ಜೋಡಿ ಮೈನಾ

ಜೋಡಿ ಮೈನಾ

ಸುಂದರವಾದ ಸಾಲುಸಾಲಾದ ಗುಲ್ ಮೊಹರ್ ಗಿಡಗಳು, ಕೆಂಪು ಹೂಗಳಿಂದ ಕಂಗೊಳಿಸುವ ಈ ಗಿಡದ ಹೂಗಳು ಉದುರಿ ನೆಲದ ಮೇಲೆ ಕೆಂಪು ಹೂವಿನ ಹಾಸನ್ನೇ ಮಾಡಿದ್ದವು. ಚಿತ್ತಾಕರ್ಷದ ಬಣ್ಣದ ಚಿಟ್ಟೆಗಳು ಅತ್ತಿಂದಿತ್ತ ಇತ್ತಿಂದಿತ್ತ ಸುಯ್ಯನೆ ಸುಳಿದಾಡುತ್ತಿದ್ದವು. ಪಕ್ಷಿಗಳ ಕಲರವ ಎಲ್ಲೆಡೆ ಪಸರಿಸುತ್ತಿತ್ತು. ಇಂತಹ ವಿಶಾಲ ಗುಲ್ ಮೊಹರ್ ಗಿಡದ ಟೊಂಗೆಯಲ್ಲಿ ಎರಡು ಜೋಡಿ ಮೈನ ಜೊತೆಯಾಗಿ ಇರುತ್ತಿದ್ದವು. ಒಂದು ಗಂಡು ಮತ್ತೊಂದು ಹೆಣ್ಣು. ಎರಡು ಅತ್ಯಂತ ಪ್ರೀತಿಯಿಂದ ಹಾರಿ ಹಾರಾಡಿ ಕುಣಿದು ಸಂತಸದಿಂದ ಕಾಲಕಳೆಯುತ್ತಿರಲು, ಸುಮಧುರಕಾಲ ಅದುವೇ ವಸಂತ ಕಾಲ. ಎಲ್ಲೆಲ್ಲೂ ಕೋಗಿಲೆಗಳ ಕುಹೂ..ಕುಹೂ.. ಗಾಯನ. ಇಂಥ ಸಮಯದಲ್ಲಿ ಹೆಣ್ಣು ಮೈನ ತುಂಬು ಗರ್ಭಿಣಿ. ಎರಡೂ ಹೊಸ ಅತಿಥಿಯ ಬರುವಿಕೆಯ ಸಂಭ್ರಮದಲ್ಲಿ ಮುಳುಗಿದವು. ಸಮಯ ಸರಿದು ಹೆಣ್ಣು ಮೈನ ಮೊಟ್ಟೆ ಇಡುವ ಕಾಲವೂ ಬಂದೇ ಬಿಟ್ಟಿತು. ಹೆಣ್ಣು ಮೈನ ಮೊಟ್ಟೆ ಇಟ್ಟು ಕಾವು ಕೊಡುವ ಕೆಲಸದಲ್ಲಿ ಲೀನವಾಯಿತು. ಗಂಡು ಮೈನ ಹೆಣ್ಣು ಮೈನಳಿಗೆ ಆಹಾರ ತರುವ ಮತ್ತು ತನ್ನ ಪತ್ನಿಗೆ ಶತೃಗಳ ದೃಷ್ಟಿ ತಗಲದಂತೆ ಕಾಯುವ ಕಾಯಕದಲ್ಲಿ ತೊಡಗಿತು.
ಮೊಟ್ಟೆ ಚಟ್… ಚಟ್… ಚಟ್… ಶಬ್ದದೊಂದಿಗೆ ಒಡೆದು ಪುಟ್ಟ ಮರಿ ಮೈನ ಕತ್ತು ಮೇಲೆತ್ತಿ ಪ್ರಕೃತಿಯತ್ತ ಮುಖ ತೂರಿಸಿ ಹೊರಬಂದಿತು. ಜೋಡಿ ಮೈನಗಳ ಸಂತಸ ಕೇಳಬೇಕೆ? ಕುಣಿದವು, ಕುಪ್ಪಳಿಸಿದವು. ಸಂತಸದಿಂದ ಮರಿಯತ್ತ ದೃಷ್ಟಿ ಬೀರಿದವು. ಮರಿಗೆ ರೆಕ್ಕೆ ಬರುವವರೆಗೆ ಜೋಡಿ ಮೈನಗಳು ಅಲ್ಲಿ ಇಲ್ಲಿ ಹಾರಾಡಿ ಹಣ್ಣಿನ ರಸ, ಹುಳ ಹುಪ್ಪಟೆಗಳ ರಸ ತಂದು ಮರಿಗೆ ಗುಟುಕನ್ನಿಟ್ಟಿದ್ದೇ ಇಟ್ಟಿದ್ದು. ಗಂಡು ಮೈನ ಅಲ್ಲಿ ಇಲ್ಲಿ ಬಿದ್ದ ಗರಿಕೆ, ಹುಲ್ಲು, ನಾರು ತಂದು ಗೂಡನ್ನು ಗಟ್ಟಿ ಮಾಡಿ, ಬೆಚ್ಚಗಿಡುವ ತನ್ನ ಸಹಜ ಚಟುವಟಿಕೆಯಲ್ಲಿ ತೊಡಗಿತು.
