ಡರನಾ ಕ್ಯಾ?

ಡರನಾ ಕ್ಯಾ?

ಸುಮಾರು ಎರಡು – ಮೂರು ದಿನಗಳಿಂದ ಇಬ್ಬರೂ ಸೊಸೆಯರು ಗುಸುಗುಸು ಮಾತಿನಲ್ಲಿ ಏನೋ ಚರ್ಚೆ ಮಾಡುತ್ತಿರುವುದು ಸುಶೀಲಮ್ಮನ ಗಮನಕ್ಕೆ ಬಂದಿತ್ತು. ಅವರು ಕೇಳಲು ಹೋಗಿರಲಿಲ್ಲ. ಸೊಸೆಯರೊಡನೆ ಅವರ ಸಂಬಂಧ ಅತ್ತೆಯಂತಿರದೇ ಒಬ್ಬ ತಾಯಿಯಂತೆಯೇ ಇತ್ತು. ಹೀಗಾಗಿ ಅವರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಹೇಳುವಂಥ ವಿಷಯವಾದರೆ ಅವರಾಗಿಯೇ ಹೇಳುತ್ತಾರೆನ್ನುವುದು ಅವರ ಮತ. ಆದರೆ ಇಂದು ಮತ್ತೆ ಬಟ್ಟೆ ಒಣ ಹಾಕುತ್ತ ಅದೇ ರೀತಿ ಮಾತನಾಡುತ್ತಿದ್ದರು. ಸುಶೀಲಮ್ಮನ ಕುತೂಹಲ ಕೆರಳಿತು. ಒಂದು ನಿಮಿಷ ಸರಿದು ನಿಂತರು.
ಲಕ್ಷ್ಮೀ ಹೇಳುತ್ತಿದ್ದಳು- “ಶಾರಿ, ನೀ ಇಷ್ಟ್ಯಾಕ ಮೀನ–ಮೇಷ ಎಣಿಸ್ತಿ? ಮಾಮಿ ಹತ್ರ ಒಂದು ಮಾತು ಕೇಳಿ ನೋಡೋಣಲ್ಲಾ, ಏನಾಗ್ತದ? ಭಾಳಾದ್ರ ಎರಡು ಬಯ್ಗುಳಾ ಬಯ್ತಾರ…”
“ಲಕ್ಷ್ಮೀ, ಮಾಮಿ ಬಯ್ಗುಳಕ್ಕ ಯಾರು ಹೆದರ್ತಾರ, ನಂಗೊತ್ತಿಲ್ಲೇನು? ಮಾಮಿ ಬಾಯಿ ಎಷ್ಟು ಒರಟೋ, ಮನಸ್ಸು ಅಷ್ಟೇ ಮೃದು ಅಂತ. ಆದ್ರ ನಾವು ಅವ್ರನ್ನ ಕೇಳಿದ್ವಿ ಅಂತ ಇಟ್ಕೋ, ಮನ್ಯಾಗ ಅವ್ರ ಮಾತು ನಡೀತದ? ಅವ್ರಿಗೆ ದ್ವಂದ್ವದಾಗ ಹಾಕಿದ್ಹಂಗ ಆಗ್ತದ, ಮಾಮಾ ಅವ್ರ ಮಾತೂ ಮೀರಲಿಕ್ಕೆ ಆಗೂದಿಲ್ಲಾ. ನಮ್ಮನ್ನೂ ನಿರಾಶಾ ಮಾಡ್ಲಿಕ್ಕೆ ಆಗೂದಿಲ್ಲಾ, ಪಾಪಾ ಮಾಮಿಗೆ ಯಾಕ ತ್ರಾಸು ಕೊಡೋದು?”
