂ ನೋಡಿದವು. ಆದರೆ ಅದು ಜೇನ್ನೊಣ ಕುಟುಕಿದ್ದುದರಿಂದ ಆದದ್ದು ಎಂಬುದು ಮಾತ್ರ ಅವುಗಳಿಗೆ ತಿಳಿಯಲಿಲ್ಲ. ಯುದ್ಧ ಸೋತೆವು ಎಂಬ ಭಯ-ಆತಂಕದಲ್ಲಿ ಅವುಗಳೆಲ್ಲ ದಿಕ್ಕುದಿಕ್ಕಿಗೆ ಓಡಿದವು.
ಯುದ್ಧದಲ್ಲಿ ಕೀಟಗಳಿಗೇ ಜಯವಾಯಿತು. ಕೀಟಗಳ ರಾಜ ಜೇನ್ನೊಣಕ್ಕೆ ಜಾಣ ಜೇನ್ನೊಣ ಎಂಬ ಬಿರುದು ಕೊಟ್ಟು ಗೌರವಿಸಿತು.

Leave a Reply