ಹೀಗೆ ಸಂತಸದಿಂದಿರಲು ಜೋಡಿ ಮೈನಗಳು ಆಹಾರಕ್ಕಾಗಿ ಹೊರಗೆ ನಿರ್ಗಮಿಸಿದ್ದವು. ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಲಾರಂಭಿಸಿತು. ಬರ್ಭರ ಗಾಳಿಗೆ ಸಿಲುಕಿದ ಮರಗಳು ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಬಾಗಿ ಬಾಗಿ ಅಲುಗಾಡತೊಡಗಿತು. ಗಾಳಿಗೆ ನಲುಗಿದ ಗುಲ್ ಮೊಹರ್ ಗಿಡದಲ್ಲಿದ್ದ ಮರಿ ಮೈನದ ಗೂಡು ನೆಲಕ್ಕುರುಳಿ ಬಿತ್ತು. ಇತ್ತ ಜೋಡಿ ಮೈನಗಳು ಭಯದಿಂದ ಒಂಟಿಯಾಗಿರುವ ಮರಿ ಮೈನದ ಚಿಂತೆಯಿಂದ ವೇಗವಾಗಿ ಒಂದೇ ಸಮನೆ ಹಾರುತ್ತಾ ಬಂದವು.
ಹೆಣ್ಣು ಮೈನ ಗಿಡದ ಸಮೀಪ ಬಂದು ಆರ್ಭಟಿಸುತ್ತಾ, “ಅಯ್ಯೋ ದೇವರೆ ನಮ್ಮ ಗೂಡು ಕಾಣುತ್ತಿಲ್ಲ! ಎಲ್ಲಿ! ಎಲ್ಲಿ! ನನ್ನ ಪುಟ್ಟ ಮರಿ, ಎಲ್ಲಿ ಹೋಯಿತು? ಅಯ್ಯೋ ದೇವರೆ ಇದೆಂಥ ದುರ್ಗತಿ” ಎಂದು ಸಂಕಟದಿಂದ ಕೂಗಿ ಕೂಗಿ ಕರೆಯಿತು.
ಇತ್ತ ಗಂಡು ಮೈನ “ಅಯ್ಯೋ! ನಮ್ಮ ಕುಟುಂಬಕ್ಕೆ ಯಾರ ದೃಷ್ಟಿ ತಗಲಿತು?” ಎಂದು ಅತ್ತ ಇತ್ತ ಮರಿಗಾಗಿ ಹುಡುಕಲಾರಂಭಿಸಿತು. ಎಷ್ಟೇ ಆಗಲಿ ತಾಯಿ ಕರುಳು ಮರಿಯ ಸುಳಿವನ್ನು ಕಂಡುಕೊಂಡಿತು. ಮರಿ ನೆಲಕ್ಕೆ ಬಿದ್ದು ನಡುಗುತ್ತಿತ್ತು. ತಾಯಿ ಮೈನ, ಇದೆಂಥ ಪರೀಕ್ಷೆ, ಮರಿಯನ್ನು ಎತ್ತುವುದು ಹೇಗೆ? ಕಂದಮ್ಮಳಿಗೆ ಎಷ್ಟು ನೋವಾಗಿದೆಯೋ? ಎಂದು ಚೀರಿ… ಚೀರಿ ಅಳತೊಡಗಿತು.