ಈಗ ಸುಶೀಲಮ್ಮನ ಮನಸ್ಸು ಕರಗಿತು. ಮುಂದೆ ಹೋಗಿ ಕರೆದರು-
“ಏನ್ರೇ ಅದು ಗುಸುಗುಸು? ನಂಗೂ ಸ್ವಲ್ಪ ಹೇಳ್ರೆಲಾ?” ಇಬ್ಬರೂ ತಿರುಗಿದರು. ಸೌಮ್ಯ ಸ್ವಭಾವದ ಶಾರದಾ ತಡವರಿಸಿದಳು-
“ಏನಿಲ್ಲಾ ಮಾಮಿ…”
“ಲಕ್ಷ್ಮೀ ಅನುಮಾನಿಸುತ್ತಲೇ ಹೇಳಿದಳು-
“ಮಾಮಿ, ಸುದರ್ಶನ ಟಾಕೀಸಿಗೆ ‘ಮೊಗಲ್ ಎ ಆಜಮ್’ ಸಿನಿಮಾ ಬಂದದ. ಇದೇ ಕಡೇ ವಾರ ಅಂದ್ರ ಗುರುವಾರದ ತನಕಾ ಅದ. ಭಾಳಾ ಛಲೋ ಅದ ಅಂತ. ಎಲ್ಲಾರೂ ನೋಡಿ ಬಂದಾರ, ನಮಗೂ ನೋಡಬೇಕಂತ ಆಶಾ…
ಸುಶೀಲಮ್ಮ ಅವಾಕ್ಕಾದರು. ಅರವತ್ತರ ದಶಕವದು. ಸ್ತ್ರೀಯರು ಸಿನಿಮಾಗೆ ಹೋಗುವುದು ಅಪರೂಪ. ಅದರಲ್ಲೂ ಸುಶೀಲಮ್ಮನ ಪತಿ ಶಂಕರರಾಯರು ಬಹಳ ಕಟ್ಟುನಿಟ್ಟಿನ ವ್ಯಕ್ತಿ. ಮನೆಯಲ್ಲಿ ಅವರ ಅಪ್ಪಣೆಯಿಲ್ಲದೆ ಏನೂ ನಡೆಯದು. ಅವರಿಗೆ ಏನೂ ತಿಳಿಯಲಿಲ್ಲ. ಒಮ್ಮೆಲೇ,
“ಹೋಗಿ ಹೋಗಿ ಆ ತುರ್ಕರ ಸಿನಿಮಾ ಏನ್ ನೋಡ್ತೀರೆ?” ಎಂದರು.
“ಹಂಗ್ಯಾಕಂತೀರಿ ಮಾಮಿ? ಧರ್ಮ ಯಾವುದೂ ಕೆಟ್ಟದಲ್ಲಾ, ಎಲ್ಲಾ ಧರ್ಮಗಳೂ ಹೇಳೋ ಸಾರ ಒಂದೇ ಅಂತಾರ. ಸ್ವತಃ ಅಕ್ಬರ ಬಾದಶಹಾನೇ ತನ್ನ ಹಿಂದೂ ಪತ್ನಿ ಜೋಧಾಬಾಯಿ ಜತೆ ಕೃಷ್ಣ ಜನ್ಮಾಷ್ಟಮಿ ಆಚರಿಸ್ಯಾನಂತ. ಆ ಸಿನಿಮಾದಾಗೂ ತೋರಿಸ್ಯಾರ. ಮಾಮಿ, ಮಧುಬಾಲಾ ಇಷ್ಟು ಚಂದ ಕಾಣಿಸ್ಯಾಳಂತ. ಅಕೀದು ಒಂದು ಡ್ಯಾನ್ಸ್ ಬಣ್ಣದಾಗೂ ಅದ ಅಂತ. ಹಾಡೂಗಳಂತೂ ಇಷ್ಟು ಚಂದ ಅವ. ಮತ್ತ ಮಧ್ಯಾಹ್ನ 3-6 ಹೋದ್ರ ಕೆಲಸಾ ಎಲ್ಲಾ ಮುಗಿಸಿ ಹೋಗಿ ಸಂಜೀ ಕತ್ತಲಾಗೋಕ್ಕಿಂತ ಮೊದ್ಲ ಬರಬಹುದು…”
ಲಕ್ಷ್ಮೀ ಎಲ್ಲ ಮಾತುಗಳನ್ನು ಬಡಬಡನೇ ಹೇಳಲಾರಂಭಿಸಿದಳು. ಸುಶೀಲಮ್ಮ ಒಂದು ನಿಮಿಷ ಸುಮ್ಮನಿರುವಂತೆ ಸನ್ನೆ ಮಾಡಿದರು.
