ಪುಟ್ಟರಾಜು ಮತ್ತು ಮೀನುಗಳು

ಪುಟ್ಟರಾಜು ಮತ್ತು ಮೀನುಗಳು

ಒಂದು ಸುಂದರವಾದ ಊರು. ಊರಿನಾಚೆ ಒಂದು ಕಾಡು. ಕಾಡಿನ ಪಕ್ಕದಲ್ಲಿ ಒಂದು ಚಿಕ್ಕ ಮನೆ. ಪ್ರಕೃತಿಯ ಸೌಂದರ್ಯದ ಹಿನ್ನೆಲೆಯಲ್ಲಿ ಆ ಮನೆ ಇನ್ನಷ್ಟು ಅಂದವಾಗಿ ಕಾಣುತ್ತಿತ್ತು. ಆ ಮನೆಯಲ್ಲಿ ಅಪ್ಪ-ಅಮ್ಮನ ಜೊತೆಯಲ್ಲಿ ಪುಟ್ಟರಾಜು ಎಂಬ ಹುಡುಗನಿದ್ದ.
ಅವನು ದಿನವೂ ಶಾಲೆಗೆ ಹೋಗುತ್ತಿದ್ದ. ಹೋಗುವಾಗ, ಬರುವಾಗ ಹಚ್ಚಹಸುರಿನ ಗಿಡಮರಗಳು, ಹೂಬಳ್ಳಿಗಳ ಲತೆ, ಕೋಗಿಲೆಯ ಗಾನ, ಜುಳುಜುಳು ಹರಿಯುವ ನದಿಯ ಸೌಂದರ್ಯವನ್ನು ಸವಿಯುತ್ತಿದ್ದನು. ಎಷ್ಟೋ ಸಲ ತನ್ನಲ್ಲಿದ್ದ ಕೊಳಲನ್ನು ತೆಗೆದುಕೊಂಡು ಒಂದುಕಡೆ ಕುಳಿತು ಕೊಳಲನ್ನು ಊದುತ್ತ ಆನಂದಪಡುತ್ತಿದ್ದ. ಆದರೆ ಅಪ್ಪ-ಅಮ್ಮನಿಗೆ ಅವನು ಕೊಳಲು ನುಡಿಸುವುದು ಇಷ್ಟವಿರಲಿಲ್ಲ. ಬದಲಾಗಿ ಆತ ಒಬ್ಬ ಮೇಲ್ದರ್ಜೆಯ ಪೋಲಿಸ್ ಅಧಿಕಾರಿಯಾಗಬೇಕೆಂಬ ಬಯಕೆ ಅವರದಾಗಿತ್ತು.
ಒಂದು ಭಾನುವಾರದಂದು ಹೀಗೆ ಕೊಳಲನ್ನು ಊದುತ್ತ ನದಿಯ ಪಕ್ಕ ಸಾಗುತ್ತಿರುವಾಗ ಆತನ ಕೊಳಲಿನ ರಾಗಕ್ಕೆ ನದಿಯಲ್ಲಿದ್ದ ಮೀನುಗಳು ಪುಟ್ಟರಾಜು ನುಡಿಸಿದಂತೆ ತಮ್ಮ ಮೈಬಳುಕಿಸಿ ಧುಮಿಕಿ ಸಂತೋಷವನ್ನು ವ್ಯಕ್ತಪಡಿಸಿದವು. ಪುಟ್ಟರಾಜು ಅವುಗಳ ಮೈಬಣ್ಣವನ್ನು ಹಾಗೂ ನರ್ತನವನ್ನು ನೋಡಿ ಮೆಚ್ಚಿಕೊಂಡನು. ಹೇಗಾದರೂ ಮಾಡಿ ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂಬ ಆಸೆಯಾಯಿತು ಅವನಿಗೆ. ಆದರೆ ಹೇಗೆ ಒಯ್ಯುವುದು ಎಂದು ವಿಚಾರ ಮಾಡಿದ.