ಗಂಡು ಮೈನಾ ಸಮಾಧಾನದಿಂದ ಹೀಗೆ ಹೇಳಿತು, “ಮೈನಾ ಇನ್ನು ಅಳಬೇಡ, ಮರಿ ನಮ್ಮನ್ನೇನು ಅಗಲಿಲ್ಲ, ನಮ್ಮ ಎದುರೇ ಇದೆ. ನೀನು ಅಳುತ್ತಾ ಕೂಗಾಡಿ ನಿನ್ನ ಧ್ವನಿ ಈಗಾಗಲೇ ಕರ್ಕಶವಾಗಿದೆ. ಹೀಗೆ ಕೂಗಾಡುತ್ತಾ ಸಮಯ ವ್ಯರ್ಥಮಾಡಿದರೆ, ಈಗಾಗಲೇ ಮರಿ ಬಿದ್ದು ಪೆಟ್ಟಾಗಿ ಆಯಾಸಪಡುತ್ತಿದೆ. ಹಸಿವೆಯಿಂದಾಗಿ ಕಂಗೆಟ್ಟಿದೆ. ಅದಕ್ಕಾಗಿ ನಾವು ಆಹಾರ ತಂದು ಗುಟುಕನಿಟ್ಟರೆ ನಮ್ಮ ಮರಿ ಚೇತರಿಸಿಕೊಳ್ಳಬಹುದು. ಅಳುವುದನ್ನು ನಿಲ್ಲಿಸು ಮೈನಾ” ಎಂದು ದೈನ್ಯದಿಂದ ಬೇಡಿತು.
ತಾಯಿ ಮೈನಾಳಿಗೆ ಈ ಮಾತು ಸರಿ ಎನ್ನಿಸಿತು. ಕೂಡಲೇ, ಹೌದು… ಹೌದು ನೀವು ಹೇಳುವುದು ಸರಿ. ನಾನು ಈಗಲೇ ಹೊರಡುವೆ. ನೀವು ಮರಿಯನ್ನು ಕಾಯುತ್ತಿರಿ. ಗಿಡುಗ ಬಂದೀತು ಜೋಕೆ ಎಂದು ಹೇಳಿ ಅವಸರ ಅವಸರವಾಗಿ ಹಾರಿ ಹೋಯಿತು. ಕೆಲವೇ ನಿಮಿಷದಲ್ಲಿ ಮರಳಿ ಹಣ್ಣಿನ ರಸ ತಂದು ಗುಟುಕನಿಟ್ಟಿತು. ಮತ್ತೆ ಹಾರಿ ಹುಳ ಹಿಡಿದು ರಸ ತಂದಿತು. ಕ್ಷಣ ಕ್ಷಣಕೂ ಹುಳಹುಪ್ಪಟೆಗಳ ರಸ ತಂದು ತಂದು ಗುಟುಕನಿಟ್ಟು ತನ್ನ ಕಾಯಕ ಸಂದರ್ಭೋಚಿತವಾಗಿ ನಿರ್ವಹಿಸಿತು. ಈ ನಡುವೆ ತಾಯಿ ಮೈನ ತನ್ನ ಆಯಾಸ, ದುಃಖ ಎಲ್ಲವನ್ನೂ ಮರೆತು ನಿಷ್ಠೆಯ ಕಾಯಕದಲ್ಲಿ ತೊಡಗಿತು. ಪರಿಣಾಮವಾಗಿ ಮರಿ ಮೈನ ಚೇತರಿಸಿಕೊಂಡು ಮೊದಲ ತೊದಲು ನುಡಿ ಎಂಬಂತೆ ಚಿಂವ್… ಚಿಂವ್… ಚಿಂವ್ ಎಂದು ದನಿ ಎತ್ತಿತು. ತಾಯಿ ಮೈನದ ಕರುಳು ಕಿತ್ತು ಬಂದಂತಾಗಿ ಮರಿಯ ಹತ್ತಿರವೇ ಬಂದು ತನ್ನ ಚುಂಚಿನಿಂದ ಪ್ರೀತಿಯನ್ನು ವ್ಯಕ್ತಪಡಿಸಿತು.
ಗಂಡು ಮೈನ ಎಚ್ಚೆತ್ತಂತಾಗಿ ತನ್ನ ಜವಾಬ್ದಾರಿಯತ್ತ ಗಮನಹರಿಸಿತು. ‘ಮರಿಯಂತು ಚೇತರಿಸಿಕೊಂಡಿದೆ. ಆದರೆ ಮರಿಯನ್ನು ಎತ್ತಿ ಗೂಡಿನಲ್ಲಿಡುವುದು ಹೇಗೆ?’ ಎಂದು ಗಾಢ ಆಲೋಚನೆಯಲ್ಲಿ ಮುಳುಗಿತು. ಹೊಸ ಗೂಡಿನ ಕನಸು ಕಾಣತೊಡಗಿತು.