“ನನಗ ವಿಚಾರ ಮಾಡ್ಲಿಕ್ಕೆ ಸ್ವಲ್ಪ ಅವಕಾಶ ಕೊಡ್ರಿ. ಇವತ್ತು ಸೋಮವಾರ, ಇನ್ನೂ ಮೂರು ದಿನಾ ಟೈಮ್ ಅದ. ಒಂದು ಮಾತಂತೂ ತಿಳ್ಕೊಳ್ರಿ. ನಿಮ್ಮ ಮಾವನ್ನ, ನಿಮ್ಮ ಗಂಡಂದಿರನ್ನ ಮನವೊಲಿಸಿಯಾಗಲೀ ಅವರ ಅಪ್ಪಣೆ ಪಡೆದಾಗಲೀ ನೀವು ಸಿನಿಮಾ ನೋಡೋದು ಆಗೋ-ಹೋಗೋ ಮಾತಲ್ಲ. ಏನಾದ್ರೂ ಕಿಲಾಡಿತನದಿಂದ ಮಾತ್ರನ ಸಾಧ್ಯ…”
“ಹೌದು ಮಾಮಿ, ಗೊತ್ತದ ಒಬ್ಬ ಸೀನಿಯರ್ ಹಿಟ್ಲರ್, ಇಬ್ಬರು ಜ್ಯೂನಿಯರ್ ಹಿಟ್ಲರ್ ಅಥವಾ ಅವ್ರ ಶಿಷ್ಯಂದಿರು ಅನ್ರೀ, ಇವ್ರನ್ನ ತಪ್ಪಿಸಿ ನೋಡೋದು ಹೆಂಗಂತನ… “
“ಉಶ್ಶ್…” ಸುಶೀಲಮ್ಮ ಸನ್ನೆ ಮಾಡಿದರು.
ಅಂದು ಇಡೀ ದಿನ ಸುಶೀಲಮ್ಮನ ತಲೆಯಲ್ಲಿ ಪ್ಲಾನ್ ತಯಾರಾಗುತ್ತಿತ್ತು. ಮರುದಿನ ಮುಂಜಾನೆ ಇಬ್ಬರು ಸೊಸೆಯಂದಿರಿಗೂ ಅದರ ಬಗ್ಗೆ ತಿಳಿಸಿ ಹೇಳಿದರು. ಲಕ್ಷ್ಮೀ ಉತ್ಸಾಹದಿಂದ – ಶಾರದಾ ಹೆದರುತ್ತಲೇ ತಲೆಯಾಡಿಸಿದರು.
ಮರುದಿನ ಮುಂಜಾನೆ ಎಂಟು ಗಂಟೆಯ ಸುಮಾರು ಶಂಕರರಾಯರು ಪೇಪರನ್ನು ಓದುತ್ತ ಕುಳಿತಿದ್ದರು. ಅವರ ಆಯುರ್ವೇದೀಯ ಡಾಕ್ಟರ್ ಸುಧೀರ ಬಂದ. ಶಂಕರರಾಯರು ಮೊಣಕಾಲಿನ ನೋವಿಗೆ ಅವನ ಹತ್ತಿರ ಔಷಧಿ ತೆಗೆದುಕೊಳ್ಳುತ್ತಿದ್ದರು. ಈ ಕಡೆಗೆ ಬಂದಾಗಲೆಲ್ಲ ನೋಡಿ ಹೋಗುತ್ತಿದ್ದ.
“ಏನಂತದ ಮಾಮಾ ಕಾಲು ನೋವು…” ಎನ್ನುತ್ತ ಒಳಬಂದ ಸುಧೀರ ಸೀದಾ ಅವರ ಕಾಲ ಬಳಿಯೇ ಹೋಗಿ ಕುಳಿತ.
“ಅಡ್ಡಿ ಇಲ್ಲಪಾ, ಕಡಿಮಿ ಅದ” ಎನ್ನುತ್ತಲೇ ಧೋತರ ಎತ್ತಿ ತೋರಿಸಿದರು.