ಮತ್ತೊಂದು ರಜೆಯ ದಿನ ನದಿದಡಕ್ಕೆ ಪುಟ್ಟರಾಜು ಬಂದನು. ತನ್ನ ಯೋಜನೆಯಂತೆ ಒಂದು ನೀರು ತುಂಬಿದ ಗಾಜಿನ ಪಾತ್ರೆ ಹಾಗೂ ಬಲೆಯನ್ನು ತಂದಿದ್ದ. ಹಿಂದಿನಂತೆ ಕೊಳಲು ನುಡಿಸಲು ಆರಂಭಿಸಿದ. ಮೀನುಗಳು ಮತ್ತೆ ಅದೇ ರೀತಿ ಒಂದೆಡೆ ಸೇರಿ ನರ್ತಿಸತೊಡಗಿದವು. ಆಗ ಅವನು ಕೊಳಲು ಊದುದುದನ್ನು ನಿಲ್ಲಿಸಿ, ಅವುಗಳ ಮೇಲೆ ಬಲೆಯನ್ನು ಬೀಸಿದ. ಏನೂ ಅರಿಯದ ಮುಗ್ಧ ಮೀನುಗಳು ಬಲೆಯಲ್ಲಿ ಸಿಕ್ಕಿಕೊಂಡವು. ಪುಟ್ಟರಾಜು ಸಂತಸದಿಂದ ಅವುಗಳನ್ನು ತಕ್ಷಣವೇ ತಾನು ತಂದಿದ್ದ ನೀರು ತುಂಬಿದ ಗಾಜಿನ ಪಾತ್ರೆಯಲ್ಲಿ ಹಾಕಿದ. ಅದರಲ್ಲಿಯ ಒಂದು ಮುದಿ ಮೀನು ಅವನಿಗೆ ಏನೋ ಹೇಳಬೇಕು ಎನ್ನುವಷ್ಟರಲ್ಲಿ ಪಾತ್ರೆಯ ಮುಚ್ಚಳವನ್ನು ಹಾಕಿಕೊಂಡು, ಮನೆಗೆ ತೆಗೆದುಕೊಂಡು ಬಂದನು.
ಒಂದೆರಡು ದಿನ ಪುಟ್ಟರಾಜು ಅವುಗಳಿಗೆ ತಿನ್ನಲು ಅಕ್ಕಿ, ಜೋಳ, ಹಾಗೂ ತನಗೆ ತಿನ್ನಲು ನೀಡಿದ ತಿಂಡಿಯನ್ನು ಮೀನುಗಳಿಗೆ ಹಾಕುತ್ತಾ ಅವುಗಳನ್ನು ಗಮನಿಸಿದ. ಮೀನುಗಳು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದವು. ಅವುಗಳನ್ನು ಸಂತೋಷಪಡಿಸಲು ಅವುಗಳ ಹತ್ತಿರ ಹೋಗಿ ಕೊಳಲು ನುಡಿಸಿದನು. ಆಗಲೂ ಸಹ ಮೀನುಗಳ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದವು. ಪುಟ್ಟರಾಜುವಿಗೆ ಅನುಮಾನ ಬಂದಿತು.