ಜೋಡಿ ಮೈನಗಳೆರಡು ಜೊತೆಯಾಗಿ ಕುಳಿತು ವಿಚಾರ ವಿನಿಮಯದಲ್ಲಿ ತೊಡಗಿದವು. ಹಗಲು, ರಾತ್ರಿಗಳ ಪರಿವೆಯೇ ಇಲ್ಲದಂತಾಗಿ ದಣಿದವು. ಇನ್ನು ಕತ್ತಲಾಗುತ್ತಾ ಬಂತು. ರಾತ್ರಿ ಯಾವುದಾದರೂ ಬೆಕ್ಕು ನಾಯಿಗಳು ಓಡಾಡಬಹುದು. ಅವುಗಳ ಕಣ್ಣಿಗೆ ಮರಿ ಕಾಣದಂತೆ ಹೇಗೆ ರಕ್ಷಿಸುವುದು. ರಾತ್ರಿ ಏನೋ ಕಾಯಬಹುದು, ಆದರೆ ಈ ದೊಡ್ಡ ಪ್ರಾಣಿಗಳೊಟ್ಟಿಗೆ ಕಾದಾಡುವುದು ನಮಗೆ ಸಾಧ್ಯವಿಲ್ಲ. ಮರಿಯನ್ನು ಹುಲ್ಲು, ಕಡ್ಡಿಗಳಿಂದ ಮುಚ್ಚಿಡೋಣವೆಂದು ತೀರ್ಮಾನಿಸಿದವು.
ಗಂಡು ಮೈನ ರೆಕ್ಕೆ ಬಡಿದು ಬಡಿದು ಮೈಮುರಿಯುವವರೆಗೂ ಹಾರಿ ಹಾರಿ ಹುಲ್ಲು ತಂದು ಮರಿಯನ್ನು ಮುಚ್ಚಿತು. ಆ ಅಘೋರರಾತ್ರಿ ಹೇಗೋ ಕಳೆದು ಹೋಯ್ತು. ಮುಂಜಾನೆಯ ತಿಳಿ ಬೆಳಕಲ್ಲಿ ಮರಿ ಮೈನ ಇಣುಕಿದ್ದನ್ನು ಜೋಡಿ ಮೈನಗಳೆರಡೂ ಬಳಲಿಕೆಯ ತೊಳಲಾಟದಲ್ಲೂ ಆನಂದದಿಂದ ಕಣ್ಣರಳಿಸಿ ನೋಡಿದವು. ಜೋಡಿ ಮೈನಗಳ ಆಯಾಸ ಹೇಳತೀರದು. ಗಂಟಲು ಬತ್ತಿ ಕರ್ಕಶವಾಗಿತ್ತು. ಮರಿಯನ್ನು ಉಳಿಸಿಕೊಳ್ಳುವುದೊಂದೇ ಧ್ಯೇಯವಾಗಿತ್ತು.
ಮಟಮಟ ಮಧ್ಯಾಹ್ನದ ಸಮಯ. ಜೋಡಿಮೈನಗಳೆರಡು ಮರದ ಟೊಂಗೆಯ ಮೇಲೆ ಕುಳಿತು ಮರಿಯನ್ನು ನೋಡುತ್ತಿದ್ದವು. ದೂರದಿಂದ ಮ್ಯಾಂವ್….ಮ್ಯಾಂವ್ ಎಂದು ಬೆಕ್ಕಿನ ಧ್ವನಿ ಕೇಳಿತು. ಥಟ್ಟನೆ ಜೋಡಿ ಮೈನಗಳೆರಡು ಕತ್ತು ಮೇಲೆತ್ತಿ ನಿರ್ಗತಿಕರಂತೆ ಮೇಲೆ ಕೆಳಗೆ ಒಂದೇ ಸಮನೆ ನೋಡಲು ಅಣಿ ಇಟ್ಟವು. ಜೋರಾದ ಧ್ವನಿಯಲ್ಲಿ ಕೂಗಿ ಕೂಗಿ ಅಕ್ಕಪಕ್ಕದ ತಮ್ಮ ಬಳಗವನ್ನೆಲ್ಲ ಕರೆದವು. ಎಲ್ಲಾ ಮೈನಾಗಳ ದೊಡ್ಡಗುಂಪೇ ಬಂತು. ಎಲ್ಲಾ ಮೈನಗಳೂ ಜೋಡಿ ಮೈನಗಳಿಗೆ ಸಮಾಧಾನವಾಗುವಂತೆ ಮತ್ತು ತಮ್ಮ ಆರೋಗ್ಯದ ಕಡೆ ಗಮನಕೊಡುವಂತೆ ಸಾಂತ್ವನ ಹೇಳಿದವು.