“ಅಯ್ಯೋ, ಎಡಗಾಲಿನ ಬಾವು ಜಾಸ್ತಿ ಆಗೇದಲ್ಲಾ…” ಎಂದು,
“ಮಾಮಿ, ನೀವು ಆ ಕಡೆ ಬರೋದ ಬಿಟ್ರಿ, ಭೇಟ್ಟೀನ ಇಲ್ಲಾ, ಇವತ್ತ ಬರ್ರೀ ಹಸಿರು ಔಷಧ ಹಚ್ಚಿ ಕಾಸಬೇಕು, ಔಷಧ ಕೊಡ್ತೇನಿ. ಮತ್ತ ಮಾಮಾ, ಎರಡು ದಿನಾ ಅಡ್ಡಾಡಬ್ಯಾಡ್ರೀ. ಅಂದ್ರ ಅನಿವಾರ್ಯ ಇದ್ದಷ್ಟು ಮಾತ್ರ ಅಡ್ಡಾಡ್ರಿ…”
“ಬ್ಯಾಸರಾಗ್ತದೋ ಮಾರಾಯಾ…”
“ಏಯ್, ಏನು ಬ್ಯಾಸರಾ… ಕಸಕಸಿ ಪಾಯಸಾ ಕುಡಿದು ಉಂಡು ಮಲಗಿದ್ರ ರಾತ್ರಿ ಆದದ್ದು ತಿಳಿಯೋ ಹಂಗಿಲ್ಲಾ.”
ಸುಶೀಲಮ್ಮ ಈಗ ಮಾತನಾಡಿದರು- “ಹೌದೋ ಸುಧೀರ, ಸದ್ಯ ನಾ ನಿನ್ನ ಜತೆ ಬರ್ತೇನಿ. ಎರಡು ದಿನದಿಂದಾ ನಿದ್ದಿಯೊಳಗ ನರಳ್ಯಾರ ಪಾಪ, ಔಷಧ ಹಚ್ಚಿ ಎರಡು ದಿನಾ ಪೂರ್ತಿ ವಿಶ್ರಾಂತಿ ತಗೊಳ್ಳಲಿ…”
ಶಂಕರರಾಯರು ಕಾಲು ನೋಡಿಕೊಂಡರು. “ನನಗೇನು ಎಲ್ಲೂ ಬಾವು ಕಾಣಿಸವೊಲ್ಲದು” ಎಂದರು ಅನುಮಾನದಿಂದ.
“ಎಡಗಾಲಿಗೆ ಬಾವು ಅದ, ನಿಮಗ್ಯಾಕ ಕಾಣಿಸ್ತಾ ಇಲ್ಲ” ಎಂದರು ಸುಶೀಲಮ್ಮ. ಲಕ್ಷ್ಮೀ, ಶಾರದಾರೂ ಹೌದೆಂದರು. ಅಂತೂ ಅವರನ್ನು ಪಕ್ಕದ ಕೋಣೆಗೆ ಕಳಿಸಿ ಮಂಚದ ಮೇಲೆ ಮಲಗಿಸಲಾಯಿತು.
ಸುಧೀರ ನಗುತ್ತ ಹೊರಟು ಹೋದ. ಮೊದಲ ಹಂತ ಯಶಸ್ವಿಯಾಗಿತ್ತು. ಮಧ್ಯಾಹ್ನ ನಾಲ್ಕು ಗಂಟೆಗೆ ಸುಶೀಲಮ್ಮನ ಗೆಳತಿ ಸರಸ್ವತಿ ಬಂದರು. ಸುಶೀಲಮ್ಮ ಅವರನ್ನು ಸೀದಾ ಪತಿಯ ಕೋಣೆಗೇ ಕರೆದರು. “ಅಯ್ಯೋ ಏನು ಶಂಕರರಾಯ್ರಿಗೆ ಅರಾಮಿಲ್ಲಾ, ಮಲಗಿ ಬಿಟ್ಟಾರ” ಎಂದ ಸರಸ್ವತಿ ಬಾಯಿಗೆ ಸುಶೀಲಮ್ಮನೇ ಕಾಲು ನೋವಿನ ಬಗ್ಗೆ ಹೇಳಿದರು.
“ಅಯ್ಯೋ, ಅಲಕ್ಷ್ಯ ಮಾಡಬ್ಯಾಡ್ರೀ. ನೋಡ್ರಿ ಈಗ ನಮ್ಮ ಮಾವಾ ಮನ್ಯಾಗ ಅಂಬೆಗಾಲಿಟ್ಟು ಸರಿಯೋ ಪರಿಸ್ಥಿತಿ ಬಂದದ” ಎನ್ನಬೇಕೇ.