ಅವುಗಳ ಹತ್ತಿರ ಬಂದು, “ನದಿಯ ದಡದಲ್ಲಿ ನಾನು ಕೊಳಲು ನುಡಿಸಿದಾಗ ಎಲ್ಲರೂ ಖುಷಿಯಿಂದ ನರ್ತಿಸಿದ್ದಿರಿ. ಆದರೆ ಈಗ ಏಕೆ ಸಪ್ಪಗಿದ್ದೀರಾ”? ಎಂದು ಪ್ರಶ್ನಿಸಿದ. ಆಗ ಮುದಿ ಮೀನು, “ಅಯ್ಯಾ! ನಾವು ನದಿಯಲ್ಲಿ ನಮ್ಮಿಷ್ಟದಂತೆ ತೇಲಾಡುತ್ತಾ, ಹಕ್ಕಿಗಳ ಇಂಪಾದ ಹಾಡನ್ನು ಕೇಳುತ್ತ, ನಮ್ಮಿಷ್ಟದಂತೆ ಕುಣಿದಾಡುತ್ತಾ, ಸ್ವತಂತ್ರವಾಗಿ ಬದುಕುತ್ತಿದ್ದೆವು. ಆದರೆ ಈಗ ಅದಾವುದೂ ಇಲ್ಲದ ಈ ನಾಲ್ಕು ಗೋಡೆಯ ಚೌಕಟ್ಟಿನ ಪಾತ್ರೆಯಲ್ಲಿ ನೀನು ನಮ್ಮನ್ನು ಕೂಡಿ ಹಾಕಿದರೆ ನಾವು ಕುಣಿಯುವುದು ಹೇಗೆ? ಸಂತೋಷದಿಂದಿರುವುದು ಹೇಗೆ”? ಎಂದು ಪ್ರಶ್ನೆ ಕೇಳಿತು.
ಆಗ ಮುದಿ ಮೀನಿನ ಮಾತುಗಳನ್ನು ಕೇಳಿ ಅವನ ಮನಸ್ಸಿಗೆ ತುಂಬಾ ನೋವಾಯಿತು ಮತ್ತು ಎಚ್ಚರವೂ ಆಯಿತು. ಮನುಷ್ಯರಾಗಲಿ, ಪ್ರಾಣಿಗಳಾಗಲಿ ಅವು ತಮ್ಮಿಷ್ಟದಂತೆ ಸಂತೋಷದಿಂದ ಇರುವುದೇ ಸತ್ಯವೆಂಬ ಅರಿವಾಯಿತು.
ಮೀನುಗಳನ್ನು ಮತ್ತೆ ನದಿಗೆ ಒಯ್ದು ತುಂಬಾ ಸಂತೋಷದಿಂದ ನದಿಯಲ್ಲಿ ಬೀಳ್ಕೊಟ್ಟ. ಆಗ ಮೀನುಗಳು ಹರ್ಷದಿಂದ ನದಿಯಲ್ಲಿ ಕುಣಿದಾಡತೊಡಗಿದವು. ಮತ್ತು ನಮ್ಮನ್ನು ಸ್ವತಂತ್ರವಾಗಿ ಬದುಕಲು ಬಿಟ್ಟ ನಿನಗೆ ಒಳ್ಳೆಯದಾಗಲಿ, ನಿನ್ನಿಷ್ಟದಂತೆ ಸ್ವತಂತ್ರವಾಗಿ ಬದುಕುವ ನಿನ್ನ ಆಸೆಯೂ ಈಡೇರಲಿ, ಎಂದು ಹರಸಿದವು. ಇದೆಲ್ಲವನ್ನು ಪುಟ್ಟರಾಜುವಿನ ತಂದೆ-ತಾಯಿ ಮೌನದಿಂದ ಗಮನಿಸುತ್ತಿದ್ದರು. ಮೀನು ಹೇಳಿದ್ದೂ ಸರಿಯಿದೆ; ಪುಟ್ಟರಾಜು ತೆಗೆದುಕೊಂಡ ನಿರ್ಧಾರವೂ ಸರಿಯಿದೆ. ಅಂದಮೇಲೆ, ನಾವೂ ಸಹ ನಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಬೇಕಿದೆ. ಪುಟ್ಟರಾಜು ತನ್ನಿಷ್ಟದಂತೆ ಸ್ವತಂತ್ರವಾಗಿರಲಿ, ಕೊಳಲು ನುಡಿಸಿಕೊಂಡು ಆನಂದವಾಗಿರಲಿ ಎಂದು ಪುಟ್ಟರಾಜುವಿನ ತಂದೆತಾಯಿ ಅಂದುಕೊಂಡರು. ಅದೇ ರೀತಿ ಪುಟ್ಟರಾಜುವಿಗೆ ಅನುಮತಿ ಇತ್ತರು.

Leave a Reply