ಮರಿ ಮೈನ ಎಲ್ಲಾ ಬಳಗದ ಕಲವರದಿಂದ ಏನೂ ಅರಿಯದೆ ತಾನೂ ಚಿಂವ್… ಚಿಂವ್… ಚಿಂವ್ ಎಂದು ಮುದ್ದಾಗಿ ಕೂಗಲಾರಂಭಿಸಿತು. ಇದೇ ಶಬ್ದ ಆಲಿಸಿದ ಬೆಕ್ಕು ಧ್ವನಿ ಬರುತ್ತಿರುವ ಮಾರ್ಗವನ್ನೇ ಆಲಿಸುತ್ತಾ, ಓಹೋ… ಇಂದು ನನಗೆ ಒಳ್ಳೆ ಭೋಜನದ ಅದೃಷ್ಟವಿರುವಂತಿದೆ ಎಂದು ಗುನುಗುನಿಸುತ್ತಾ ಬಂದೇ ಬಿಟ್ಟಿತು. ವಾಸನೆ ಗ್ರಹಿಸಿ ಬಂದ ಬೆಕ್ಕಿನ ಬಾಯಿಗೆ ಒಂದೇ ತುತ್ತಿನಂತೆ ಬೆಕ್ಕಿನ ಉದರ ಪ್ರವೇಶಿಸಿದ ಮರಿಮೈನ ನಿಸರ್ಗದ ಮಡಿಲಿನಿಂದ ಮರೆಯಾಯಿತು.
ಘಟಿಸಿದ ಈ ಘಟನೆಯಿಂದ ಕಣ್ಮುಂದೆಯೇ ಮರಿಮೈನ ಮಾಯವಾದಂತಾಗಿ ಕಂಗಾಲಾದ ಜೋಡಿ ಮೈನಾಗಳೆರಡು ಎಲ್ಲಾ ತೊರೆದು ಹಾರಿ ಹಾರಿ ದೂರದ ಒಂದು ಆಲದ ಮರಕ್ಕೆ ಹೋದವು. ಆಲದ ವಿಶಾಲ ಬಾಹುಗಳಿಗೆ ಒರಗಿ ಹಾಗೇ ನಿದ್ದೆ ಹೋದವು.
ಹೊಸ ಬೆಳಕು ಮತ್ತೆ ಪ್ರವೇಶಿಸಿತು. ಕಾಲಾನಂತರ ಜೋಡಿ ಮೈನಗಳು ವಿಧಿಯ ನಿಯಮದಂತೆ ಎಲ್ಲಾ ಘಟನೆಗಳು ಮಸುಕು ಮಸುಕಾಗಿ ಮರೆಯಾಯಿತು. ಕಾಲಗಳುರುಳಿ ಮತ್ತೆ ವಸಂತದಾಗಮನ, ಕೋಗಿಲೆಯ ಇಂಪಾದ ಗಾಯನ ಸ್ಥಳವನ್ನೆಲ್ಲಾ ಆವರಿಸಿತು. ಎಲ್ಲೆಲ್ಲೂ ಹೊಸ ಚಿಗುರು, ಹಚ್ಚಹಸುರು. ಈಗ ಗಂಡು ಮೈನ ದೊಡ್ಡ ಆಲದ ಮರದ ಟೊಂಗೆಯಲ್ಲಿ ಭದ್ರವಾಧ ಗೂಡು ಕಟ್ಟಿತ್ತು. ಹೆಣ್ಣು ಮೈನ ಮತ್ತೆ ಮೊಟ್ಟೆ ಇಟ್ಟು, ಕಾವು ಕೊಟ್ಟು ಮರಿಮೈನಾ ಹೊರಬಂದೇ ಬಿಟ್ಟಿತು. ಮತ್ತೆ ಮರಿ ಹುಟ್ಟಿಬಂತೆಂದು ಆನಂದದಿಂದ ಜೋಡಿಮೈನಗಳೆರಡು ಸಂತಸದಿಂದ ಜೀವನ ನಡೆಸಿದವು. ಸುಖ ದುಃಖ ಸಮನಾಗಿ ಸ್ವೀಕರಿಸಿದ ಜೋಡಿ ಮೈನ ಮರಿಮೈನದೊಂದಿಗೆ ಹಾರಾಡಿ ಸಂತಸದಿಂದ ಬಹುಕಾಲ ಜೀವಿಸಿದವು.

1 Comment

  1. ತುಂಬಾ ಚೆನ್ನಾಗಿದೆ… ಇನ್ನಷ್ಟು ಬರಹಗಳನ್ನು ಓದಲು ಇಷ್ಟಪಡುತ್ತೇವೆ.

Leave a Reply