ಶಂಕರರಾಯರು ಬೇರೆಯವರ ಮೇಲೆ ಜೋರಷ್ಟೇ. ಸ್ವಂತಕ್ಕೆ ಏನೇ ಸಣ್ಣ ಸಮಸ್ಯೆಯಾದ್ರೂ ಹೆದರಿ ನಡುಗುತ್ತಾರೆ. ಸುಶೀಲಮ್ಮನಂತೂ ‘ಹುಲಿಗೊಂದು ಹುಣ್ಣು ಹುಟ್ಟಿದ್ಹಂಗ’ ಎಂದು ನಗುವುದುಂಟು.
ಸರಸ್ವತಿಬಾಯಿ ಹೇಳಿದರು – “ನಾ ಗದಗಿಗೆ ಹೋಗಿದ್ದೆ. ನಿಮ್ಮ ಅತ್ತಿಗೆ ರುಕ್ಮಾಬಾಯಿ ಭೇಟ್ಯಾಗಿದ್ರು. ತವರ ಮನಿ ಭಾಳಾ ನೆನಪಾಗ್ತದ. ನನ್ನ ತಮ್ಮ ಮತ್ತ ಅವನ ಸಂಸಾರ ಹೆಂಗದ ಅಂತೆಲ್ಲಾ ಕೇಳೀದ್ರು. ಮೊದಲೆಲ್ಲಾ ನರಸಿಂಹ ಜಯಂತಿಗೆ ಎಲ್ಲಾರೂ ಬರೋರು, ಈಗೆಲ್ಲಾ ಅವ್ರವ್ರ ಕೆಲಸಾ ಅವ್ರಿಗೆ, ಯಾರೂ ಬರೂದಿಲ್ಲಾ. ಶ್ರೀಧರ, ಅನಿರುದ್ಧ ಅಂತೂ ಅತ್ಯಾನ ಮರ್ತೇ ಬಿಟ್ಟಾರ ಅಂತ ಚಡಪಡಿಸಿದ್ರು. ಭಾಳಾ ಅಂತಃಕರಣದ ಜೀವ ಏನss ಹೇಳ್ರಿ.”
ಮುಂದಿನ ಮಾತುಗಳೂ ಬರೀ ಅವರ ಬಗ್ಗೆಯೇ. ಕೊನೆಗೆ “ನಾಳೆ ನರಸಿಂಹ ಜಯಂತಿ. ಅವ್ರ ಕುಲದೇವರಂತಲ್ಲಾ. ಎಲ್ಲಾರೂ ಹೋಗೋ ಪರಿಸ್ಥಿತಿ ಇಲ್ಲೇನೋ. ಕೊನಿಗೆ ನಿಮ್ಮ ಮಕ್ಕಳು ಸೊಸೆ ಯಾರ್ನಾದ್ರೂ ಕಳಿಸ್ರಿ ಪಾಪ. ಹಿರೇ ಜೀವ ಸಂತೋಷಪಡ್ತದ.”
“ಇಲ್ರೆವಾ. ಲಕ್ಷ್ಮೀಗೆ ದಿವಸ ಅವ, ಶಾರದಾ ಹೋಗಿ ಇಕಿ ಹೊರಗ ಕೂತ್ರ ಈಗ ನನ್ನ ಕೈಲೆ ಮನಿ ಕೆಲಸ ನೀಗೂದಿಲ್ಲಾ. ಇನ್ನ ಶ್ರೀ ಮತ್ತ ಅನಿ ರಜಾ ಇಲ್ಲಾ ಅಂತ ನೆವಾ ಹೇಳ್ತಾರ. ನಂಗೂ ಅನಿಸ್ತದ ಆದ್ರ ನನ್ನ ಮಾತು ಕೇಳಿ ಅವ್ರು ಹೋಗಬೇಕಲ್ರೀ. ಹೋದ್ರ ಛಲೋ. ನೀವು ಹೇಳಿದ್ಹಂಗ ಹಿರೇ ಜೀವಾ ಸಂತೋಷಪಡ್ತದ…”
ಮತ್ತ ಒತ್ತಿ ಹೇಳಿ ಪತಿಯ ಮುಖ ನೋಡಿದರು. ನಿರೀಕ್ಷಿಸಿದ ಪರಿಣಾಮ ಅಲ್ಲಿತ್ತು. “ಯಾಕ ಹೋಗೋದಿಲ್ಲಾ, ನಾನ ಹೇಳಿ ಕಳಸ್ತೇನಿ. ಇವತ್ತ ಸಂಜೀ ಬಸ್ಸೀಗೆ ಇಬ್ರೂ ಹೋಗ್ಲಿ. ಅಲ್ಲೆ ಸ್ವಲ್ಪ ಸಹಾಯಾನೂ ಮಾಡಿದ್ಹಂಗಾಗ್ತದ. ಸಂಜಿಗೆ ಅವ್ರು ಬಂದ ಕೂಡ್ಲೆ ಇಲ್ಲೆ ಕಳಿಸು.”
ನಿರೀಕ್ಷಿಸಿದಂತೆಯೇ ಶ್ರೀಧರ, ಅನಿರುದ್ಧ ತಂದೆಯ ಮಾತನ್ನು ತೆಗೆದು ಹಾಕದೇ ಸಂಜೆಗೆ ಗದಗಿಗೆ ಹೋದರು. ಮರುದಿನ ಶಂಕರರಾಯರ ಮೆಚ್ಚಿನ ಮಸ್ತಿ ಕಡುಬು, ಮಾವಿನಕಾಯಿ ಕಲಸನ್ನ, ಕಸಕಸಿ ಪಾಯಸ ತಯಾರಾಗಿದ್ದವು. ನರಸಿಂಹ ಜಯಂತಿಯೆಂದು ಪಕ್ಕದ ಮನೆಯ ಹುಡುಗ ಬಂದು ಪೂಜೆ, ನೈವೇದ್ಯ ಮಾಡಿದ. ಶಂಕರರಾಯರು ಸ್ನಾನ ಮಾಡಿ ತೀರ್ಥ ತೆಗೆದುಕೊಂಡು ಉಂಡು ಮಲಗಿದರು.
ಲಕ್ಷ್ಮೀ, ಶಾರದಾ ಗಡಿಬಿಡಿಯಲ್ಲಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಹೊರಟಾಗ ಸುಶೀಲಮ್ಮ ಮುಚ್ಚಿ ಒಂದು ಸ್ಟೀಲ್ ಡಬ್ಬಿ ಕೊಟ್ಟರು. ತೆಗೆದು ನೋಡಿದರೆ ಮಸ್ತಿ ಕಡುಬು, ಹೀರೇಕಾಯಿ ಭಜಿ. ಮ���ಖ ನೋಡಿದ ಲಕ್ಷ್ಮೀ, ಶಾರದಾಗೆ-
“ಆ ಸಿನೆಮಾ ನೋಡೋ ಹುಚ್ಚಿನ್ಯಾಗ ಊಟಾನೂ ಸರಿ ಮಾಡಿಲ್ಲ. ಇಬ್ಬರೂ ಅಲ್ಲೇ ಟಾಕೀಸಿನಾಗ ತಿನ್ರೀ.”
ಸಂತೋಷದಿಂದ ಹೊರಟರು. ಇಬ್ಬರೂ ಭೇಟಿಯಾದ ಒಂದಿಬ್ಬರು ಪರಿಚಿತರು-“ಈ ಉರಿಬಿಸಲಾಗ ಎಲ್ಲಿ ಹೊಂಟ್ರೀ” ಎಂದಾಗ ಸುಮ್ಮನೆ “ಹಿಹಿ” ಎಂದು ನಕ್ಕು ಮುನ್ನಡೆದರು.
ಸಿನೆಮಾ ಮುಗಿಸಿ ಮನೆಗೆ ಬಂದರೆ ಇನ್ನೂ ಮಾವನವರ ಗೊರಕೆ ಕೇಳಿಸುತ್ತಿತ್ತು. ಲಕ್ಷ್ಮೀ, ಶಾರದಾರಿಗೆ ಇನ್ನೂ ಅಚ್ಚರಿ. ಹೆದರುತ್ತಲೇ ಬಂದಿದ್ದರು ಮನೆಗೆ. ಎದ್ದು ತಮ್ಮ ಬಗ್ಗೆ ಪ್ರಶ್ನಿಸಿದ್ದರೆ, ಅತ್ತೆ ಏನು ಹೇಳಿರಬಹುದು? ಎಂದೆಲ್ಲ ವಿಚಾರ.
“ಮಾಮಿ, ಇನ್ನೂ ಎದ್ದಿಲ್ಲಾ?” ಕೋಣೆಯೆಡೆಗೆ ಕೈ ಮಾಡಿ ಸಣ್ಣ ದನಿಯಲ್ಲಿ ವಿಚಾರಿಸಿದರು.
“ಇಲ್ಲಾ. ಕಸಕಸಿ ಪಾಯಸ ಒಂದರಿಂದನ ಏನು ಭರೋಸಾ ಅಂತ, ಒಂದು ನಿದ್ದೀ ಗುಳಿಗೇನೂ ಹಾಲಿನ್ಯಾಗ ಹಾಕಿ ಕೊಟ್ಟಿದ್ದೆ. ಗಡದ್ದ ಮಲಗಿ ಬಿಟ್ಟಾರ. ಸೀರಿ ಬದಲಿ ಮಾಡಿ ನೀನ ಹೋಗಿ ಎಬ್ಬಿಸು ಲಕ್ಷ್ಮೀ…” ಎಂದ ಅತ್ತೆಯ ಮಾತಿಗೆ ನಗುತ್ತ ಒಳನಡೆದರು ಇಬ್ಬರೂ ಸೊಸೆಯರು.
“ಪ್ಯಾರ್ ಕಿಯಾ ತೊ ಡರನಾ ಕ್ಯಾ…” ಲಕ್ಷ್ಮೀಯ ಗುನುಗುನು ಅವಳ ಸಂತಸದ ಸಂಕೇತವೆನಿಸುತ್ತಿತ್ತು. ಸುಶೀಲಮ್ಮನಿಗೆ ಎರಡು ದಿನಗಳಿಂದ ತಾವು ಮಾಡಿದ ನಾಟಕ, ಪಟ್ಟ ಶ್ರಮ ಸಾರ್ಥಕವೆನಿಸಿತು.
“ಅಮ್ಮಾ, ಮೊಗಲ್ ಏ ಆಜಮ್ ಪೂರ್ಣ ಬಣ್ಣದಾಗ ತಗದಾರ, ಈ ಶನಿವಾರ ಹೋಗೋಣೇನು?” ಎಂದ ತನ್ನ ಮಾತಿಗೆ ಉತ್ತರವನ್ನೇ ಕೊಡದೇ ಏನೋ ವಿಚಾರಗಳಲ್ಲಿ ಕಳೆದುಹೋದ ಅತ್ತೆಯನ್ನು ನೋಡಿ ಅಚ್ಚರಿಯೆನಿಸಿತು ಆಶಾಗೆ. ಮತ್ತೆ ಕರೆದಳು ಆಶಾ.
ಎಚ್ಚೆತ್ತ ಲಕ್ಷ್ಮೀಬಾಯಿ ಮುಗುಳ್ನಗುತ್ತ ಹೇಳಿದರು-“ಮೊಗಲ್ ಏ ಆಜಮ್ ಕಥೆಗಿಂತಾ ಅದನ್ನು ನೋಡ್ಲಿಕ್ಕೆ ನಾವು ಮಾಡಿದ ನಾಟಕದ ಕಥೀ ನೆನಪಾತು ಆಶಾ, ನಿಂಗೂ ಹೇಳ್ತೇನಿ ಯಾವಾಗ್ಲಾದ್ರೂ. ಅಂಥಾ ಒಂದು ಅಮರ ಪ್ರೇಮ ಕಥೇನಾ ಈ ಮುದುಕಿ ಜತೆ ಯಾಕ ನೋಡ್ತೀ, ನಿನ್ನ ನಾಯಕನ್ನ ಕರಕೊಂಡು ಹೋಗು. ಮುನ್ನಾನ ನಾ ನೋಡ್ಕೋತೀನಿ ಮನ್ಯಾಗ” ಎಂದ ಅತ್ತೆಯನ್ನೇ ಹೆಮ್ಮೆಯಿಂದ ದಿಟ್ಟಿಸಿದಳು ಆಶಾ.

1 Comment

  1. ಚೆನ್ನಾಗಿದೆ. ಎಲ್ಲರ ಮನೆಯಲ್ಲೂ ಇದೇ ರೀತಿ ಸಂಬಂಧಗಳು ಸುಂದರವಾಗಿ ಬೆಸೆದುಕೊಂಡಿರಲಿ.

Leave a Reply